Karnataka logo

Karnataka Tourism
GO UP
Image Alt

ಕರ್ನಾಟಕದ ಏಳು ಅದ್ಭುತಗಳು

separator
  /  ಬ್ಲಾಗ್   /  ಕರ್ನಾಟಕದ ಏಳು ಅದ್ಭುತಗಳು
Gol Gumbaz

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯು ಈಗ ಅಧಿಕೃತವಾಗಿ ಅನಾವರಣಗೊಂಡಿದೆ. ಮಾಧ್ಯಮ ದೈತ್ಯ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಮತ್ತು ಕರ್ನಾಟಕ ಪ್ರವಾಸೋದ್ಯಮದ ಈ ಉಪಕ್ರಮವು ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸಾರಿಗೆ ಅಭಿವೃದ್ಧಿ ನಿಗಮ ಮತ್ತು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಂದ ಬೆಂಬಲಿತವಾಗಿದೆ. ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡುವುದು ಒಂದೇ ಸವಾಲೇ ಆಗಿತ್ತು. ಏಕೆಂದರೆ ಕರ್ನಾಟಕದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಕ, ಐತಿಹಾಸಿಕ, ನೈಸರ್ಗಿಕ ಸ್ಥಳಗಳಿವೆ.
ಕರ್ನಾಟಕದ ಏಳು ಅದ್ಭುತಗಳ ಆಯ್ಕೆ ಪ್ರಕ್ರಿಯೆಯನ್ನು ಮೇ 2022 ರಲ್ಲಿ ಪ್ರಾರಂಭಿಸಲಾಯಿತು. ನಂತರ ಕಠಿಣ ಆಯ್ಕೆ ಮತ್ತು ಮತದಾನದ ಮೂಲಕ ಕರ್ನಾಟಕದ 7 ಅದ್ಭುತಗಳನ್ನು 25 ಫೆಬ್ರವರಿ 2023 ರಂದು ತಜ್ಞರ, ತೀರ್ಪುಗಾರರ ಮೌಲ್ಯಮಾಪನದ ನಂತರ ಘೋಷಿಸಲಾಯಿತು.ಈ ಏಳು ಅದ್ಭುತಗಳು ರಾಜ್ಯದ ಅಗಾಧ ವೈವಿಧ್ಯತೆಯನ್ನು ಪ್ರದರ್ಶಿಸುವ ವಿಶಿಷ್ಟ ವರ್ಗವನ್ನು ಪ್ರತಿನಿಧಿಸುತ್ತವೆ. ನಟ, ನಿರ್ದೇಶಕ ರಮೇಶ್ ಅರವಿಂದ್ ಈ ಅಭಿಯಾನದ ರಾಯಭಾರಿಯಾಗಿದ್ದರು.

ಹಿರೇಬೆನಕಲ್ ಡಾಲ್ಮೆನ್ಸ್

Manjarabad Fort

ಹಿರೇಬೆನಕಲ್ ಡಾಲ್ಮೆನ್ಸ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹಿರೇಬೆಣಕಲ್ ಶಿಲಾ ಸಮಾಧಿಗಳ ತಾಣವು ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು. ಇದು ಭಾರತದ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಇದು ಕ್ರಿ,ಪೂ 800 ರಿಂದ 200 ರಷ್ಟು ಹಿಂದಿನ ಸ್ಥಳ ಎಂದು ಸಂಶೋಧಕರು ಸಾಬೀತುಪಡಿಸಿದ್ದಾರೆ. ಈ ಸ್ಥಳವು 400 ಕ್ಕಿಂತಲೂ ಹೆಚ್ಚು ಶಿಲಾಸಮಾಧಿಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ 360 ಕಿಮೀ ದೂರದಲ್ಲಿರುವ ಈ ಐತಿಹಾಸಿಕ ತಾಣವನ್ನು ರಸ್ತೆ ಸಾರಿಗೆಯ ಮೂಲಕ 5 ಗಂಟೆಗಳಲ್ಲಿ ತಲುಪಬಹುದು. ತುಂಗಭದ್ರಾ ನದಿಯ ದಡದಲ್ಲಿರುವ ಒಂದು ವಿಸ್ಮಯಕಾರಿ ತಾಣವು ಮುಳ್ಳಿನ ಪೊದೆಗಳು, ಜಾರು ಬಂಡೆಗಳು ಮತ್ತು ಅಸಮವಾದ ಹಾದಿಗಳಿಂದ ಆವೃತವಾಗಿದ್ದು ಇದನ್ನು ಹತ್ತಿರದ ರೈಲು ನಿಲ್ದಾಣವಾದ ಗಂಗಾವತಿ ಮೂಲಕ ತಲುಪಬಹುದು. ಈ ಸ್ಥಳವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರ್ವಹಿಸುತ್ತದೆ. ಭಾರತದಲ್ಲಿ ಹಲವು ಪ್ರದೇಶಗಳಲ್ಲಿ ಈ ಶಿಲಾ ಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್‌ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್‌ ತಾಣವಾಗಿದೆ. ಈ ಶಿಲಾಸಮಾಧಿಗಳು 1- ಅಡಿ ಎತ್ತರದಿಂದ 10 ಅಡಿ ಎತ್ತರದವರೆಗೆ ಇದ್ದು ಈ ಸಮಾಧಿ ಕಲ್ಲುಗಳು ತುಂಬಾ ದೃಢವಾಗಿರುತ್ತವೆ ಮತ್ತು ಅಲುಗಾಡುವುದಿಲ್ಲ.

ಹಂಪಿ

Manjarabad Fort

ಹಂಪಿ

ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇದು 1336-1565 ವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಶ್ವದ ಅತಿದೊಡ್ಡ ತೆರೆದ ವಸ್ತುಸಂಗ್ರಹಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಕರ್ನಾಟಕದ ಹೆಮ್ಮೆಯು ಭಾರತೀಯ ಕರೆನ್ಸಿ ನೋಟಿನಲ್ಲಿಯೂ ಕಾಣಿಸಿಕೊಂಡಿದೆ. ಹಂಪಿಯು ತನ್ನ ಐತಿಹಾಸಿಕ ಮಹತ್ವ, ಪರಂಪರೆ, ದೇವಾಲಯಗಳು, ಅವಶೇಷಗಳು ಮತ್ತು ಸೊಗಸಾದ ಕರಕುಶಲತೆಗಾಗಿ ಕರ್ನಾಟಕದ 7 ಏಳು ಅದ್ಭುತಗಳಲ್ಲಿ ಒಂದಾಗಲು ಖಂಡಿತವಾಗಿಯೂ ಅರ್ಹತೆಯನ್ನು ಹೊಂದಿದೆ.
ವಿರೂಪಾಕ್ಷ ದೇವಾಲಯ, ಉಗ್ರನರಸಿಂಹ ವಿಗ್ರಹ, ಕಮಲ ಮಹಲ್, ಹಂಪಿ ಬಜಾರ್, ವಿಠಲ ದೇವಾಲಯ, ಬಡವಿ ಲಿಂಗ, ಮಹಾನವಮಿ ದಿಬ್ಬ ಮತ್ತು ಕಲ್ಲಿನ ರಥವು ಹಂಪಿಯ ಪ್ರಮುಖ ಆಕರ್ಷಣೆಗಳಾಗಿವೆ.

ಗೋಲ ಗುಮ್ಮಟ

Manjarabad Fort

ಗೋಲ ಗುಮ್ಮಟ

ಬಿಜಾಪುರದ ಗೋಲಗುಮಟ್ಟವು ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿದೆ. ಡೆಕ್ಕನ್ ಪ್ರದೇಶದಲ್ಲಿ ಕಂಡುಬರುವ ಇಸ್ಲಾಮಿಕ್ ಎಂಜಿನಿಯರಿಂಗ್‌ನ ಅದ್ಭುತ ಉದಾಹರಣೆಯಾದ ಗೋಲ ಗುಮ್ಮಟವು ಕರ್ನಾಟಕದ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದ್ದು ಬಿಜಾಪುರದ ಒಂದು ಹೆಗ್ಗುರುತಾಗಿದೆ. ಇದರ ಅತ್ಯುತ್ತಮ ವಾಸ್ತುಶಿಲ್ಪ, ಏಳು ಪಟ್ಟು ಅಷ್ಟಭುಜಾಕೃತಿಯ ಫಲಕಗಳು, ಬದಿಗಳಲ್ಲಿ ವಕ್ರಾಕೃತಿಗಳು, ಆಕರ್ಷಕ ಬೇಲಿಗಳು, ಕಾಲಮ್‌ಗಳು ಗೋಲಗುಮ್ಮಟವನ್ನು ಆಕರ್ಷಕವನ್ನಾಗಿಸುತ್ತವೆ. ಗೋಲಗುಮ್ಮಟವು ಆದಿಲ್ ಷಾನ ಗೋರಿಯಾಗಿದೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಮ್ಮಟ ಆಗಿದ್ದು ಇದನ್ನು ಮೊಹಮ್ಮದ್ ಆದಿಲ್ ಷಾ ನಿರ್ಮಿಸಿದನು. ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ – ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಮ್ಮಟವಾಗಿದೆ.

ಗೋಮಟೇಶ್ವರ ಪ್ರತಿಮೆ, ಶ್ರವಣಬೆಳಗೊಳ

Manjarabad Fort

ಗೋಮಟೇಶ್ವರ ಪ್ರತಿಮೆ, ಶ್ರವಣಬೆಳಗೊಳ

ಶ್ರವಣಬೆಳಗೊಳವು ದಕ್ಷಿಣ ಕರ್ನಾಟಕದ ಪ್ರಮುಖ ಜೈನ ಯಾತ್ರಾ ಸ್ಥಳವಾಗಿದ್ದು ಭಾರತೀಯ ಇತಿಹಾಸ ಮತ್ತು ಪರಂಪರೆಯ ಪ್ರಮುಖ ಭಾಗವಾಗಿದೆ. ಶ್ರವಣಬೆಳಗೊಳವು ಹಾಸನ ಜಿಲ್ಲೆಯ ಪ್ರಮುಖ ತಾಣವಾಗಿದೆ.ಗೊಮ್ಮಟೇಶ್ವರನ ಪ್ರತಿಮೆಯನ್ನು ಗಂಗರ ಮಂತ್ರಿ ಮತ್ತು ಸೇನಾ ದಂಡನಾಯಕ ಚಾವುಂಡರಾಯನು ಕ್ರಿ.ಶ 981 ರಲ್ಲಿ ನಿರ್ಮಿಸಿದನು. ವಿಂಧ್ಯಗಿರಿ ಬೆಟ್ಟದ ಮೇಲೆ ಇರುವ ಎತ್ತರದ ಏಕಶಿಲೆಯ ಪ್ರತಿಮೆ ಆಗಿದ್ದು 57 ಅಡಿ ಎತ್ತರವಾಗಿದೆ. ಇಲ್ಲಿನ 700 ಮೆಟ್ಟಿಲುಗಳು ನಿಮ್ಮನ್ನು ವಿಂಧ್ಯಗಿರಿ ಬೆಟ್ಟಕ್ಕೆ ಕರೆದೊಯ್ಯುತ್ತವೆ. ಇಲ್ಲಿ ಭಗವಾನ್ ಗೋಮಟೇಶ್ವರನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ನೀವು ಚಂದ್ರಗಿರಿ ಬೆಟ್ಟಗಳು ಇತರ 14 ಜೈನ ದೇವಾಲಯಗಳ ಸಮೂಹವನ್ನು ಕಾಣಬಹುದು.

ಮೈಸೂರು ಅರಮನೆ

Manjarabad Fort

ಮೈಸೂರು ಅರಮನೆ

ಮೈಸೂರು ಅರಮನೆ ಎಂದೇ ಜನಪ್ರಿಯವಾಗಿರುವ ಅಂಬಾ ವಿಲಾಸ ಅರಮನೆಯು ದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಅರಮನೆಯಾಗಿದೆ. ಇಂಡೋ-ಸಾರಾಸೆನ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಭವ್ಯವಾದ ಮೈಸೂರು ಅರಮನೆಯು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿದೆ ಮತ್ತು ಮೈಸೂರು ಸಾಮ್ರಾಜ್ಯದ ಹೆಗ್ಗುರುತಾಗಿದೆ. ಅರಮನೆಯ ಕೆತ್ತಿದ ಮಹೋಗಾನಿ ಸೀಲಿಂಗ್‌ಗಳು, ಬಣ್ಣದ ಗಾಜು, ಗಿಲ್ಡೆಡ್ ಕಂಬಗಳು ಮತ್ತು ಮೆರುಗುಗೊಳಿಸಲಾದ ಟೈಲ್ಸ್‌ಗಳ ಅದರ ವಿಶೇಷ ಒಳಾಂಗಣಗಳು ಇದರ ವೈಭವವನ್ನು ಸಾರುತ್ತವೆ. 97,000 ದೀಪಗಳಿಂದ ಪ್ರಕಾಶಿಸಲ್ಪಟ್ಟಿರುವ ಈ ಅರಮನೆಯು ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮುಸ್ಸಂಜೆಯ ಸಮಯದಲ್ಲಿ ಭವ್ಯವಾದ ದೃಶ್ಯವಾಗಿ ಬದಲಾಗುತ್ತದೆ. 14 ನೇ ಶತಮಾನದ ಆರಂಭದಲ್ಲಿ ಒಡೆಯರ್‌ಗಳ ರಾಜಮನೆತನದಿಂದ ನಿರ್ಮಿಸಲಾದ ಈ ಅರಮನೆಯು ಬೆಂಕಿಯಿಂದ ಹಾನಿಗೊಳಗಾದ ನಂತರ ನಾಲ್ಕನೇ ಪುನರ್ನಿರ್ಮಾಣವಾಗಿದೆ. ಪ್ರಸ್ತುತ ಅರಮನೆಯ ಪುನಃಸ್ಥಾಪನೆಯು 1912 ರಲ್ಲಿ ಪೂರ್ಣಗೊಂಡಿತು.

ಜೋಗ ಜಲಪಾತ

Manjarabad Fort

ಜೋಗ ಜಲಪಾತ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವು ದಟ್ಟವಾದ ಕಾಡುಗಳಲ್ಲಿ ನೆಲೆಗೊಂಡಿರುವ ಪ್ರಕೃತಿಯ ಅದ್ಭುತವಾದ ಮೇರುಕೃತಿಗಳಲ್ಲಿ ಒಂದಾಗಿದ್ದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದೆ. ಇದನ್ನು ಗೇರುಸೊಪ್ಪಿನ ಜಲಪಾತ ಎಂತಲೂ ಕರೆಯುತ್ತಾರೆ. ಜೋಗ ಜಲಪಾತವು ಸುಮಾರು 292 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ.ವಿಶೇಷವಾಗಿ ಮಳೆಗಾಲದ ನಂತರ ಧುಮುಕುವ ಜಲಪಾತಗಳ ರುದ್ರರಮಣೀಯ ನೋಟಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ರಾಜ, ರಾಣಿ, ರಾಕೆಟ್ ಮತ್ತು ರೋರ್ ಎಂಬ 4 ಜಲಪಾತಗಳ ಗುಂಪು ಜೋಗ್ ಜಲಪಾತವನ್ನು ರೂಪಿಸುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಜೈವಿಕ ವೈವಿಧ್ಯತೆಯ ನಡುವೆ ನೆಲೆಗೊಂಡಿರುವ ಜೋಗ್ ಜಲಪಾತವು ಹಚ್ಚ ಹಸಿರಿನ ಕಾಡು ಮತ್ತು ಕೆಲವು ಅಪರೂಪದ ಪ್ರಾಣಿ ಮತ್ತು ಸಸ್ಯಗಳ ಆವಾಸಸ್ಥಾನವಾಗಿದೆ.

ನೇತ್ರಾಣಿ ದ್ವೀಪ

Manjarabad Fort

ನೇತ್ರಾಣಿ ದ್ವೀಪ

ನೇತ್ರಾಣಿ ದ್ವೀಪವು ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು. ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಅರಬ್ಬೀ ಸಮುದ್ರದಲ್ಲಿರುವ ಭಾರತದ ಒಂದು ದ್ವೀಪವಾಗಿದೆ. ಇದು ಮುರುಡೇಶ್ವರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಸ್ಕೂಬಾ ಡೈವಿಂಗ್‌ಗೆ ಹೆಸರುವಾಸಿಯಾದ ನೇತ್ರಾಣಿ ದ್ವೀಪವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ಎರಡನೇ ಅತ್ಯುತ್ತಮ ಸ್ಥಳವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನೆಲೆಗೊಂಡಿರುವ ನೇತ್ರಾಣಿ ದ್ವೀಪವು ತನ್ನ ಹವಳಗಳು ಮತ್ತು ಸ್ಪಷ್ಟವಾದ ನೀರಿನಿಂದ ಬಹುಶಃ ಭಾರತದ ಅತ್ಯುತ್ತಮ ಸ್ನಾರ್ಕ್ಲಿಂಗ್/ಡೈವ್ ತಾಣವಾಗಿದೆ.ಇದನ್ನು ಹೃದಯ ಆಕಾರದ ದ್ವೀಪ ಎಂದೂ ಕರೆಯುತ್ತಾರೆ. ಇದು ಹೊಳೆಯುವ ನೀರು ಮತ್ತು ಹವಳದ ಬಂಡೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಅದ್ಭುತ ಜಲ-ಆಧಾರಿತ ಸಾಹಸ ಕ್ರೀಡೆಗಳನ್ನು ಆನಂದಿಸಬಹುದು. ಈ ಪ್ರದೇಶದ ಆಹಾರ, ಸಂಸ್ಕೃತಿ ಮತ್ತು ಪ್ರಶಾಂತತೆಯೊಂದಿಗೆ ನಿಮ್ಮ ದಿನವನ್ನು ಕಳೆಯಬಹುದು. ಇದು 310 ಕಿಮೀ ಉದ್ದದ ಈ ತೀರವನ್ನು ಹೊಂದಿದೆ.