ಹಂಪಿಯಲ್ಲಿ ನೋಡಬಹುದಾದ ಸ್ಥಳಗಳು
ಮೀನಾಕ್ಷಿ ಗುಪ್ತಾ ಅವರಿಂದ
ವಿರೂಪಾಕ್ಷ ದೇವಾಲಯ, ಅಪ್ರತಿಮವಾದ ಕಲ್ಲಿನ ರಥ ಮತ್ತು ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಗೆ ಹೆಸರುವಾಸಿಯಾಗಿರುವ ಐತಿಹಾಸಿಕ ನಗರ ಹಂಪಿಯಲ್ಲಿ ಪ್ರವಾಸಿಗರು ಹಲವಾರು ಸ್ಥಳಗಳನ್ನು ನೋಡಬಹುದು. ಹಂಪಿಯು ಪ್ರಾಯೋಗಿಕ ಮತ್ತು ನಿಧಾನಗತಿಯ ಪ್ರಯಾಣ ಮಾಡುತ್ತ ಸ್ಥಳ ವೀಕ್ಷಣೆಯಲ್ಲಿ ಮುಳುಗಿ ಹೋಗಬಹುದಾದ ಸ್ಥಳವಾಗಿದೆ. ಒರಟಾದ ಮತ್ತು ಭವ್ಯವಾದ ಬಂಡೆಯ ಭೂದೃಶ್ಯದಲ್ಲಿ ನೆಲೆಗೊಂಡಿರುವ ಈ ಪಟ್ಟಣ ಒಂದು ಕಾಲದಲ್ಲಿ ಪ್ರಬಲವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸ್ಥಳದಲ್ಲಿರುವ ಅವಶೇಷಗಳು ಆ ಕಾಲದ ರಾಜಮನೆತನದ ಭವ್ಯತೆಯನ್ನು ನೆನಪಿಸುತ್ತವೆ.
‘ವಿಶ್ವದ ಅತಿದೊಡ್ಡ ಓಪನ್-ಏರ್ ಮ್ಯೂಸಿಯಂ’ ಎನಿಸಿಕೊಂಡಿರುವ ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ವರ್ಗೀಕರಿಸಿದೆ. ತುಂಗಭದ್ರ ನದಿಯ ದಡದಲ್ಲಿರುವ ಈ ನಗರದಲ್ಲಿ ಬೃಹತ್ ಐತಿಹಾಸಿಕ ಅವಶೇಷಗಳು ಮತ್ತು ಅದರ ಕಥೆಗಳನ್ನು ಹೊರತುಪಡಿಸಿ, ನೋಡಬಹುದಾದ, ಭವ್ಯತೆಯನ್ನು ಹೀರಿಕೊಳ್ಳಬಹುದಾದ ವಿಷಯಗಳು ಬಹಳಷ್ಟಿವೆ. ರಜೆಯ ದಿನವನ್ನು ಅನುಭವದ ಪ್ರವಾಸವನ್ನಾಗಿ ಮಾಡಿಕೊಳ್ಳಲು ಹಂಪಿಯಲ್ಲಿ ಇನ್ನೂ ಸಾಕಷ್ಟು ವಿಷಯಗಳಿವೆ. ಸೈಕಲ್ ಏರಿ ಅಥವಾ ಬೈಕ್ ಸವಾರಿ ಮಾಡಿ, ತುಂಗಭದ್ರಾ ನದಿಯಲ್ಲಿನ ಹರಿಗೋಲು ದೋಣಿಯ ಮೇಲೆ ವಿಹಾರ ಮಾಡಿ ಅಥವಾ ಆ ಬಂಡೆಗಳನ್ನು ಹತ್ತಿರಿ, ಅಥವಾ ಬಂಡೆಯಿಂದ ಜಿಗಿಯಿರಿ. ಹೀಗೆ ಹಲವಾರು ಕಾರ್ಯಗಳಲ್ಲಿ ಹಂಪಿಯ ಅನುಭವವನ್ನು ಪಡೆಯಿರಿ.
ಹಂಪಿಯಲ್ಲಿನ ಹರಿಗೋಲು ದೋಣಿ ವಿಹಾರ
ಹಂಪಿಯಲ್ಲಿ ಕೊರಾಕಲ್ ರೈಡ್
ತುಂಗಭದ್ರ ನದಿಯ ಹಿಂಭಾಗದಲ್ಲಿ ಬಂಡೆಗಳ ಸುಂದರವಾದ ದೃಷ್ಯಗಳ ಮಧ್ಯೆ ಹರಿಗೋಲಿನಿಂದ ಚಲಿಸುವ ದೋಣಿಯಲ್ಲಿ ವಿಹರಿಸುವುದು ಪ್ರವಾಸಿಗರು ಹಂಪಿಯಲ್ಲಿ ಮಾಡಲೇಬೇಕಿರುವ ಕೆಲಸಗಳಲ್ಲಿ ಒಂದು. ಸೂರ್ಯೋದಯವಾಗಲಿ ಅಥವಾ ಸೂರ್ಯಾಸ್ತವಾಗಿರಲಿ, ಝಿಗ್-ಜಾಗ್ ರೀತಿಯಲ್ಲಿ ನದಿಯ ಮೇಲೆ ನಡೆಸುವ ನಯವಾದ ನೌಕಾಯಾನವು ನದಿಯ ಮಧ್ಯೆಕ್ಕೆ ಬಂದು ಸುತ್ತಲು ಆರಂಬಿಸಿದಾಗ ನಿಮ್ಮೊಳಗೆ ಅಗಾಧ ಭಯ, ಉತ್ಸಾಹದ ಜೊತೆಗೆ ತೃಪ್ತಿಯನ್ನೂ ನೀಡುತ್ತದೆ. ಕೊರಾಕಲ್ ಎಂದು ಕರೆಯಲ್ಪಡುವ ವಿಶ್ರಾಂತಿಯುತ ಮತ್ತು ಹಿತವಾದ ಈ ದೋಣಿ ಸವಾರಿಯು 15 ನೇ ಶತಮಾನದಿಂದಲೂ ಸಾರಿಗೆಯ ವಿಧಾನವಾಗಿ ಬಳಕೆಯಲ್ಲಿದೆ. ಈ ದೋಣಿಗಳು ದಕ್ಷಿಣ ಭಾರತದಲ್ಲಿ ಮಾತ್ರವೇ ಲಭ್ಯವಿರುವುದರಿಂದ ಹರಿಗೋಲು ದೋಣಿ ಸವಾರಿಯು ಸ್ವತಃ ಒಂದು ಅಭೂತಪೂರ್ವ ಅನುಭವವನ್ನು ನೀಡುತ್ತದೆ. ಈ ವೃತ್ತಾಕಾರದ ದೋಣಿಗಳು ಒಮ್ಮೆಗೆ 6-8 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ದೋಣಿಯೊಳಗಿನ ಪ್ರತಿಯೊಬ್ಬರೂ ಆನಂದವನ್ನು ಹೊಂದುವಂತೆ ಮಾಡುತ್ತವೆ. ಹರಿಗೋಲು ದೋಣಿ ಸವಾರಿ ವರ್ಷವಿಡೀ ಲಭ್ಯವಿರುತ್ತದೆ, ಆದರೂ ಸಹ ನದಿ ಉಕ್ಕಿ ಹರಿಯುವ ಸಮಯದಲ್ಲಿ ಸುರಕ್ಷತಾ ದೃಷ್ಟಿಯಿಂದ ಮಳೆಗಾಲದಲ್ಲಿ ಈ ಸವಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ನಡುವಿನ ಸಮಯ ಈ ದೋಣಿ ವಿಹಾರವನ್ನು ನಡೆಸಲು ಅನುಕೂಲಕರವಾದ ಕಾಲ. ಬೇಸಿಗೆಯ ದಿನಗಳಲ್ಲಿ ಈ ಸವಾರಿಯು ಸ್ವಲ್ಪ ಕಠಿಣ ಎನಿಸಬಹುದು. ಸಾಮಾನ್ಯವಾಗಿ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ದೋಣಿವಿಹಾರಕ್ಕೆ ಅವಕಾಶವಿರುತ್ತದೆ. 10 ರಿಂದ 15 ನಿಮಿಷಗಳ ಕಾಲ ವಿಹಾರಕ್ಕೆ 50 ರಿಂದ 100 ರೂಗಳಷ್ಟು ಶುಲ್ಕವಿದೆ.
ಹಂಪಿಯಲ್ಲಿ ರಾಕ್ ಕ್ಲಿಂಬಿಂಗ್
ಹಂಪಿಯಲ್ಲಿ ರಾಕ್ ಕ್ಲಿಂಬಿಂಗ್
ಹಂಪಿಗೆ ಭೇಟಿ ನೀಡಿ ಬಂಡೆಗಳು ಅಥವಾ ಬೆಟ್ಟಗಳನ್ನು ಹತ್ತದೇ ಇರುವುದು ಸಾಹಿಸಿ ಮನಸ್ಸುಗಳಿಗೆ ತೃಪ್ತಿ ನೀಡದ ವಿಚಾರ. ಹಂಪಿಯಲ್ಲಿನ ಹೇಮಕೂಟ ಬೆಟ್ಟಗಳಲ್ಲಿನ ಆಕರ್ಷಕ ಬಂಡೆಗಳನ್ನು ಹತ್ತುವ ಮೂಲಕ ನಿಮ್ಮ ಸಾಹಸೀ ಪ್ರವೃತ್ತಿಯ ಮನಸಿಗೆ ತೃಪ್ತಿ ನೀಡಿ. ಹಂಪಿಯು ದೇಶದ ಅತ್ಯಂತ ಬೇಡಿಕೆಯ ಮತ್ತು ಉನ್ನತ ಪರ್ವತಾರೋಹಣ ತಾಣಗಳಲ್ಲಿ ಒಂದಾಗಿದೆ. ತುಂಗಭದ್ರ ನದಿಗೆ ಹಿನ್ನೆಲೆಯಾಗಿ ಅದ್ಭುತವಾಗಿ ಹರಡಿಕೊಂಡಿರುವ ಭೂದೃಶ್ಯದಲ್ಲಿನ ಈ ಬಂಡೆಗಳು ಪ್ರಪಂಚದಾದ್ಯಂತದ ಪರ್ವತಾರೋಹಿಗಳನ್ನು ಆಹ್ವಾನಿಸುತ್ತವೆ. ಹಂಪಿಯ ಈ ಮಣ್ಣಿನ ಸ್ವಾದದ, ಹಳ್ಳಿಗಾಡಿನ ಹಾಗೂ ರೋಮಾಂಚಕ ಎನಿಸುವ ಈ ಚಟುವಟಿಕೆಗಳನ್ನು ಅನುಭವಿಸಲು ಒಂದು ಸೈಕಲ್ ಅನ್ನು ಬಾಗಿಗೆಗೆ ಪಡೆಯಿರಿ ಅಥವಾ ನಡೆದುಕೊಂಡೇ ಸಾಗಿ. ಹೇಮಕೂಟ ಬೆಟ್ಟಗಳಲ್ಲಷ್ಟೇ ಅಲ್ಲ, ಹಂಪಿಯ ರಘುನಾಥ ಮತ್ತು ತಿರುವೆಂಗಲನಾಥ ದೇವಾಲಯ ಪ್ರದೇಶದಲ್ಲಿಯೂ ಸಹ ನೀವು ರಾಕ್ ಕ್ಲೈಂಬಿಂಗ್ ಮಾಡಬಹುದು. ರಾಕ್ ಕ್ಲೈಂಬಿಂಗ್ ಮಾಡಲು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಅವಕಾಶವಿರುತ್ತದೆ. ಹಂಪಿಯಲ್ಲಿ ರಾಕ್ ಕ್ಲೈಂಬಿಂಗ್ ಮಾಡಲು ಉತ್ತಮವಾದ ಸಮಯವೆಂದರೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳು. ಸೂರ್ಯನ ಕಿರಣಗಳು ತುಂಬಾ ಕಠಿಣವಾಗಿರದ ಮುಂಜಾನೆಯ ಸಮಯದಲ್ಲಿಯೂ ನೀವು ರಾಕ್ ಕ್ಲೈಂಬಿಂಗ್ ಮಾಡಬಹುದು.
ಇದು ಸಾವನ್ನು ಆಹ್ವಾನಿಸುವ ಚಟುವಟಿಕೆ ಆಗಿರುವುದರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.
ಹಂಪಿಯಲ್ಲಿ ಕ್ಲಿಫ್ ಜಂಪಿಂಗ್
ನಿಮ್ಮ ಧೈರ್ಯಶಾಲಿ ಮತ್ತು ಸಾಹಸಭರಿತ ಮನಸ್ಸು ಬಂಡೆ ಏರಿದ ನಂತರವೂ ತೃಪ್ತಿ ಹೊಂದಿಲ್ಲವಾದರೆ, ಆ ಅತೀವ ತೃಪ್ತಿಯನ್ನು ಅನುಭವಿಸಲು ಹಂಪಿಯಲ್ಲಿನ ಪ್ರಪಾತಗಳ ಆಳಕ್ಕೆ ಜಿಗಿಯಬಹುದು. ಹಂಪಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಮೋಜನ್ನು ಬಯಸುವ, ಸಾಹಸವನ್ನು ಅಪೇಕ್ಷಿಸುವವ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಕ್ಲಿಫ್ ಜಂಪಿಂಗ್ ಕೂಡ ಒಂದು. ಸಾಣಾಪುರ ಹಾಗೂ ಹಂಪಿ/ತುಂಗಾಭದ್ರ ನದಿ ಹಂಪಿಯಲ್ಲಿ ಕ್ಲಿಫ್ ಡೈವಿಂಗ್‌ಗೆ ಹೆಸರುವಾಸಿಯಾದ ಸ್ಥಳಗಳು. ನದಿಯಲ್ಲಿ ಮೊಸಳೆಗಳಿರುವ ಬಗ್ಗೆ ಸೂಚನಾ ಫಲಕಗಳಿದ್ದರೂ ಸಹ ನದಿಗೆ ಹಾರಲು ಇಚ್ಛಿಸುವವರ ಮನಸ್ಸು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದಾಗ್ಯೂ ಮೊಸಳೆಗಳಿರುವ ಬಗ್ಗೆ ಅತೀ ಕಡಿಮೆ ದಾಖಲೆಗಳಿವೆ. ಆದರೂ ಸಹ ಬಂಡೆ ಜಿಗಿತಕ್ಕೆ ಮುಂದಾಗುವ ಮುನ್ನ ಸ್ಥಳೀಯ ಮಾರ್ಗದರ್ಶಕರ ಸಾಹಯವನ್ನು ಪಡೆಯುವುದು ಉತ್ತಮ. 15 ಅಡಿಗಳಷ್ಟು ಆಳದ ಈ ಬಂಡೆ ಜಿಗಿತಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ ಆಗಬಹುದಾದ ಅಪಾಯಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ. ನಂವೆಂಬರ್‌ನಿಂದ ಜನವರಿ ಮಧ್ಯದ ಸಮಯ ಈ ಬಂಡೆ ಜಿಗಿತಕ್ಕೆ ಉತ್ತಮವಾದದ್ದು.
ಹಿಪ್ಪೀ ಐಲ್ಯಾಂಡ್
ಹಿಪ್ಪೀ ಐಲ್ಯಾಂಡ್
ಹಂಪಿಯ ದೇವಾಲಯಗಳು ಮತ್ತು ಅದರ ಪಾಳು ಸ್ಮಾರಕಗಳಿಗೆ ಭೇಟಿ ನೀಡಲು ಇಷ್ಟ ಪಡುವ ಗಂಭೀರ ಪ್ರವಾಸಿಗರಿಗಿಂತ, ಅಲೆಮಾರಿಗಳಂತಹ ಪ್ರವಾಸಿಗರಿಗೆ ಈ ಹಿಪ್ಪೀ ಐಲ್ಯಾಂಡ್ ಹೆಚ್ಚು ಇಷ್ಟವಾಗುವ ತಾಣ. ಹಂಪಿಯ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಿಂದ ಸ್ವಲವೇ ದೂರದಲ್ಲಿರುವ ಈ ದ್ವೀಪ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ. ಹರಿಗೋಲು ದೋಣಿಯಲ್ಲಿ ಪ್ರಯಾಣಿಸಿದರೆ 5 ನಿಮಿಷದಲ್ಲಿ ತಲುಪಬಹುದಾದ ಈ ಸ್ಥಳವನ್ನು ರಸ್ತೆ ಮಾರ್ಗದ ಮೂಲಕ ತಲುಪಲು 40 ನಿಮಿಷಗಳಷ್ಟು ಸಮಯ ಬೇಕು. ಹಿಪ್ಪಿ ದ್ವೀಪದಲ್ಲಿನ ವಿಶಿಷ್ಟ ಮತ್ತು ಹಿಮ್ಮುಖ ಜೀವನವು ನಿಧಾನಗತಿಯ ಮತ್ತು ತಲ್ಲೀನರಾಗಲು ಇಷ್ಟ ಪಡುವ ಪ್ರಯಾಣಿಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ತನ್ನಷ್ಟಕ್ಕೆ ತಾನೇ ಒಂದು ನಗರವಾಗಿ ಬೆಳೆದಿರುವ ಈ ದ್ವೀಪದಲ್ಲಿ ಉಳಿದುಕೊಳ್ಳಲು ಗುಡಿಸಲುಗಳು, ಕೆಫೆಗಳಿವೆ. ಯುವಜನರಿಗೆ ಹಾಗೂ ಸ್ವಲ್ಪ ಹಿರಿಯ ಪ್ರಯಾಣಿಕರಿಗೂ ಇಲ್ಲಿ ಹಲವಾರು ಚಟುವಟಿಕೆಗಳಿವೆ. ಸೊಂಪಾದ ಹಸಿರು ಭತ್ತದ ಗದ್ದೆಗಳು ಮತ್ತು ಬಂಡೆಗಳ ಭವ್ಯವಾದ ನೋಟಗಳನ್ನು ಹೊಂದಿ, ಜಲಮೂಲಗಳಿಗೆ ಅಭಿಮುಖವಾಗಿರುವ ಈ ಗುಡಿಸಲುಗಳು ಕಡಿಮೆ ದರಕ್ಕೆ ಲಭ್ಯವಿವೆ. ಕೆಫೆಗಳಲ್ಲಿ ಭಾರತೀಯ ಆಹಾರ ಹಾಗೂ ಬಹಳ ಹಿಂದಿನಿಂದಲೇ ಯೂರೋಪಿಯನ್ನರೂ ಇಲ್ಲಿರುವ ಕಾರಣದಿಂದ ಯುರೋಪಿಯನ್ ಆಹಾರವೂ ದೊರೆಯುತ್ತದೆ. ವಿರುಪಾಪುರ ಗಡ್ಡೆ ಎಂದೂ ಕರೆಯಲ್ಪಡುವ ಈ ದ್ವೀಪವು ಬೆನ್ನಿಗೆ ಬ್ಯಾಗ್ ಹೊತ್ತು ತಿರುಗುವ, ಕೇವಲ ಸ್ಥಳ ನೋಡುವುದಕ್ಕಾಗಿ ಪ್ರವಾಸ ಕೈಗೊಳ್ಳದೆ ಸ್ಥಳಾನ್ವೇಷಣೆಯಲ್ಲಿ ತೊಡಗಲು ಇಚ್ಛಿಸುವ ಪ್ರವಾಸಿಗರಿಗಾಗಿ ಜನಪ್ರಿಯವಾಗಿದೆ.
ಮಂತ್ರಮುಗ್ಧಗೊಳಿಸುವ ಪ್ರಾಚೀನ ಪಟ್ಟಣವಾದ ಹಂಪಿ ಮತ್ತು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಸಕ್ರೀಯ ಹಾಗೂ ನಿಧಾನಗತಿಯ ಪ್ರಯಾಣಿಕರಿಗಾಗಿ ಸಾಕಷ್ಟು ವಿಷಯಗಳನ್ನು ಹೊಂದಿದೆ.