Karnataka Tourism
GO UP
Image Alt

ಗೋಕರ್ಣದಲ್ಲಿ ನೋಡಬಹುದಾದ ಸ್ಥಳಗಳು

separator
  /  ಬ್ಲಾಗ್   /  ಗೋಕರ್ಣದಲ್ಲಿ ನೋಡಬಹುದಾದ ಸ್ಥಳಗಳು
Gokarna Beach

ಗೋಕರ್ಣದಲ್ಲಿ ನೋಡಬಹುದಾದ ಸ್ಥಳಗಳು


ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಮತ್ತು ಪ್ರಶಾಂತ ಪಟ್ಟಣವಾದ ಗೋಕರ್ಣವು ಬೆನ್ನಿಗೆ ಬ್ಯಾಗ್‌ ಹೊತ್ತು ತಿರುಗುವ ಪ್ರಯಾಣಿಕರಿಗೆ ಸ್ವರ್ಗವಾಗಿತ್ತು. ಆದರೆ ಈಗ ಬದಲಾಗಿದೆ. ಸಮುದ್ರ ದಂಡೆಯಲ್ಲಿನ ಸ್ಥಳಾನ್ವೇಷಣೆಯಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಹೊಂದಿರುವ ಗೋಕರ್ಣ ಪಟ್ಟಣವು ಇನ್ನೂ ಆನೇಕ ವಿಷಯಗಳನ್ನು ಒಳಗೊಂಡಿದೆ. ಗೋಕರ್ಣವು ಪ್ರಾಚೀನ ಕಡಲತೀರಗಳು ಮತ್ತು ಗಮನಾರ್ಹ ದೇವಾಲಯಗಳನ್ನು ಹೊಂದಿರುವ ಆಕರ್ಷಕ ಪಟ್ಟಣ. ಇಲ್ಲಿ ನೀವು ಬಂಗಾರದ ಬಣ್ಣದಿಂದ ಕಂಗೊಳಿಸುವ ಮುಂಜಾನೆ ಮತ್ತು ಸಂಜೆಗಳ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಂಡು ಮುಕ್ತ ಮನಸ್ಸನ್ನು ಹೊಂದಬಹುದು ಅಥವಾ ಗೋಕರ್ಣದ ಪ್ರಾಚೀನ ದೇವಾಲಯಗಳೊಳಗೆ ಕುಳಿತು ಸಾಂತ್ವನವನ್ನು ಹೊಂದಬಹುದು.

ಗೋಕರ್ಣದಲ್ಲಿನ ಬೀಚ್‌ಗಳು

ಓಂ ಬೀಚ್‌

Manjarabad Fort

ಓಂ ಬೀಚ್‌

ಭೌಗೋಳಿಕವಾಗಿ ಹಿಂದೂಗಳ ಮಂಗಳಕರ ಚಿನ್ಹೆಯಾದ ಓಂ ಆಕಾರದಲ್ಲಿ ಕಾಣುವುದರಿಂದ ಈ ಸಮುದ್ರ ದಂಡೆಯನ್ನು ಓಂ ಬೀಚ್‌ ಎಂದು ಕರೆಯಲಾಗುತ್ತದೆ. ನೀವು ಕಡಲ ತೀರದಲ್ಲಿ ವಿಶ್ರಾಂತಿಯನ್ನು ಪಡೆಯಲು, ನಿಮ್ಮ ತನವನ್ನು ಪುನಃಸ್ಥಾಪಿಸಿಕೊಳ್ಳಲು ಬಯಸಿದರೆ ಅಥವಾ ಸಾಹಸದೊಳಗೆ ಮುಳುಗಲು ಇಚ್ಛಿಸಿದರೆ, ಓಂ ಬೀಚ್‌ನಲ್ಲಿ ಅವಕಾಶವಿದೆ. ಫೋಟೋಗ್ರಾಫರ್‌ಗಳಿಗೆ ಅತ್ಯಾನಂದವನ್ನು ನೀಡುವ ಈ ಸ್ಥಳವು ಗೋಕರ್ಣ ಪಟ್ಟಣದಿಂದ ಒಂದು ಕಿಲೋಮೀಟರ್‌ನಷ್ಟು ದೂರದಲ್ಲಿದೆ. ಸಹಾಸವನ್ನು ಹುಡುಕಹೊರಟವರಿಗೆ ಪೊದೆಗಳ ಮಧ್ಯದ ನುಸುಳಿಹೋಗುವ ದಾರಿಯಿದ್ದು, ಉತ್ತಮವಾದ ಟಾರ್‌ ರಸ್ತೆಯ ಮೂಲಕವೂ ಈ ಕಡಲ ದಂಡೆಯನ್ನು ತಲುಪಬಹುದು. ಬನಾನಾ ಬೋಟ್‌ ರೈಡಿಂಗ್‌, ಬಂಪರ್‌ ಬೋಟ್‌ ರೈಡಿಂಗ್‌, ಡಾಲ್ಫಿನ್ ಸ್ಪಾಟಿಂಗ್, ಜೆಟ್ ಸ್ಕೀಯಿಂಗ್, ಸ್ಪೀಡ್‌ ಬೋಟಿಂಗ್‌, ಟ್ರೆಕ್ಕಿಂಗ್ ಹಾಗು ಮೀನು ಹಿಡಿಯುವುದೂ ಸಹ ಇಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾದ ರೋಮಾಂಚಕ ಚಟುವಟಿಕೆಗಳಾಗಿವೆ.

ಕುಡ್ಲೆ ಬೀಚ್

Manjarabad Fort

ಕುಡ್ಲೆ ಬೀಚ್

ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತಹ ವಿನೋದಭರಿತ ಹಾಗೂ ಟ್ರೆಂಡಿ ಚಟುವಟಿಕೆಗಳನ್ನು ಹೊಂದಿರುವ ಕುಡ್ಲೆ ಬೀಚ್‌ ತಂಪು ನೀಡುವ ಕಡಲ ದಂಡೆಯಾಗಿದೆ. ಬೇಸಿಗೆ ಸಮಯದಲ್ಲಿ ಬಹಳಷ್ಟು ನಿರ್ಜನವಾಗಿ ಕಾಣುವ ಈ ಬೀಚ್‌ನಲ್ಲಿ ವಾತಾವರಣದೊಳಗಿನ ಉಷ್ಣತೆಯಿಳಿದ ನಂತರ ನವೆಂಬರ್‌ನಿಂದ ಜನವರಿಯವೆರೆಗೆ ಸುತ್ತಾಡುವ ಅಥವಾ ವಿಶ್ರಾಂತಿ ಪಡೆಯುವ ಸಲುವಾಗಿ ಕಿಕ್ಕಿರಿದು ತುಂಬಿದ ಜನರನ್ನು ಕಾಣಬಹುದು. ಪಟ್ಟಣದಲ್ಲಿ ಉಳಿದುಕೊಂಡು, ದಿನದ ಸಮಯವನ್ನು ಕಳೆಲೆಂದು ಇಲ್ಲಿಗೆ ಬರುವ ಪ್ರಯಾಣಿಕರಿಂದಾಗಿ ಈ ಜಾಗವು ಹೆಸರುವಾಸಿಯಾಗಿದೆ.ಆಕರ್ಷಕ ಮತ್ತು ಪ್ರಶಾಂತವಾದ ಕಡಲತೀರವು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುವುದರ ಜೊತೆಗೆ, ವರ್ಣಮಯ ಆಕಾಶದ ಬಣ್ಣಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಸ್ಥಳೀಯರು ಮತ್ತು ಪ್ರವಾಸಿಗರು ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಮತ್ತು ಕಡಲ ತೀರದಲ್ಲಿನ ಯೋಗ ಸೆಷನ್ ಗಳಿಗಾಗಿ ಕುಡ್ಲೆ ಬೀಚ್ ಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಉಸಿರಿಡಿದು ನೋಡುವಂತಹ ಸೂರ್ಯೋದಯ ಮತ್ತು ಸೂರ್ಯಾಸ್ಥದ ದೃಷ್ಯಗಳು ಈ ಸ್ಥಳದಲ್ಲಿನ ಮತ್ತೊಂದು ಆಕರ್ಷಣೆ.

ಹಾಫ್ ಮೂನ್‌ ಬೀಚ್‌

Manjarabad Fort

ಹಾಫ್ ಮೂನ್‌ ಬೀಚ್‌

ಗೋಕರ್ಣದ ಮತ್ತೊಂದು ಪ್ರಾಚೀನ ಮತ್ತು ಉಸಿರಿಡಿದು ನೋಡುವಂತಹ ಕಡಲ ತೀರವೆಂದರೆ ಹಾಫ್-ಮೂನ್ ಬೀಚ್. ಡ್ರೋನ್ ಶಾಟ್ ನಲ್ಲಿ ಮಾತ್ರ ನೋಡಬಹುದಾದ, ಅರ್ಧ ಚಂದ್ರನಂತೆ ಕಾಣುವ ಅದರ ಆಕಾರದಿಂದಾಗಿ ಇದನ್ನು ಹಾಫ್‌ ಮೂನ್‌ ಬೀಚ್‌ ಎಂದು ಹೆಸರಿಸಲಾಗಿದೆ. ಚಾರಣದ ಮೂಲಕ ತಲುಪಬಹುದಾದ ಎರಡು ಕಡಲತೀರಗಳಲ್ಲಿ ಇದೂ ಒಂದು. ಇಲ್ಲಿ ನೀವು ಸಾಂಪ್ರದಾಯಿಕ ಹಳ್ಳಿಗಳ ಗುಡಿಸಲುಗಳಲ್ಲಿ ಕ್ಯಾಂಪಿಂಗ್‌ ಮಾಡುತ್ತ ಪೋಟೋಗೆ ಹೇಳಿ ಮಾಡಿಸಿದಂತಹ ನೀಲ ಸಾಗರವನ್ನು ನೋಡುತ್ತಾ ಮುಳುಗಿ ಹೋಗಬಹುದು. ಓಂ ಬೀಚ್‌ಗೆ ಹೋಲಿಸಿದರೆ ಕಡಿಮೆ ಅಭಿವೃದ್ಧಿ ಹೊಂದಿರುವ ಈ ಕಡಲದಂಡೆಯಲ್ಲಿ ಅಕಾಶವನ್ನು ನೋಡುತ್ತಾ, ಗುಹೆಗಳನ್ನು ಅನ್ವೇಶಿಸುತ್ತಾ ಸಮಯ ಕಳೆಯಬಹುದು.
ಹಿನ್ನೆಲೆಯಲ್ಲಿ ದಟ್ಟವಾದ ಅರಣ್ಯವನ್ನು ಹೊಂದಿರುವ ಈ ಕಡಲ ದಂಡೆ, ಅರಣ್ಯ ಹಾಗೂ ಅನಂತತೆಯ ನೋಟಗಳ ರೋಮಾಂಚನವನ್ನು ನೀಡುತ್ತದೆ. ಈ ಕಡಲ ತೀರದಲ್ಲಿ ಯಾವುದೇ ಜಲಕ್ರೀಡೆ ಚಟುವಟಿಕೆಗಳಿಲ್ಲ, ಆದಾಗ್ಯೂ ನೀವು ಈಜು, ಕ್ಯಾನೋಯಿಂಗ್, ಪ್ಯಾಡಲ್ ದೋಣಿಗಳು, ಕ್ಯಾಂಪಿಂಗ್ಗಳಂತ ಚಟುವಟಿಕೆಗಳಲ್ಲಿ ತಲ್ಲೀನರಾಗಬಹುದು ಅಥವಾ ಕಡಲತೀರದಲ್ಲಿ ವಿಶ್ರಾಂತಿ ಪಡೆಯುವುದು ಹಾಗೂ ಸೂರ್ಯ ಸ್ನಾನ ಮಾಡುವುದರೊಳಗೆ ನಿಮ್ಮನ್ನು ನೀವು ಮುಳುಗಿಸಿಕೊಳ್ಳಬಹುದು. ಸ್ಥಳೀಯ ಆಹಾರಗಳನ್ನು ಆಸ್ವಾಧಿಸಿ, ಹೆಚ್ಚಿನ ಅನುಭವಗಳನ್ನು ಮಡಿಲಿಗೆ ಸೇರಿಸಿಕೊಳ್ಳಬಹುದು. ಈ ಕಡಲ ತೀರವು ಖಂಡಿತವಾಗಿಯೂ ನಗರದ ಗಡಿಬಿಡಿ ಮತ್ತು ಗದ್ದಲದಿಂದ ದೂರವಿರುವ ಸ್ಥಳವಾಗಿದ್ದು, ಪ್ರಕೃತಿಯ ಮಡಿಲಲ್ಲಿ ನಿಮ್ಮನ್ನು ಮುಳಿಗೇಳಿಸುತ್ತದೆ.

ಗೋಕರ್ಣ ಬೀಚ್

Manjarabad Fort

ಗೋಕರ್ಣ ಬೀಚ್

ಇತ್ತೀಚಿಗೆ ಈ ಕಡಲ ತೀರವು ಅನ್ವೇಷಣೆಯ ತಾಣವಾಗಿ ಜನಪ್ರಿಯತೆಯನ್ನು ಗಳಿಸಿದೆ. ಅಷ್ಟೊಂದು ಸ್ವಚ್ಛವಾಗಿಲ್ಲದ ಈ ಕಡಲ ತೀರದಲ್ಲಿ ಮಹಾಬಲೇಶ್ವರ ದೇವಾಲಯವನ್ನು ಪ್ರವೇಶಿಸುದಕ್ಕೂ ಮೊದಲು ಪವಿತ್ರ ಸ್ನಾನ ಮಾಡಬೇಕು ಎಂಬ ನಂಬಿಕೆಯಿದೆ. ಗಂಗವಲ್ಲಿ ನದಿಯ ಕಡೆಗೆ ಸ್ವಲ್ಪ ದೂರ ನಡೆದರೆ, ಪ್ರಾಚೀನ ಎನಿಸುವ ಮತ್ತು ಕಡಿಮೆ ಜನಸಂದಣಿಯಿಂದ ಕೂಡಿರುವ ಪ್ರಶಾಂತ ಕಡಲ ದಡಿಯನ್ನು ನೀವು ಕಾಣಬಹುದು. ಸಾಹಸ ಅನ್ವೇಷಣೆಯಲ್ಲಿ ತೊಡಗುವವರು ಮತ್ತು ಛಾಯಾಗ್ರಹಣಕ್ಕಾಗಿ ಹಾತೊರೆಯುವ ಉತ್ಸಾಹಿಗಳಿಗೆ ಸ್ವರ್ಗವಾಗಿರುವ ಗೋಕರ್ಣ ಕಡಲತೀರವು, ಜೆಟ್-ಸ್ಕೀಯಿಂಗ್, ಸ್ನಾರ್ಕೆಲಿಂಗ್, ಸರ್ಫಿಂಗ್, ಬನಾನಾ ಬೋಟ್‌ ರೈಡಿಂಗ್ ಮತ್ತು ಚಾರಣದಂತಹ ಸಾಹಸಮಯ ಚಟುವಟಿಕೆಗಳಿಗೆ ಜನಪ್ರಿಯವಾಗಿದೆ. ನಿಮ್ಮನ್ನು ನೀವು ಅನ್ವೇಷಿಸಿಕೊಳ್ಳಲು ಇಚ್ಛಿಸಿದರೆ, ಕಡಲ ಕಿನಾರೆಯಲ್ಲಿನ ಯೋಗ ಸೆಷನ್‌ಗಳಲ್ಲಿ ಪಾಲ್ಗೊಳ್ಳಬಹುದು. ಗೋಕರ್ಣ ಕಡಲತೀರವು 10 ಕಿ.ಮೀ ವ್ಯಾಪ್ತಿಯೊಳಗಿನ ಇತರ ಸುಂದರ ಬೀಚ್‌ಗಳಿಗೆ ನಿಮ್ಮ ಚಾರಣವನ್ನು ಪ್ರಾರಂಭಿಸಬಹುದಾದ ಮುಖ್ಯ ಸ್ಥಳವಾಗಿದೆ.

ಪ್ಯಾರಡೈಸ್‌ ಬೀಚ್

Manjarabad Fort

ಪ್ಯಾರಡೈಸ್‌ ಬೀಚ್

ಕೇವಲ ನಡಿಗೆಯಿಂದ ಮಾತ್ರ ತಲುಪಬಹುದಾದ ಮತ್ತೊಂದು ಜನಪ್ರಿಯ ಕಡಲತೀರವೆಂದರೆ ಪ್ಯಾರಡೈಸ್ ಬೀಚ್. ಪ್ಯಾರಡೈಸ್ ಬೀಚ್ ಗೆ ನೇರವಾಗಿ ಸಂಪರ್ಕಿಸಲು ಯಾವುದೇ ರಸ್ತೆ ಇಲ್ಲ. ಗೋಕರ್ಣದ ಅತ್ಯಂತ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವ ಕಡಲತೀರಗಳಲ್ಲಿ ಒಂದಾಗಿರುವ ಪ್ಯಾರಡೈಸ್‌ ಬೀಚ್‌, 150 ಮೀಟರ್ ಉದ್ದವಿದ್ದು, ದಂಡೆಯ ಶೇ.70ರಷ್ಟು ಸುಂದರವಾದ ಬಂಡೆಗಳಿಂದ ಆವೃತವಾಗಿದೆ. ಪ್ಯಾರಡೈಸ್ ಬೀಚ್ ಖಂಡಿತವಾಗಿಯೂ ಛಾಯಾಗ್ರಾಹಕರಿಗೆ ಆನಂದ ನೀಡುವ ತಾಣ. ಕಡಲತೀರದಲ್ಲಿ ಯಾವುದೇ ಜಲ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿರದ ಕಾರಣ, ಪ್ರಶಾಂತತೆಯಲ್ಲಿ ಮತ್ತು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಬಯಸುವವರಿಗೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ನಕ್ಷತ್ರಗಳನ್ನು ನೋಡುತ್ತಾ, ಸ್ಥಳೀಯ ಆಹಾರಗಳನ್ನು ಸಮಿಯುತ್ತಾ ಅಥವಾ ದೀರ್ಘವಾಗಿ ಉಸಿರಾಡುತ್ತಾ ಮತ್ತು ಶಾಂತತೆಯನ್ನು ಹೀರಿಕೊಳ್ಳುತ್ತಾ ಸಮಯವನ್ನು ಕಳೆಯಬಹುದು. ನೀರಿನ ಪ್ರವಾಹ ಹೆಚ್ಚಾಗಿರುವ ಕಾರಣದಿಂದ ಪ್ಯಾರಡೈಸ್ ಬೀಚ್ ನಲ್ಲಿ ಈಜುವುದು ಸೂಕ್ತವಲ್ಲ. ಜಾರುವ ಮತ್ತು ಒರಟಾದ ಬಂಡೆಗಳ ಕಾರಣದಿಂದಾಗಿ ಸೂರ್ಯಾಸ್ತದ ನಂತರ ಇತರ ಕಡಲತೀರಗಳಿಗೆ ಮತ್ತೆ ಪಾದಯಾತ್ರೆ ಮಾಡುವ ಸಾಹಸ ಮಾಡಬೇಡಿ. ಇದು ತುಂಬಾ ಅಪಾಯಕಾರಿ. ಪ್ಯಾರಡೈಸ್ ಬೀಚ್ ನಲ್ಲಿ ಉಳಿದುಕೊಳ್ಳುವ ಆಯ್ಕೆಗಳೂ ಹೆಚ್ಚಾಗಿಲ್ಲ.‌

ಗೋಕರ್ಣದಲ್ಲಿ ಮಾಡಬಹುದಾದ ಇತರೆ ಕೆಲಸಗಳು

ಕಡಲ ದಡಿಯ ಈ ಪಟ್ಟಣವು ಖಂಡಿತವಾಗಿಯೂ ನಿಮ್ಮ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಕಾರಣದಿಂದ ಬೇರೆ ಇನ್ನೆನನ್ನಾದರೂ ಮಾಡುವ ಸಾಧ್ಯತೆ ತುಂಬಾ ಕಡಿಮೆ. ಆದಾಗ್ಯೂ, ಈ ಪ್ರಶಾಂತ ಪಟ್ಟಣವು ಯಾತ್ರಿಕರ ಸ್ವರ್ಗವಾಗಿದೆ. ಈ ಪಟ್ಟಣವು ಕೆಲವು ಪ್ರಸಿದ್ಧ ದೇವಾಲಯಗಳನ್ನು ಹೊಂದಿದ್ದು, ಭಕ್ತಾದಿಗಳು ಈ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಸಮುದ್ರದಲ್ಲಿ ಈಜುವುದು, ಸರ್ಫಿಂಗ್ ಮತ್ತು ಯೋಗದಂತಹ ಇತರ ಚಟುವಟಿಕೆಗಳಲ್ಲಿಯೂ ನೀವು ತೊಡಗಬಹುದು. ಈ ಪ್ರದೇಶದಲ್ಲಿ ಡಾಲ್ಫಿನ್ ಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ಮಾರಾಟಗಾರರು ಇದ್ದರೂ ಸಹ, ನೋಡುವ ಸಾಧ್ಯತೆಗಳು ತುಂಬಾ ಕಡಿಮೆ.

  • ಮಹಾಬಲೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾದ, ಅತಿ ಹೆಚ್ಚು ಜನ ಭೇಟಿ ನೀಡುವ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಸಾ.ಶ. 4 ನೇ ಶತಮಾನದಷ್ಟು ಹಿಂದಿನದಾಗಿದ್ದು, ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿದೆ.
  • ಮಹಾ ಗಣಪತಿ ದೇವಾಲಯವನ್ನು ‘ಸಿದ್ಧ ಗಣಪತಿ’ ದೇವಾಲಯ ಎಂದೂ ಕರೆಯಲಾಗುತ್ತದೆ, ಹೆಸರೇ ಹೇಳುವಂತೆ ಇದು ಗಣೇಶನಿಗೆ ಸಮರ್ಪಿತವಾದ ದೇವಾಲಯ. ಶಿವ ದೇವಾಲಯದಿಂದ ಕೆಲವೇ ಗಜಗಳಷ್ಟು ದೂರದಲ್ಲಿರುವ ಈ ಗಣೇಶ ದೇವಾಲಯಕ್ಕೆ ಮೊದಲು ಭೇಟಿ ನೀಡಿ, ನಂತರ ಶಿವ ದೇವಾಲಯಕ್ಕೆ ಹೋಗುವುದು ಸಾಮಾನ್ಯವಾದ ಅಭ್ಯಾಸ.
  • ಕೋಟಿ ತೀರ್ಥ ಮಹಾಬಲೇಶ್ವರ ದೇವಾಲಯಕ್ಕೆ ಹತ್ತಿರದಲ್ಲಿರುವ ತಾಣವಾಗಿದ್ದು, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಹೆಚ್ಚು ಭೇಟಿ ನೀಡುವ ಸ್ಥಳವಾಗಿದೆ. ಈ ಮಾನವ ನಿರ್ಮಿತ ನೀರಿನ ಟ್ಯಾಂಕ್, ಅನೇಕ ನೀರಿನ ಬುಗ್ಗೆಗಳ ಉಗಮಸ್ಥಾನ ಎಂಬ ನಂಬಿಕೆಯಿದೆ.
  • ಮಿರ್ಜಾನ್ ಕೋಟೆ: ನಿಮಗೆ ಇತಿಹಾಸದಲ್ಲಿ ಆಸಕ್ತಿ ಇಲ್ಲದಿದ್ದರೂ, 16ನೇ ಶತಮಾನದ ಈ ಕೋಟೆಯು ಖಂಡಿತವಾಗಿಯೂ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಗೋಕರ್ಣದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಈ ಕೋಟೆ, ಪೋರ್ಚುಗೀಸ್ ರಾಣಿಯಾದ ಪೆಪ್ಪರ್ ಕ್ವೀನ್ ಗೆ ಸೇರಿದ್ದು ಎಂದು ನಂಬಲಾಗಿದೆ, ಅವರು ಸುಮಾರು 50 ವರ್ಷಗಳ ಕಾಲ ಈ ಕೋಟೆಯಲ್ಲಿ ನೆಲೆಸಿದ್ದರು.
  • ವಿಶೇಷವಾಗಿ ಮೊದಲ ಬಾರಿಗೆ ಹೋಗುವವರಿಗೆ ಗೋಕರ್ಣ ಕಡಲತೀರದಲ್ಲಿ ಸ್ಪಷ್ಟವಾದ ನೀಲಿ ನೀರನ್ನು ಹುಡುಕುವುದು ಸೂಕ್ತವಾದ ಕಾರ್ಯವಾಗಿದೆ. ಕಡಲತೀರದಲ್ಲಿ ಒಂದೆರಡು ಏಜೆನ್ಸಿಗಳು ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ಈ ತರಗತಿಗಳನ್ನು ನಡೆಸುತ್ತಿವೆ.
  • ಯೋಗ ತರಗತಿಗಳು, ನೀವು ಇಲ್ಲಿ ನಿಮ್ಮ ದಿನದ ಪ್ರಾರಂಭವನ್ನು ಅಥವಾ ಮುಕ್ತಾಯವನ್ನು ಸುಂದರವಾದ ಕಡಲತೀರ ಮತ್ತು ಆಕಾಶದ ಹಿನ್ನೆಲೆಯಲ್ಲಿ ಮನಸ್ಸನ್ನು ಪುನರುಜ್ಜೀವನಗೊಳಿಸುವ ಯೋಗ ತರಗತಿಗೆ ದಾಖಲಾಗುವ ಮೂಲಕ ಮಾಡಬಹುದು. ಒಂದೆರಡು ಯೋಗ ಶಾಲೆಗಳು ಯೋಗದ ವಿವಿಧ ರೂಪಗಳಲ್ಲಿ ಅಧಿವೇಶನವನ್ನು ಇಲ್ಲಿ ನಡೆಸುತ್ತಿವೆ.
  • ವರಾತ್ರಿಯ ಸಮಯದಲ್ಲಿ ಭೇಟಿ ನೀಡುವುದು, ಶಿವರಾತ್ರಿ ಶಿವನ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇದು ಭಗವಾನ್ ಶಿವ ಪಾರ್ವತಿ ದೇವಿಯನ್ನು ಮದುವೆಯಾದ ದಿನ. ಇಲ್ಲಿನ ಶಿವರಾತ್ರಿಯ ಆಚರಣೆ ದೇಶದ ಭವ್ಯ ಆಚರಣೆಗಳಲ್ಲಿ ಒಂದು ಎನಿಸಿಕೊಂಡಿದ್ದು, ಇದಕ್ಕೆ ಸಾಕ್ಷಿಯಾಗಲು ಪ್ರವಾಸಿಗರು ಮತ್ತು ಭಕ್ತರು ಪ್ರಪಂಚದಾದ್ಯಂತದಿಂದ ಆಗಮಿಸುತ್ತಾರೆ.
  • ಯಾಣ ಗುಹೆಗಳು ಈ ಪಟ್ಟಣದಿಂದ ಕೇವಲ 27 ಕಿ.ಮೀ ದೂರದಲ್ಲಿದ್ದು, ಸಾಹಸವನ್ನು ಬಯಸುವವರಿಗೆ, ವನ್ಯಜೀವಿಗಳು ಮತ್ತು ಧರ್ಮದ ಕಾರಣಕ್ಕೆ ಹೆಸರುವಾಸಿಯಾಗಿವೆ. ಚಾರಣಿಗರು, ಪಾದಯಾತ್ರಿಗಳು ಮತ್ತು ಸಾಹಸ ಅನ್ವೇಷಕರಿಗೆ ಈ ತಾಣವು ಸ್ವರ್ಗ ಎನಿಸಿದ್ದು, ಛಾಯಾಗ್ರಾಹಕರಿಗೆ ಖಂಡಿತವಾಗಿಯೂ ಸಂತೋಷವನ್ನು ನೀಡುತ್ತದೆ.

ಗೋಕರ್ಣವನ್ನು ತಲುಪುವುದು ಹೇಗೆ?

ಕರ್ನಾಟಕದ ಕಾರವಾರ ಕರಾವಳಿಯ ಒಂದು ಸಣ್ಣ ಯಾತ್ರಾಸ್ಥಳವಾಗಿರುವ ಗೋಕರ್ಣವು ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ವಿಮಾನದ ಮೂಲಕ
ಗೋವಾದ ದಬೋಲಿಮ್ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಸುಮಾರು 145 ಕಿ.ಮೀ ದೂರದಲ್ಲಿದೆ. ಅಲ್ಲಿಂದ ರಸ್ತೆಯ ಮೂಲಕ ಗೋಕರ್ಣವನ್ನು ತಲುಪಬಹುದು. ಇತರ ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳೆಂದರೆ ಮಂಗಳೂರು ಮತ್ತು ಬೆಂಗಳೂರುಗಳು. ಇವು ಕ್ರಮವಾಗಿ 250 ಕಿ.ಮೀ ಮತ್ತು 487 ಕಿ.ಮೀ ದೂರದಲ್ಲಿವೆ.

ರೈಲಿನ ಮೂಲಕ
ಗೋಕರ್ಣವು ರೈಲ್ವೇ ನಿಲ್ದಾಣವನ್ನು ಹೊಂದಿದ್ದರೂ ಸಹ, ಪ್ರಮುಖ ನಗರಗಳೊಂದಿಗೆ ಉತ್ತಮ ರೈಲ್ವೆ ಸಂಪರ್ಕವನ್ನು ಹೊಂದಿಲ್ಲ ಹಾಗೂ ಎಲ್ಲಾ ರೈಲುಗಳು ಇಲ್ಲಿ ನಿಲ್ಲುವುದಿಲ್ಲ. ಗೋಕರ್ಣಕ್ಕೆ ಹತ್ತಿರದ ಪ್ರಮುಖ ರೈಲು ನಿಲ್ದಾಣವೆಂದರೆ ಅಂಕೋಲಾ, ಇದು ಗೋಕರ್ಣದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ಗೋಕರ್ಣವನ್ನು ತಲುಪಬಹುದು.

ರಸ್ತೆ ಮೂಲಕ
ಗೋಕರ್ಣವನ್ನು ರಸ್ತೆಗಳ ಮೂಲಕ ಸುಲಭವಾಗಿ ತಲುಪಬಹುದು. ಹತ್ತಿರದಲ್ಲಿರುವ ಪ್ರಮುಖ ನಗರವಾದ ಕಾರವಾರ ಗೋಕರ್ಣಕ್ಕೆ ಸುಮಾರು 59 ಕಿ.ಮೀ. ಅಂತರದಲ್ಲಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಹತ್ತಿರದ ಪ್ರಮುಖ ಪಟ್ಟಣಗಳಿಂದ ಕ್ಯಾಬ್‌ಗಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ಬಸ್ಸುಗಳಂತಹ ಸಾರ್ವಜನಿಕ / ಖಾಸಗಿ ಸಾರಿಗೆಯನ್ನು ಬಳಸಿ ಗೋಕರ್ಣವನ್ನು ತಲುಪಬಹುದು.

ಸುತ್ತಾಡುವುದು
ಸುಂದರವಾದ ಯಾತ್ರಾಸ್ಥಳ ಮತ್ತು ಕಡಲ ದಡಿಯ ಗೋಕರ್ಣ ಪಟ್ಟಣವನ್ನು ನಡಿಗೆಯ ಮೂಲಕ ಉತ್ತಮವಾಗಿ ಅನ್ವೇಷಿಸಬಹುದು. ಈ ಸಣ್ಣ ಮತ್ತು ದಟ್ಟವಾದ ಪಟ್ಟಣದಲ್ಲಿರುವ ಹೆಚ್ಚಿನ ಕಡಲತೀರಗಳು ಹಾಗೂ ಆಕರ್ಷಕ ತಾಣಗಳನ್ನು 20-30 ನಿಮಿಷಗಳ ನಡಿಗೆಯ ಮೂಲಕ ತಲುಪಬಹುದು. ಇಲ್ಲಿನ ಹೆಚ್ಚಿನ ಕೆಫೆಗಳು ಮತ್ತು ನೋಡುವಂತಹ ಸ್ಥಳಗಳು ಕಡಲತೀರದಲ್ಲಿದ್ದು, ನಡಿಗೆಯ ಮೂಲಕ ಸುಲಭವಾಗಿ ಸೇರಬಹುದು ಹಾಗೂ ಕರ್ನಾಟಕದ ವಿಶಿಷ್ಟ ಕಡಲತೀರದ ಪಟ್ಟಣದಲ್ಲಿನ ಪ್ರಶಾಂತತೆಯೊಳಗೆ ಮುಳುಗಿಹೋಗಬಹುದು.