ಲಾಲ್ಗುಲಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಕಡಿಮೆ ಜನಪ್ರಿಯವಾದ ಜಲಪಾತವಾಗಿದೆ. ಲಾಲ್ಗುಲಿ ಬಹು ಹಂತದ ಜಲಪಾತವಾಗಿದ್ದು, ಕಾಳಿ ನದಿ ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಎತ್ತರಗಳಿಂದ (61 ರಿಂದ 91 ಮೀಟರ್‌ಗಳವರೆಗೆ) ಧುಮುಕುತ್ತಾಳೆ . ಲಾಲ್ಗುಲಿ ಹಸಿರು ಕಾಡುಗಳು, ಪ್ರಶಾಂತ ಮತ್ತು ಆಹ್ಲಾದಕರ ಪರಿಸರದಲ್ಲಿರುವ ಜಲಪಾತವಾಗಿದ್ದು ಛಾಯಾ ಚಿತ್ರ ತೆಗೆಯುವವರ ಕಣ್ಮಣಿಯಾಗಿದೆ.
ಲಾಲ್ಗುಲಿ ಹಿಂದೆ ಸಾವಿನ ಕಣಿವೆ ಆಗಿತ್ತು ಎಂದು ನಂಬಲಾಗಿದೆ. ಸೋಂಡಾ ಆಡಳಿತಗಾರರು ಶಿಕ್ಷೆಗೊಳಗಾದ ಅಪರಾಧಿಗಳನ್ನು ಲಾಲ್ಗುಲಿ ಜಲಪಾತದ ಬಳಿಯ ಬೆಟ್ಟಗಳಿಗೆ ಕರೆದುಕೊಂಡು ಹೋಗಿ ಮೇಲಿನಿಂದ ಕೆಳಕ್ಕೆ ತಳ್ಳಿ ಸಾಯಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಇಂದು ಹನುಮಾನ್ ದೇವಾಲಯವಿದೆ.
ಭೇಟಿ ನೀಡಲು ಉತ್ತಮ ಸಮಯ: ಲಾಲ್ಗುಲಿ ಜಲಪಾತವನ್ನು ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಭೇಟಿ ನೀಡವುದು ಉತ್ತಮ. ಬೇಸಿಗೆಯ ತಿಂಗಳುಗಳಲ್ಲಿ ಜಲಪಾತವು ಒಣಗಬಹುದು. ಮಳೆಗಾಲದ ತಿಂಗಳುಗಳಲ್ಲಿ ಭೂಕುಸಿತದ ಸಾಧ್ಯತೆ ಮತ್ತು ಬಂಡೆಗಳು ವಿಪರೀತ ಜಾರುವುದರಿಂದ ಅಪಾಯ ಜಾಸ್ತಿ. ಲಾಲ್ಗುಲಿ ಜಲಪಾತ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ಹತ್ತಿರದಲ್ಲಿ ಇನ್ನೇನಿದೆ? ದಾಂಡೇಲಿ (35 ಕಿ.ಮೀ), ಸಾಥೋಡಿ ಜಲಪಾತ (44 ಕಿ.ಮೀ), ಅಟ್ಟಿವೇರಿ ಪಕ್ಷಿಧಾಮ (66 ಕಿ.ಮೀ), ಸೋಂಡಾ (52 ಕಿ.ಮೀ) ಮತ್ತು ಸಿಂಥೆರಿ ರಾಕ್ಸ್ (55 ಕಿ.ಮೀ) ಲಾಲ್ಗುಲಿ ಜಲಪಾತದೊಂದಿಗೆ ಭೇಟಿ ನೀಡಬಹುದಾದ ಆಕರ್ಷಣೆಗಳಾಗಿವೆ.
ತಲುಪುವುದು ಹೇಗೆ: ಲಾಲ್ಗುಲಿ ಬೆಂಗಳೂರಿನಿಂದ 439 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಕಾರವಾರದಿಂದ 114 ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (75 ಕಿ.ಮೀ ದೂರದಲ್ಲಿದೆ). ಲಾಲ್ಗುಲಿ ಜಲಪಾತವನ್ನು ತಲುಪಲು ಕಾರವಾರ / ಹುಬ್ಬಳ್ಳಿ ಅಥವಾ ದಾಂಡೇಲಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.
ವಸತಿ: ಯೆಲ್ಲಾಪುರ ನಗರದಲ್ಲಿ (ಲಾಲ್ಗುಲಿ ಜಲಪಾತದಿಂದ 17 ಕಿ.ಮೀ) ಅಥವಾ ದಾಂಡೇಲಿ (35 ಕಿ.ಮೀ ದೂರದಲ್ಲಿ) ವಸತಿ ಆಯ್ಕೆಗಳು ಲಭ್ಯವಿದೆ.