GO UP

ಮಲ್ಪೆ ಕಡಲತೀರ ಮತ್ತು ಸಂತ ಮೇರಿಯ ದ್ವೀಪ

separator
Scroll Down

ಉಡುಪಿ ಹತ್ತಿರದ ಮಲ್ಪೆ ಕಡಲತೀರ ಮತ್ತು ಸಂತ ಮೇರಿಯ ದ್ವೀಪವು ಕರಾವಳಿ ಕರ್ನಾಟಕದ ಜನಪ್ರಿಯ ವಿಹಾರ ತಾಣವಾಗಿದೆ. ಸಂತ ಮೇರಿಯ ದ್ವೀಪ  ಅದರ ತೆಂಗಿನ ಮರಗಳು, ಅಗ್ನಿಶಿಲೆ  ಬಂಡೆಗಳು ಮತ್ತು ಸುಂದರ ಕಡಲತೀರಗಳಿಂದಾಗಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸಮಾನವಾಗಿ ಆಕರ್ಷಿಸುತ್ತದೆ. ಐತಿಹಾಸಿಕ ಅನ್ವೇಷಕ ವಾಸ್ಕೋ ಡ ಗಾಮಾ ಭಾರತವನ್ನು ಸಮೀಪಿಸಿದಾಗ ಮೊದಲು ತಲುಪಿದ್ದು ಸಂತ ಮೇರಿಯ ದ್ವೀಪಕ್ಕೆ ಎನ್ನಲಾಗಿದೆ.

ಮಹತ್ವ: ಸಂತ ಮೇರಿಯ ದ್ವೀಪವು ಇಲ್ಲಿನ ಭೌಗೋಳಿಕವಾಗಿ ಮಹತ್ವವಾದ ಸ್ತಂಭಾಕಾರದ ಅಗ್ನಿಶಿಲೆ ಬಂಡೆಗಳಿಂದಾಗಿ ಕರ್ನಾಟಕ ರಾಜ್ಯದ ನಾಲ್ಕು ಭೂವೈಜ್ಞಾನಿಕ ವಿಸ್ಮಯಗಳಲ್ಲಿ ಒಂದಾಗಿದೆ. ಈ ಬಂಡೆಗಳು 88 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿವೆ ಎನ್ನಲಾಗಿದೆ. ಕೆಲವು ಬಂಡೆಗಳು ದಡದಿಂದ ಕಡಲೊಳಗೆ  ವಿಸ್ತರಿಸಿದ್ದು, ಹತ್ತಿಳಿಯಲು, ಸಮುದ್ರದ ಆರ್ಭಟವನ್ನು ನೋಡಿ, ಭೋರ್ಗೆರೆತವನ್ನು ಕೇಳಿ ಆನಂದಿಸಲು ಸೂಕ್ತ ಸ್ಥಳವಾಗಿದೆ

ಸಂತ ಮೇರಿಯ ದ್ವೀಪದಲ್ಲಿ ಸಾಕಷ್ಟು ತೆಂಗಿನ ಮರಗಳಿದ್ದು ನೆರಳು ನೀಡುತ್ತವೆ.  ಇಲ್ಲಿ ಕುಟುಂಬದೊಡನೆ ವಿಹಾರ, ಮರಳು ನೀರಿನಲ್ಲಿ ಆಟ, ಛಾಯಾಚಿತ್ರಗಳನ್ನು ತೆಗೆಯುವುದು, ಬಂಡೆಯ ಮೇಲೆ  ಕುಳಿತು ಪೃಕೃತಿ ಸೌಂದರ್ಯವನ್ನು ಆಸ್ವಾದಿಸುವುದು, ಸೂರ್ಯಾಸ್ತವನ್ನು ನೋಡುವುದು ಮುಂತಾದ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಕೆಲವೊಮ್ಮೆ ಸಮುದ್ರದಲ್ಲಿ ಹಂದಿ ಮೀನು (ಡಾಲ್ಫಿನ್) ನೋಡಲು ಸಿಗುತ್ತದೆ. 

ಸಮುದ್ರದ ನೀರಿನಲ್ಲಿ ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಡಬಹುದು, ಆದರೆ ದೊಡ್ಡವರು ಜೊತೆಗಿದ್ದು ನಿಗಾ ವಹಿಸುವುದು ಸೂಕ್ತ.

ಸಂತ ಮೇರಿಯ ದ್ವೀಪಕ್ಕೆ  ದೋಣಿ ಮೂಲಕ ಹೋಗಿ ಬರಲು ದೋಣಿ ಸವಾರಿ ಸೇರಿದಂತೆ ಅರ್ಧ ದಿನ ಬೇಕಾಗುತ್ತದೆ. ಪ್ರವಾಸಿಗರು ಉಡುಪಿಗೆ ಶ್ರೀ ಕೃಷ್ಣ ದೇವಸ್ಥಾನ (5 ಕಿ.ಮೀ) ಅಥವಾ ಕಾಪು ಬೀಚ್ ಮತ್ತು ದೀಪ ಸ್ಥ೦ಭ (ಮಲ್ಪೆಯಿಂದ 20 ಕಿ.ಮೀ) ಭೇಟಿ ನೀಡಿ ದಿನ ದ್ವಿತೀಯಾರ್ಧವನ್ನು ಕಳೆಯಬಹುದು.

ಸಮಯ: ಸಂತ ಮೇರಿಯ ದ್ವೀಪಕ್ಕೆ ದೋಣಿಗಳು ಮಲ್ಪೆ ಬಂದರಿನಿಂದ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಿಯಮಿತವಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿ ಸವಾರಿ ಸುಮಾರು 15-20 ನಿಮಿಷಗಳವರೆಗೆ ಇರುತ್ತದೆ.

ಮಲ್ಪೆ ಕಡಲತೀರ: ಮಲ್ಪೆ ಬಂದರಿನ ಸಮೀಪ ಸುಂದರ ಮಲ್ಪೆ ಕಡಲತೀರವಿದೆ.

ಭೇಟಿ: ಮಲ್ಪೆ ಬೆಂಗಳೂರಿನಿಂದ 410 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ಉಡುಪಿ ಹತ್ತಿರದ ರೈಲು ನಿಲ್ದಾಣವಾಗಿದೆ. ಕರ್ನಾಟಕದ ಎಲ್ಲಾ ಭಾಗಗಳಿಂದ ಉಡುಪಿ ತಲುಪಲು ನಿಯಮಿತ ಬಸ್ಸುಗಳು ಲಭ್ಯವಿದೆ ಮತ್ತು ಉಡುಪಿಯಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆದು ಮಲ್ಪೆ ಕಡಲತೀರ ತಲುಪಬಹುದು.

ವಸತಿ: ಹತ್ತಿರದ ಪಟ್ಟಣವಾದ ಉಡುಪಿ ಬಜೆಟ್ ಮತ್ತು ಐಷಾರಾಮಿ ವಾಸ್ತವ್ಯದ ಆಯ್ಕೆಗಳನ್ನು ನೀಡುತ್ತದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಲ್ಪೆಯಲ್ಲಿರುವ ಪ್ಯಾರಡೈಸ್ ಐಲ್ ಬೀಚ್ ರೆಸಾರ್ಟ್ ಅನ್ನು ನಡೆಸುತ್ತದೆ. ಮಲ್ಪೆಯಿಂದ 12 ಕಿ.ಮೀ ದೂರದಲ್ಲಿರುವ ಕೋಡಿ ಬೆಂಗ್ರೆಯಲ್ಲಿ ದೋಣಿ ಮನೆ (ಹೌಸ್ ಬೋಟ್) ವಾಸ್ತವ್ಯವೂ ಸಾಧ್ಯವಿದೆ- ವಿವರಗಳು: https://thirumalacruise.com/

    Tour Location

    Leave a Reply

    Accommodation
    Meals
    Overall
    Transport
    Value for Money