GO UP

ಚಿತ್ರದುರ್ಗ ಕೋಟೆ

separator
Scroll Down

ಚಿತ್ರದುರ್ಗ ಬೆಂಗಳೂರಿನ ಉತ್ತರಕ್ಕೆ 200 ಕಿ.ಮೀ ದೂರದಲ್ಲಿರುವ ಕೋಟೆ ಪಟ್ಟಣ. ಚಿತ್ರದುರ್ಗವು ಏಳು ಸುತ್ತಿನ ಕಲ್ಲಿನ ಕೋಟೆಗೆ ಹೆಸರುವಾಸಿಯಾಗಿದೆ. ಅಭೇದ್ಯವಾದ ಕೋಟೆ ಮತ್ತು ಓಬವ್ವನ ಕಿಂಡಿ ಪ್ರಮುಖ ಆಕರ್ಷಣೆಗಳಾಗಿವೆ.  

ಚಿತ್ರದುರ್ಗ ಕೋಟೆ: ಚಿತ್ರದುರ್ಗ ಕೋಟೆಯನ್ನು ಮೂಲತಃ 11 ನೇ ಶತಮಾನದಲ್ಲಿ ಅಂದಿನ ಚಾಲುಕ್ಯ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದರು. ಕಾಲಾನಂತರದಲ್ಲಿ ಈ ಕೋಟೆ ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿತ್ತು. ಈ ರಾಜರು ಕೋಟೆಯನ್ನು ಇನ್ನಷ್ಟು ಭದ್ರಪಡಿಸಿದರು. ಚಿತ್ರದುರ್ಗ ಕೋಟೆಯು 18 ನೇ ಶತಮಾನದ ತನಕ  (ಹೈದರ್ ಅಲಿ ಆಳ್ವಿಕೆಯಲ್ಲಿ ಮತ್ತು ಭಾರತದ ಬ್ರಿಟಿಷ್ ಆಕ್ರಮಣ ಸಮಯ) ಸಕ್ರಿಯ ಯುದ್ಧಗಳಿಗೆ ಸಾಕ್ಷಿಯಾಯಿತು.

ಚಿತ್ರದುರ್ಗ ಕೋಟೆ ಅದರ ಕಾಲದ ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲಗಳಿಗೆ ಹೆಸರುವಾಸಿಯಾಗಿದೆ.  ನೀರಿನ ಜಲಾಶಯಗಳು, ಕಾಲುವೆಗಳು ಇರುವುದರಿಂದ ನೀರನ್ನು ಹೊರಗಿನಿಂದ ತರಬೇಕಾದ ಅವಶ್ಯಕತೆ ಇಲ್ಲದೇ ಕೋಟೆಯನ್ನು ಆತ್ಮನಿರ್ಭರವಾಗಿಸಿತ್ತು. 

ಎಚ್ಚರಿಕೆಯಿಂದ ಯೋಜಿಸಲಾದ ಕೋಟೆಯ ಏಳು ಸುತ್ತುಗಳು ಶತ್ರು ಪಡೆಗಳಿಂದ ಬಹುತೇಕ ಅಭೇದ್ಯವಾಗಿತ್ತು. ಕೋಟೆಯ ಸುತ್ತಲೂ ಶತ್ರುಗಳು ಸುತ್ತುವರಿದಾಗ ಕೋಟೆಯ ಒಳಗೆ ಮದ್ದುಗುಂಡುಗಳು, ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಕಷ್ಟು ಗೋದಾಮುಗಳಿದ್ದವು.

ಒನಕೆ ಓಬವ್ವಳ ಕಿಂಡಿ: ಓಬವ್ವ ಚಿತ್ರದುರ್ಗ ಕೋಟೆಯನ್ನು ಶತ್ರು ಸೈನಿಕರಿಂದ ಕಾಯುವ ಜವಾಬ್ದಾರಿ ಹೊತ್ತ ಕಾವಲುಗಾರನ ಪತ್ನಿಯಾಗಿದ್ದಳು. ಒಂದು ದಿನ ಪತಿ ಊಟಕ್ಕೆ ಹೋಗಿದ್ದಾಗ ಓಬವ್ವ ಶತ್ರು ಸೈನಿಕರು ಕಿರಿದಾದ ಕಿಂಡಿಯ ಮೂಲಕ ಒಬ್ಬೊಬ್ಬರಾಗಿ ಕೋಟೆಗೆ ನುಸುಳುತ್ತಿರುವುದನ್ನು ಗಮನಿಸಿದಳು. ರಂಧ್ರದಿಂದ ಹೊರಬರುವ ಸೈನಿಕರ ತಲೆಯ ಮೇಲೆ ತನ್ನ ಕೈಯಲ್ಲಿದ್ದ ಏಕೈಕ ಆಯುಧ ಒನಕೆಯನ್ನು ಬಳಸಿ ಹೊಡೆದು ಹೆಣವನ್ನು ಹೊರಗೆಳೆದು ಮುಂದಿನ ಸೈನಿಕನಿಗಾಗಿ ಕಾದಳು. ಈ ರೀತಿಯಾಗಿ  ಓಬವ್ವ ಹೈದರ್ ಅಲಿಯ ಹಲವಾರು ಸೈನಿಕರ ಬಲಿ ಪಡೆದಳು. ಓಬವ್ವಳ  ಸಮಯೋಚಿತ ಚಿಂತನೆ, ವೀರಾವೇಶದ ಹೋರಾಟದಿಂದಾಗಿ ಶತ್ರು ಸೈನಿಕರು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲರಾದರು. ಆದಾಗ್ಯೂ ಅಂತಿಮವಾಗಿ ಶತ್ರು ಸೈನಿಕರು ಕೋಟೆಯೊಳಗೆ ನುಸುಳಲು ಯಶಸ್ವಿಯಾದರು ಮತ್ತು ಓಬವ್ವ ಕೊನೆಯ ತನಕ ಹೋರಾಡಿ ವೀರಮರಣವನ್ನಪ್ಪಿದಳು. ಅವಳ ಧೈರ್ಯ ಮತ್ತು ಸಮಯ ಪ್ರಜ್ಞೆ ಎಲ್ಲರಿಂದಲೂ ಮೆಚ್ಚುಗೆಯನ್ನು ಗಳಿಸಿತು ಮತ್ತು ಆಕೆಗೆ ಒನಕೆ ಓಬವ್ವ ಎಂಬ ಹೆಸರು ತಂದುಕೊಟ್ಟಿತು. ಶತ್ರು ಸೈನಿಕರು ಪ್ರವೇಶಿಸಿದ ರಂಧ್ರಕ್ಕೆ “ಒನಕೆ ಓಬವ್ವನ ಕಿಂಡಿ”  ಎಂದು ಹೆಸರಿಸಲಾಗಿದೆ. ಚಿತ್ರದುರ್ಗ ಕೋಟೆಯಲ್ಲಿ ಇದು ಭೇಟಿ ನೀಡಲೇಬೇಕಾದ ಸ್ಥಳ  ಮತ್ತು ಫೋಟೋ ತೆಗೆಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಸಮಯ: ಚಿತ್ರದುರ್ಗ ಕೋಟೆ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. 

ಪ್ರವೇಶದ್ವಾರದ ಬಳಿ ಅಧಿಕೃತ  ಮಾರ್ಗದರ್ಶಿಗಳು ಲಭ್ಯವಿರುತ್ತಾರೆ. ಇವರ ಸೇವೆಯನ್ನು ಪಡೆದು ಕೋಟೆಯ ವಿಸ್ತೃತ ವಿವರಣೆ, ಮಾರ್ಗದರ್ಶಿ ಪ್ರವಾಸ ಕೈಗೊಳ್ಳಬಹುದಾಗಿದೆ. 

ಹತ್ತಿರ: ವಾಣಿ ವಿಲಾಸ ಸಾಗರ ಅಣೆಕಟ್ಟು (60 ಕಿ.ಮೀ), ದಾವಣಗೆರೆ ನಗರ (62 ಕಿ.ಮೀ), ಭದ್ರಾ ವನ್ಯಜೀವಿ ಅಭಯಾರಣ್ಯ (135 ಕಿ.ಮೀ) ಮತ್ತು ಹಂಪಿ (152 ಕಿ.ಮೀ) ಚಿತ್ರದುರ್ಗದೊಂದಿಗೆ ಭೇಟಿ ನೀಡಬಹುದಾದ ಕೆಲವು ಸ್ಥಳಗಳು.

ತಲುಪುವುದು ಹೇಗೆ? ಚಿತ್ರದುರ್ಗ ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ. ಬಳ್ಳಾರಿಯ ವಿದ್ಯಾನಗರ ವಿಮಾನ ನಿಲ್ದಾಣವು ಹತ್ತಿರದ (140 ಕಿ.ಮೀ) ವಿಮಾನ ನಿಲ್ದಾಣವಾಗಿದೆ ಆದರೆ ಹೆಚ್ಚಿನ ಸಂಖ್ಯೆಯ ವಿಮಾನಗಳ ಕಾರಣ ಬೆಂಗಳೂರು ವಿಮಾನ ನಿಲ್ದಾಣ (225 ಕಿ.ಮೀ) ಉತ್ತಮ ಆಯ್ಕೆಯಾಗಿದೆ. ಚಿತ್ರದುರ್ಗವು ರೈಲು ನಿಲ್ದಾಣ ಮತ್ತು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಅತ್ಯುತ್ತಮ ಬಸ್ ಸಂಪರ್ಕವನ್ನು ಹೊಂದಿದೆ. ಚಿತ್ರದುರ್ಗ ಕೋಟೆ ನಗರ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿದೆ. 

ವಸತಿ: ಕೆಎಸ್‌ಟಿಡಿಸಿ ಚಿತ್ರದುರ್ಗದಲ್ಲಿ ಬಜೆಟ್ ಹೋಟೆಲ್ ಮಯೂರ ದುರ್ಗ ನಡೆಸುತ್ತಿದೆ. ಚಿತ್ರದುರ್ಗ ಪಟ್ಟಣದಲ್ಲಿ ಹೆಚ್ಚುವರಿ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳು ಲಭ್ಯವಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money