ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಮತ್ತು ಭಾರತೀಯ ರೈಲ್ವೆ ಸಹಭಾಗಿತ್ವದಲ್ಲಿ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಪ್ರವಾಸಗಳನ್ನು ನಡೆಸಲಾಗುತ್ತಿದೆ.
ಗೋಲ್ಡನ್ ಚಾರಿಯಟ್ ಪ್ರವಾಸದಲ್ಲಿ ಗ್ರಾಹಕರಿಗೆ ಅರಮನೆಯಂತಹ ವೈಭವ, ಐಷಾರಾಮಿ ವಸತಿ, ಅತ್ತ್ಯುತ್ತಮ ಊಟ, ಉಪಾಹಾರ ದೊರೆಯುತ್ತದೆ. ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಜಿಮ್ (ವ್ಯಾಯಾಮ ಕೋಣೆ), ಉಪಾಹಾರ ಗೃಹಗಳು ಮತ್ತಿತರ ಸೌಲಭ್ಯಗಳಿವೆ. ನುರಿತ ಸಿಬ್ಬಂದಿ ಪ್ರವಾಸಿಗರ ಸೇವೆಗೆ ಸದಾ ಲಭ್ಯವಿದ್ದು ಪ್ರಯಾಣ ಆರಾಮದಾಯವಾಗಿಸಲು ಹಾಗು ಅವಿಸ್ಮರಣೀಯ ಅನುಭವ ನೀಡುವುದನ್ನು ಖಾತ್ರಿಗೊಳಿಸಲು ಶ್ರಮಿಸುತ್ತಾರೆ.
ಗೋಲ್ಡನ್ ಚಾರಿಯಟ್ ಮೂರು ವಿಧದ ಪ್ರವಾಸಗಳನ್ನು ನಡೆಸುತ್ತದೆ.
1 ಕರ್ನಾಟಕದ ಹೆಮ್ಮೆ (ಪ್ರೈಡ್ ಆಫ್ ಕರ್ನಾಟಕ)
ಏಳು ದಿನಗಳ ಈ ಪ್ರವಾಸ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ದರ್ಶನ ನೀಡುತ್ತದೆ. ನಿಗದಿತ ರವಿವಾರ ಪ್ರಾರಂಭವಾಗುವ ಈ ಪ್ರವಾಸ ಶನಿವಾರ ಸಂಜೆ ಅಂತ್ಯಗೊಳ್ಳುತ್ತದೆ.
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪೆ, ಬಾದಾಮಿ, ಗೋವಾ ನಗರಗಳಿಗೆ ಭೇಟಿಕೊಟ್ಟು ಬೆಂಗಳೂರಿಗೆ ವಾಪಸಾಗುತ್ತದೆ. ಪ್ರತಿ ನಗರದಲ್ಲಿ ರೈಲಿನಿಂದಿಳಿದು ಆಯಾ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡಬಹುದಾಗಿದೆ.
2 ದಕ್ಷಿಣದ ರತ್ನಗಳು (ಜೆವೆಲ್ಸ್ ಆಫ್ ಸೌತ್)
ಆರು ರಾತ್ರಿ, ಏಳು ದಿನಗಳ ಈ ಪ್ರವಾಸ ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಪ್ರದೇಶಗಳ ಭೇಟಿ ಮಾಡಿಸುತ್ತದೆ. ಬೆಂಗಳೂರಿನಿಂದ ಹೊರಟು ಮೈಸೂರು, ಹಂಪೆ, ತಮಿಳುನಾಡಿನ ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೇರಳದ ಕೊಚ್ಚಿ ಮತ್ತು ಕುಮಾರಕೋಣಂಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಾಸಾಗಲಿದೆ.
3 ಕರ್ನಾಟಕದ ಕಿರುನೋಟ (ಗ್ಲಿಂಪ್ಸಸ್ ಆಫ್ ಕರ್ನಾಟಕ)
ಇದು ಗೋಲ್ಡನ್ ಚಾರಿಯಟ್ ನ ಅತಿ ಸಣ್ಣ ಪ್ರವಾಸವಾಗಿದ್ದು ಮೂರು ರಾತ್ರಿ, ನಾಲ್ಕು ದಿನಗಳಲ್ಲಿ ಮುಗಿಯುತ್ತದೆ. ಬೆಂಗಳೂರಿನಿಂದ ಹೊರಟು ಬಂಡೀಪುರ, ಮೈಸೂರು, ಹಂಪೆಗೆ ಭೇಟಿ ಕೊಟ್ಟು ಬೆಂಗಳೂರಿಗೆ ವಾಪಾಸು ಕರೆತರಲಿದೆ.
ಪೂರ್ವ ನಿರ್ಧಾರಿತ ವೇಳಾ ಪಟ್ಟಿಯನ್ವಯ ಗೋಲ್ಡನ್ ಚಾರಿಯ ಟ್ ಐಷಾರಾಮಿ ರೈಲು ಪ್ರವಾಸಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ ನೋಡಬಹುದು