ಮೈಸೂರಿನಲ್ಲಿರುವ ಪ್ರಸಿದ್ಧ ದೇವಾಲಯಗಳು
ಮೈಸೂರು ನಗರವು ತನ್ನ ಪರಂಪರೆ, ಸಂಸ್ಕೃತಿ, ದೇವಾಲಯಗಳು ಮತ್ತು ವೈಭವಕ್ಕಾಗಿ ಪ್ರಸಿದ್ಧವಾಗಿದ್ದು ಕರ್ನಾಟಕದಲ್ಲಿ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ. ಮೈಸೂರು ನಗರವು ದೇವಾಲಯಗಳು ಮತ್ತು ಇತರ ಪ್ರಸಿದ್ಧ ಸ್ಥಳಗಳನ್ನು ಹೊಂದಿದ್ದು ಇದು ಹಲವು ವರ್ಷಗಳಿಂದ ಟಿಪ್ಪು ಸುಲ್ತಾನನ ತವರು ಸಹ ಆಗಿತ್ತು , ಮೈಸೂರು ನಗರವು ಒಡೆಯರ್ ರಾಜವಂಶದ ರಾಜಧಾನಿಯಾಗಿತ್ತು. ನಿವೃತ್ತರ ಸ್ವರ್ಗ ಎಂದೇ ಪ್ರಸಿದ್ಧವಾದ ಮೈಸೂರು ನಗರವು ಎಲ್ಲರಿಗೂ ಇಷ್ಟವಾಗುವ ನಗರವಾಗಿದೆ.
ಸೋಮನಾಥಪುರ
ಸೋಮನಾಥಪುರ
ಸೋಮನಾಥಪುರದಲ್ಲಿ ಕಾವೇರಿ ನದಿಯ ದಡದಲ್ಲಿರುವ ಚೆನ್ನಕೇಶವ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಸೋಮನಾಥಪುರವು ಮೈಸೂರು ನಗರದಿಂದ 38 ಕಿಮೀ ದೂರದಲ್ಲಿದ್ದು ಆಕರ್ಷಕವಾಗಿದೆ. ಕ್ರಿ.ಶ 1258 ರಲ್ಲಿ, ಹೊಯ್ಸಳ ರಾಜ ನರಸಿಂಹ III ರ ಸೇನಾಪತಿಯಾದ ಸೋಮನಾಥರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪಕ್ಕೆ ಒಂದು ಸೊಗಸಾದ ಉದಾಹರಣೆಯಾಗಿದೆ. ಕೇಶವ ದೇವಾಲಯ ಎಂದೂ ಕರೆಯಲ್ಪಡುವ ಇದು ವಿಷ್ಣುವಿನ ರೂಪಗಳಾದ ಜನಾರ್ದನ ಮತ್ತು ವೇಣುಗೋಪಾಲನ ಪ್ರತಿಮೆಯನ್ನು ಹೊಂದಿದೆ.
ಗೊಮ್ಮಟಗಿರಿ
ಗೊಮ್ಮಟಗಿರಿ
ಬೆಂಗಳೂರಿನಿಂದ ಕೇವಲ 150 ಕಿಮೀ ಮತ್ತು ಮೈಸೂರು ನಗರದಿಂದ ಕೇವಲ 23 ಕಿಮೀ ದೂರದಲ್ಲಿ ಈ 700 ವರ್ಷಗಳಷ್ಟು ಹಳೆಯದಾದ ಗೋಮಟೇಶ್ವರನ ಪ್ರತಿಮೆ ಇದೆ. ಬಾಹುಬಲಿ ಎಂದೂ ಕರೆಯಲ್ಪಡುವ ಈ 6 ಮೀಟರ್ ಎತ್ತರದ ಏಕಶಿಲೆಯ ಗೋಮಟೇಶ್ವರ ಮೂರ್ತಿಯು ಹಾಸನದ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನ ಚಿಕ್ಕ ಆವೃತ್ತಿ ಆಗಿದೆ. ಗೋಮಟೇಶ್ವರನ ಪ್ರತಿಮೆಯು ಸಮುದ್ರ ಮಟ್ಟದಿಂದ 50 ಮೀಟರ್ ಎತ್ತರದಲ್ಲಿರುವ ಗೋಮಟಗಿರಿ ಎಂಬ ಬೆಟ್ಟದಲ್ಲಿದೆ ಮತ್ತು ಇದು ಜಿಲ್ಲೆಯ ಜೈನರ ಪ್ರಮುಖ ಆರಾಧನಾ ಕೇಂದ್ರವಾಗಿದೆ. ಇಲ್ಲಿ ನಡೆಯುವ ಅತ್ಯಂತ ದೊಡ್ಡ ಆಚರಣೆಯೆಂದರೆ ಪ್ರತಿ ವರ್ಷ ಸೆಪ್ಟೆಂಬರ್ನಲ್ಲಿ ನಡೆಯುವ ‘ಅಭಿಷೇಕದ ಆಚರಣೆ. ಈ ಸಮಯದಲ್ಲಿ ದೇಶದಾದ್ಯಂತದ ಯಾತ್ರಾರ್ಥಿಗಳು ದೇವಾಲಯಕ್ಕೆ ಸೇರುತ್ತಾರೆ.
ಚಾಮುಂಡೇಶ್ವರಿ ದೇವಸ್ಥಾನ
ಚಾಮುಂಡಿ ಬೆಟ್ಟದ ಬಳಿ ಇರುವ ನಂದಿ ಪ್ರತಿಮೆ
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನವು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ . ಮೈಸೂರು ರಾಜಮನೆತನದ ಪೋಷಕ ದೇವತೆಯಾದ ಚಾಮುಂಡೇಶ್ವರಿಯ ಈ ದೇವಾಲಯವನ್ನು 17 ನೇ ಶತಮಾನದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಮೇಲೆ ನೆಲೆಸಿರುವ ದೇವಿಯು ಈ ಬೆಟ್ಟದ ಮೇಲೆ ರಾಕ್ಷಸ ರಾಜ ಮಹಿಷಾಸುರನನ್ನು ವಧಿಸಿದಳು ಎಂದು ನಂಬಲಾಗಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಮಹಿಷಾಸುರನ ಬೃಹತ್ ಪ್ರತಿಮೆಯೂ ಇದೆ. ಈ ಮಹಿಷಾಸುರ ಪ್ರತಿಮೆಯು ಒಂದು ಕೈಯಲ್ಲಿ ಹಾವು ಮತ್ತು ಇನ್ನೊಂದು ಕೈಯಲ್ಲಿ ಕತ್ತಿಯನ್ನು ಹಿಡಿದಿದೆ. ನೀವು ಇಲ್ಲಿ ನಂದಿಯ ಪ್ರತಿಮೆಯನ್ನು ಕಾಣಬಹುದು. ಇದು ದೇಶದ ಅತಿದೊಡ್ಡ ನಂದಿಯ ಪ್ರತಿಮೆ ಆಗಿದೆ.
ಇದು 15 ಅಡಿ ಎತ್ತರ ಮತ್ತು 25 ಅಡಿ ಅಗಲವನ್ನು ಹೊಂದಿದ್ದು ತನ್ನ ಕುತ್ತಿಗೆಯ ಸುತ್ತ ವ್ಯಾಪಕವಾದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ. ಒಳಾಂಗಣದಲ್ಲಿ ದುರ್ಗಾ ಮಾತೆ ದೇವಾಲಯವನ್ನು ಹೊಂದಿರುವ ಚಾಮುಂಡೇಶ್ವರಿ ದೇವಾಲಯವು ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಒಡೆಯರ್ಗಳಂತಹ ರಾಜವಂಶದವರಿಂದ ಪ್ರೋತ್ಸಾಹವನ್ನು ಪಡೆಯಿತು. ದೇವಾಲಯದ ಗೋಪುರವನ್ನು 1830 ರಲ್ಲಿ ರಾಜ ಕೃಷ್ಣ ರಾಜ ಒಡೆಯರ್ III ನಿರ್ಮಿಸಿದರು.
ತಲಕಾಡು
ತಲಕಾಡು ದೇವಾಲಯ
ಬೆಂಗಳೂರಿನಿಂದ 132 ಕಿಮೀ ದೂರದಲ್ಲಿ ಮತ್ತು ಮೈಸೂರಿನ ಬಳಿ 50 ಕಿಮೀ ದೂರದಲ್ಲಿರುವ ತಲಕಾಡು ಐತಿಹಾಸಿಕ ದೇವಾಲಯಗಳ ಪಟ್ಟಣವಾಗಿದ್ದು, ದೇವಾಲಯಗಳು ಕಾವೇರಿ ನದಿಯ ದಡದ ಮರಳಿನ ಅಡಿಯಲ್ಲಿ ನೆಲೆಗೊಂಡಿವೆ. ಈ ದೇವಾಲಯಗಳು 11 ನೇ ಶತಮಾನದಲ್ಲಿ ಗಂಗ ರಾಜವಂಶದ ಅವಧಿಯಲ್ಲಿ ನಿರ್ಮಾಣಗೊಂಡವು. ಮತ್ತು ಕಾಲಾನಂತರದಲ್ಲಿ ಹೊಯ್ಸಳ, ವಿಜಯನಗರ ಮತ್ತು ಮೈಸೂರು ರಾಜವಂಶಜರು ಈ ದೇವಾಲಯಗಳನ್ನು ನೋಡಿಕೊಂಡವು. ಪಂಚ ಲಿಂಗ ಎಂದು ಜನಪ್ರಿಯವಾಗಿ ಕರೆಯಲ್ಪಡುವ ತಲಕಾಡು ಶಿವನಿಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳನ್ನು ಹೊಂದಿದೆ. ಈ ದೇವಾಲಯಗಳನ್ನು ಪಾತಾಳೇಶ್ವರ ದೇವಾಲಯ, ಮರುಳೇಶ್ವರ ದೇವಾಲಯ, ವೈದ್ಯನಾಥೇಶ್ವರ ದೇವಾಲಯ, ಅರ್ಕೇಶ್ವರ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯಗಳ ವಾಸ್ತುಶಿಲ್ಪವು ದ್ರಾವಿಡ ಶೈಲಿಯಲ್ಲಿದ್ದು ಇದು ಸಂಕೀರ್ಣವಾಗಿ ಕೆತ್ತಿದ ಕಂಬಗಳು, ಛಾವಣಿಗಳು ಮತ್ತು ದ್ವಾರಪಾಲಕರನ್ನು ಹೊಂದಿದೆ.
ನಂಜನಗೂಡು
ನಂಜನಗೂಡು
ನಂಜನಗೂಡು ಮೈಸೂರು ಜಿಲ್ಲೆಯಲ್ಲಿರುವ ಕಪಿಲಾ ನದಿಯ ದಡದಲ್ಲಿರುವ ದೇವಾಲಯಗಳ ಪಟ್ಟಣವಾಗಿದೆ. 9 ನೇ ಶತಮಾನದಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನವನ್ನು ಸ್ಥಾಪಿಸಲಾಯಿತು. ಕಪಿಲಾ ನದಿಯ ದಡದಲ್ಲಿರುವ ನಂಜನಗೂಡು ದೇವಸ್ಥಾನವು ಬೆಂಗಳೂರಿನಿಂದ 165 ಕಿಮೀ ಮತ್ತು ಮೈಸೂರಿನಿಂದ 24 ಕಿಮೀ ದೂರದಲ್ಲಿದೆ. ಅತ್ಯುತ್ತಮ ಕರಕುಶಲತೆಯ ವಿಶೇಷ ಉದಾಹರಣೆಗಳಲ್ಲಿ ಒಂದಾದ ಈ ಒಂಬತ್ತು ಹಂತದ ಗೋಪುರ ದೇವಾಲಯವು ಪೌರಾಣಿಕ ಕಥೆಗಳ ಕೆತ್ತನೆಗಳನ್ನು ಹೊಂದಿದೆ. ಇಲ್ಲಿನ ಗುಂಡ್ಲು ನದಿ ಮತ್ತು ಕಬಿನಿ ನದಿಯ ಸಂಗಮವು ಭಗವಂತನ ಆಶೀರ್ವಾದವನ್ನು ಪಡೆಯುವ ಮತ್ತೊಂದು ದೈವಿಕ ಸ್ಥಳವಾಗಿದೆ. ಇದನ್ನು ಪರಶುರಾಮ ಕ್ಷೇತ್ರವೆಂದು ಕರೆಯುತ್ತಾರೆ.
ಮುಂದಿನ ಬಾರಿ ನೀವು ಮೈಸೂರಿಗೆ ಪಯಣಿಸುವಾಗ, ಈ ಪುರಾತನ ದೇವಾಲಯಗಳಿಗೆ ಖಂಡಿತವಾಗಿಯೂ ಭೇಟಿ ನೀಡಿ. ಮೈಸೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ನಿಮಗೆ ಕನಿಷ್ಟ ಎರಡು ದಿನಗಳಾದರೂ ಬೇಕು.