ತೊಗರಿ ಬೇಳೆ ಮತ್ತು ಜೋಳದ ಬೆಳೆಗಳ ಬಂಪರ್ ಉತ್ಪಾದನೆಯಿಂದಾಗಿ ಯಾದಗಿರಿಯನ್ನು ಕರ್ನಾಟಕದ ದಾಲ್ ಬೌಲ್ (ಧಾನ್ಯಗಳ ಬುಟ್ಟಿ) ಎಂದು ಕರೆಯಲಾಗುತ್ತದೆ. ಯಾದಗಿರಿ ಕೋಟೆ ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಥಮ ಮುಸ್ಲಿಂ ಸಾಮ್ರಾಜ್ಯವಾದ ಯಾದವ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಸ್ಥಳೀಯರು ಜಿಲ್ಲೆಯನ್ನು “ಯಾದವಗಿರಿ” ಎಂದು ಕರೆಯುತ್ತಾರೆ. ಕಾಲಾನಂತರದಲ್ಲಿ ಯಾದಗಿರಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್ ಶಾಹಿಗಳು ಮತ್ತು ನಿಜಾಮರ ಆಳ್ವಿಕೆಯಲ್ಲಿತ್ತು.
ಯಾದಗಿರಿ ಕರ್ನಾಟಕದ ಎರಡನೇ ಚಿಕ್ಕ ಜಿಲ್ಲೆ. (ಬೆಂಗಳೂರು ನಗರವು ಅತ್ಯಂತ ಚಿಕ್ಕ ಜಿಲ್ಲೆಯಾಗಿದೆ)
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ
ಐತಿಹಾಸಿಕ ತಾಣಗಳು
- ಯಾದಗಿರಿ ಕೋಟೆ: ಯಾದಗಿರಿ ಕೋಟೆ ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಕೋಟೆಯನ್ನು 850 ಮೀಟರ್ ಉದ್ದ, 500 ಮೀಟರ್ ಅಗಲ ಮತ್ತು 100 ಮೀಟರ್ ಎತ್ತರ ಇರುವ ದೊಡ್ಡದಾದ ಏಕಶಿಲಾ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಕಾಲಾಂತರದಲ್ಲಿ ಯಾದಗಿರಿ ಕೋಟೆ ಬಹಮನಿ ಸುಲ್ತಾನರು, ಆದಿಲ್ ಶಾಹಿ, ಯಾದವ ರಾಜರು, ಕಲ್ಯಾಣ ಚಾಲುಕ್ಯರು, ಹೈದರಾಬಾದ್ ನಿಜಾಮರು ಮತ್ತು ಚೋಳ ರಾಜವಂಶದ ಆಳ್ವಿಕೆಯಲ್ಲಿತ್ತು. ಯಾದಗಿರಿ ಕೋಟೆ ದೊಡ್ಡ ವಿಸ್ತಾರವನ್ನು ಹೊಂದಿದ್ದು ತುಪಾಕಿ, ನೀರಿನ ಮೂಲಗಳೊಂದಿಗೆ ಸ್ವಾವಲಂಬಿಯಾಗಿದೆ ಮತ್ತು ದೀರ್ಘ ಕಾಲ ಶತ್ರುಗಳನ್ನು ತಡೆಹಿಡಿಯಲು ಬೇಕಾದಷ್ಟು ಶಸ್ತ್ರಾಸ್ತ್ರ, ಆಹಾರ ಶೇಖರಣಾ ಸೌಲಭ್ಯಗಳನ್ನು ಹೊಂದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಯಾದಗಿರಿ ಕೋಟೆ ಶತ್ರುಗಳಿಗೆ ಅಭೇದ್ಯವಾಗಿತ್ತು.
- ಶೋರಾಪುರ ಕೋಟೆ: ಶೋರಾಪುರದ ಕೊನೆಯ ಆಡಳಿತಗಾರ ರಾಜ ವೆಂಕಟಪ್ಪ ನಾಯಕನು ತನ್ನ ಪ್ರದೇಶದ ಆಂತರಿಕ ವ್ಯವಹಾರಗಳಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ತಪ್ಪಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಸಮಯದಲ್ಲಿ ಕಟ್ಟಿಸಿದನು. ನಾಯಕರು ಶೋರಪುರ ನಗರದಲ್ಲಿ ಎರಡು ಅರಮನೆಗಳು ಮತ್ತು ವಾಗಿನಗರದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದರು.
- ವನದುರ್ಗ ಕೋಟೆ: ಬೃಹತ್ ಪ್ರವೇಶ ದ್ವಾರಗಳು, ಅರ್ಧ ಚಂದ್ರನ ಆಕಾರದ ಗೋಡೆಗಳು, ದೇವನಾಗರಿ ಲಿಪಿಯಲ್ಲಿ ಸಂಸ್ಕೃತ ಶಾಸನಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ವನದುರ್ಗ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಶೋರಾಪುರದಿಂದ 24 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ವನದುರ್ಗ ಕೋಟೆಯನ್ನು ಪಿಡ್ಡ ನಾಯಕನು ತನ್ನ ರಾಣಿ ವೆಂಕಮ್ಮಾ೦ಬಳಿಗಾಗಿ ನಿರ್ಮಿಸಿದ್ದನು.
- ರಾಜ ವೆಂಕಟಪ್ಪ ನಾಯಕ ಕೋಟೆ ಮತ್ತು ಅರಮನೆ: ಯಾದಗಿರಿಯಿಂದ 52 ಕಿ.ಮೀ ದೂರದಲ್ಲಿಇರುವ ಶೋರಾಪುರ ಪಟ್ಟಣದಲ್ಲಿ ಇರುವ ರಾಜ ವೆಂಕಟಪ್ಪ ಕೋಟೆ ಮತ್ತು ಅರಮನೆ ನಾಯಕ ರಾಜವಂಶದ ಕೊನೆಯ ಪ್ರಮುಖ ಆಡಳಿತಗಾರನ ಭದ್ರಕೋಟೆಯಾಗಿತ್ತು.
ಧಾರ್ಮಿಕ ಸ್ಥಳಗಳು
- ಚಂದಾ ಹುಸೇನ್ ದರ್ಗಾ: ಯಾದಗಿರಿ ನಗರದಿಂದ 47 ಕಿ.ಮೀ ದೂರದಲ್ಲಿರುವ ಗೋಗಿಯಲ್ಲಿರುವ ಚಂದಾ ಹುಸೇನ್ ದರ್ಗಾ ಯಾದಗಿರಿ ಜಿಲ್ಲೆಯ ಜನಪ್ರಿಯ ಧಾರ್ಮಿಕ ಮತ್ತು ಸಮುದಾಯ ಕೇಂದ್ರವಾಗಿದೆ.
- ಸೋಫಿ ಸರ್ಮಾಸ್ಟ್ ದರ್ಗಾ: ಪ್ರಸಿದ್ಧ ಸೋಫಿ ಸರ್ಮಾಸ್ಟ್ ದರ್ಗಾ ಶಹಾಪುರ ತಾಲ್ಲೂಕು ಸಾಗರ ಗ್ರಾಮದಲ್ಲಿದೆ. ದರ್ಗಾ ಸೋಫಿ ಸರ್ಮಾಸ್ಟ್‌ನ ಉರುಸ್ ನಲ್ಲಿ ಸಾವಿರಾರು ಜನರನ್ನು ಪ್ರತಿ ವರ್ಷ ಭಾಗವಹಿಸುತ್ತಾರೆ.
- ಭೀಮಾರಾಯಣ ಗುಡಿ (ಬಿ.ಗುಡಿ): ಭಲಭೀಮ ಸೇನೆಯ ಪ್ರಸಿದ್ಧ ದೇವಾಲಯ. ಇಲ್ಲಿದೆ. ಜನವರಿಯಲ್ಲಿ ನಡೆಯುವ ಸಂಕ್ರಮಣ ಇಲ್ಲಿನ ಪ್ರಮುಖ ಆಚರಣೆಯಾಗಿದೆ.
- ಅಬ್ಬೆ ತುಮಕೂರ್: ಯಾದಗಿರಿ ತಾಲ್ಲೂಕಿನ ಪ್ರಸಿದ್ಧ ದೇವಾಲಯ. ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಡೆಯುವ ಶಿವರಾತ್ರಿ ಇಲ್ಲಿನ ಪ್ರಮುಖ ಆಚರಣೆಯಾಗಿದೆ.
- ತಿಥಿನಿ ಮೌನೇಶ್ವರ ದೇವಸ್ಥಾನ: ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಪ್ರಾಚೀನ ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರನ್ನು ಆಕರ್ಷಿಸುತ್ತದೆ. ಶೋರಾಪುರದಿಂದ 20 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಆರನೇ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಪ್ರಮುಖ ಅಗ್ರಹಾರವಾಗಿತ್ತು.
- ಶಿರವಾಳ ಗ್ರಾಮ: ಶತವಾಹನ ಯುಗದ ಸುಮಾರು 20 ದೇವಾಲಯಗಳಿಗೆ ನೆಲೆಯಾಗಿದೆ. ನಾಗಯ್ಯ ಮತ್ತು ನಾಣಯ್ಯ ದೇವಾಲಯ ಸಂಕೀರ್ಣ ಅತ್ಯಂತ ಹಳೆಯದು. ದೇವಾಲಯದ ಸಂಕೀರ್ಣದಲ್ಲಿ ದೊಡ್ಡ ಸ್ತಂಭಗಳು, ಕಿಟಕಿಗಳಲ್ಲಿ ಶಿವತಾಂಡವ ವಿನ್ಯಾಸಗಳು, ಎಂಟು ತೋಳುಗಳನ್ನು ಹೊಂದಿರುವ ನಾಲ್ಕೂವರೆ ಅಡಿ ಎತ್ತರದ ಹರಿಹರ ಪ್ರತಿಮೆ, ಬಾಗಿಲುಗಳ ಮೇಲೆ ಲಕ್ಷ್ಮಿ ದೇವಿಯ ವಿನ್ಯಾಸಗಳು ಇತರ ಆಕರ್ಷಣೆಗಳಾಗಿವೆ.
- ಛಾಯಾಭಗವತಿ: ಸುರುಪುರದ ನೈರುತ್ಯಕ್ಕೆ 65 ಕಿ.ಮೀ ದೂರದಲ್ಲಿರುವ ಛಾಯಾಭಗವತಿ 100ಕ್ಕೂ ಹೆಚ್ಚು ಪುಷ್ಕರಿಣಿಗಳನ್ನು ಹೊಂದಿರುವ ಯಾತ್ರಾ ಕೇಂದ್ರವಾಗಿದೆ ಮತ್ತು ಛಾಯಾಭಗವತಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಛಾಯಾಭಗವತಿ ಕೃಷ್ಣ ನದಿಯ ದಡದಲ್ಲಿದೆ ಮತ್ತು ಒಂದು ಸುಂದರವಾದ ಸ್ಥಳವಾಗಿದೆ.
ಪ್ರಕೃತಿ ಮತ್ತು ವನ್ಯಜೀವಿಗಳು
- ಬೋನಾಳ ಪಕ್ಷಿಧಾಮ: ಬೋನಾಳ ಕರ್ನಾಟಕದ ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ (ಮೈಸೂರು ಬಳಿಯ ರಂಗನತಿಟ್ಟು ಅತ್ಯಂತ ದೊಡ್ಡದಾಗಿದೆ) ಶೋರಪುರ ನಗರದ ಬಳಿ ಬೋನಾಳ ಪಕ್ಷಿಧಾಮವಿದೆ. ಬೋನಾಳ ಸರೋವರವನ್ನು ಬ್ರಿಟಿಷ್ ಯುಗದಲ್ಲಿ ಹೈದರಾಬಾದ್ ನಿಜಾಮರ ಧನಸಹಾಯದೊಂದಿಗೆ ಮನರಂಜನಾ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಯಿತು. ಬ್ರಿಟಿಷ್ ಅಧಿಕಾರಿಗಳು ಬರೆದ ಕೆಲವು ಆತ್ಮಚರಿತ್ರೆಗಳಲ್ಲಿ ಬೋನಾಳ ಸರೋವರವನ್ನು ಉಲ್ಲೇಖಿಸಲಾಗಿದೆ.
ಇತರ ಆಕರ್ಷಣೆಗಳು
- ಮಲಗಿರುವ ಬುದ್ಧನ ಬೆಟ್ಟ: ಬೋನಾಳ ಪಕ್ಷಿಧಾಮದಿಂದ 45 ಕಿ.ಮೀ ಮತ್ತು ಯಾದಗಿರಿ ನಗರದಿಂದ 40 ಕಿ.ಮೀ ದೂರದಲ್ಲಿ ಮಲಗಿರುವ ಬುದ್ಧನ ಬೆಟ್ಟ ಇದೆ. ಮಲಗಿರುವ ಬುದ್ಧನ ಬೆಟ್ಟವು 4 ಸಣ್ಣ ಬೆಟ್ಟಗಳ ಗುಂಪಾಗಿದ್ದು, ದೂರದಿಂದ ನೋಡಿದಾಗ ಮಲಗುವ ಬುದ್ಧನ ಆಕಾರವನ್ನು ಹೋಲುತ್ತದೆ. ಯಾದಗಿರಿಗೆ ಬರುವ ಬಹುತೇಕ ಪ್ರವಾಸಿಗರು ಮಲಗಿರುವ ಬುದ್ಧನ ಬೆಟ್ಟಕ್ಕೆ ತಪ್ಪದೆ ಭೇಟಿ ನೀಡುತ್ತಾರೆ.
- ಲುಂಬಿನಿ ಪಾರ್ಕ್: ಯಾದಗಿರಿ ಪಟ್ಟಣದಲ್ಲಿನ ಪ್ರಮುಖ ಸರೋವರ ಮತ್ತು ಮನರಂಜನಾ ಸೌಲಭ್ಯ.
- ಸಣ್ಣ ಕೆರೆ: ಸಣ್ಣ ಕೆರೆ ಯಾದಗಿರಿ ಪಟ್ಟಣದ ಒಳಗೆ ಇರುವ ಒಂದು ಕೆರೆ ಮತ್ತು ವಿಹಾರ ತಾಣವಾಗಿದೆ.
- ನಾರಾಯಣಪುರ ಅಣೆಕಟ್ಟು: 106000 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ
- ಕೊಡೆಕಲ್ ಬಸವಣ್ಣ: ಕೊಡೆಕಲ್ ಬಸವಣ್ಣ ಸತ್ಯದ ಸಂತ ಎಂದು ಪ್ರಸಿದ್ಧ. ಅವರು ಪೇಟೆ ಗುಡಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ಕಾಲಜ್ಞಾನವನ್ನು (ಭವಿಷ್ಯದ ಮಾಹಿತಿ) ಬರೆದಿರುತ್ತಾರೆ.
Tour Location
ಯಾದಗಿರಿ ಬೆಂಗಳೂರಿನ ಉತ್ತರಕ್ಕೆ 500 ಕಿ.ಮೀ ದೂರದಲ್ಲಿದೆ.
ಕಲಬುರಗಿ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (79 ಕಿ.ಮೀ)
ಯಾದಗಿರಿ ರೈಲ್ವೆ ನಿಲ್ದಾಣವನ್ನು ಹೊಂದಿದ್ದು ಉತ್ತಮ ರೈಲು ಸಂಪರ್ಕ ಹೊಂದಿದೆ.
ಯಾದಗಿರಿ ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ (ಕ.ರಾ.ರ.ಸಾ.ಸಂ) ಮತ್ತು ಖಾಸಗಿ ಬಸ್ ಸಂಪರ್ಕವನ್ನು ಹೊಂದಿದೆ.
ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಆಕರ್ಷಣೆಯನ್ನು ತಲುಪಲು ಪ್ರಮುಖ ಪಟ್ಟಣಗಳಾದ ಯಾದಗಿರಿ, ಶೋರಪುರ ಇತ್ಯಾದಿಗಳಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.