GO UP

ಕೊಡಗು

separator
Scroll Down

ಕೊಡಗನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ. ಇಂಗ್ಲೆಂಡಿನ ಸ್ಕಾಟ್ಲೆಂಡಿನಂತೆ ಕೊಡಗು ಕೂಡ ವರ್ಷವಿಡೀ ಆಹ್ಲಾದಕರ ಹವಾಮಾನ ಮತ್ತು ಸದಾ ಹಸಿರಾಗಿರುವ ನೈಸರ್ಗಿಕ ಸೌಂದರ್ಯದಿಂದ ತುಂಬಿರುತ್ತದೆ, ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆಯಾಗಿದೆ. ಸ್ಥಳೀಯರನ್ನು ಕೊಡವರು ಎಂದು ಕರೆಯಲಾಗುತ್ತದೆ, ಕೊಡವ ಜನರು ನೈಸರ್ಗಿಕವಾಗಿ ವೀರಯೋಧರಾಗಿದ್ದು ಅನೇಕರು ಭಾರತದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ. ಕೊಡವ ಜನರು ಕರ್ನಾಟಕದ ಉಳಿದ ಭಾಗಗಳಿಗಿಂತ ವಿಭಿನ್ನವಾದ ವೇಷ ಭೂಷಣಗಳನ್ನು ಧರಿಸುತ್ತಾರೆ. ಸ್ಥಳೀಯರು ಕೊಡವ ಭಾಷೆ ಎಂಬ ಉಪಭಾಷೆಯನ್ನು ಮಾತನಾಡುತ್ತಾರೆ. ದಕ್ಷಿಣ ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿ ಕೊಡಗು ಜಿಲ್ಲೆಯಲ್ಲಿ ಉಗಮಿಸುತ್ತದೆ. 

ಕೊಡಗು ಜಿಲ್ಲಾ ರಾಜಧಾನಿ ಮಡಿಕೇರಿ ಬೆಂಗಳೂರಿನಿಂದ ನೈರುತ್ಯಕ್ಕೆ 300 ಕಿ.ಮೀ ದೂರದಲ್ಲಿದೆ.  ಮೈಸೂರು, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳು ಮತ್ತು ಕೇರಳ ರಾಜ್ಯಗಳೊಂದಿಗೆ ಕೊಡಗನ್ನು ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ.  

ಕೂರ್ಗ್ ಕರ್ನಾಟಕದಲ್ಲಿ ಹೆಚ್ಚು ಭೇಟಿ ನೀಡಲಾಗುವ ಪ್ರವಾಸಿ ಜಿಲ್ಲೆಗಳಲ್ಲಿ ಒಂದಾಗಿದೆ.  ಇಲ್ಲಿನ ಹಲವು ಮೋಡಿ ಮಾಡುವ ಜಲಪಾತಗಳು, ಮೈ ನವಿರೇಳಿಸುವ ಸಾಹಸ ಚಟುವಟಿಕೆಯ ಆಯ್ಕೆಗಳು, ಐತಿಹಾಸಿಕ ದೇವಾಲಯಗಳು, ಕಣ್ಮನ ತಣಿಸುವ ಗಿರಿ ಶಿಖರಗಳು, ಮದ ನೀಡುವ ಪ್ರಾಕೃತಿಕ ತಾಣಗಳು ಪ್ರವಾಸಿಗರನ್ನು ಮತ್ತೆ ಮತ್ತೆ ಭೇಟಿ ನೀಡುವಂತೆ ಮಾಡುತ್ತವೆ.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ  ಕ್ಲಿಕ್ ಮಾಡಿ

    ಐತಿಹಾಸಿಕ ತಾಣಗಳು
    • ಮಡಿಕೇರಿ ಕೋಟೆ: ಟಿಪ್ಪು ಸುಲ್ತಾನ್ ನಿರ್ಮಿಸಿದ ಮಡಿಕೇರಿ ಪಟ್ಟಣದ ಹೃದಯಭಾಗದಲ್ಲಿರುವ 16 ನೇ ಶತಮಾನದ ಕೋಟೆಯ ಅವಶೇಷಗಳು ಈಗ ಸರ್ಕಾರಿ ಕಚೇರಿಗಳನ್ನು ಹೊಂದಿವೆ.
    • ನಾಲ್ಕುನಾಡು ಅರಮನೆ: ನಾಲ್ಕುನಾಡು ಅರಮನೆಯು 18ನೇ ಶತಮಾನದ ಅರಮನೆಯಾಗಿದ್ದು, ಇದನ್ನು ದೊಡ್ಡ ವೀರ ರಾಜೇಂದ್ರ ನಿರ್ಮಿಸಿದ್ದಾರೆ. ಕೊಡಗಿನ ಆಡಳಿತಗಾರರ ವಿರುದ್ಧ ಸಮರ ಸಾರಿದ್ದ ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಪಡೆಗಳ ಕಣ್ತಪ್ಪಿಸಿ ರಾಜಮನೆತನದ ಮುಖ್ಯವ್ಯಕ್ತಿಗಳನ್ನು ಸುರಕ್ಷಿತವಾಗಿಡಲು ನಾಲ್ಕುನಾಡು ಅರಮನೆಯನ್ನು ಬಳಸಲಾಯಿತು.
    • ರಾಜಾ ಗೋರಿಗಳು: ಇಂಡೋ-ಸಾರಾಸೆನಿಕ್ ಶೈಲಿಯ ಗುಮ್ಮಟಾಕಾರದ ಗೋರಿಗಳು, ಕೊಡಗು ರಾಜಮನೆತನದ ಕುಟುಂಬದ ಸದಸ್ಯರ ಅಂತಿಮ ವಿಶ್ರಾಂತಿ ಸ್ಥಳವಾಗಿದೆ.
    ಸಾಹಸ ಮತ್ತು ಚಟುವಟಿಕೆಗಳು
    • ರಾಫ್ಟಿಂಗ್: ದುಬಾರೆ ಮತ್ತು ಕಾವೇರಿ ನಿಸರ್ಗ ಧಾಮದಲ್ಲಿ ಪ್ರಯತ್ನಿಸಲು ವಾಟರ್ ರಾಫ್ಟಿಂಗ್ ಒಂದು ಜನಪ್ರಿಯ ಸಾಹಸ ಕ್ರೀಡೆಯಾಗಿದೆ.
    • ತಡಿಯಾಂಡಮೋಳ್ ಬೆಟ್ಟ: 1748 ಮೀಟರ್ ಎತ್ತರದಲ್ಲಿರುವ ತಡಿಯಾಂಡಮೋಳ್ ಕೊಡಗು ಜಿಲ್ಲೆಯ ಅತಿ ಎತ್ತರದ ಶಿಖರ ಮತ್ತು ಕರ್ನಾಟಕದ ಮೂರನೇ ಅತಿ ಎತ್ತರದ ಶಿಖರವಾಗಿದೆ (ಮುಲ್ಲಯನಗಿರಿ ಮತ್ತು ಕುದುರೆಮುಖ ನಂತರ). ತಡಿಯಾಂಡಮೋಳ್ ಜನಪ್ರಿಯ ಚಾರಣ ತಾಣವಾಗಿದೆ.
    • ಕಾವೇರಿ ನಿಸರ್ಗ ಧಾಮ: ಉದ್ಯಾನಗಳು, ತೂಗು ಸೇತುವೆ, ದೋಣಿ ವಿಹಾರ, ಆಹಾರ ಮತ್ತು ವಿವಿಧ ಮನರಂಜನಾ ಚಟುವಟಿಕೆಗಳಿಗೆ ಭೇಟಿ ನೀಡಬಹುದಾಗಿದೆ.
    • ಮೈಕ್ರೊಲೈಟ್ ಫ್ಲೈಯಿಂಗ್: ಖಾಸಗಿ ವ್ಯಕ್ತಿಗಳು/ಸಂಸ್ಥೆಗಳು (ಉದಾ ಕೂರ್ಗ್ ಸ್ಕೈ ಅಡ್ವೆಂಚರ್ಸ್) ಮೈಕ್ರೊಲೈಟ್ ವಿಮಾನಗಳಲ್ಲಿ ಸಣ್ಣ ಮೋಜಿನ ಸವಾರಿಗಳನ್ನು ಮಾಡಿಸುತ್ತಾರೆ.
    • ದುಬಾರೆ ಆನೆ ಸ್ನಾನ: ದುಬಾರೆ ಆನೆ ಶಿಬಿರವು ಸಂದರ್ಶಕರಿಗೆ ಆನೆಗಳಿಗೆ ಸ್ನಾನ ಮಾಡಿಸಲು ಮತ್ತು ಅವುಗಳಿಗೆ ಆಹಾರ ತಿನ್ನಿಸಲು ಅನುವು ಮಾಡಿಕೊಡುತ್ತವೆ. ಆನೆಗಳ ದೈನಂದಿನ ದಿನಚರಿಯನ್ನು ಹತ್ತಿರದಿಂದ ನೋಡುವ ಉತ್ತಮ ಅವಕಾಶವಾಗಿದೆ.
    • ನಾಗರಹೊಳೆ ಅರಣ್ಯ ಸಫಾರಿ: ಅರಣ್ಯ ಇಲಾಖೆಯಿಂದ ಪ್ರತಿದಿನ ಎರಡು ಬಾರಿ ಅರಣ್ಯ ಸಫಾರಿ ನಡೆಸಲಾಗುತ್ತದೆ, ಬೆಳಿಗ್ಗೆ 6 ರಿಂದ 8 ರವರೆಗೆ ಮತ್ತು ಸಂಜೆ 3 ರಿಂದ 5 ರವರೆಗೆ. ಸ್ಥಳಾವಕಾಶ ಕಡಿಮೆ ಇರುವುದರಿಂದ ಮುಂಗಡವಾಗಿ ಕಾದಿರಿಸುವುದು ಒಳ್ಳೆಯದು.
    • ಜೀಪ್ ಸಫಾರಿಗಳು: ಖಾಸಗಿ ಸಂಸ್ಥೆಯವರು ಮಂಡಲಪಟ್ಟಿಯಂತಹ ಗುಡ್ಡಗಾಡು ಪ್ರದೇಶಗಳಲ್ಲಿ 4x4 ಜೀಪ್ ಸವಾರಿಗಳನ್ನು ಆಯೋಜಿಸುತ್ತಾರೆ.
    • ನಿಶಾನಿ ಬೆಟ್ಟ ಚಾರಣ: ತಲಕಾವೇರಿ ಬಳಿಯ ಸುಂದರವಾದ ಶಿಖರ ನಿಶಾನಿ ಬೆಟ್ಟ. ಈ ಶಿಖರಕ್ಕೆ ಚಾರಣ ಮಾಡಿ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ 360 ಡಿಗ್ರಿ ನೋಟವನ್ನು ನೋಡಬಹುದಾಗಿದೆ.
    • ತಲಕಾವೇರಿಯ ಹಿಂದಿರುವ ಬೆಟ್ಟವನ್ನು ಹತ್ತುವುದು: ನಿತ್ಯಹರಿದ್ವರ್ಣ ಕಾಡುಗಳ ವಿಹಂಗಮ ನೋಟಕ್ಕಾಗಿ ತಲಕಾವೇರಿ ದೇವಸ್ಥಾನದಿಂದ ಬ್ರಹ್ಮಗಿರಿ ಬೆಟ್ಟದ ಮೇಲೆ 400+ ಮೆಟ್ಟಿಲುಗಳನ್ನು ಏರಿ ತಲುಪಬಹುದಾಗಿದೆ. ಮಾನ್ಸೂನ್ ತಿಂಗಳುಗಳಲ್ಲಿ ಮುಂಜಾನೆ ಸಮಯದಲ್ಲಿ, ಬಿಳಿ ಮೋಡವು ಬೆಟ್ಟವನ್ನು ಸುತ್ತುವರಿದಿರುತ್ತದೆ ಮತ್ತು ಚಾರಣ ಆಹ್ಲಾದಕರ ವಾತಾವರಣ, ತಂಗಾಳಿ ಮತ್ತು ನೋಟವನ್ನು ನೀಡುತ್ತದೆ.
    • ಕುಂದ ಬೆಟ್ಟ ಚಾರಣ / ಸೂರ್ಯಾಸ್ತದ ನೋಟ: ಮಡಿಕೇರಿಯಿಂದ 50 ಕಿ.ಮೀ ದೂರದಲ್ಲಿರುವ (ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಹೋಬಳಿಯ ಹಳ್ಳಿಗಟ್ಟು ಗ್ರಾಮದ ಹತ್ತಿರ) ಜನಪ್ರಿಯ ಚಾರಣ ಸ್ಥಳವಾಗಿದೆ. ಕುಂದ ಬೆಟ್ಟದಿಂದ ಅದ್ಭುತ ಸೂರ್ಯಾಸ್ತ ನೋಡಬಹುದಾಗಿದೆ.
    • ಕೋಟೆ ಬೆಟ್ಟ: ಹಟ್ಟಿಹೊಳೆಯಲ್ಲಿ ಇರುವ ಕೋಟೆ ಬೆಟ್ಟ ಸಮುದ್ರ ಮಟ್ಟಕ್ಕಿಂತ 1645 ಮೀಟರ್ ಎತ್ತರವಿದೆ. ತೋಟಗಳು ಮತ್ತು ತೊರೆಗಳ ಮೂಲಕ ಹಾದುಹೋಗುವ ಚಾರಣ ಮಾರ್ಗ ಅನಾನುಭವಿಗಳಿಗೂ ಸೂಕ್ತವಾಗಿದೆ. ಮಡಿಕೇರಿಯಿಂದ ಕೇವಲ 15 ಕಿ.ಮೀ. ದೂರವಿದೆ
    • ಬ್ರಹ್ಮಗಿರಿ ಚಾರಣ: ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ಮೇಲೆ ಸಮುದ್ರ ಮಟ್ಟಕ್ಕಿಂತ 1608 ಮೀಟರ್ ಎತ್ತರದ ‌ವರೆಗೆ ಚಾರಣ ಮಾಡಬಹುದಾಗಿದೆ. ಚಾರಣ ಹಾದಿಯು ದಟ್ಟ ಕಾಡುಗಳು, ಹುಲ್ಲುಗಾವಲುಗಳು ಮತ್ತು ಕಣಿವೆಗಳ ಮೂಲಕ ಹಾದುಹೋಗುತ್ತದೆ.
    • ಕಾಫಿ ತೋಟ ಪ್ರವಾಸಗಳು: ಖಾಸಗಿ ಸಂಸ್ಥೆಗಳು ಆಯೋಜಿಸಿರುವ ಕಾಫಿ ತೋಟದ ಮಾರ್ಗದರ್ಶಿ ಪ್ರವಾಸ ಒಂದು ಉತ್ತಮ ಅನುಭವವಾಗಿರಲಿದೆ. Www.amaplantationtrails.com ಗೆ ಭೇಟಿ ನೀಡಿ
    • ಕಯಾಕಿಂಗ್: ದುಬಾರೆ ಮತ್ತು ಕಾಕಬ್ಬೆ ವಿಲೇಜ್ (ಜಂಗಲ್ ಮೌಂಟ್ ಅಡ್ವೆಂಚರ್ಸ್) ಸೇರಿದಂತೆ ಕೊಡಗಿನ ಅನೇಕ ಸ್ಥಳಗಳಲ್ಲಿ ಕಯಾಕಿಂಗ್ ವಿಹಾರವನ್ನು ಆನಂದಿಸಬಹುದಾಗಿದೆ.
    • ಮನಂಗೇರಿ: ಮಡಿಕೇರಿ-ಮಂಗಳೂರು ರಸ್ತೆಯಿಂದ ಸ್ವಲ್ಪ ಒಳಗಿರುವ ಚಾರಣ ದಾರಿ. 7 ಕಿ.ಮೀ ಚಾರಣ (ಹೋಗಲು) ಮಾಡಬಹುದಾಗಿದೆ ಅಥವಾ ಮೊದಲ 5 ಕಿ.ಮೀ 4x4 ಜೀಪ್ ಸವಾರಿ ಮಾಡಿ ನಂತರ 2 ಕಿ.ಮೀ ಚಾರಣ ಮಾಡಬಹುದಾಗಿದೆ.
    ಜಲಪಾತಗಳು ಮತ್ತು ಅಣೆಕಟ್ಟುಗಳು
    • ಅಬ್ಬಿ ಜಲಪಾತ: ಅಬ್ಬಿ ಜಲಪಾತ ಕೊಡಗು ಜಿಲ್ಲೆಯ ಜನಪ್ರಿಯ ಜಲಪಾತವಾಗಿದೆ. ಕಾವೇರಿ ನದಿ ಅಗಲವಾದ ಬಂಡೆಗಳ ಮೇಲೆ ಸುಮಾರು 70 ಅಡಿಗಳಷ್ಟು ಆಳಕ್ಕೆ ಧುಮುಕಿ ನೋಡುಗರನ್ನು ಬೆರಗುಗೊಳಿಸುತ್ತಾಳೆ. ಕರ್ನಾಟಕದ ಇತರ ಜಲಪಾತಗಳಿಗೆ ಹೋಲಿಸಿದರೆ ಎತ್ತರ ಹೆಚ್ಚು ಇಲ್ಲದಿದ್ದರೂ ಅಬ್ಬಿ ಜಲಪಾತ ಸಾಕಷ್ಟು ಅಗಲವಾಗಿದ್ದು ಅದ್ಭುತ ನೋಟವನ್ನು ನೀಡುತ್ತದೆ. ಮಡಿಕೇರಿ ನಗರಕ್ಕೆ ಅಬ್ಬಿ ಜಲಪಾತ ಸಾಕಷ್ಟು ಹತ್ತಿರವಿದ್ದು ಸುಲಭವಾಗಿ ತಲುಪಬಹುದು.
    • ಚೆಲವಾರ ಜಲಪಾತ: ಚೆಲವಾರ ಕೊಡಗು ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದೆ. ಚೆಲವಾರ ಜಲಪಾತವು ಕಾವೇರಿ ನದಿಯ ಉಪನದಿಯೊಂದು ರಚಿಸಿದ ಪ್ರಶಾಂತ ಜಲಪಾತವಾಗಿದ್ದು, ಬಂಡೆಯ ಮೇಲಿಂದ 150 ಅಡಿಗಳಷ್ಟು ಕೆಳಕ್ಕೆ ಧುಮುಕುವಾಗ ಹಾಲಿನಂತೆ ಬಿಳುಪಾಗಿ ಕಾಣುತ್ತದೆ. ಚೆಲವಾರ ಜಲಪಾತವು ರಾಜ್ಯ ಹೆದ್ದಾರಿ 90 ರಿಂದ ಸ್ವಲ್ಪ ದೂರದಲ್ಲಿರುವ ಚೆಯ್ಯಂಡನೆ ಗ್ರಾಮದಲ್ಲಿದೆ.
    • ಇರುಪ್ಪು ಜಲಪಾತ: ಕೊಡಗುನಲ್ಲಿ 170 ಅಡಿ ಎತ್ತರದ ಅತ್ಯಂತ ಜನಪ್ರಿಯ, ಎರಡು ಹಂತದ ಜಲಪಾತವಾಗಿದೆ. ಮಳೆಗಾಲದ ನಂತರದ ದಿನಗಳಲ್ಲಿ ಮಾತ್ರ ಪ್ರವೇಶಿಸಬಹುದಾಗಿದೆ. ಕೇರಳ ಶೈಲಿಯ ಶಿವ ದೇವಾಲಯವೂ ಹತ್ತಿರದಲ್ಲಿದೆ.
    • ಮಲ್ಲಲ್ಲಿ ಜಲಪಾತ: 61 ಮೀಟರ್ ಎತ್ತರವಿರುವ ಮಲಳ್ಳಿ ಜಲಪಾತವು ಕೊಡಗಿನಲ್ಲಿ ಹೆಚ್ಚು ಜನಜನಿತವಲ್ಲದ ಜಲಪಾತವಾಗಿದೆ, ಕುಶಲನಗರದಿಂದ 38 ಕಿ.ಮೀ. ದೂರದಲ್ಲಿದೆ.
    • ಹಾರಂಗಿ ಅಣೆಕಟ್ಟು: ಸೋಮವಾರಪೇಟೆ ತಾಲ್ಲೂಕಿನಲ್ಲಿ ಇರುವ ಜನಪ್ರಿಯ ವಿಹಾರ ತಾಣವಾಗಿದೆ. ಕ್ಯಾಂಪಿಂಗ್ ಹಾರಂಗಿಯಲ್ಲಿ ಜನಪ್ರಿಯ ಚಟುವಟಿಕೆಯಾಗಿದೆ.
    • ಚಿಕ್ಲಿಹೊಳೆ ಅಣೆಕಟ್ಟು: ಅರೆ ವೃತ್ತಾಕಾರದ ನೀರಿನ ಹೊರಗೋಗುವ ಮಾರ್ಗದಿಂದಾಗಿ ಸಣ್ಣ ಆದರೆ ಸುಂದರವಾಗಿ ವಿನ್ಯಾಸಗೊಳಿಸಲಾದ ಅಣೆಕಟ್ಟು ಇದಾಗಿದೆ. ದುಬಾರೆ ಆನೆ ಶಿಬಿರಕ್ಕೆ ಹೋಗುವ ದಾರಿಯಲ್ಲಿ ಸಣ್ಣ ತಿರುವು ಪಡೆದು ತಲುಪಬಹುದಾಗಿದೆ.
    ಪ್ರಕೃತಿ ಮತ್ತು ವನ್ಯಜೀವಿಗಳು
    • ನಾಗರಹೊಳೆ ರಾಷ್ಟ್ರೀಯ ಉದ್ಯಾನ: ನಾಗರಹೊಳೆ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರು ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ, ಏಕೆಂದರೆ ಇಲ್ಲಿನ ಅರಣ್ಯ ಸಫಾರಿ ವನ್ಯ ಸಂಪತ್ತಿನ ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ.
    • ದುಬಾರೆ ಆನೆ ಶಿಬಿರ: ಈ ಪ್ರದೇಶದ ಸುಮಾರು 150 ಆನೆಗಳಿಗೆ ನೆಲೆಯಾಗಿದೆ, ದುಬಾರೆಯ ಮಾಹುತರು ತಮ್ಮ ಆನೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ಆಹಾರ, ಸ್ನಾನ ಇತ್ಯಾದಿಗಳ ಮೂಲಕ ಆನೆಗಳೊಂದಿಗೆ ಸಂದರ್ಶಕರ ಸಂವಾದವನ್ನು ಸಹ ಮಾಡಿಸುತ್ತಾರೆ.
    • ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ: ಬ್ರಹ್ಮಗಿರಿ ಬೆಟ್ಟಗಳ ಸುತ್ತಲಿನ ವನ್ಯಜೀವಿ ಅಭಯಾರಣ್ಯ, ಸುಮಾರು 181 ಚದರ ಕಿ.ಮೀ. ವ್ಯಾಪಿಸಿದೆ. ಮಡಿಕೇರಿಯಿಂದ ದಕ್ಷಿಣಕ್ಕೆ ಸುಮಾರು 87 ಕಿ.ಮೀ.ದೂರವಿದೆ.
    • ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ: ಸುಮಾರು 103 ಚದರ ಕಿ.ಮೀ ವಿಸ್ತಾರವಾದ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಮಡಿಕೇರಿ ಪಟ್ಟಣದಿಂದ ಉತ್ತರಕ್ಕೆ 60 ಕಿ.ಮೀ ದೂರದಲ್ಲಿದೆ.
    • ತಲಾಕಾವೇರಿ ವನ್ಯಜೀವಿ ಅಭಯಾರಣ್ಯ: ತಲಾಕಾವೇರಿಯ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶ, 106 ಚದರ ಕಿ.ಮೀ. ವಿಸ್ತೀರ್ಣವಿದೆ. ಮಡಿಕೇರಿ ಪಟ್ಟಣದಿಂದ ಪಶ್ಚಿಮಕ್ಕೆ 50 ಕಿ.ಮೀ. ದೂರದಲ್ಲಿದೆ.
    ಧಾರ್ಮಿಕ ಸ್ಥಳಗಳು
    • ಓಂಕಾರೇಶ್ವರ ದೇವಸ್ಥಾನ: ಓಂಕಾರೇಶ್ವರ ದೇವಸ್ಥಾನವನ್ನು ರಾಜ ಲಿಂಗರಾಜೇಂದ್ರ II ಅವರು 19 ನೇ ಶತಮಾನದ ಆರಂಭದಲ್ಲಿ ನಿರ್ಮಿಸಿದರು. ರಾಜನು ತನ್ನ ಸಾಮ್ರಾಜ್ಯ ವಿಸ್ತರಣೆಯ ಸಮಯದಲ್ಲಿ ಅಮಾಯಕ ವ್ಯಕ್ತಿಯನ್ನು ಆಕಸ್ಮಿಕವಾಗಿ ಕೊಲ್ಲಿಸಿದ ಪಾಪಕ್ಕೆ ಪರಿಹಾರವಾಗಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ. ತನ್ನಿಂದಾದ ಪ್ರಮಾದ ರಾಜನ ಮನಃಶಾಂತಿ ಮತ್ತು ನಿದ್ರೆಯನ್ನು ಕಸಿದುಕೊಂಡು ಪಾಪ ಪ್ರಜ್ಞೆ ಮೂಡಿಸಿದ್ದರಿಂದ ರಾಜ ಪುರೋಹಿತರ ಸಲಹೆಯ ಮೇರೆಗೆ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು.
    • ತಲಕಾವೇರಿ: ತಲಕಾವೇರಿ ಕಾವೇರಿ ನದಿಯ ಜನ್ಮಸ್ಥಳ. ತಲಕಾವೇರಿ ಸಮುದ್ರ ಮಟ್ಟಕ್ಕಿಂತ 1276 ಮೀಟರ್ ಎತ್ತರದಲ್ಲಿದೆ ಮತ್ತು ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿದೆ. ಕಾವೇರಿ ನದಿಯ ಉಗಮವೆಂದು ನಂಬಲಾದ ತೊಟ್ಟಿಯ ಬಳಿ ಕಾವೇರಿ ಅಮ್ಮನ ದೇವಸ್ಥಾನ ಸ್ಥಾಪಿಸಲಾಗಿದೆ. ಕೊಡಗಿನ ಹೆಚ್ಚಿನ ಸಂದರ್ಶಕರು ತಲಕಾವೇರಿಗೆ ಭೇಟಿ ನೀಡುವ ಮೂಲಕ ಕಾವೇರಿ ನದಿಗೆ ಗೌರವ ಸಲ್ಲಿಸುತ್ತಾರೆ.
    • ಭಾಗಮಂಡಲ: ಭಾಗಮಂಡಲವು ಕೊಡಗು ಜಿಲ್ಲೆಯ ದೇವಾಲಯ ಗ್ರಾಮವಾಗಿದ್ದು, ತಲಕಾವೇರಿಯಿಂದ 7 ಕಿ.ಮೀ. ದೂರದಲ್ಲಿದೆ. ಭಾಗಮಂಡಲದಲ್ಲಿ ಕಾವೇರಿ ನದಿಯ ಜೊತೆ ಅದರ ಎರಡು ಉಪನದಿಗಳಾದ ಸುಜೋತಿ ನದಿ ಮತ್ತು ಕಣ್ಣಿಕೆ ನದಿ ಸೇರಿಕೊಳ್ಳುತ್ತವೆ. ಭಗಂಡೇಶ್ವರ ದೇವಸ್ಥಾನವು ಭಾಗಮಂಡಲದಲ್ಲಿ ಕೆಂಪು ಟೈಲ್ಡ್ ಮತ್ತು ಹಲವು ಮಹಡಿಗಳ ಛಾವಣಿಯೊಂದಿಗೆ ಕೇರಳ ಶೈಲಿಯಲ್ಲಿ ನಿರ್ಮಿಸಲಾದ ಶಿವನಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿದೆ.
    • ತ್ರಿವೇಣಿ ಸಂಗಮ: ಭಾಗಮಂಡಲದಲ್ಲಿ ಮೂರು ನದಿಗಳು ವಿಲೀನಗೊಳ್ಳುವ ಸ್ಥಳವನ್ನು ತ್ರಿವೇಣಿ ಸಂಗಮ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಸುಜೋತಿ ನದಿಗೆ ಪೌರಾಣಿಕ ಸ್ಥಾನಮಾನ ನೀಡಲಾಗಿದೆ ಮತ್ತು ಭಾಗಮಂಡಲ ಬಳಿ ಹೊರಹೊಮ್ಮಿ ಕಾವೇರಿ ಮತ್ತು ಕಣ್ಣಿಕೆ ನದಿಗಳನ್ನು ಸೇರುವ ಮೊದಲು ಸುಜ್ಯೋತಿ ಭೂಗತವಾಗಿ ಹರಿಯುತ್ತಾಳೆ ಎಂದು ನಂಬಲಾಗಿದೆ. ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
    • ಬೈಲುಕುಪ್ಪೆ ಸುವರ್ಣ ದೇವಾಲಯ: ‘ಚಿನ್ನದ ದೇವಾಲಯ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಾಮ್‌ಡ್ರೊಲಿಂಗ್ ಬುದ್ಧ ದೇವಾಲಯವು ಭಾರತದ ಅತಿದೊಡ್ಡ ಟಿಬೆಟಿಯನ್ ವಸಾಹತುಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಬೈಲುಕುಪ್ಪೆಯಲ್ಲಿರುವ ಈ ಚಿನ್ನದ ದೇವಾಲಯ ಸಂಕೀರ್ಣವು ಸುಮಾರು 16000 ನಿರಾಶ್ರಿತರು ಮತ್ತು 600 ಸನ್ಯಾಸಿಗಳಿಗೆ ನೆಲೆಯಾಗಿದೆ.
    • ಬಲಮುರಿ: ಅಗಸ್ಥೇಶ್ವರ ದೇವಸ್ಥಾನದಲ್ಲಿ ಕೊಡವರ ಜನಪ್ರಿಯ ಯಾತ್ರಾ ಕೇಂದ್ರವಾಗಿದೆ.
    • ಹುಡಿಕೇರಿ: ಮಹಾದೇವ ದೇವಾಲಯಕ್ಕೆ ಜನಪ್ರಿಯವಾಗಿದೆ.
    • ಮುಲ್ಲುರು: ಮೂರು ಜೈನ ಬಸದಿಗಳೊಂದಿಗೆ ಕೊಡಗಿನಲ್ಲಿ ಜನಪ್ರಿಯ ಜೈನ ಕೇಂದ್ರವಾಗಿದೆ.
    • ನಂಜರಾಜಪಟ್ಟಣ: ಐತಿಹಾಸಿಕ ಸ್ಥಳವಾಗಿದ್ದು ನಂಜುಂಡೇಶ್ವರ ಮತ್ತು ವೀರಭದ್ರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕಾವೇರಿ ನದಿಯ ದಡದಲ್ಲಿರುವ ಕುಶಾಲ ನಗರದಿಂದ 17 ಕಿ.ಮೀ ದೂರದಲ್ಲಿದೆ.
    • ಇಗುಟಪ್ಪ ದೇವಸ್ಥಾನ: ಪಡಿಯಲ್ಲಿ ದಟ್ಟ ಕಾಡಿನ ಮಧ್ಯದಲ್ಲಿರುವ ಇಗ್ಗುಟ್ಟಪ್ಪ ಅಥವಾ ಸುಬ್ರಮಣ್ಯ ದೇವಸ್ಥಾನ ಕೊಡವರಿಗೆ ಪವಿತ್ರ ಸ್ಥಳವಾಗಿದೆ.
    ಇತರ ಆಕರ್ಷಣೆಗಳು
    • ರಾಜಾ ಸೀಟ್: ಮಡಿಕೇರಿ ಪಟ್ಟಣದಲ್ಲಿ ಜನಪ್ರಿಯ ಉದ್ಯಾನ ಮತ್ತು ವೀಕ್ಷಣಾ ಸ್ಥಳ. ಸೂರ್ಯಾಸ್ತದ ವೀಕ್ಷಣೆಗಳಿಗೆ ಅತ್ಯುತ್ತಮವಾಗಿದೆ. ಸೂರ್ಯಾಸ್ತದ ನಂತರ ಸಂಗೀತ ಕಾರಂಜಿ ಆನಂದಿಸಬಹುದಾಗಿದೆ.
    • ಕಾವೇರಿ ಸಂಕ್ರಮಣ: ಕಾವೇರಿ ಸಂಕ್ರಮಣವು ತಲಕಾವೇರಿಯಲ್ಲಿ ಒಂದು ವಿಶೇಷ ಆಚರಣೆಯಾಗಿದ್ದು, ತುಲಾ ಮಾಸದ ಮೊದಲ ದಿನ ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ. ಈ ದಿನ ತಲಕಾವೇರಿ ದೇವಾಲಯದ ನಂದಿಯ ಶಿಲ್ಪದ ಮೂಲಕ ನದಿಯ ನೀರು ಹರಿಯುತ್ತದೆ ಮತ್ತು ಭಕ್ತರು ದೈವಿಕ ಆಶೀರ್ವಾದ ಕೋರಿ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಾರೆ.
    • ಅಬ್ಬಿ ಮಠ: ಮುರುಗರಾಜೇಂದ್ರ ಮಠ ಮತ್ತು ಮಲ್ಲಿಕರ್ಜುನ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
    • ಶಾಂತಹಳ್ಳಿ: ಜೇನುನೊಣಗಳನ್ನು ಸಾಕುವ ಚಟುವಟಿಕೆಗಳಿಗೆ ಜನಪ್ರಿಯವಾಗಿದೆ. 17 ನೇ ಶತಮಾನದ ಕುಮಾರಲಿಂಗೇಶ್ವರ ದೇವಸ್ಥಾನಕ್ಕೂ ನೆಲೆಯಾಗಿದೆ.
    • ಎಮ್ಮೆ ಸುಗ್ಗಿ: 12 ವರ್ಷಗಳಿಗೊಮ್ಮೆ ಬರುವ ವಿಶಿಷ್ಟ ಹಬ್ಬವಾಗಿದೆ.
    • ಸುರ್ಲಬ್ಬಿ: ಮಿನಿ ಜಲಪಾತವಿದೆ ಮತ್ತು 10 ಕಿ.ಮೀ ದೂರದಲ್ಲಿ ಬೆಟ್ಟದ ಮೇಲಿನ ಕೋಟೆಯಲ್ಲಿ ಹಳೆಯ ದೇವಾಲಯವೊಂದಿದೆ.
    ಶಾಪಿಂಗ್
    • ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ಮತ್ತು ಜೇನುತುಪ್ಪ ಹೆಚ್ಚು ಜನಪ್ರಿಯ ಉತ್ಪನ್ನಗಳಾಗಿವೆ.

    Tour Location

    ಮಡಿಕೇರಿ ಬೆಂಗಳೂರಿನಿಂದ 250 ಕಿ.ಮೀ ಮತ್ತು ಮಂಗಳೂರಿನಿಂದ 140 ಕಿ.ಮೀ ದೂರದಲ್ಲಿದೆ. ಕೊಡಗಿನಲ್ಲಿ ಜೂನ್ ಮತ್ತು ಆಗಸ್ಟ್ ನಡುವೆ ಅತಿ ಹೆಚ್ಚು ಮಳೆಯಾಗುತ್ತದೆ. ಕೊಡಗು ವರ್ಷಪೂರ್ತಿ ಆಹ್ಲಾದಕರ ಹವಾಮಾನವನ್ನುಹೊಂದಿರುತ್ತದೆ.

    ಕೇರಳದ ಕಣ್ಣೂರು ಹತ್ತಿರದ ವಿಮಾನ ನಿಲ್ದಾಣ (90 ಕಿ.ಮೀ ದೂರದಲ್ಲಿದೆ). ಕೊಡಗನ್ನು ಪ್ರವೇಶಿಸಲು ಮೈಸೂರು (120 ಕಿ.ಮೀ) ಮತ್ತು ಮಂಗಳೂರು (140 ಕಿ.ಮೀ) ಇತರ ಎರಡು ಅನುಕೂಲಕರ ವಿಮಾನ ನಿಲ್ದಾಣಗಳಾಗಿವೆ.
     ಮಡಿಕೇರಿಯಲ್ಲಿ ರೈಲು ನಿಲ್ದಾಣವಿಲ್ಲ. ಸಮೀಪದ ಪ್ರಮುಖ ರೈಲು ನಿಲ್ದಾಣಗಳು ಮೈಸೂರು (100 ಕಿ.ಮೀ), ಸಕಲೇಶಪುರ (100 ಕಿ.ಮೀ) ಮತ್ತು ಸುಬ್ರಮಣ್ಯ ರಸ್ತೆ (86 ಕಿ.ಮೀ).
    ಮಡಿಕೇರಿಗೆ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ಇತರ ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಪರ್ಕವಿದೆ.
    ಸ್ಥಳೀಯ ಪ್ರವಾಸಿ ತಾಣಗಳನ್ನು ತಲುಪಲು  ಪ್ರಮುಖ ಪಟ್ಟಣಗಳಾದ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಮತ್ತು ಕುಶಾಲನಗರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಹತ್ತಿರದ ಪಟ್ಟಣಗಳಾದ ಮೈಸೂರು ಮತ್ತು ಮಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಕಾರುಗಳು ಮತ್ತು ಬೈಕುಗಳು ಲಭ್ಯವಿದೆ.

    ಪರಿಸರ ಸ್ನೇಹಿ ವಸತಿ ಆಯ್ಕೆಗಳು:

    ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ದುಬಾರೆ ಎಲಿಫೆಂಟ್ ಕ್ಯಾಂಪ್
    ನಂಜರಾಜಪಟ್ನ ಪೋಸ್ಟ್, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ, 571 234 ಕರ್ನಾಟಕ, ಭಾರತ ವ್ಯವಸ್ಥಾಪಕ: ಮಿಸ್ ಅನುಪಮಾ ಸಂಪರ್ಕ ಸಂಖ್ಯೆ: +91-9449597876 ಲ್ಯಾಂಡ್-ಲೈನ್: +91-8276267641 ಇಮೇಲ್ ಐಡಿ: dubare@junglelodges.com ವೆಬ್‌ಸೈಟ್: ಕ್ಲಿಕ್ ಮಾಡಿ
    ಕಿಂಗ್ಸ್ ಕಾಟೇಜ್ ಮತ್ತು ಪ್ಯಾಲೇಸ್ ಎಸ್ಟೇಟ್
    ನಾಲ್ಕುನಾಡು ಅರಮನೆ ಹತ್ತಿರ, ತಡಿಯಂಡಮೋಳ್, ಕಾಕಬ್ಬೆ

    ಐಷಾರಾಮಿ ವಸತಿ ಆಯ್ಕೆಗಳು:

    ಎವೊಲ್ವ್ ಬ್ಯಾಕ್ ಕೂರ್ಗ್
    ವೆಬ್‌ಸೈಟ್: ಕ್ಲಿಕ್ ಮಾಡಿ
    ಕ್ಲಬ್ ಮಹೀಂದ್ರಾ
    ಮಡಿಕೇರಿ
    ತಾಜ್ ಮಡಿಕೇರಿ ರೆಸಾರ್ಟ್ ಮತ್ತು ಸ್ಪಾ
    ದಿ ತಮಾರಾ ಕೂರ್ಗ್
    ಇಬ್ನಿ ಕೂರ್ಗ್

    ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು:

    ಕೆಎಸ್‌ಟಿಡಿಸಿ ಮಯೂರ ವ್ಯಾಲಿ ವ್ಯೂ ಮಡಿಕೇರಿ
    ಅಬ್ಬಿಧಾಮ ಎಸ್ಟೇಟ್ ಸ್ಟೇ
    ಶಾಂತಿ ಎಸ್ಟೇಟ್ ಹೋಮ್ ಸ್ಟೇ
    ಅಮಾ ಪ್ಲಾಂಟೇಶನ್

    ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು:

    ಹೋಟೆಲ್ ಮಯೂರ ತಲಕಾವೇರಿ
    ಭಾಗಮಂಡಲ ಕೊಡಗು  571 247 ವ್ಯವಸ್ಥಾಪಕ: ಶ್ರೀ ಪಿ.ವಿ.ಪ್ರಕಾಶ್ ಸಂಪರ್ಕ ಸಂಖ್ಯೆ: +91-8970650030 ಲ್ಯಾಂಡ್-ಲೈನ್: +91-827-2243143 ಇಮೇಲ್ ಐಡಿ: bhagamandala@karnatakaholidays.net