ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ನಗರದ ಹೃದಯಭಾಗದಲ್ಲಿ ಗಾಂಧಿ ನಗರ ಬಳಿ ಇದೆ, ಮೆಜೆಸ್ಟಿಕ್ ಮತ್ತು ಕಬ್ಬನ್ ಪಾರ್ಕ್ನಿಂದ 2 ಕಿ.ಮೀ. ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ ಹಿಂದೆ ಕೇಂದ್ರ ಕಾರಾಗೃಹವಾಗಿತ್ತು.
ಇತಿಹಾಸ:
ಬೆಂಗಳೂರಿನ ಕೇಂದ್ರ ಕಾರಾಗ್ರಹ 1975 ರ ತುರ್ತು ಪರಿಸ್ಥಿತಿಯಲ್ಲಿ ಹಲವಾರು ಪ್ರಮುಖ ರಾಜಕೀಯ ನಾಯಕರನ್ನು ಬಂಧಿಸಲು ಬಳಸಲ್ಪಟ್ಟ ಕಾರಣ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯ ಉದ್ಯಾನವನ ವನ್ನು ಮಾಜಿ ಕೇಂದ್ರ ಸಚಿವ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು 2008ರಲ್ಲಿಉದ್ಘಾಟಿಸಿದರು. ಆ ನಂತರ ಸ್ವಾತಂತ್ರ್ಯ ಉದ್ಯಾನವನ ಸಾರ್ವಜನಿಕರಿಗೆ ಪ್ರವೇಶಿಸಕ್ಕೆ ಮುಕ್ತವಾಯಿತು.
ಸ್ವಾತಂತ್ರ್ಯ ಉದ್ಯಾನವನಕ್ಕೆ ಏಕೆ ಭೇಟಿ ನೀಡಬೇಕು?
ಸ್ವಾತಂತ್ರ್ಯ ಉದ್ಯಾನವನ ಸಂದರ್ಶಕರಿಗೆ ಜೈಲಿನ ಜೀವನದ ಒಂದು ನೋಟವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಜೈಲಿನ ವಸತಿ ಕೋಣೆಗಳು, ವೀಕ್ಷಣಾ ಗೋಪುರ, ನೇಣು ಗಂಬ ಮತ್ತು ಜೈಲು ಆಸ್ಪತ್ರೆಯನ್ನು ಕಾಣಬಹುದು. ನಡೆಯುವ ಪಥ (ಜಾಗಿಂಗ್ ಟ್ರ್ಯಾಕ್) ಮತ್ತು ಮಕ್ಕಳ ಆಟದ ಪ್ರದೇಶವೂ ಲಭ್ಯವಿದೆ. ಕೈದಿಗಳ ಜೀವನದ ಹತ್ತಿರದ ಅನುಭವನನ್ನು ಪಡೆಯಬಹುದಾದ ಕೆಲವೇ ಸ್ಥಳಗಳಲ್ಲಿ ಸ್ವಾತಂತ್ರ್ಯ ಉದ್ಯಾನವನ ಕೂಡ ಒಂದು. ನೇಣು ಹಾಕುವ ಸ್ಥಳವನ್ನು ನೋಡುವುದು ಒಂದು ಮನಕಲಕುವ ಅನುಭವ. ಮರಣದಂಡನೆ ಶಿಕ್ಷೆಗೊಳಗಾದವರನ್ನು ಈ ಪ್ರದೇಶದಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತಿತ್ತು. ಅನೇಕ ಉತ್ತಮವಾಗಿ ನಿರ್ವಹಿಸಲ್ಪಟ್ಟ ವರ್ಣರಂಜಿತ ಉದ್ಯಾನಗಳು, ಐತಿಹಾಸಿಕ ಕಟ್ಟಡಗಳು ಉತ್ತಮ ಫೋಟೋ ಅವಕಾಶಗಳನ್ನು ನೀಡುತ್ತದೆ.
ಭೇಟಿ ಸಮಯ ಮತ್ತು ಸೌಲಭ್ಯಗಳು:
ಸ್ವಾತಂತ್ರ್ಯ ಉದ್ಯಾನವನಕ್ಕೆ ಪ್ರವೇಶ ಶುಲ್ಕವಿಲ್ಲ ಮತ್ತು ಪ್ರತಿದಿನ ಬೆಳಿಗ್ಗೆ 5 ರಿಂದ ಬೆಳಿಗ್ಗೆ 8.30 ರವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಉಚಿತ ಪಾರ್ಕಿಂಗ್ ಮತ್ತು ಶೌಚಾಲಯ ಸೌಲಭ್ಯಗಳು ಸಹ ಲಭ್ಯವಿದೆ. ಸ್ವಾತಂತ್ರ್ಯ ಉದ್ಯಾನವನವನ್ನು ಸರಿಯಾಗಿ ನೋಡಲು ಸುಮಾರು 1.5-2 ಗಂಟೆಗಳ ಕಾಲ ಬೇಕಾಗಬಹುದು.
ಸ್ವಾತಂತ್ರ್ಯ ಉದ್ಯಾನವನ ತಲುಪುವುದು ಹೇಗೆ:
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಮತ್ತು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣವು ಫ್ರೀಡಂ ಪಾರ್ಕ್ಗೆ ಹತ್ತಿರವಿರುವ ಎರಡು ಮೆಟ್ರೋ ನಿಲ್ದಾಣಗಳಾಗಿವೆ. ಮೆಟ್ರೋ ನಿಲ್ದಾಣ ಅಥವಾ ಬೆಂಗಳೂರು ನಗರದ ಇತರ ಭಾಗಗಳಿಂದ ಸ್ವಾತಂತ್ರ್ಯ ಉದ್ಯಾನವನ ತಲುಪಲು ಆಟೊಗಳು ಅಥವಾ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದು.
ವಸತಿ: ಗಾಂಧಿ ನಗರ ಪ್ರದೇಶ (ಫ್ರೀಡಂ ಪಾರ್ಕ್ನಿಂದ 1 ಕಿ.ಮೀ) ಹಲವಾರು ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್ಗಳನ್ನು ಹೊಂದಿದೆ.