ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರು, ಕೇವಲ ಒಂದು ನಗರವಲ್ಲ; ಅದು ಚರಿತ್ರೆ, ಕಲೆ ಮತ್ತು ಪರಂಪರೆಯ ಅಪೂರ್ವ ಸಂಗಮ. ಪ್ರಕೃತಿಯ ಮಡಿಲಲ್ಲಿ, ಚಾಮುಂಡಿ ಬೆಟ್ಟದ ಪಾದದ ಸನ್ನಿಧಿಯಲ್ಲಿ ಕಂಗೊಳಿಸುವ ಈ ನಗರವು ಬೆಂಗಳೂರಿನಿಂದ ಸುಮಾರು 140 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 770 ಮೀಟರ್ ಎತ್ತರದಲ್ಲಿರುವುದರಿಂದ, ಇಲ್ಲಿನ ತಂಗಾಳಿಯು ಸದಾ ಆಹ್ಲಾದಕರವಾಗಿದ್ದು, ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ.
"ಒಮ್ಮೆ ಮೈಸೂರು ಸಂಸ್ಥಾನವನ್ನಾಳಿದ ಶಕ್ತಿಶಾಲಿ ಒಡೆಯರ್ ರಾಜವಂಶವು, ಇಂದಿನ ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ರೂಪುರೇಕೆಗಳನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಈ ವೈಭವದ ನಗರವು ತನ್ನ ಭವ್ಯ ಅರಮನೆಗಳು, ಪುರಾತನ ದೇವಾಲಯಗಳು, ಮಾರುಕಟ್ಟೆಗಳು ಮತ್ತು ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಪರಂಪರೆಗೆ ಜಗತ್ಪ್ರಸಿದ್ಧಿಯಾಗಿದೆ."
ಮೈಸೂರಿನ ಹವಾಮಾನ ಮತ್ತು ಅಲ್ಲಿನ ಜನರ ಸಭ್ಯತೆ ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಕ್ತಿಯುತವಾದ ಒಡೆಯರ್ ರಾಜವಂಶವು ಮೈಸೂರು ಸಂಸ್ಥಾನವನ್ನು ಅರಸೊತ್ತಿಗೆಯ ಕಾಲದಲ್ಲಿ ವೈಭವದಿಂದ ಆಳಿತ್ತು. ಇಂದಿನ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಅಡಿಪಾಯವನ್ನು ಗಟ್ಟಿಗೊಳಿಸುವಲ್ಲಿ ಒಡೆಯರ ಕೊಡುಗೆ ಅವಿಸ್ಮರಣೀಯ. ಮೈಸೂರು ಎಂದರೆ ತಕ್ಷಣ ನೆನಪಾಗುವುದು ಇಲ್ಲಿನ ಭವ್ಯ ಅರಮನೆಗಳು, ಪುರಾತನ ದೇಗುಲಗಳು, ಬಣ್ಣಬಣ್ಣದ ಮಾರುಕಟ್ಟೆಗಳು ಮತ್ತು ಇಂದಿಗೂ ಜೀವಂತವಾಗಿರುವ ಮಣ್ಣಿನ ಸಂಪ್ರದಾಯಗಳು. ದಕ್ಷಿಣ ಭಾರತದ ಅತಿ ಸುಂದರ ನಗರಗಳಲ್ಲಿ ಒಂದಾಗಿರುವ ಮೈಸೂರು, ತನ್ನ ಮಡಿಲಲ್ಲಿ2 ಅಡಗಿರುವ ಸಾವಿರಾರು ಕಥೆಗಳನ್ನು ಅನ್ವೇಷಿಸಲು ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ. 1399 ರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಮೈಸೂರು ಸಂಸ್ಥಾನವು ರಾಜವೈಭವದ ಕೇಂದ್ರವಾಗಿತ್ತು.
ಇತಿಹಾಸದ ಹಳೆಯ ಪುಟಗಳನ್ನು ಮತ್ತು ಆಧುನಿಕತೆಯ ಹೊಸ ಆಯಾಮಗಳನ್ನು ತನ್ನಲ್ಲಿ ಅಪ್ಪಿಕೊಂಡಿರುವ ಈ ನಗರವು, ಹಳೆಯ ಪ್ರಪಂಚದ ಮೋಡಿ ಹಾಗೂ ಹೊಸ ಜಗತ್ತಿನ ಸೌಕರ್ಯಗಳ ಅಪರೂಪದ ಸಮ್ಮಿಶ್ರಣವಾಗಿದೆ. ಇಲ್ಲಿನ ಭವ್ಯ ವಾಸ್ತುಶಿಲ್ಪಗಳು ಮತ್ತು ಸ್ಮಾರಕಗಳು ನಮಗೆ ಗತಕಾಲದ ಶೌರ್ಯದ ನೆನಪುಗಳನ್ನು ಮರುಕಳಿಸುತ್ತವೆ. ಅರಮನೆಯ ನಗರಿ ಮೈಸೂರು ತನ್ನ ರಾಜಗಾಂಭೀರ್ಯದೊಂದಿಗೆ ವರ್ಷದ ಎಲ್ಲಾ ಸಮಯದಲ್ಲೂ ಅತಿಥಿಗಳನ್ನು ಸ್ವಾಗತಿಸಲು ಸನ್ನದ್ಧವಾಗಿರುತ್ತದೆ. ಇನ್ನು ಸ್ವಚ್ಛತೆಯ ವಿಷಯಕ್ಕೆ ಬಂದರೆ ಮೈಸೂರು ಎಂದಿಗೂ ಮಾದರಿ. ಸ್ವಚ್ಛ ಸರ್ವೇಕ್ಷಣೆ 2024-25 ರ ಅಡಿಯಲ್ಲಿ, 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದ “ಸೂಪರ್ ಸ್ವಚ್ಛ ಲೀಗ್”ನಲ್ಲಿ ಮೈಸೂರು ಹೆಮ್ಮೆಯ 3ನೇ ಸ್ಥಾನವನ್ನು ಅಲಂಕರಿಸಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಯು ಈ ನಗರದ ಕಿರೀಟವಿದ್ದಂತೆ. ಪ್ರತಿ ವರ್ಷ ಸುಮಾರು 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತಿನ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ. ಪ್ರವಾಸದ ಸವಿಯನ್ನು ಸವಿಯಲು ಇಚ್ಛಿಸುವವರಿಗೆ ಮೈಸೂರು ವರ್ಷದ 365 ದಿನಗಳೂ ಪ್ರಶಸ್ತವಾದ ತಾಣವಾಗಿದೆ.