ಸೊಬಗಿನ, ಸುಸಂಸ್ಕೃತ ಮತ್ತು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಮೈಸೂರು, ಭಾರತದ ಅತ್ಯಂತ ಪ್ರಸಿದ್ಧ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. ಒಡೆಯರ್ ರಾಜವಂಶದ ರಾಜಧಾನಿಯಾಗಿದ್ದ ಈ ನಗರವು ತನ್ನ ಭವ್ಯ ಅರಮನೆಗಳು, ಯೋಜಿತ ರಸ್ತೆಗಳು ಮತ್ತು ನಿಧಾನಗತಿಯಲ್ಲಿ ಸಾಗುವ ಸಾಂಸ್ಕೃತಿಕ ಜೀವನಕ್ಕೆ ಹೆಸರುವಾಸಿಯಾಗಿದೆ. ರಾಜವೈಭವದ ಜೊತೆಗೆ ಆತ್ಮೀಯತೆಯ ಬೆಸುಗೆಯನ್ನು ಹೊಂದಿರುವ ಮೈಸೂರು, ಪ್ರವಾಸಿಗರನ್ನು ಸ್ವಾಗತಿಸುವಲ್ಲಿಯೂ ಅಷ್ಟೇ ಮುಂದು.
ಝಗಮಗಿಸುವ ಅರಮನೆಗಳ ದೀಪಾಲಂಕಾರದಿಂದ ಹಿಡಿದು ಮಾರುಕಟ್ಟೆಗಳಲ್ಲಿನ ಶ್ರೀಗಂಧದ ಪರಿಮಳದವರೆಗೆ, ಮೈಸೂರು ನೀಡುವ ಅನುಭವಗಳು ಎಂದೆಂದಿಗೂ ಜೀವಂತ. ಇಲ್ಲಿ ಹಬ್ಬಗಳನ್ನು ಹೆಮ್ಮೆಯಿಂದ ಆಚರಿಸಲಾಗುತ್ತದೆ, ಆಹಾರವನ್ನು ಪ್ರೀತಿಯಿಂದ ಬಡಿಸಲಾಗುತ್ತದೆ ಮತ್ತು ಇತಿಹಾಸವು ಕೇವಲ ವಸ್ತುಸಂಗ್ರಹಾಲಯಗಳಿಗೆ ಸೀಮಿತವಾಗದೆ ದೈನಂದಿನ ಜೀವನದ ಭಾಗವಾಗಿದೆ.
ರಾಜಮನೆತನದ ಪರಂಪರೆ (ವಾಸ್ತುಶಿಲ್ಪ ಮತ್ತು ಇತಿಹಾಸ)
ಮೈಸೂರಿನ ಅಸ್ಮಿತೆಯು ಅದರ ರಾಜಮನೆತನದ ಗತವೈಭವದೊಂದಿಗೆ ಬೆಸೆದುಕೊಂಡಿದೆ. ಇದು ಇಲ್ಲಿನ ಸ್ಮಾರಕಗಳು, ಸಂಸ್ಥೆಗಳು ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿ ಎದ್ದು ಕಾಣುತ್ತದೆ.
- ಮೈಸೂರು ಅರಮನೆ: ನಗರದ ಐಕಾನ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಲ್ಪಡುವ ಸ್ಮಾರಕಗಳಲ್ಲಿ ಒಂದಾಗಿದೆ. ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾದ ಈ ಅರಮನೆಯು ತನ್ನ ಸುಂದರ ದರ್ಬಾರ್ ಹಾಲ್ಗಳು, ಬಣ್ಣದ ಗಾಜಿನ ಛಾವಣಿಗಳು ಮತ್ತು ಭಾನುವಾರ ಹಾಗೂ ಹಬ್ಬದ ದಿನಗಳಲ್ಲಿ ಸುಮಾರು ಒಂದು ಲಕ್ಷ ದೀಪಗಳಿಂದ ಕಂಗೊಳಿಸುವ ದೀಪಾಲಂಕಾರಕ್ಕೆ ಪ್ರಸಿದ್ಧವಾಗಿದೆ.
- ಚಾಮುಂಡಿ ಬೆಟ್ಟ : ನಗರದ ಮೇಲೆ ಕಾವಲು ಕಾಯುವಂತೆ ನಿಂತಿರುವ ಈ ಪವಿತ್ರ ಬೆಟ್ಟವು ಚಾಮುಂಡೇಶ್ವರಿ ದೇವಿಯ ನೆಲೆವೀಡಾಗಿದೆ. ಬೆಟ್ಟದ ತುದಿಯಿಂದ ನೋಡಿದರೆ ಹಳೆಯ ಮೈಸೂರು ನಗರ ಮತ್ತು ಹಸಿರು ಪರಿಸರದ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ.
- ಜಗನ್ಮೋಹನ ಅರಮನೆ : ಹಿಂದೆ ರಾಜರ ನಿವಾಸವಾಗಿದ್ದ ಇದು, ಈಗ ಪ್ರಮುಖ ಕಲಾ ಗ್ಯಾಲರಿಯಾಗಿದೆ. ಇಲ್ಲಿ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆಗಳನ್ನು ಕಾಣಬಹುದು.
- ಲಲಿತ ಮಹಲ್ ಅರಮನೆ : ಯುರೋಪಿಯನ್ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ಈ ಸುಂದರವಾದ ಬಿಳಿ ಬಣ್ಣದ ಅರಮನೆಯು ಚಾಮುಂಡಿ ಬೆಟ್ಟದ ತಪ್ಪಲಲ್ಲಿದೆ.
ನಿಸರ್ಗ
ರಾಜವೈಭವದ ಹೊರತಾಗಿಯೂ, ಮೈಸೂರು ಪ್ರಶಾಂತವಾದ ಹಸಿರು ತಾಣಗಳು ಮತ್ತು ನಿಸರ್ಗದ ಅನುಭವವನ್ನು ನೀಡುತ್ತದೆ.
- ಬೃಂದಾವನ ಉದ್ಯಾನವನ : ಕೃಷ್ಣರಾಜ ಸಾಗರ (KRS) ಆಣೆಕಟ್ಟಿನ ಕೆಳಭಾಗದಲ್ಲಿರುವ ಈ ಉದ್ಯಾನವನವು ತನ್ನ ಸಮ್ಮಿತೀಯ ವಿನ್ಯಾಸ ಮತ್ತು ಸಂಜೆ ನಡೆಯುವ ಸಂಗೀತ ಕಾರಂಜಿ ಪ್ರದರ್ಶನಕ್ಕೆ (Musical Fountain) ಪ್ರಸಿದ್ಧವಾಗಿದೆ.
- ಕಾರಂಜಿ ಕೆರೆ : ದೋಣಿ ವಿಹಾರ, ಚಿಟ್ಟೆ ಉದ್ಯಾನವನ ಮತ್ತು ನೈಸರ್ಗಿಕ ಪರಿಸರದಲ್ಲಿ ನಡೆಯಲು ಇದು ಸೂಕ್ತವಾದ ಪ್ರಶಾಂತ ತಾಣ.
- ಮೈಸೂರು ಮೃಗಾಲಯ : ಭಾರತದ ಅತ್ಯಂತ ಹಳೆಯ ಮತ್ತು ಸುಸ್ಥಿತಿಯಲ್ಲಿರುವ ಮೃಗಾಲಯಗಳಲ್ಲಿ ಒಂದಾಗಿದೆ. ವಿಶಾಲವಾದ ಆವರಣ ಮತ್ತು ಪ್ರಪಂಚದಾದ್ಯಂತದ ಅಪರೂಪದ ಪ್ರಭೇದಗಳಿಗೆ ಇದು ಹೆಸರುವಾಸಿಯಾಗಿದೆ. ಕುಟುಂಬಗಳು ಮತ್ತು ವನ್ಯಜೀವಿ ಪ್ರಿಯರಿಗೆ ಇದು ಅಚ್ಚುಮೆಚ್ಚಿನ ಸ್ಥಳ.
ಜೀವಂತ ಪರಂಪರೆ: ಕಲೆ, ಕರಕುಶಲ ಮತ್ತು ಸ್ಥಳೀಯ ಜೀವನ
ಕರಕುಶಲ, ಜವಳಿ ಮತ್ತು ಮಾರುಕಟ್ಟೆಗಳು
- ದೇವರಾಜ ಮಾರುಕಟ್ಟೆ: ಹೂವಿನ ಹಾರಗಳು, ಸಾಂಬಾರ ಪದಾರ್ಥಗಳು, ಹಣ್ಣುಗಳು, ಊದುಬತ್ತಿ ಮತ್ತು ಶ್ರೀಗಂಧದ ಉತ್ಪನ್ನಗಳ ಪರಿಮಳದಿಂದ ಕೂಡಿದ ಈ ಗಿಜಿಗುಡುವ ಸಾಂಪ್ರದಾಯಿಕ ಮಾರುಕಟ್ಟೆಯು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.
- ಮೈಸೂರು ರೇಷ್ಮೆ ಮತ್ತು ಶ್ರೀಗಂಧ: ಮೈಸೂರು ತನ್ನ ಪರಿಶುದ್ಧತೆ ಮತ್ತು ಕುಶಲತೆಗೆ ಹೆಸರಾದ ರೇಷ್ಮೆ ಸೀರೆಗಳಿಗೆ ಹಾಗೂ ತಲೆಮಾರುಗಳ ಕಲಾಪ್ರಾವೀಣ್ಯತೆಯನ್ನು ಪ್ರತಿಬಿಂಬಿಸುವ ಅಪ್ಪಟ ಶ್ರೀಗಂಧದ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.
ಯೋಗ, ಸಂಗೀತ ಮತ್ತು ಸಂಸ್ಕೃತಿ ಆಧುನಿಕ ಯೋಗಾಭ್ಯಾಸದ ಜನ್ಮಸ್ಥಳಗಳಲ್ಲಿ ಮೈಸೂರು ಒಂದೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿನ ಹಲವಾರು ಸಾಂಪ್ರದಾಯಿಕ ಯೋಗ ಶಾಲೆಗಳು ಪ್ರಪಂಚದಾದ್ಯಂತದ ಅಭ್ಯಾಸಿಗಳನ್ನು ಆಕರ್ಷಿಸುತ್ತವೆ. ನಗರವು ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಸಾಹಿತ್ಯ ಸಂಪ್ರದಾಯಗಳನ್ನೂ ಪೋಷಿಸುತ್ತಿದೆ.
ಹಬ್ಬಗಳು ಮತ್ತು ಉತ್ಸವಗಳು
- ಮೈಸೂರು ದಸರಾ:
ಸಮಯ: ಸೆಪ್ಟೆಂಬರ್ ಅಥವಾ ಅಕ್ಟೋಬರ್.
ವಿಶೇಷತೆ: ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲದಿಂದ ಆಚರಿಸಲ್ಪಡುತ್ತಿರುವ ದಸರಾ, ನಗರವನ್ನು ರಾಜಮನೆತನದ ಮೆರವಣಿಗೆಗಳು, ದೀಪಾಲಂಕಾರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವದ ತಾಣವನ್ನಾಗಿ ಪರಿವರ್ತಿಸುತ್ತದೆ. ಚಿನ್ನದ ಅಂಬಾರಿಯ ಬೃಹತ್ ಮೆರವಣಿಗೆಯು (ಜಂಬೂ ಸವಾರಿ) ಈ ಉತ್ಸವದ ಪ್ರಮುಖ ಆಕರ್ಷಣೆ. - ಭಾನುವಾರದ ಅರಮನೆ ದೀಪಾಲಂಕಾರ: ಪ್ರತಿ ವಾರ ಸೂರ್ಯಾಸ್ತದ ನಂತರ ಮೈಸೂರು ಅರಮನೆಯು ದೀಪಗಳ ಬೆಳಕಿನಲ್ಲಿ ಮಿನುಗುತ್ತದೆ. ಈ ಸಾಪ್ತಾಹಿಕ ಆಚರಣೆಯು ಪ್ರವಾಸಿಗರಿಗೆ ರಾಜವೈಭವದ ದರ್ಶನ ಮಾಡಿಸುತ್ತದೆ.
ಆಹಾರ ವೈವಿಧ್ಯ
- ಮೈಸೂರು ಪಾಕ್: ರಾಜಮನೆತನದ ಅಡುಗೆಮನೆಯಲ್ಲಿ ಹುಟ್ಟಿದ ಈ ಸಿಹಿ ತಿನಿಸು, ತುಪ್ಪದ ಘಮ ಮತ್ತು ಬಾಯಲ್ಲಿಟ್ಟರೆ ಕರಗುವ ರುಚಿಗೆ ಹೆಸರುವಾಸಿ.
- ಮೈಸೂರು ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ: ಗರಿಗರಿಯಾದ ದೋಸೆ, ತೆಂಗಿನಕಾಯಿ ಚಟ್ನಿ ಮತ್ತು ಸ್ಟ್ರಾಂಗ್ ಫಿಲ್ಟರ್ ಕಾಫಿಯನ್ನು ಇಲ್ಲಿನ ಹಳೆಯ ಹೋಟೆಲ್ಗಳಲ್ಲಿ ಸವಿಯುವುದೇ ಒಂದು ಆನಂದ.
- ಸಾಂಪ್ರದಾಯಿಕ ಊಟ: ಬಾಳೆ ಎಲೆಯ ಮೇಲೆ ಬಡಿಸುವ ಈ ಊಟವು ಪ್ರಾದೇಶಿಕ ರುಚಿಗಳ ಸಮತೋಲನವನ್ನು ಪರಿಚಯಿಸುತ್ತದೆ.
ಪ್ರವಾಸಿ ಮಾಹಿತಿ
ಸಂಪರ್ಕ
- ವಿಮಾನದ ಮೂಲಕ: ಮೈಸೂರು ವಿಮಾನ ನಿಲ್ದಾಣವು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಹತ್ತಿರದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
- ರೈಲು ಮೂಲಕ: ಮೈಸೂರು ಜಂಕ್ಷನ್ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
- ರಸ್ತೆ ಮೂಲಕ: ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 275 ರ ಮೂಲಕ ಸುಮಾರು 145 ಕಿ.ಮೀ ದೂರದಲ್ಲಿದೆ. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಸೇವೆಗಳು ಲಭ್ಯವಿವೆ.
ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ವರೆಗಿನ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಇದು ಹಬ್ಬದ ಋತುವಿನೊಂದಿಗೆ ಸೇರುವುದರಿಂದ ಪ್ರವಾಸಕ್ಕೆ ಸೂಕ್ತವಾಗಿದೆ.
ಪ್ರವಾಸದ ಯೋಜನೆ
- ದಿನ 1: ಮೈಸೂರು ಅರಮನೆ, ದೇವರಾಜ ಮಾರುಕಟ್ಟೆ, ಜಗನ್ಮೋಹನ ಅರಮನೆ ಮತ್ತು ಸಂಜೆ ಅರಮನೆ ದೀಪಾಲಂಕಾರ.
- ದಿನ 2: ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಕಾರಂಜಿ ಕೆರೆ ಮತ್ತು ಸಂಜೆ ಬೃಂದಾವನ ಉದ್ಯಾನವನ.
ಹತ್ತಿರದ ಜಿಲ್ಲೆಗಳು ಮತ್ತು ಪ್ರಮುಖ ಪಟ್ಟಣಗಳು
ದಕ್ಷಿಣ ಕರ್ನಾಟಕದಲ್ಲಿರುವ ಮೈಸೂರು, ಹತ್ತಿರದ ಪಾರಂಪರಿಕ ಪಟ್ಟಣಗಳು, ವನ್ಯಜೀವಿ ಧಾಮಗಳು ಮತ್ತು ಗಿರಿಧಾಮಗಳನ್ನು ಅನ್ವೇಷಿಸಲು ಅತ್ಯುತ್ತಮ ಕೇಂದ್ರವಾಗಿದೆ.
- ಮಂಡ್ಯ (45 ಕಿ.ಮೀ ಈಶಾನ್ಯಕ್ಕೆ): ‘ಸಕ್ಕರೆ ನಾಡು’ ಎಂದು ಕರೆಯಲ್ಪಡುವ ಮಂಡ್ಯದಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು ಮತ್ತು ಪ್ರಸಿದ್ಧ ಬೃಂದಾವನ ಉದ್ಯಾನವನವಿದೆ.
- ಕೊಡಗು (120 ಕಿ.ಮೀ ಪಶ್ಚಿಮಕ್ಕೆ): ಕಾಫಿ ತೋಟಗಳು, ಮಂಜಿನಿಂದ ಕೂಡಿದ ಬೆಟ್ಟಗಳು, ಜಲಪಾತಗಳು ಮತ್ತು ಕಾಡುಗಳಿಗೆ ಕೂರ್ಗ್ ಅಥವಾ ಕೊಡಗು ಪ್ರಸಿದ್ಧವಾಗಿದೆ.
- ಚಾಮರಾಜನಗರ (60 ಕಿ.ಮೀ ದಕ್ಷಿಣಕ್ಕೆ): ಬಿಳಿಗಿರಿ ರಂಗನಾಥ ಬೆಟ್ಟಗಳಿಗೆ (BR Hills) ಹೆಬ್ಬಾಗಿಲಾಗಿರುವ ಇದು ನೀಲಗಿರಿ ಜೀವಗೋಳದ ಭಾಗವಾಗಿದೆ. ನಿಸರ್ಗ ಮತ್ತು ವನ್ಯಜೀವಿ ಪ್ರಿಯರಿಗೆ ಇದು ಸೂಕ್ತ ತಾಣ.
- ಹಾಸನ (120 ಕಿ.ಮೀ ಉತ್ತರಕ್ಕೆ): ಬೇಲೂರು ಮತ್ತು ಹಳೆಬೀಡಿನ ಹೊಯ್ಸಳ ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಹಾಸನವು ಮೈಸೂರಿನ ರಾಜಮನೆತನದ ಪ್ರವಾಸಕ್ಕೆ ವಾಸ್ತುಶಿಲ್ಪದ ಮೆರಗನ್ನು ನೀಡುತ್ತದೆ.
ದಕ್ಷಿಣ ಕರ್ನಾಟಕ ಮತ್ತು ಪಶ್ಚಿಮ ಘಟ್ಟಗಳ ಪ್ರವಾಸವನ್ನು ಯೋಜಿಸಲು ಮೈಸೂರು ಒಂದು ಪರಿಪೂರ್ಣ ಸಾಂಸ್ಕೃತಿಕ ಕೇಂದ್ರವಾಗಿದೆ.
ಇಲ್ಲಿ ರಾಜಮನೆತನದ ಸಂಪ್ರದಾಯಗಳು ದೈನಂದಿನ ಜೀವನವನ್ನು ರೂಪಿಸುತ್ತವೆ, ಹಬ್ಬಗಳು ಶತಮಾನಗಳಷ್ಟು ಹಳೆಯ ಬೀದಿಗಳನ್ನು ಬೆಳಗಿಸುತ್ತವೆ ಮತ್ತು ಪ್ರತಿ ಭೇಟಿಯೂ ಸಮೃದ್ಧವಾದ ಅನುಭವವನ್ನು ನೀಡುತ್ತದೆ. ನಿಧಾನವಾಗಿ ಹೆಜ್ಜೆಹಾಕುತ್ತಾ, ಕರ್ನಾಟಕದ ಸೊಬಗನ್ನು ಅನುಭವಿಸಲು ಮೈಸೂರು ನಿಮ್ಮನ್ನು ಆಹ್ವಾನಿಸುತ್ತದೆ.
ಇನ್ನಷ್ಟು ಅನ್ವೇಷಿಸಿ →
ಮೈಸೂರು ಇ-ಬ್ರೋಷರ್
























