ಕರಾವಳಿ ಕರ್ನಾಟಕದ ಉಡುಪಿ ನಗರದಲ್ಲಿ ವಿಟ್ಲ ಪಿಂಡಿ ಜನಪ್ರಿಯ ಹಬ್ಬವಾಗಿದೆ. ವಿಟ್ಲ ಪಿಂಡಿಯನ್ನು ಮೊಸರು ಕುಡಿಕೆ ಹಬ್ಬ ಎಂದೂ ಕರೆಯುತ್ತಾರೆ. ವಿಟ್ಲ ಪಿಂಡಿ ಹಬ್ಬವನ್ನು ಜನರು ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳಲು ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಆಚರಿಸಲಾಗುತ್ತದೆ. ಇದು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.
ಹಿನ್ನೆಲೆ: ಶ್ರೀಕೃಷ್ಣ ತನ್ನ ಬಾಲ್ಯದ ದಿನಗಳಲ್ಲಿ ವಿವಿಧ ತುಂಟಾಟಗಳಿಗೆ ಹೆಸರುವಾಸಿಯಾಗಿದ್ದ. ಬೆಣ್ಣೆ ಕದಿಯುವುದು ಬಾಲ ಕೃಷ್ಣನ ನೆಚ್ಚಿನ ಹವ್ಯಾಸವಾಗಿತ್ತು. ಮಣ್ಣಿನ ಮಡಕೆಗಳಲ್ಲಿ ಕೂಡಿಡಲಾದ ಬೆಣ್ಣೆಯನ್ನು ಕದ್ದು ಮತ್ತು ಸಿಕ್ಕಿಬಿದ್ದರೆ ಮುಗ್ಧನಾಗಿ ವರ್ತಿಸುವುದು, ಅಪವಾದದಿಂದ ತಪ್ಪಿಸಿಕೊಳ್ಳಲು ಇತರ ಪ್ರಾಣಿಗಳ ಮುಖದ ಮೇಲೆ ಸ್ವಲ್ಪ ಬೆಣ್ಣೆ ಸವರುವುದು ಈತನ ದೈನಂದಿನ ಆಟಗಳಾಗಿದ್ದವು.
ಸ್ಪರ್ಧೆ: ವಿಟ್ಲ ಪಿಂಡಿ ಅಥವಾ ಮೊಸರು ಕುಡಿಕೆ ಅವರನ್ನು ಸಾಮಾನ್ಯವಾಗಿ ಸ್ಪರ್ಧೆಯ ರೂಪದಲ್ಲಿ ಎಂದು ಆಚರಿಸಲಾಗುತ್ತದೆ. ಇದು ಭಾಗವಹಿಸುವವರ ದೈಹಿಕ ಸಹಿಷ್ಣುತೆ ಮತ್ತು ಸಮತೋಲನ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಹಾಲು ಅಥವಾ ಮೊಸರಿನಂತಹ ಪದಾರ್ಥಗಳನ್ನು ತುಂಬಿದ ಮಣ್ಣಿನ ಮಡಕೆಯನ್ನು ಬೀದಿಗಳಲ್ಲಿ ಎತ್ತರದಲ್ಲಿ ನೇತು ಹಾಕಲಾಗುತ್ತದೆ. ಭಾಗವಹಿಸುವ ತಂಡಗಳು ಮಾನವ ಪಿರಮಿಡ್‌ಗಳನ್ನು ರೂಪಿಸಿ ಒಬ್ಬರ ಭುಜದ ಮೇಲೆ ಇನ್ನೊಬ್ಬರು ಹತ್ತಿ ಹೀಗೆ ಒಬ್ಬ ವ್ಯಕ್ತಿಯು ಮಣ್ಣಿನ ಮಡಕೆಯನ್ನು ಒಡೆಯುವಷ್ಟು ಎತ್ತರವನ್ನು ತಲುಪಬೇಕಾಗಿದೆ. ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಮಡಕೆಯನ್ನು ಒಡೆದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.
ವೈಯಕ್ತಿಕ ಆವೃತ್ತಿಯಲ್ಲಿ, ಭಾಗವಹಿಸುವವರಿಗೆ ಕಣ್ಣು ಕಾಣಿಸದಂತೆ ಕಪ್ಪು ಬಟ್ಟೆ ಕಟ್ಟಿ ಕೈಗೆ ದೊಡ್ಡ ಕೋಲನ್ನು ನೀಡುತ್ತಾರೆ ಮತ್ತು ಮೊಸರು ಕುಡಿಕೆಯಿಂದ ಸ್ವಲ್ಪ ದೂರದಲ್ಲಿ ದಿಕ್ಕು ತಪ್ಪಿಸಿ ಬಿಡಲಾಗುತ್ತದೆ. ಸ್ಪರ್ಧಿಗಳು ಕುಡಿಕೆ ಇರುವ ದಿಕ್ಕನ್ನು ಗ್ರಹಿಸಿ ಹತ್ತಿರ ಹೋಗಿ ಅದನ್ನು ಕೋಲಿನಿಂದ ಒಡೆಯಬೇಕು. ಕಡಿಮೆ ಸಮಯದಲ್ಲಿ ಮಡಕೆಯನ್ನು ಒಡೆದುಹಾಕುವಲ್ಲಿ ಯಾರು ಯಶಸ್ವಿಯಾಗುತ್ತಾರೆ ಎನ್ನುವುದನ್ನು ಆಧರಿಸಿ ವಿಜೇತರನ್ನು ಘೋಷಿಸಲಾಗುತ್ತದೆ.
ವಿಟ್ಲ ಪಿಂಡಿಯನ್ನು ಎಲ್ಲಿ ನೋಡಬಹುದು?
ಶ್ರೀಕೃಷ್ಣ ಜನ್ಮಾಷ್ಟಮಿಆಚರಣೆಯ ಸಮಯದಲ್ಲಿ ಉಡುಪಿ ಪಟ್ಟಣದಲ್ಲಿ ವಿಟ್ಲ ಪಿಂಡಿ ನಡೆಯುತ್ತದೆ. ಕರ್ನಾಟಕದ ಇತರ ಭಾಗಗಳಲ್ಲೂ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯುತ್ತದೆ. ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ನಿಖರವಾದ ದಿನಾಂಕಗಳು ಬದಲಾಗಬಹುದು ಆದರೆ ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಬರುತ್ತದೆ. ಆ ಸಮಯದಲ್ಲಿ ನೀವು ಉಡುಪಿಯಲ್ಲಿದ್ದರೆ, ವಿಟ್ಲಪಿಂಡಿ ಸ್ಪರ್ಧೆಗಳನ್ನು ಎಲ್ಲಿ ಮತ್ತು ಯಾವಾಗ ನಡೆಸಲಾಗುತ್ತಿದೆ ಎಂಬುದನ್ನು ಗುರುತಿಸಲು ಸ್ಥಳೀಯ ವೃತ್ತ ಪತ್ರಿಕೆಗಳನ್ನು ಗಮನಿಸಬಹುದು ಅಥವಾ ನಿಮ್ಮ ಆತಿಥೇಯರ ಸಹಾಯ ಪಡೆಯಬಹುದು.