GO UP
Image Alt

ಮಜ್ಜಿಗೆ

separator
  /  ಮಜ್ಜಿಗೆ

ಮಜ್ಜಿಗೆ ಕರ್ನಾಟಕದಲ್ಲಿದ್ದಾಗ ನೀವು ರುಚಿ ನೋಡಲೇಬೇಕಾದ ತಂಪು  ಪಾನೀಯವಾಗಿದೆ. ಮಜ್ಜಿಗೆಯು ಮೊಸರಿನ ತೆಳುಗೊಳಿಸಿದ ರೂಪವಾಗಿದ್ದು ಉಪ್ಪು ಮತ್ತು ಹಸಿರು ಮೆಣಸಿನಕಾಯಿಯ ಸೇರಿಸಿ ಸ್ವಲ್ಪ ಉಪ್ಪು, ಸ್ವಲ್ಪ ಖಾರದ ರುಚಿ ನೀಡಿ ತಯಾರಿಸಲಾಗುತ್ತದೆ. ಬಿಸಿಲಿನಲ್ಲಿ ಅಲೆದು ಬಂದವರಿಗೆ ಮಜ್ಜಿಗೆ ನೈಸರ್ಗಿಕ ತಂಪು ಪಾನೀಯವಾಗಿದೆ.

ಮಜ್ಜಿಗೆಯ ತಯಾರಿಕೆ  ಹೇಗೆ ?

ಮೊಸರಿಗೆ ನೀರನ್ನು ಸೇರಿಸಿ ಚೆನ್ನಾಗಿ ಕರಡಿ ಸರಳವಾದ ಮಜ್ಜಿಗೆ ತಯಾರಿಸಲಾಗುತ್ತದೆ. ರುಚಿಗೆ ತಕ್ಕಷ್ಟುಉಪ್ಪು, ಹಸಿಮೆಣಸಿನಕಾಯಿ ತುಂಡುಗಳೊಂದಿಗೆ  ಕೊತ್ತಂಬರಿ ಸೊಪ್ಪನ್ನು ಸುವಾಸನೆಗೆ ಸೇರಿಸಲಾಗುತ್ತದೆ. ಮಿಕ್ಸಿ ಬಳಸಿ  ಅಥವಾ ಕೈಯಿಂದ ತಿರುಗಿಸಬಹುದಾದ ಕಡಗೋಲಿನಲ್ಲಿ ಚೆನ್ನಾಗಿ ಬೆರೆಸಲಾಗುತ್ತದೆ. ಹೆಚ್ಚುವರಿ ತಂಪಿಗಾಗಿ  ಮಂಜುಗಡ್ಡೆಯನ್ನು ಸೇರಿಸಬಹುದು.

ಮಸಾಲಾ ಮಜ್ಜಿಗೆ :  ಶುಂಠಿ ಅಥವಾ ಇಂಗು ಮತ್ತಿತರ ಮಸಾಲಾ ಪದಾರ್ಥಗಳನ್ನು ಹೆಚ್ಚುವರಿಯಾಗಿ ಸೇರಿಸಿ ಮಸಾಲಾ ಮಜ್ಜಿಗೆ ತಯಾರಿಸಲಾಗುತ್ತದೆ. 

ನಿಮ್ಮ ದೇಹವನ್ನು ತಣ್ಣಗಾಗಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಮಜ್ಜಿಗೆ  ಸಹಾಯ ಮಾಡುತ್ತದೆ. ಅದ್ಧೂರಿ ಊಟದ ನಂತರ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವುದು ಉತ್ತಮ ಅಭ್ಯಾಸ. 

ಮಜ್ಜಿಗೆಯನ್ನು ಎಲ್ಲಿ ಖರೀದಿಸಬಹುದು?

ಮಜ್ಜಿಗೆ ಕರ್ನಾಟಕದ ಹೆಚ್ಚಿನ ಉಪಾಹಾರ ಗೃಹಗಳಲ್ಲಿ ಸುಲಭವಾಗಿ ಸಿಗುತ್ತದೆ.  ಫ್ಯಾಕ್ಟರಿಯಲ್ಲಿ  ತಯಾರಿಸಿದ ಮಜ್ಜಿಗೆಯನ್ನು ಬೇಕರಿಗಳು, ಸೂಪರ್  ಮಾರುಕಟ್ಟೆಗಳು  ಮತ್ತು ಹಾಲಿನ ಬೂತ್‌ಗಳಲ್ಲಿ ಸಣ್ಣ ಕೊಟ್ಟೆಗಳಲ್ಲಿ ಅಥವಾ ಟೆಟ್ರಾ ಪ್ಯಾಕ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕದ ರೈತರ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ (ಕೆ ಎಂ ಎಫ್) ತಯಾರಿಸುವ ನಂದಿನಿ ಬ್ರಾಂಡ್ ಮಜ್ಜಿಗೆಯನ್ನು ಹಲವಾರು ಅಂಗಡಿ, ಕಿಯೋಸ್ಕ್ ಗಳಲ್ಲಿ ಸಿಗುತ್ತದೆ.  ಬೇಸಿಗೆಯ ತಿಂಗಳುಗಳಲ್ಲಿ ಹಲವಾರು ರಸ್ತೆಬದಿಯ ಮಾರಾಟಗಾರರು ಮಜ್ಜಿಗೆಯನ್ನು ವಾಹನ ಚಾಲಕರು, ನಿರ್ಮಾಣ ಕಾರ್ಮಿಕರಿಗೆ ಮಾರಾಟ ಮಾಡುವುದನ್ನು ಸಹ ಕಾಣಬಹುದು.