ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯವಾದ ತಿಂಡಿ ಎಂದರೆ ಅದು ಗೋಲಿ ಬಜ್ಜಿ. ಈ ಖಾದ್ಯ ಮಂಗಳೂರಿನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಿರುವುದರಿಂದ ಇದನ್ನು ಮಂಗಳೂರು ಬೋಂಡ ಎಂದು ಕರೆಯುತ್ತಾರೆ.
ಗೋಲಿ ಬಜ್ಜಿಯು ಹಗುರವಾಗಿ ಹಾಗೂ ಗರಿಗರಿಯಾಗಿರುತ್ತದೆ. ಇದು ಹೊರಗೆ ಗರಿಗರಿಯಾದ ಮತ್ತು ಒಳಗೆ ಮೃದುವಾಗಿರುತ್ತದೆ. ಗೋಲಿ ಬಜ್ಜಿ ಮೈದಾ ಹಿಟ್ಟಿನಿಂದ ತಯಾರಿಸಲ್ಪಟ್ಟಿದ್ದು, ಮೊಸರು, ತೆಂಗಿನಕಾಯಿ ತುರಿ, ಕೊತ್ತಂಬರಿ, ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಲಾಗುತ್ತದೆ. ಈ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಹೊತ್ತು ನೆನೆಯಲು ಬಿಡಬೇಕಾಗುತ್ತದೆ ಆಗ ಬಜ್ಜಿಯು ಮೃದುವಾಗಿರುತ್ತದೆ.ಅಡಿಗೆ ಸೋಡಾ ಅಥವಾ ಹುಳಿ ಮೊಸರನ್ನು ಈ ಮಿಶ್ರಣಕ್ಕೆ ಹಾಕುವುದರಿಂದ ಬಜ್ಜಿಯು ಬೇಗನೆ ತಯಾರಾಗುತ್ತದೆ. ಈ ಹಿಟ್ಟಿನ ಮಿಶ್ರಣದಿಂದ ಮಾಡಿದ ಸಣ್ಣ ಉಂಡೆಗಳನ್ನುನ್ನು ಹೊರಗಿನ ಪದರವು ಕಂದು ಬಣ್ಣ ಬರುವವರೆಗೆ ಬಾಣಲೆಯಲ್ಲಿ ಕರೆಯಬೇಕು. ಸರಳ ಪದಾರ್ಥಗಳು ಮತ್ತು ಅಡುಗೆ ಪ್ರಕ್ರಿಯೆಯಿಂದಾಗಿ ಗೋಲಿ ಬಜ್ಜಿ ತಯಾರಿಸಲು ಸುಲಭವಾಗಿದೆ.
ಗೋಲಿ ಬಜ್ಜಿ ತೆಂಗಿನಕಾಯಿ-ಕೊತ್ತಂಬರಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಗೋಲಿ ಬಜ್ಜಿಯ ಒಂದು ಪ್ಲೇಟ್ ನಲ್ಲಿ 4-5 ಸಣ್ಣ ಗೋಲಿ ಬಜ್ಜಿಗಳು ಬರುತ್ತವೆ, ಆದ್ದರಿಂದ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಇದು ತುಂಬಾ ಅನುಕೂಲಕರವಾಗಿದೆ. ಒಂದು ಕಪ್ ಕಾಫಿ ಅಥವಾ ಚಹಾ ಗೋಲಿ ಬಜ್ಜಿಯೊಂದಿಗೆ ಸಂಜೆ ತಿಂಡಿಗಳಾಗಿ ಸವಿಯಲು ಚೆಂದವಾಗಿರುತ್ತದೆ . ಗೋಲಿ ಬಜ್ಜಿ ಸಂಪೂರ್ಣವಾಗಿ ಸಸ್ಯಾಹಾರಿ ಮತ್ತು ಇನ್ನೂ ಬಿಸಿ ಇರುವಾಗಲೇ ತಿನ್ನುವುದಕ್ಕೆ ಹೆಚ್ಚು ರುಚಿಕರವಾಗಿರುತ್ತದೆ.
ಗೋಲಿ ಬಜ್ಜಿ ಎಲ್ಲೆಲ್ಲಿ ಸಿಗುತ್ತದೆ: ಈ ಗೋಲಿ ಬಜ್ಜಿಯು ರಾಜ್ಯದಾದ್ಯಂತ ಉಡುಪಿ ರೆಸ್ಟೋರೆಂಟ್ ಗಳಲ್ಲಿ ದೊರೆಯುತ್ತದೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಾಗಿ ಈ ಗೋಲಿ ಬಜ್ಜಿಯನ್ನು ಕರಾವಳಿ ಕರ್ನಾಟಕದ ಹೆಚ್ಚಿನ ರೆಸ್ಟೋರೆಂಟ್ ಗಳಲ್ಲಿ ನೀಡಲಾಗುತ್ತದೆ .