ಪಡ್ಡು ಎಂದೂ ಕರೆಯಲ್ಪಡುವ ಗುಳಿಯಪ್ಪ ದಕ್ಷಿಣ ಭಾರತದಲ್ಲಿ ಜನಪ್ರಿಯ ಖಾದ್ಯವಾಗಿದ್ದು, ಇದನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಪನಿಯರಂ (ತಮಿಳುನಾಡು) ಮತ್ತು ಪೊಂಗನಾಲು (ತೆಲಂಗಾಣ, ಆಂಧ್ರ ಪ್ರದೇಶ) ಇತರ ಜನಪ್ರಿಯ ಹೆಸರುಗಳು. ಗುಳಿಯಪ್ಪ ಆಸಕ್ತಿದಾಯಕ ಉಪಹಾರ ಪದಾರ್ಥವಾಗಿದ್ದು, ವಿಶೇಷವಾಗಿ ಮಕ್ಕಳಿಗೆ ಅದರ ಸಣ್ಣ ಗಾತ್ರ, ಚೆಂಡಿನ ಆಕಾರ ಮತ್ತು ಒಳಗೆ ತುಂಬಿಸಿದ ತರಕಾರಿಯಿಂದಾಗಿ ಬಹಳ ಇಷ್ಟವಾಗುತ್ತದೆ.
ತಯಾರಿ: ವಿಶೇಷ ಕಾವಲಿಯಲ್ಲಿ ದೋಸೆ ಹಿಟ್ಟನ್ನು ತುಂಬಿ ಕಾಯಿಸುವ ಮೂಲಕ ಗುಳಿಯಪ್ಪ ತಯಾರಿಸಲಾಗುತ್ತದೆ. ಕತ್ತರಿಸಿದ ಈರುಳ್ಳಿ, ತರಕಾರಿಗಳನ್ನು ಹೆಚ್ಚಿನ ರುಚಿಗಾಗಿ ಹಿಟ್ಟಿಗೆ ಸೇರಿಸಲಾಗುತ್ತದೆ. ಗುಳಿಯಪ್ಪಕ್ಕೆ ಬಳಸುವ ಕಾವಲಿ ಹಲವು ಕುಳಿಗಳನ್ನು ಹೊಂದಿದ್ದು ಈ ಗೋಲಾಕಾರದ ಕುಳಿಗಳಲ್ಲಿ ಹಿಟ್ಟು ಸುರಿದು ಬಿಸಿ ಮಾಡಿದಾಗ, ಚೆಂಡಿನ ಆಕಾರದ ಗುಳಿಯಪ್ಪ ರೂಪುಗೊಳ್ಳುತ್ತದೆ.
ಗುಳಿಯಪ್ಪವನ್ನು ಹೆಚ್ಚಾಗಿ ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬಾರ್‌ನೊಂದಿಗೆ ಬಡಿಸಲಾಗುತ್ತದೆ. ಗುಳಿಯಪ್ಪವನ್ನು ಇನ್ನೂ ಬಿಸಿಯಾಗಿರುವಾಗಲೇ ತಿನ್ನುವುದು ಉತ್ತಮ. ಗುಳಿಯಪ್ಪ ಮಾಡುವ ಕಾವಲಿಯಲ್ಲಿ ಒಂದೇ ಸಲಕ್ಕೆ ೭, ೯ ಅಥವಾ ಇನ್ನೂ ಹೆಚ್ಚು ಗುಳಿಯಪ್ಪಗಳನ್ನು ಒಟ್ಟಿಗೆ ಪಡೆಯಬಹುದಾಗಿದೆ. ಇದರಿಂದ ಸ್ನೇಹಿತರಲ್ಲಿ ಅಥವಾ ಮನೆ ಮಂದಿಯೊಡನೆ ಹಂಚಿಕೊಂಡು ತಿನ್ನಲು ಸುಲಭವಾಗುತ್ತದೆ.
ಇತರ ತಿನಿಸುಗಳು: ಗುಳಿಯಪ್ಪ ಮಾರಾಟ ಮಾಡುವ ಉಪಾಹಾರ ಗೃಹಗಳು ಸೆಟ್ ದೋಸೆ, ನೀರ್ ದೋಸೆ, ಮೈಸೂರು ಮಸಾಲೆ ದೋಸೆಗಳನ್ನೂ ತಯಾರಿಸುತ್ತಿರಬಹುದು. ಈ ರುಚಿಕರವಾದ ಉಪಹಾರ ಭಕ್ಷ್ಯಗಳನ್ನು ಸಹ ರುಚಿ ನೋಡಬಹುದಾಗಿದೆ.
ಗುಳಿಯಪ್ಪಎಲ್ಲಿ ಸಿಗುತ್ತದೆ?: ಉಪಾಹಾರದ ಸಮಯದಲ್ಲಿ ಗುಳಿಯಪ್ಪ ಕರಾವಳಿ ಕರ್ನಾಟಕ ಉಪಾಹಾರ ಗೃಹಗಳಲ್ಲಿ ಸಾಮಾನ್ಯವಾಗಿ ಲಭ್ಯವಿರಲಿದೆ. ತಮಿಳುನಾಡು, ಆಂಧ್ರ ಅಥವಾ ಕರಾವಳಿ ಕರ್ನಾಟಕ ಶೈಲಿಯ ಆಹಾರವನ್ನು ಪೂರೈಸುವ ಬೆಂಗಳೂರಿನ ಉಪಾಹಾರ ಗೃಹಗಳಲ್ಲಿ ಸಹ ಗುಳಿಯಪ್ಪ ಸಿಗಬಹುದಾಗಿದೆ.