ಪತ್ರೊಡೆ
ಕೆಸುವಿನ ಎಲೆಯಲ್ಲಿ ತಯಾರಿಸುವ ಕರಾವಳಿ ಕರ್ನಾಟಕದ ವಿಶಿಷ್ಟ ತಿನಿಸಾಗಿದೆ. ಬನ್ನಿರಿ, ಹಾಗಾದ್ರೆ ಪತ್ರೊಡೆ ಹೇಗೆ ಮಾಡುತ್ತಾರೆ ಮತ್ತು ಕೆಸುವಿನ ಎಲೆ ಬಗ್ಗೆ ತಿಳಿದುಕೊಳ್ಳೋಣ!
ತಯಾರಿಕೆ: ಪತ್ರೊಡೆ ಎಲೆಗಳು ಸಾಮಾನ್ಯವಾಗಿ ಕರಾವಳಿ ಕರ್ನಾಟಕದ ಸಿಹಿ ನೀರಿರುವ ಪ್ರದೇಶದ ಸುತ್ತಮುತ್ತಲು ಕಂಡುಬರುತ್ತವೆ. ಪತ್ರೊಡೆಗೆ ಯೋಗ್ಯವಾದ ಕೆಸುವಿನ ಎಲೆಗಳನ್ನು ಆರಿಸಿ ಪತ್ರೊಡೆ ಮಾಡಲು ಉಪಯೋಗಿಸುತ್ತಾರೆ. ಇದರಲ್ಲಿ ಪರಿಣಿತಿ ಪಡೆದವರು ಮಾತ್ರ ಸರಿಯಾದ ಎಲೆಗಳನ್ನು ಆರಿಸಿ ತೆಗೆಯುತ್ತಾರೆ. ಎಲೆಗಳು ತೀರ ಎಳೆಯದು ಮತ್ತು ತೀರ ಬಲಿತಿದ್ದವು ಆಗಿರಬಾರದು.
ಆರಿಸಿ ತಂದ ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ಮೇಲೆ ಅಕ್ಕಿಹಿಟ್ಟನ್ನು ಹಚ್ಚಿ, ಉದ್ದಿನ ಹಿಟ್ಟು, ಮಸಾಲೆ, ಹುಣಸೆಹಣ್ಣಿನ ರಸ ಮತ್ತು ಬೆಲ್ಲವನ್ನು ಚೆನ್ನಾಗಿ ಕಲಿಸಿ ಸವರಬೇಕು. ಹೀಗೆ ಒಂದರ ಮೇಲೊಂದು ಎಲೆಗಳನ್ನು ಇಡುತ್ತ ಮೇಲಿನ ಮಸಾಲೆಯನ್ನು ಹಚ್ಚಿ ತಯಾರಾದ ಎಲೆಗಳನ್ನು ಸುತ್ತಿ ದೊಡ್ಡ ಕುಕ್ಕರಿನಲ್ಲಿ ಹಬೆಯಲ್ಲಿ ಬೇಯಿಸಬೇಕು.
ತುರಿಕೆಯ ಗುಣ: ಸಂಸ್ಕರಿಸದ ಪತ್ರೊಡೆಯ ಹಸಿಎಲೆಗಳನ್ನು ತಿನ್ನಬಾರದು. ಬೇಯಿಸಿದ ನಂತರವೂ ಕೂಡ ಪತ್ರೊಡೆಯ ಎಲೆಗಳು ನಾಲಿಗೆಯ ಮೇಲೆ ತುರಿಕೆಯನ್ನು ಉಂಟುಮಾಡುತ್ತದೆ. ಈ ತುರಿಕೆಯನ್ನು ತಡೆಗಟ್ಟಲು ಪತ್ರೊಡೆ ಜೊತೆಗೆ ಸಾಮಾನ್ಯವಾಗಿ ಕೊಬ್ಬರಿಎಣ್ಣೆ ಮತ್ತು ಬೆಲ್ಲವನ್ನು ಉಪಯೋಗಿಸುವರು. ಪತ್ರೊಡೆಯ ಸ್ವಾದವು ಹುಳಿಯಾಗಿರುತ್ತದೆ. ಬೆಲ್ಲವನ್ನು ಸೇರಿಸಿ ಸಿಹಿಸ್ವಾದ ಬರುವಂತೆ ಮಾಡುತ್ತಾರೆ.
ಪತ್ರೊಡೆಯನ್ನು ಅದರ ಮೂಲ ರೂಪವಾದ ಕೆಸುವಿನ ಎಲೆಗಳನ್ನು ಅಕ್ಕಿಹಿಟ್ಟಿನಲ್ಲಿ ಅದ್ದಿ ಬೇಯಿಸಿ ಕೊಡುತ್ತಾರೆ, ಇಲ್ಲವೆ ಸಣ್ಣದಾಗಿ ತುಂಡು ಮಾಡಿ ಅರಿದು ಉಳಿದ ಸಾಂಪ್ರದಾಯಿಕ ತಿನಿಸುಗಳ ಜೊತೆಗೆ ಕೊಡುತ್ತಾರೆ.
ಪತ್ರೊಡೆ ಎಲ್ಲಿ ಸಿಗುತ್ತದೆ: ಪತ್ರೊಡೆಯು ಕರಾವಳಿ ಕರ್ನಾಟಕದ ಪಟ್ಟಣಗಳಾದ ಮಂಗಳೂರು, ಉಡುಪಿ, ಕುಂದಾಪುರ ಹೀಗೆ ಹಲವಾರು ಉಪಹಾರ ಗೃಹಗಳಲ್ಲಿ ದೊರೆಯುತ್ತದೆ.
ಬೆಂಗಳೂರಿನಲ್ಲಿ ಪತ್ರೊಡೆಯನ್ನು ಸವಿಯಬೇಕಾದರೆ ಕರಾವಳಿ ಕರ್ನಾಟಕದ ದರ್ಶಿನಿಗಳಾದ – ಕಮರ್ಷಿಯಲ್ ಸ್ಟ್ರೀಟ್ ನ ವೂಡಿಸ್ ನಲ್ಲಿ, ಹಲಸೂರಿನ ಮಂಗಳೂರು ಪರ್ಲ್ ನಲ್ಲಿ, ರೆಸಿಡೆನ್ಸಿ ರಸ್ತೆಯಲ್ಲಿರುವ ಕರಾವಳಿರೆಸ್ಟೋರೆಂಟ್ ನಲ್ಲಿ, ಮಲ್ಲೇಶ್ವರಂ ನಲ್ಲಿರುವ ನಮ್ಮ ಕುಡ್ಲಾ ಎಂಬ ಜನಪ್ರಿಯ ದರ್ಶಿನಿಗಳಲ್ಲಿ ಸಿಗುತ್ತದೆ.