ಕಂಸಾಳೆ ನೃತ್ಯ ಮೈಸೂರು ಕರ್ನಾಟಕ (ಮೈಸೂರು, ನಂಜನಗುಡು, ಕೊಳ್ಳೆಗಾಲ ಹಾಗೂ ಸುತ್ತ ಮುತ್ತಲಿನ ಭಾಗದಲ್ಲಿ) ಪ್ರಚಲಿತವಿರುವ ನೃತ್ಯ ಪ್ರಕಾರವಾಗಿದೆ.
ಕಂಸಾಳೆ ಎಂದರೆ ಏನು?
ತಾಮ್ರದಿಂದ ಮಾಡಲ್ಪಡುವ ಕಂಸಾಳೆ ಎಂಬ ಪರಿಕರ ಕಂಸಾಳೆ ನೃತ್ಯದ ಪ್ರಮುಖ ಆಕರ್ಷಣೆ. ವೃತ್ತಾಕಾರದ ಈ ಪರಿಕರದಲ್ಲಿ ಎರಡು ಭಾಗಗಳಿದ್ದು ಮಧ್ಯದಲ್ಲಿ ಸ್ವಲ್ಪ ಉಬ್ಬಿರುವ ಇವನ್ನು ಅಂಗೈಯಲ್ಲಿ ಹಿಡಿಯಬಹುದಾಗಿದೆ. ಒಂದನ್ನು ಇನ್ನೊಂದಕ್ಕೆ ಸ್ಪರ್ಶಿಸಿದಾಗ ಇಂಪಾದ ಶಬ್ದ ಹೊರಬರುತ್ತದೆ.
ಕಂಸಾಳೆ ನೃತ್ಯ : ಕಲಾವಿದರು ಕಂಸಾಳೆಯ ಎರಡು ಭಾಗಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಹಾಡು ಕುಣಿತದ ವೇಳೆ ಕಂಸಾಳೆಯನ್ನು ಲಯಬದ್ಧವಾಗಿ ಸ್ಪರ್ಶಿಸಿ ಶಬ್ದ ಬರಿಸುತ್ತಾರೆ. ಎಂಟರಿಂದ ಹನ್ನೆರಡು ಜನರಿರಬಹುದಾದ ಕಂಸಾಳೆ ನೃತ್ಯ ತಂಡದ ಕುಣಿತ ನೋಡುವುದು ಒಂದು ಸುಂದರ ಅನುಭವ. ಮಹದೇಶ್ವರ ಅಥವಾ ಇತರ ದೇವರನ್ನು ಹಾಡು, ಕುಣಿತಗಳ ಮೂಲಕ ಹೊಗಳಿ ದೇವರ ಆಶೀರ್ವಾದ ಕೋರಲಾಗುತ್ತದೆ.
ಹಲು ಕುರುಬ ಸಮುದಾಯದ ಪುರುಷರು ಕಂಸಾಳೆ ನೃತ್ಯಕ್ಕೆ ಪ್ರಸಿದ್ದರು. ಈ ಸಮುದಾಯ ಶಿವನನ್ನು ಹೆಚ್ಚಾಗಿ ಆರಾಧಿಸುತ್ತದೆ. ಮಲೆ ಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಕಂಸಾಳೆ ನೃತ್ಯದ ಆಚರಣೆ ಅತಿ ಹೆಚ್ಚು. ಕಂಸಾಳೆ ನೃತ್ಯ ಹಲವು ಶತಮಾನಗಳಿಂದ ಆಚರಣೆಯಲ್ಲಿದೆ.
ಕಂಸಾಳೆ ನೃತ್ಯ ಎಲ್ಲಿ ನೋಡಬಹುದು?
ಮಲೆ ಮಹದೇಶ್ವರ ಬೆಟ್ಟದ ಮೇಲಿರುವ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಕಂಸಾಳೆ ನೃತ್ಯವನ್ನು ತಪ್ಪದೆ ನೋಡಬಹುದು. ಮೂರು ದಿನಗಳ ಈ ಜಾತ್ರೆ ದೀಪಾವಳಿ ಸಮಯದಲ್ಲಿ ನಡೆಯುತ್ತದೆ. ಇದಲ್ಲದೆ ಮೈಸೂರು ಕರ್ನಾಟಕ ಭಾಗದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಉತ್ಸವಗಳಲ್ಲಿ ಕಂಸಾಳೆ ನೃತ್ಯ ನೋಡಲು ಸಿಗಬಹುದು. ಹಲವು ಕನ್ನಡ ಚಲನಚಿತ್ರಗಳಲ್ಲಿ (ಉದಾ: ಶಿವರಾಜಕುಮಾರ್ ಅಭಿನಯದ ಜೋಗಿ) ಕಂಸಾಳೆ ನೃತ್ಯ ಇರುವ ಹಾಡುಗಳಿವೆ.