Karnataka Tourism
GO UP
Image Alt

ಕರ್ನಾಟಕದಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳು
ಕರ್ನಾಟಕದಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳು

ಕರ್ನಾಟಕದಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳು

ಹೆಮ್ಮೆಯ ಭಾರತೀಯರಾಗಿ, ನಾವು ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಈ ದಿನ ಜಗತ್ಪ್ರಸಿದ್ಧ ವಿಜ್ಞಾನಿ ಡಾ ಸಿ ವಿ ರಾಮನ್ ರ ಹುಟ್ಟುಹಬ್ಬದ ದಿನವಾಗಿದೆ. ಅವರು ತಮ್ಮ ರಾಮನ್ ಎಫೆಕ್ಟ್ ಗಾಗಿ  1930 ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ ಆಗಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅವರ ಸ್ಮರಣಾರ್ಥವಾಗಿ ಫೆಬ್ರುವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸುತ್ತೇವೆ.  ವಿಜ್ಞಾನದ ಮಹತ್ವ ಮತ್ತು ಅದರ ಅನ್ವಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.ಡಾ ಸಿ ವಿ ರಾಮನ್ ಅವರ ಗೌರವಾರ್ಥವಾಗಿ ವಿಜ್ಞಾನ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಲು ಕರ್ನಾಟಕಕ್ಕಿಂತ ಉತ್ತಮವಾದ ಸ್ಥಳ ಯಾವುದಿದೆ? ಹೀಗಾಗಿ ಪ್ರವಾಸಿಗರು  ಕರ್ನಾಟಕದಲ್ಲಿರುವ ವಿಜ್ಞಾನ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವುದನ್ನು  ತಮ್ಮ ಪ್ರವಾಸೋದ್ಯಮದ ಉದ್ದೇಶಗಳಲ್ಲಿ ಒಂದಾಗಿ ಯೋಜಿಸಬೇಕು. ನಿಮ್ಮ ಅನುಕೂಲಕ್ಕಾಗಿ ಇಲ್ಲಿ ಕರ್ನಾಟಕದಲ್ಲಿರುವ ವಿಜ್ಞಾನ ವಸ್ತುಸಂಗ್ರಹಾಲಯಗಳ ಪಟ್ಟಿಯನ್ನು ನೀಡಲಾಗಿದೆ.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ – ಬೆಂಗಳೂರು

ನೀವು  ರೈಟ್ ಸಹೋದರರ ಮೊದಲ ವಿಮಾನವನ್ನು ನೋಡಲು ಬಯಸುವಿರಾ? ಸಾಧ್ಯವಿಲ್ಲ ಅಲ್ಲವೇ? ಆದರೆ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂನಲ್ಲಿ ನೀವು ಮೊದಲ ಪ್ರಾಯೋಗಿಕ ವಿಮಾನವಾದ ಫ್ಲೈಯರ್ 1 ರ 1:1 ಪ್ರತಿಕೃತಿಯನ್ನು ನೋಡಬಹುದು. ಹೌದು. ನೀವು ನೋಡಬಹುದು  ಈ ಬೃಹತ್ ಬಹುಮಹಡಿ ವಸ್ತುಸಂಗ್ರಹಾಲಯವನ್ನು 1962 ರಲ್ಲಿ ಅಂದಿನ ಪ್ರಧಾನಿ ಪಂ. ಜವಾಹರಲಾಲ್ ನೆಹರು ಅವರು ಉದ್ಘಾಟಿಸಿದರು. ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ವಸ್ತುಸಂಗ್ರಹಾಲಯವು ವಿಜ್ಞಾನ ಮತ್ತು ತಂತ್ರಜ್ಞಾನ ಗ್ಯಾಲರಿಗಳು, ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಪ್ರದರ್ಶನಗಳು ಮತ್ತು ಪ್ರಕಟಣೆಗಳ ಮೂಲಕ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ.ಈ ಅದ್ಭುತವಾದ ವಸ್ತುಸಂಗ್ರಹಾಲಯವನ್ನು ಆಧುನಿಕ ಕರ್ನಾಟಕದ ವಾಸ್ತುಶಿಲ್ಪಿ ಭಾರತ ರತ್ನ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವಾರ್ಧವಾಗಿ ಸಮರ್ಪಿಸಲಾಗಿದೆ.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಹಲವಾರು ಪ್ರದರ್ಶನ ಸಭಾಂಗಣಗಳಿವೆ ಆದರೆ ಮುಖ್ಯ ಆಕರ್ಷಣೆಗಳಲ್ಲಿ ಎಂಜಿನ್ ಹಾಲ್ ಒಂದು- ಇದು  ವಸ್ತುಗಳು ಹೇಗೆ ಕೆಲಸ ಮಾಡುತ್ತವೆ, ಎಲೆಕ್ಟ್ರಾನಿಕ್ಸ್, ಫನ್ ಸೈನ್ಸ್, ಸ್ಪೇಸ್ ಟೆಕ್ನಾಲಜಿ, ಬಯೋಟೆಕ್ನಿಕಲ್ ರಿವ್ಯೂಲೇಷನ್, ಎಲೆಕ್ಟ್ರಾನಿಕ್ಸ್ ಹಾಲ್, ಮಕ್ಕಳಿಗಾಗಿ ವಿಜ್ಞಾನ, ಡೈನೋಸಾರ್ ಎನ್‌ಕ್ಲೇವ್ ಮತ್ತು ಗೋಳ ವಿಜ್ಞಾನ ಹೀಗೆ ಮುಂತಾದ ವಿಷಯಗಳ ಕುರಿತು ವಿಸೃತ ಮಾಹಿತಿಯನ್ನು ಒದಗಿಸುತ್ತದೆ.

ಈ ಆಸಕ್ತಿಕರ ವಿಜ್ಞಾನ ವಸ್ತುಸಂಗ್ರಹಾಲಯವನ್ನು ನೋಡಲು ನಿಮಗೆ ಕನಿಷ್ಟ 3-4 ಗಂಟೆಗಳು ಬೇಕಾಗಬಹುದು.

ಈ ವಸ್ತುಸಂಗ್ರಹಾಲಯವು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ, (ಮೆದುಳು ವಸ್ತು ಸಂಗ್ರಹಾಲಯ) ಬೆಂಗಳೂರು

ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ, ಬೆಂಗಳೂರು

ಒಬ್ಬ ಮನುಷ್ಯನ ಮೆದುಳನ್ನು 20 ವರ್ಷಗಳವರೆಗೆ ಸಂರಕ್ಷಿಸಬಹುದು ಎಂದು ನಿಮಗೆ ತಿಳಿದಿದೆಯೇ? ನೀವು  ಮಾನವನ ಮೆದುಳು ಹೇಗಿರುತ್ತದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ?

ಹಾಗಿದ್ದಲ್ಲಿ ನೀವು ಒಮ್ಮೆ ಬೆಂಗಳೂರಿನ ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ ಗೆ ಭೇಟಿ ನೀಡಲೇ ಬೇಕು.  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್ (ನಿಮ್ಹಾನ್ಸ್) ನಲ್ಲಿರುವ ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ ಸಂದರ್ಶಕರಿಗೆ ಮೆದುಳನ್ನು ನೋಡಲು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಮೆದುಳಿನ ಒಳನೋಟವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ವಸ್ತುಸಂಗ್ರಹಾಲಯವು 30 ವರ್ಷಗಳ ಸಂಶೋಧನೆಯ ಫಲವಾಗಿದೆ. ಇದು  600 ಕ್ಕೂ ಹೆಚ್ಚು ಮೆದುಳಿನ ಮಾದರಿಗಳ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ. ಶವಪರೀಕ್ಷೆಯ ಪ್ರಕ್ರಿಯೆಯಲ್ಲಿ ಈ ಮೆದುಳಿನ ಭಾಗಗಳನ್ನು ಅಧ್ಯಯನ ಮತ್ತು ಸಂಶೋಧನೆಗಾಗಿ ತೆಗೆದುಕೊಳ್ಳಲಾಗಿದೆ.  ಎಮ್ ಆರ್ ಐ ಮೂಲಕ ಗಮನಿಲಾಗದ ಕೆಲವು ಅಪರೂಪದ ಸಂಗತಿಗಳನ್ನು ಸಂಶೋಧನೆ ಮೂಲಕ ಕಂಡು ಕೊಳ್ಳಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ, ನೀವು ವಿವಿಧ ರೀತಿಯ ಮಿದುಳುಗಳು ಮತ್ತು ಅವುಗಳ ಸಮಸ್ಯೆಗಳನ್ನು ಕಾಣಬಹುದು. ಇದು ಮೆದುಳಿನ ವಿಜ್ಞಾನದ ಬಗ್ಗೆ ಮಕ್ಕಳಿಗೆ ಮತ್ತು ಇತರರಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ.

ನ್ಯೂರೋಪಾಥಾಲಜಿ ಮ್ಯೂಸಿಯಂ ಸಾರ್ವಜನಿಕರಿಗೆ ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ತೆರೆದಿರುತ್ತದೆ.

ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ವಸ್ತುಸಂಗ್ರಹಾಲಯ- ಮಣಿಪಾಲ್ ವಿಶ್ವವಿದ್ಯಾಲಯ

ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ವಸ್ತುಸಂಗ್ರಹಾಲಯ- ಮಣಿಪಾಲ್ ವಿಶ್ವವಿದ್ಯಾಲಯ

ಈ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರದ ವಸ್ತುಸಂಗ್ರಹಾಲಯವನ್ನು 60 ರ ದಶಕದ ಆರಂಭದಲ್ಲಿ ಖ್ಯಾತ ಅಂಗರಚನಾಶಾಸ್ತ್ರಜ್ಞ ಡಾ ಎಸ್ ಎಸ್  ಗಾಡ್ಬೋಲ್ ಅವರು ಪ್ರಾರಂಭಿಸಿದರು. ವಸ್ತುಸಂಗ್ರಹಾಲಯವು ಸುಮಾರು 3000 ಮೂಲ ಮಾದರಿಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದು ಜ್ಞಾನದ ಉಗ್ರಾಣವಾಗಿದೆ ಮತ್ತು ವಿದ್ಯಾರ್ಥಿಗಳು ಮತ್ತು ಸಂದರ್ಶಕರಿಗೆ ಅತ್ಯುತ್ತಮ ಕಲಿಕಾ ಕೇಂದ್ರವಾಗಿದೆ. ವಸ್ತುಸಂಗ್ರಹಾಲಯವನ್ನು ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ಎಂಬ ಎರಡು ಮುಖ್ಯ ಘಟಕಗಳಾಗಿ ವಿಂಗಡಿಸಲಾಗಿದೆ. ಅಂಗರಚನಾಶಾಸ್ತ್ರ ವಿಭಾಗವು ಸಾಮಾನ್ಯ ಮಾನವ ದೇಹದ ಭಾಗಗಳು ಮತ್ತು ಅಂಗಗಳ ಮಾದರಿಗಳನ್ನು ಪ್ರದರ್ಶಿಸುತ್ತದೆ, ಇದನ್ನು  ಯಾವುದೇ ವಿಜ್ಞಾನದ ಹಿನ್ನೆಲೆಯಿಲ್ಲದ ಜನರು ಸಹ ಅರ್ಥಮಾಡಿಕೊಳ್ಳಲು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ರೂಪಿಸಲಾಗಿದೆ. ತಲೆಯಿಂದ ಕಾಲ್ಬೆರಳ ವರೆಗೆ ಮಾನವ ದೇಹದ ಪ್ರತಿಯೊಂದು ಭಾಗವನ್ನು ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಾಣಿಗಳ ದೊಡ್ಡ ಸಂಗ್ರಹ, ಅವುಗಳ ಅಸ್ಥಿಪಂಜರ ಮತ್ತು ಮೂಳೆಗಳನ್ನು ಪ್ರದರ್ಶಿಸುವ ತುಲನಾತ್ಮಕ ವಿಭಾಗವು ನಿಮ್ಮನ್ನು ಖಂಡಿತವಾಗಿಯೂ  ವಿಸ್ಮಯಗೊಳಿಸುತ್ತದೆ.ಈ ವಸ್ತುಸಂಗ್ರಹಾಲಯವು ರೋಗಪೀಡಿತ ದೇಹದ ಭಾಗಗಳು ಮತ್ತು ಅಂಗಗಳನ್ನು ಒಳಗೊಂಡಿದ್ದು  ಇಲ್ಲಿ  ಜೀವನಶೈಲಿ ಸಂಬಂಧಿತ ಕಾಯಿಲೆಗಳ ವಿಭಾಗವು ಮಾನವರಲ್ಲಿ ಕಂಡುಬರುವ ರೋಗಗಳ ಮಾದರಿಗಳನ್ನು ಪ್ರದರ್ಶಿಸುತ್ತದೆ ಮತ್ತು ಗ್ರಾಫಿಕ್ಸ್ ಮತ್ತು ಇತರ ಮಾಹಿತಿಯ ಆಸಕ್ತಿದಾಯಕ ಪ್ರದರ್ಶನವು ಸಂದರ್ಶಕರನ್ನು ಹೆಚ್ಚು ಸಮಯವನ್ನು ಇಲ್ಲಿ  ಕಳೆಯುವಂತೆ ಮಾಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿರುವ ಎಚ್ ಎ ಎಲ್ ಏರೋನಾಟಿಕಲ್ ವಿಜ್ಞಾನ ವಸ್ತು ಸಂಗ್ರಹಾಲಯ

HAL Aeronautical Museum in Bangalore

ಬೆಂಗಳೂರಿನಲ್ಲಿರುವ HAL ಏರೋನಾಟಿಕಲ್ ಮ್ಯೂಸಿಯಂ

2001 ರಲ್ಲಿ ಸ್ಥಾಪಿತವಾದ ಎಚ್ ಎ ಎಲ್  ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಹತ್ತು ವಿಮಾನಗಳು ಮತ್ತು ಎರಡು ಮಾಕ್-ಅಪ್‌ಗಳನ್ನು ಹೊಂದಿರುವ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಾಯುಯಾನ ವಸ್ತುಸಂಗ್ರಹಾಲಯವಾಗಿದೆ. ಈ ವಿಜ್ಞಾನ ಕೇಂದ್ರದಲ್ಲಿ ನೀವು  ವಿಮಾನ ಮಾದರಿಗಳು, ವಿಮಾನ ಛಾಯಾಚಿತ್ರಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. HUL-26 ಪುಷ್ಪಕ್ ಮತ್ತು HAL ಬಸಂತ್ ಹೊರತುಪಡಿಸಿ ಹೆಚ್ಚಿನ ವಿಮಾನಗಳನ್ನು ಆವರಣದಲ್ಲಿಯೇ  ಪ್ರದರ್ಶಿಸಲಾಗಿದೆ.ಈ ಮ್ಯೂಸಿಯಂನ ಚಿತ್ರ ಗ್ಯಾಲರಿಯು ವೆಂಜನ್ಸ್ ಬಾಂಬರ್‌ಗಳು, ಡಕೋಟಾಗಳು, ಟೆಂಪೆಸ್ಟ್‌ಗಳು, ಡೆವೊನ್ಸ್, ವ್ಯಾಂಪೈರ್‌ಗಳು, ಗ್ನಾಟ್ಸ್ ಮತ್ತು ಮಾರುತ್‌ಗಳ ಚಿತ್ರಗಳನ್ನು ಒಳಗೊಂಡಿದೆ. ಸಂದರ್ಶಕರು ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮ್ಯೂಸಿಯಂನಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡವನ್ನು ಸಹ ಸ್ಥಾಪಿಸಲಾಗಿದೆ.
ಇಲ್ಲಿ ನೀವು  ಜಿ ಎಸ್ ಎಲ್ ವಿ  ಮತ್ತು ಪಿ ಎಸ್ ಎಲ್ ವಿ ಉಪಗ್ರಹ ಉಡಾವಣೆಯ ಮಾದರಿಯನ್ನು ಸಹ ನೋಡಬಹುದು. ಈ ವಸ್ತುಸಂಗ್ರಹಾಲಯವು ಸ್ಮರಣಿಕೆಗಳು, ಪೋಸ್ಟ್‌ಕಾರ್ಡ್‌ಗಳು ಮತ್ತು ಪೋಸ್ಟರ್‌ಗಳನ್ನು ಮಾರಾಟ ಮಾಡುವ ಸಣ್ಣ ಸ್ಮಾರಕ ಅಂಗಡಿಯನ್ನು ಸಹ ಹೊಂದಿದ್ದು ಇದು ಮಕ್ಕಳಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಲ್ಲಿ ನೀವು ವಿಮಾನ ಸಿಮ್ಯುಲೇಟರ್‌ಗಳು ಮತ್ತು ಏರೋ-ಮಾಡೆಲಿಂಗ್ ಕ್ಲಬ್ ಕೂಡ ಇವೆ.

ಈ ವಿಜ್ಞಾನ ವಸ್ತು ಸಂಗ್ರಹಾಲಯವು  ಎಲ್ಲ ದಿನಗಳಲ್ಲಿ  ಬೆಳಿಗ್ಗೆ 9.00 ರಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧಾರವಾಡ ವಿಜ್ಞಾನ ಕೇಂದ್ರ- ಧಾರವಾಡ

Dharwad Science Centre- Dharwad

ಧಾರವಾಡ ವಿಜ್ಞಾನ ಕೇಂದ್ರ- ಧಾರವಾಡ

ಈ ವಿಜ್ಞಾನ ಕೇಂದ್ರವನ್ನು ಧಾರವಾಡ ವಿಶ್ವವಿದ್ಯಾನಿಲಯ ಪ್ರಶಾಂತವಾದ ಕ್ಯಾಂಪಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇದು  ವಿದ್ಯಾರ್ಥಿಗಳು ಮತ್ತು ಸಂದರ್ಶಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಹರಡುವ ಗುರಿಯನ್ನು ಹೊಂದಿದೆ. ಕೇಂದ್ರವು ತನ್ನ ಪ್ರದರ್ಶನಗಳು, ಸೈನ್ಸ್ ಪಾರ್ಕ್ ಮತ್ತು ಇತರ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ತಲುಪುವ ಮತ್ತು  ಹೆಚ್ಚಿನ ವ್ಯಾಪ್ತಿಯನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಸರಿಸುಮಾರು 4000 ಚದರ ಮೀಟರ್‌ಗಳಲ್ಲಿ ನಿರ್ಮಿಸಲಾದ ಧಾರವಾಡ ವಿಜ್ಞಾನ ಕೇಂದ್ರವು ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ, ಜೈವಿಕ ಯಂತ್ರಗಳು ಮತ್ತು ವಿನೋದ ವಿಜ್ಞಾನಗಳ 3 ಪ್ರದರ್ಶನ ಗ್ಯಾಲರಿಗಳನ್ನು ಹೊಂದಿದೆ.

ಈ ಕೇಂದ್ರವು ಗುಮ್ಮಟ ತಾರಾಲಯ, ವಿಜ್ಞಾನ ಪ್ರದರ್ಶನ ಉಪನ್ಯಾಸ ಸಭಾಂಗಣ, ಮಕ್ಕಳ ಚಟುವಟಿಕೆ ಕಾರ್ನರ್, ಹವಾನಿಯಂತ್ರಿತ ಸಭಾಂಗಣ, 3-ಡಿ ಥಿಯೇಟರ್, ಗ್ರಂಥಾಲಯ-ಕಮ್-ಕಾನ್ಫರೆನ್ಸ್ ಹಾಲ್, ತಾತ್ಕಾಲಿಕ ಪ್ರದರ್ಶನ ಸ್ಥಳ ಮತ್ತು ಇತರ ಸಾರ್ವಜನಿಕ ಉಪಯುಕ್ತತೆಗಳನ್ನು ಹೊಂದಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಧಾರವಾಡ ವಿಜ್ಞಾನ ಕೇಂದ್ರವು ಬೆಳಿಗ್ಗೆ 10.00 ರಿಂದ ಸಂಜೆ 6.00 ರವರೆಗೆ ತೆರೆದಿರುತ್ತದೆ.

ಜಿಲ್ಲಾ ವಿಜ್ಞಾನ ಕೇಂದ್ರ – ಕಲಬುರಗಿ

District Science Centre - Kalaburagi

ಜಿಲ್ಲಾ ವಿಜ್ಞಾನ ಕೇಂದ್ರ – ಕಲಬುರಗಿ

ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವು 1984 ರಲ್ಲಿ ಪ್ರಾರಂಭವಾಯಿತು. ದಕ್ಷಿಣ ಭಾರತದಲ್ಲಿ ಈ ರೀತಿಯ ವಿಜ್ಞಾನ ಕೇಂದ್ರ  ಮೊದಲನೆಯದು.ಕೇಂದ್ರವು  ಪ್ರಯೋಗಾಲಯಗಳು, ಡಿಜಿಟಲ್ ತಾರಾಲಯ, 3D ಥಿಯೇಟರ್, ಸೈನ್ಸ್ ಪಾರ್ಕ್, ಡೈನೋಸಾರ್ ಪಾರ್ಕ್ ಮತ್ತು ಅನೇಕ ಸಂವಾದಾತ್ಮಕ ಪ್ರದರ್ಶನಗಳೊಂದಿಗೆ ಗ್ಯಾಲರಿಗಳ ಮೂಲಕ ವಿಜ್ಞಾನವನ್ನು ಅನ್ವೇಷಿಸಲು  ಪರಿಪೂರ್ಣ ವಾತಾವರಣವನ್ನು ಒದಗಿಸುತ್ತದೆ. ಈ ಕೇಂದ್ರವು ವಿನೋದ ವಿಜ್ಞಾನ, ಜನಪ್ರಿಯ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಗಣಿತದ ಗ್ಯಾಲರಿಗಳನ್ನು ಹೊಂದಿದೆ. ಅಷ್ಟೇ ಅಲ್ಲ ಡಿಜಿಟಲ್ ಪ್ಲಾನೆಟೋರಿಯಂ ಪ್ರವಾಸಿಗರಿಗೆ ಬ್ರಹ್ಮಾಂಡದ ಅದ್ಭುತಗಳ ಕುರಿತು  ಕಲಿಯಲು ಮತ್ತು ತಿಳಿಯಲು ಅವಕಾಶ ಮಾಡಿಕೊಡುತ್ತದೆ.  ಈ ಕೇಂದ್ರದಲ್ಲಿ ಸಮುದಾಯ ತರಬೇತಿ ಕಾರ್ಯಕ್ರಮಗಳು, ಶಿಕ್ಷಕರ ತರಬೇತಿ ಕಾರ್ಯಕ್ರಮಗಳು, ಗ್ರಾಮೀಣ ವಿಜ್ಞಾನ ಶಿಬಿರ, ಕಾರ್ಯಾಗಾರಗಳು, ರಜೆಯ ಹವ್ಯಾಸ ಕೋರ್ಸ್‌ಗಳು, ವಿಜ್ಞಾನ ಮೇಳ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯ ವಿಜ್ಞಾನ ಉಪನ್ಯಾಸಗಳು, ವಿಜ್ಞಾನ ಪ್ರದರ್ಶನ ಉಪನ್ಯಾಸಗಳು, ಸ್ಮರಣಾರ್ಥ ದಿನಗಳು, ಪ್ರದರ್ಶನಗಳು, ವಿಜ್ಞಾನ ರಸಪ್ರಶ್ನೆಗಳು, ವಿಜ್ಞಾನ ಸೆಮಿನಾರ್‌ಗಳು ಮತ್ತು ಇನ್ನಷ್ಟು ಆಕಾಶ ವೀಕ್ಷಣಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಜಿಲ್ಲಾ ವಿಜ್ಞಾನ ಕೇಂದ್ರದ ಸಮಯ ಬೆಳಿಗ್ಗೆ 10.30 ರಿಂದ ಸಂಜೆ 06.30 ರವರೆಗೆ

ಇತರ ಸ್ಥಳಗಳನ್ನು ಅನ್ವೇಷಿಸಿ