ಸಾಥೋಡಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ಒಂದು ಪ್ರಾಚೀನ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾಥೋಡಿ ಜಲಪಾತವನ್ನು ನಿರ್ಮಿಸುತ್ತವೆ ಮತ್ತು ಅಂತಿಮವಾಗಿ ಕಾಳಿ ನದಿಯನ್ನು ಸೇರುತ್ತದೆ. ನಿತ್ಯಹರಿದ್ವರ್ಣ ಕಾಡುಗಳ ಮಧ್ಯದಲ್ಲಿ ಎತ್ತರದ ಬಂಡೆಗಳ ಮೇಲೆ ಹರಿಯುವ, 50 ಅಡಿ (15 ಮೀಟರ್) ಎತ್ತರದ ಸಾಥೋಡಿ ಜಲಪಾತವು ವಿಹಂಗಮ ನೋಟವನ್ನುನೀಡುತ್ತದೆ.
ಸಾಥೋಡಿ ಜಲಪಾತಕ್ಕೆ ಭೇಟಿ ನೀಡಲು ಕಾರಣಗಳು
- ವರ್ಷದುದ್ದಕ್ಕೂ ಸಕ್ರಿಯ: ಸಾಥೋಡಿ ಜಲಪಾತವು ದಟ್ಟವಾದ ಪಶ್ಚಿಮ ಘಟ್ಟದಲ್ಲಿದೆ ಮತ್ತು ವರ್ಷದ ಬಹುಪಾಲು ಸಕ್ರಿಯವಾಗಿದ್ದು ಯಾವುದೇ ತಿಂಗಳಿನಲ್ಲಿ ಹೋಗಬಹುದಾಗಿದೆ.
- ಈಜಲು ಸುರಕ್ಷಿತ: ಸಾಥೋಡಿ ಜಲಪಾತದ ಕೆಳಗಿರುವ ನೀರು ತುಂಬಾ ಆಳವಾಗಿಲ್ಲ ಹಾಗಾಗಿ ಮುಳುಗೇಳಲು ಸೂಕ್ತವಾಗಿದೆ. ಆದಾಗ್ಯೂ, ಮಕ್ಕಳೊಂದಿಗೆ ಭೇಟಿಕೊಡುವಾಗ ಎಚ್ಚರಿಕೆಯಿಂದ ಇರುವುದು ಒಳಿತು.
- ವಿಹಾರ ತಾಣ: ಸುಂದರವಾದ ಪರಿಸರ, ದಟ್ಟ ಕಾಡುಗಳಿರುವ ಕಾರಣ ಸಾಥೋಡಿ ಜಲಪಾತ ಕುಟುಂಬದೊಂದಿಗೆ ವಿಹಾರಕ್ಕೆ ಸೂಕ್ತವಾದ ತಾಣವಾಗಿದೆ.
ಹತ್ತಿರದಲ್ಲಿ ಇನ್ನೇನಿದೆ?: ದಾಂಡೇಲಿ (80 ಕಿ.ಮೀ), ಅಟ್ಟಿವೇರಿ ಪಕ್ಷಿಧಾಮ (70 ಕಿ.ಮೀ) ಮತ್ತು ಉಳವಿ ಗುಹೆಗಳು (88 ಕಿ.ಮೀ) ಹತ್ತಿರದ ಕೆಲವು ಆಸಕ್ತಿದಾಯಕ ಸ್ಥಳಗಳಾಗಿವೆ.
ತಲುಪುವುದು ಹೇಗೆ: ಸಾಥೋಡಿ ಜಲಪಾತ ಬೆಂಗಳೂರಿನಿಂದ 452 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಕಾರವಾರದಿಂದ 90 ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ (97 ಕಿ.ಮೀ) ಮತ್ತು ಕಾರವಾರ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (9೦ ಕಿ.ಮೀ). ಯೆಲ್ಲಾಪುರ ತನಕ ಬಸ್ಸುಗಳು ಲಭ್ಯವಿದ್ದು, ಅಲ್ಲಿಂದ ಟ್ಯಾಕ್ಸಿಗಳನ್ನು ಬಳಸಿ ಸಾಥೋಡಿ ಜಲಪಾತ (27 ಕಿ.ಮೀ) ತಲುಪಬಹುದು.
ವಸತಿ: ಸಾಥೋಡಿ ಜಲಪಾತದ ಬಳಿ ಕೆಲವು ಹೋಂ ಸ್ಟೇ ಆಯ್ಕೆಗಳು ಲಭ್ಯವಿದೆ. ಯೆಲ್ಲಾಪುರ ನಗರ (27 ಕಿ.ಮೀ) ದಾಂಡೇಲಿ (80 ಕಿ.ಮೀ), ಹುಬ್ಬಳ್ಳಿ (97 ಕಿ.ಮೀ) ಮತ್ತು ಸಿರ್ಸಿ (75 ಕಿ.ಮೀ) ಯಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.


