ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿನ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತ ಇದಾಗಿದ್ದು ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿನಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲವು. ಶರಾವತಿ ನದಿ ಜೋಗದಲ್ಲಿ ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಪ್ರಮುಖ ಜಲಪಾತಗಳನ್ನು ಸೃಷ್ಟಿಸುತ್ತದೆ.
ಕನ್ನಡದ ಹಲವು ಹಾಡು, ಚಲನಚಿತ್ರಗಳಲ್ಲಿ ಜೋಗ ಜಲಪಾತದ ಉಲ್ಲೇಖವಿದೆ. “ಜೋಗದ ಸಿರಿ ಬೆಳಕಿನಲ್ಲಿ” ಎಂದು ಪ್ರಾರಂಭಗೊಳ್ಳುವ ನಿತ್ಯೋತ್ಸವ ಕವಿತೆ, “ಇರೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ” ಜೀವನ ಚೈತ್ರ ಚಿತ್ರದ ಹಾಡು ಇವುಗಳಲ್ಲಿ ಪ್ರಮುಖವಾದುದು. ಮುಂಗಾರು ಮಳೆ ಸಿನೆಮಾದಲ್ಲಿ ಜೋಗ ಜಲಪಾತದ ರಮಣೀಯ ದೃಶ್ಯಗಳಿವೆ. ಜೋಗದ ಸಮೀಪ ಇರುವ ಲಿಂಗನಮಕ್ಕಿ ಜಲಾಶಯ ನಾಡಿಗೆ ವಿದ್ಯುತ್ ಒದಗಿಸುತ್ತದೆ.
ಜೋಗ ಜಲಪಾತದ ಆಕರ್ಷಣೆಗಳು
ಭವ್ಯವಾದ ಜಲಪಾತ ವೀಕ್ಷಣೆ : ಸಂದರ್ಶಕರು ಎರಡು ತೆರೆದ ವೀಕ್ಷಣಾ ಸ್ಥಳಗಳಿಂದ ಜಲಪಾತಗಳನ್ನು ವೀಕ್ಷಿಸಬಹುದು (ಒಂದು ಮುಖ್ಯ ದ್ವಾರ ಮತ್ತು ಪಾರ್ಕಿಂಗ್ ಪ್ರದೇಶದ ಹತ್ತಿರ ಇದೆ ಮತ್ತು ಇನ್ನೊಂದು ಪ್ರವಾಸಿ ಬಂಗಲೆ (ಐಬಿ) ಬಳಿ). ಜಲಪಾತದಿಂದ ರಚಿಸಲ್ಪಟ್ಟ ನೀರಿನ ಘರ್ಜನೆ, ಪ್ರಕೃತಿಯ ಪ್ರಶಾಂತ ಹಸಿರು, ಮದ ನೀಡುವ ಮೋಡಗಳು ಸಂದರ್ಶಕರಿಗೆ ಜೋಗ ಜಲಪಾತದ ಸ್ಮರಣೀಯ ಅನುಭವವನ್ನು ನೀಡುತ್ತದೆ.
ಜೋಗ ಜಲಪಾತದ ಕೆಳಭಾಗಕ್ಕೆ ಚಾರಣ: ಸುರಕ್ಷಿತವಾಗಿದ್ದಾಗ (ಮುಂಗಾರು ನಂತರದ ಅಕ್ಟೋಬರ್-ಮೇ ತಿಂಗಳಲ್ಲಿ) ಪ್ರವಾಸಿಗರು 1400 ಮೆಟ್ಟಿಲುಗಳನ್ನು ಇಳಿದು ಕೆಳಗೆ ಜಲಪಾತಗಳ ತಳಕ್ಕೆ ಹೋಗಿ ಪ್ರಕೃತಿಯ ಸೌಂದರ್ಯ, ಶಕ್ತಿ ಮತ್ತು ಧ್ವನಿಯನ್ನು ಅತ್ಯುತ್ತಮವಾಗಿ ಆನಂದಿಸಬಹುದು.
ಶರಾವತಿ ಸಾಹಸ ಶಿಬಿರದಲ್ಲಿ ಚಟುವಟಿಕೆಗಳು: ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ಜೋಗ ಜಲಪಾತದ ಸಮೀಪ ಶರಾವತಿ ಸಾಹಸ ಶಿಬಿರವನ್ನು ನಿರ್ವಹಿಸುತ್ತಿದ್ದು ಚಾರಣ, ಪಕ್ಷಿ ವೀಕ್ಷಣೆ, ದೋಣಿ ಸವಾರಿ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. .
ಹತ್ತಿರದ ಆಕರ್ಷಣೆಗಳು: ಹೊನ್ನೆಮರಡು (ಜೋಗ ಜಲಪಾತದಿಂದ 20 ಕಿ.ಮೀ) ಪಿಕ್ನಿಕ್ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಸೂಕ್ತವಾದ ಹಿನ್ನೀರಿನ ಪ್ರದೇಶವಾಗಿದೆ. ಕೆಳದಿ (ಜೋಗ ಜಲಪಾತದಿಂದ 35 ಕಿ.ಮೀ) ಒಂದು ಐತಿಹಾಸಿಕ ತಾಣ.
ಎಲ್ಲಾ ಅಗತ್ಯ ಪ್ರವಾಸಿ ಸೌಲಭ್ಯಗಳು ಜೋಗ ಜಲಪಾತದಲ್ಲಿ ಲಭ್ಯವಿದೆ. ಮುಂಗಾರು ಸಮಯದಲ್ಲಿ ಜೋಗ ಜಲಪಾತಕ್ಕೆ ಭೇಟಿ ನೀಡದಿದ್ದರೆ ನಿಮ್ಮ ಕರ್ನಾಟಕ ಪ್ರವಾಸ ಅಪೂರ್ಣವಾಗಿರುತ್ತದೆ
ಜೋಗ ಜಲಪಾತ ತಲುಪುವುದು ಹೇಗೆ?
ತಾಳಗುಪ್ಪವು ಜೋಗ ಜಲಪಾತದಿಂದ 20 ಕಿ.ಮೀ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಪ್ರತಿದಿನ ರೈಲುಗಳನ್ನು ಹೊಂದಿದೆ. ಸಾಗರ (40 ಕಿ.ಮೀ) ಮತ್ತು ಶಿವಮೊಗ್ಗ (105 ಕಿ.ಮೀ) ಹತ್ತಿರದ ಪಟ್ಟಣಗಳು. ಜೋಗ ಜಲಪಾತ ಉತ್ತಮ ರಸ್ತೆ ಮತ್ತು ಸಾರ್ವಜನಿಕ ಸಾರಿಗೆಯ ಸಂಪರ್ಕ ಹೊಂದಿವೆ. ಜೋಗ ಜಲಪಾತವನ್ನು ಭೇಟಿ ಮಾಡಲು ಈ ಶಿವಮೊಗ್ಗ ಅಥವಾ ಸಾಗರ ಪಟ್ಟಣಗಳಿಂದ ಟ್ಯಾಕ್ಸಿ ಪಡೆಯಬಹುದು. ಹುಬ್ಬಳ್ಳಿ, ಮಂಗಳೂರು ಮತ್ತು ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಜೋಗ ಜಲಪಾತಕ್ಕೆ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ, (ಕ್ರಮವಾಗಿ 180, 210 ಮತ್ತು 250 ಕಿ.ಮೀ ದೂರದಲ್ಲಿದೆ)
ವಸತಿ ಸೌಲಭ್ಯ :
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜೋಗ ಜಲಪಾತದ ಸಮೀಪ ಹೋಟೆಲ್ ಮಯೂರವನ್ನು ನಡೆಸುತ್ತಿದೆ, ಇದು ಜೋಗ ಜಲಪಾತಕ್ಕೆ ಅತ್ಯಂತ ಹತ್ತಿರವಿರುವ ವಸತಿ ಸೌಕರ್ಯವಾಗಿದೆ. ಜಂಗಲ್ ಲಾಡ್ಜಸ್ ನಿರ್ವಹಿಸುತ್ತಿರುವ ಶರಾವತಿ ಸಾಹಸ ಶಿಬಿರವು ಕಾಟೇಜ್ ಶೈಲಿಯ ವಸತಿ ಸೌಕರ್ಯವನ್ನು ನೀಡುತ್ತದೆ. ಜೋಗ ಜಲಪಾತದಿಂದ 35 ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣದಲ್ಲಿ ಹಲವಾರು ಬಜೆಟ್ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ. ಅನೇಕ ಹೋಂ ಸ್ಟೇಗಳು ಜೋಗ ಜಲಪಾತ ಮತ್ತು ಸಾಗರ ನಗರದ ಸುತ್ತ ಮುತ್ತ ಲಭ್ಯವಿದೆ