912.04 ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ ಭಾರತದ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಬಂಡೀಪುರ ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ಅತಿದೊಡ್ಡ ವಾಸಸ್ಥಾನವಾಗಿದೆ. ಬಂಡಿಪುರಕ್ಕೆ ಮೈಸೂರಿಗೆ ಬಂದ ಬಹುತೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂಡೀಪುರವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ.
ವನ್ಯಜೀವಿಗಳು: ಬಂಡಿಪುರದಲ್ಲಿ ಕಾಣಬಹುದಾದ ವನ್ಯಜೀವಿಗಳಲ್ಲಿ ಹುಲಿಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ಚಿರತೆ, ಜಿಂಕೆ, ಕಡವೆಗಳು, ದೈತ್ಯ ಮಲಬಾರ್ ಅಳಿಲುಗಳು,ಕಾಡೆಮ್ಮೆಇತ್ಯಾದಿಗಳು ಸೇರಿವೆ.
ಬಂಡೀಪುರ ಅರಣ್ಯ ಸಫಾರಿ: ಅರಣ್ಯ ಇಲಾಖೆಯಿಂದ ಅರಣ್ಯ ಸಫಾರಿ ಪ್ರತಿದಿನ ಎರಡು ಬಾರಿ ನಡೆಸಲಾಗುತ್ತದೆ. ದೊಡ್ಡ ಗುಂಪುಗಳಲ್ಲಿನ ಸಂದರ್ಶಕರು ಅಗ್ಗದ ಮತ್ತು ಕಡಿಮೆ ಸಮಯದ (45-60 ನಿಮಿಷಗಳು) ಬಸ್ ಸಫಾರಿ ಆಯ್ದುಕೊಳ್ಳಬಹುದು, ಆದರೆ ಜೀಪ್ ಸಫಾರಿಗಳು ಸಣ್ಣ ಗುಂಪುಗಳಿಗೆ ಹೆಚ್ಚು ಸೂಕ್ತವಾಗಿವೆ ಮತ್ತು ದೀರ್ಘವಾದ (2 ಗಂಟೆಗಳು), ಹೆಚ್ಚು ವಿಶಿಷ್ಟ ಅನುಭವಕ್ಕಾಗಿ ಹೆಸರುವಾಸಿಯಾಗಿದೆ. ಎರಡೂ ಸಫಾರಿಗಳು ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಕ್ಯಾಮೆರಾಗಳಿಗೆ ಹೆಚ್ಚುವರಿ ಶುಲ್ಕವಿರುತ್ತದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯ / ಸೀಸನ್: ವರ್ಷದುದ್ದಕ್ಕೂ ಭೇಟಿ ಕೊಡಬಹುದಾದರೂ ಮುಂಗಾರು ನಂತರದ ಅಕ್ಟೋಬರ್-ಫೆಬ್ರವರಿ ಬಂಡೀಪುರಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರು ನಗರವು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (ಬಂಡೀಪುರದಿಂದ 73 ಕಿ.ಮೀ). ಮೈಸೂರಿನಿಂದ ಬಂಡೀಪುರ ತಲುಪಲು ಬಸ್ಸುಗಳು ಲಭ್ಯವಿವೆ ಅಥವಾ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.
ವಾಹನಗಳಿಗೆ ಡಿಕ್ಕಿ ಹೊಡೆಯುವುದರಿಂದ ಉಂಟಾಗುವ ಕಾಡು ಪ್ರಾಣಿಗಳ ಸಾವನ್ನು ತಡೆಗಟ್ಟಲು ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳನ್ನು ಅನುಮತಿಸಲಾಗುವುದಿಲ್ಲ.
ವಸತಿ: ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ರಾಷ್ಟ್ರೀಯ ಉದ್ಯಾನವನದ ಹೊರಗಡೆ ಬಂಡೀಪುರ ಸಫಾರಿ ಲಾಡ್ಜ್ ಅನ್ನು ನಡೆಸುತ್ತಿದೆ. ಕೆಲವು ಖಾಸಗಿ ರೆಸಾರ್ಟ್‌ಗಳು ಲಭ್ಯವಿವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳಿವೆ.