ಕಲ್ಲತ್ತಿಗಿರಿ (ಕಲ್ಹತ್ತಿ) ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ, ಸುಂದರ ದೇವಾಲಯ ಮತ್ತು ಜಲಪಾತವಾಗಿದೆ. ಕಲ್ಲತ್ತಿಗಿರಿ ಜಲಪಾತವು ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯಲ್ಲಿದೆ. ಕೆಮ್ಮಣ್ಣುಗುಂಡಿಗೆ ಹೋಗುವ ಹೆಚ್ಚಿನ ಪ್ರವಾಸಿಗರು ಕಲ್ಲತ್ತಿಗಿರಿ ಜಲಪಾತಕ್ಕೂ ಭೇಟಿನೀಡುತ್ತಾರೆ.
- ದೇವಾಲಯ: ಕಲ್ಲತ್ತಿಗಿರಿ ಜಲಪಾತದ ಪಕ್ಕದಲ್ಲಿಯೇ ವೀರಭದ್ರೇಶ್ವರ ದೇವಸ್ಥಾನವಿದೆ. ವೀರಭದ್ರೇಶ್ವರ ದೇವಸ್ಥಾನವನ್ನು ವಿಜಯನಗರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.
- ಕಲ್ಲಿನ ಆನೆಗಳು: ಕಲ್ಲಿನಿಂದ ಕೆತ್ತಿದ ಎರಡು ದೊಡ್ಡ ಆನೆಗಳು ದೇವಾಲಯದ ಪಕ್ಕದಲ್ಲಿ ನಿಂತಿರುವುದು ಕಂಡುಬರುತ್ತದೆ. ವೀರಭದ್ರೇಶ್ವರ ದೇವಸ್ಥಾನದ ಬಳಿಯಿರುವ ಬಂಡೆಗಳು ಆನೆಯ ಆಕಾರದಲ್ಲಿದೆ.
- ಜಲಪಾತ: ಆನೆ ಮುಖವಿರುವ ಬಂಡೆಯ ಮೇಲಿಂದ ಧುಮ್ಮಿಕ್ಕುವ ನೀರು ನೋಡುಗರನ್ನು ಕೈಬೀಸಿ ಕರೆಯುತ್ತದೆ. ಕಲ್ಲತ್ತಿಗಿರಿ ಜಲಪಾತ ಅಷ್ಟೇನೂ ಎತ್ತರ, ಆಳ ಇಲ್ಲದೆ ಇರುವುದರಿಂದ, ಜಲಪಾತದ ಕೆಳಭಾಗ ಸಮತಟ್ಟಾಗಿರುವುದರಿಂದ ಸ್ನಾನ ಮಾಡಲು, ಮಕ್ಕಳಿಗೆ ನೀರಾಟವಾಡಲು ಹೇಳಿ ಮಾಡಿಸಿದಂತಿದೆ.
ತಲುಪುವುದು ಹೇಗೆ: ಕಲ್ಲತ್ತಿಗಿರಿ ಜಲಪಾತವು ಬೆಂಗಳೂರಿನಿಂದ 265 ಕಿ.ಮೀ, ಮಂಗಳೂರಿನಿಂದ 205 ಕಿ.ಮೀ (ಹತ್ತಿರದ ವಿಮಾನ ನಿಲ್ದಾಣವೂ) ಮತ್ತು ಚಿಕ್ಕಮಗಲೂರು ನಗರದಿಂದ 53 ಕಿ.ಮೀ. ದೂರದಲ್ಲಿದೆ. ಬಿರೂರು ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ (25 ಕಿ.ಮೀ ದೂರದಲ್ಲಿದೆ). ಬಿರೂರು ಅಥವಾ ಚಿಕ್ಕಮಗಳೂರಿನಿಂದ ಕಲ್ಲತ್ತಿಗಿರಿ ಜಲಪಾತವನ್ನು ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.
ವಸತಿ: ಕಲ್ಲತ್ತಿಗಿರಿ ಜಲಪಾತದ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಹಲವಾರು ಹೋಂ ಸ್ಟೇಗಳು, ಐಷಾರಾಮಿ ರೆಸಾರ್ಟ್ ಮತ್ತು ಹೋಟೆಲ್‌ಗಳು ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಚ್ಚಿನ ವಸತಿ ಆಯ್ಕೆಗಳು ಲಭ್ಯವಿದೆ.