ಕಳಸೇಶ್ವರ ದೇವಸ್ಥಾನ, ಕಳಸ
‘ದಕ್ಷಿಣ ಕಾಶಿ’ ಎಂದೂ ಕರೆಯಲ್ಪಡುವ ಕಳಸೇಶ್ವರ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ರಸ್ತೆಯಲ್ಲಿದೆ. ಘಾಟ್‌ಗಳನ್ನು ದಾಟುವ ಸುಂದರವಾದ ರಸ್ತೆ, ಚಿಕ್ಕಮಗಳೂರಿನ ವಿಶೇಷತೆಗಳಾದ ಕಾಫಿ ಮತ್ತು ಏಲಕ್ಕಿ ತೋಟಗಳ ಸುವಾಸನೆ, ಆಕರ್ಷಕ ಬೆಟ್ಟಗಳು ಹಾಗೂ ಕಮರಿಗಳು ಕಳಸಕ್ಕೆ ಹೋಗುವ ನಿಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸುತ್ತವೆ.
ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರವಾದ ಚಿಕ್ಕಮಗಳೂರು ಪಟ್ಟಣದಲ್ಲಿನ ಕಳಸ ದೇವಾಲಯವು ಭದ್ರಾ ನದಿಯ ದಡದಲ್ಲಿದೆ. ಋಷಿ ಅಗಸ್ತ್ಯರಿಂದ ನಿರ್ಮಿಸಲ್ಪಟ್ಟಿದ್ದು ಎಂಬ ನಂಬಿಕೆಯುಳ್ಳು ಕಳಸ ದೇವಾಲಯವು ಇನ್ನೂ ಅನೇಕ ಸಣ್ಣ ದೇವಾಲಯಗಳು ಮತ್ತು ಪವಿತ್ರ ಜಲಮೂಲಗಳನ್ನು ಹೊಂದಿದ್ದು, ಇವು ದೇವಾಲಯದ ಪ್ರಶಾಂತತೆಗೆ ಮೌಲ್ಯವನ್ನು ತುಂಬುತ್ತವೆ.
ಸಂಶೋಧಕರ ಪ್ರಕಾರ, ಈ ದೇವಾಲಯವು ಸಾ.ಶ 1154ಕ್ಕೆ ಸೇರಿದ ಕೆಲವು ಶಾಸನಗಳನ್ನು ಹೊಂದಿದೆ. ಈ ಗರ್ಭಗುಡಿಯನ್ನು ವಿದರ್ಭದ ರಾಜನಾದ ಶೃತಬಿಂದು ನಿರ್ಮಿಸಿದನೆಂದು ನಂಬಲಾಗಿದೆ. ನಂತರ 16ನೇ ಶತಮಾನದಲ್ಲಿ ಕೆಳದಿ ಮತ್ತು ಕಾರ್ಕಳದ ನಾಯಕರು ಮತ್ತು ರಾಜರು ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು. ಬಹುಕಾಲದ ನಂತರ ಮೈಸೂರು ಮಹಾರಾಜರು ಸೂಕ್ಷ್ಮ ಕೆತ್ತನೆಗಳುಳ್ಳ ಬೆಳ್ಳಿಯ ಬಾಗಿಲನ್ನು ಕೊಡುಗೆಯಾಗಿ ನೀಡಿದರು ಹಾಗೂ ಸೋಮಶೇಖರ ನಾಯಕರು ಚಿನ್ನದ ಕಿರೀಟವನ್ನು ಸಮರ್ಪಿಸಿದರು.
ಈ ದೇವಾಲಯವು ಪವಿತ್ರವಾದ ಪಂಚ ತೀರ್ಥಗಳು ಹಾಗೂ ದುಗ್ಗಪ್ಪನ ಕಟ್ಟೆಗೆ ಹೆಸರುವಾಸಿಯಾಗಿದೆ. ದುಗ್ಗಪನ ಕಟ್ಟೆಯು ವಿಶಾಲವಾದ ಕಳಸ ಪಟ್ಟಣವನ್ನು ನೋಡಬಹುದಾದ ವೀಕ್ಷಣಾ ಸ್ಥಳ. ಪಂಚ ತೀರ್ಥವು ದೇವಾಲಯದ ಆವರಣದಲ್ಲಿರುವ 5 ಪವಿತ್ರ ಜಲಮೂಲಗಳಾಗಿವೆ. ವಸಿಷ್ಠ, ನಾಗ, ಕೋಟಿ, ರುದ್ರ ಮತ್ತು ಅಂಬಾ ತೀರ್ಥಗಳು ಕ್ರಮವಾಗಿ ವಸಿಷ್ಠ, ನಾಗ ದೋಷ, ಕೋಟಿ ದೇವ, ವಿಷ್ಣು ಮತ್ತು ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತವೆ.
ಈ ದೇವಾಲಯವು ಅನೇಕ ಪೌರಾಣಿಕ ಕಥೆಗಳನ್ನು ಹೊಂದಿದೆ. ಸ್ಕಂದ ಪುರಾಣದ ಪ್ರಕಾರ, ಕಳಸವನ್ನು ದಕ್ಷಿಣ ಕಾಶಿ ಎಂದು ಪರಿಗಣಿಸಲಾಗಿದೆ. ಶಿವ ಮತ್ತು ಪಾರ್ವತಿ ದೇವಿಯು ಕಾಶಿಯಲ್ಲಿ ವಿವಾಹವಾದಾಗ, ದೇವತೆಗಳೆಲ್ಲರೂ ಅಲ್ಲಿಯೇ ಇದ್ದಿದ್ದರಿಂದ ಭೂಮಿಯ ತಿರುಗುವಿಕೆಯಲ್ಲಿ ಬದಲಾವಣೆ ಕಂಡುಬಂದಿತು. ಆಗ ಶಿವನು ಅಗಸ್ತ್ಯ ಮುನಿಯನ್ನು ದಕ್ಷಿಣಕ್ಕೆ ಪ್ರಯಾಣಿಸಿ ಭೂಮಿಯ ಸಮತೋಲನವನ್ನು ಕಾಪಾಡುವಂತೆ ವಿನಂತಿಸಿದನು. ಆಗ ಅಗಸ್ತ್ಯ ಮುನಿಯು, ತಾನು ಮದುವೆಯಲ್ಲಿ ಭಾಗವಾಗಿ ಸಾಕ್ಷಿಯಾಗಲು ಬಯಸುತ್ತೇನೆ ಎಂದು ಶಿವನನ್ನು ವಿನಂತಿಸಿದರು. ನಂತರ ಶಿವನು ಅಗಸ್ತ್ಯರಿಗೆ ದೈವಿಕ ದರ್ಶನವನ್ನು ನೀಡುತ್ತಾನೆ, ಅದು ಅಗಸ್ತ್ಯರಿಗೆ ಪ್ರಪಂಚದ ಯಾವುದೇ ಭಾಗದಲ್ಲಿದ್ದು, ಶಿವನ ಮದುವೆಗೆ ಸಾಕ್ಷಿಯಾಗಲು ಅನುವು ಮಾಡಿಕೊಡುತ್ತದೆ. ಅಗಸ್ತ್ಯರು ಕಳಸದಿಂದ ಶಿವನ ಮದುವೆಗೆ ಸಾಕ್ಷಿಯಾದರು ಹಾಗೂ ಅಲ್ಲಿಯೇ ಶಿವಲಿಂಗವನ್ನು ಸ್ಥಾಪಿಸಿದರು. ಇಲ್ಲಿನ ಗರ್ಭಗುಡಿ ಮತ್ತು ಲಿಂಗಗಳು ಕಳಸದ ರೂಪದಲ್ಲಿ ಇರುವುದರಿಂದ ಕಳಸೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.
ದೇವಾಲಯದ ಸಮಯ
ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಮಧ್ಯಾಹ್ನ 1 ರಿಂದ 3.30 ರವರೆಗೆ ಊಟದ ವಿರಾಮವನ್ನು ನೀಡಲಾಗುತ್ತದೆ. ಎಲ್ಲಾ ದಿನಗಳಲ್ಲಿ ಎಲ್ಲಾ ಸಂದರ್ಶಕರು ಮತ್ತು ಭಕ್ತರಿಗೆ ಅನ್ನಪ್ರಸಾದ ಲಭ್ಯವಿದೆ. ಈ ದೇವಾಲಯವು ಶಿವರಾತ್ರಿಯ ದಿನ, ಜಾತ್ರೆಯ ದಿನಗಳಲ್ಲಿ ಮತ್ತು ಗಿರಿಜಾ ಕಲ್ಯಾಣ ಉತ್ಸವದ ಸಮಯದಲ್ಲಿ ದೀರ್ಘಕಾಲದವರೆಗೆ ತೆರೆದಿರುತ್ತದೆ.
ಗಿರಿಜಾ ಕಲ್ಯಾಣವನ್ನು 10 ದಿನಗಳ ಕಾಲ ರಥೋತ್ಸವದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಹಾಗೂ ಇದನ್ನು ಕಳಸ ಜಾತ್ರೆ ಎಂದು ಕರೆಯಲಾಗುತ್ತದೆ. ಈ ಭವ್ಯವಾದ ಆಚರಣೆಗೆ ಸಾಕ್ಷಿಯಾಗಲು ರಾಜ್ಯದಾದ್ಯಂತ ಮಾತ್ರವಲ್ಲದೆ ದೇಶದಾದ್ಯಂತದ ಭಕ್ತರು ದೇವಾಲಯಕ್ಕೆ ಬರುತ್ತಾರೆ. 2023ರ ಜನವರಿ 25ರಿಂದ ಫೆಬ್ರವರಿ 2ರವರೆಗೆ ಜಾತ್ರೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಆಚರಣೆಗಳು ನಡೆಯುತ್ತವೆ.
ವಸ್ತ್ರ ಸಂಹಿತೆ
ದೇವಾಲಯದ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಗೌರವಿಸಿ. ದೇವಾಲಯಕ್ಕೆ ಭೇಟಿ ನೀಡುವಾಗ ಗೌರವಯುತವಾಗಿ ಕಾಣುವ ಉಡುಪನ್ನು ಧರಿಸಲು ಸೂಚಿಸಲಾಗಿದೆ. ಪುರುಷರಿಗೆ ಧೋತಿ ಧರಿಸಲು ಹಾಗೂ ಶರ್ಟ್ ಇಲ್ಲದೆ ಒಳ ಪ್ರವೇಶಿಸಲು ಅನುಮತಿಸಲಾಗುತ್ತದೆ, ಮಹಿಳೆಯರು ಸೂಕ್ತವಾದ ಬಟ್ಟೆ ಧರಿಸಬೇಕು.
ತಲುಪುವುದು ಹೇಗೆ?
ಕಳಸ ಮುಖ್ಯರಸ್ತೆಯಲ್ಲಿರುವ ಈ ದೇವಾಲಯವು ಚಿಕ್ಕಮಗಳೂರಿನ ಹಚ್ಚ ಹಸಿರಿನಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಚಿಕ್ಕಮಗಳೂರು ಪಟ್ಟಣದಿಂದ 84 ಕಿ.ಮೀ ದೂರದಲ್ಲಿದ್ದು, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
ವಾಯುಮಾರ್ಗದ ಮೂಲಕ
ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ 120 ಕಿ.ಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ. ರಸ್ತೆಯ ಮೂಲಕ ಕಳಸೇಶ್ವರ ದೇವಸ್ಥಾನವನ್ನು ತಲುಪಲು ಸುಮಾರು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿವೆ. ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ಗಳ ಮೂಲಕವೂ ಪ್ರಯಾಣಿಸಬಹುದು.
ರೈಲಿನ ಮೂಲಕ
ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಶಿವಮೊಗ್ಗ, ಇದು 120 ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಕಳಸವನ್ನು ತಲುಪಲು ಸುಮಾರು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ನೀವು ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದರೆ, ವಿಸ್ಟಾಡೋಮ್ ಬೋಗಿಗಳನ್ನು ಹತ್ತಿ ಸಕಲೇಶಪುರದಲ್ಲಿ ಇಳಿಯಬಹುದು. ಅಲ್ಲಿಂದ ಈ ದೇವಾಲಯವು 92 ಕಿ.ಮೀ ದೂರದಲ್ಲಿದ್ದು, ಸಕಲೇಶಪುರದಿಂದ ಸುಮಾರು ಎರಡೂವರೆ ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ.
ರಸ್ತೆ ಮೂಲಕ
ಚಿಕ್ಕಮಗಳೂರು ಮತ್ತು ಶೃಂಗೇರಿಯಿಂದ ಡೈರೆಕ್ಟ್ ಬಸ್ಸುಗಳ ಮೂಲಕ ಕಳಸವನ್ನು ಸುಲಭವಾಗಿ ತಲುಪಬಹುದು. ಶೃಂಗೇರಿಯು ಕಳಸದಿಂದ ಸುಮಾರು 65 ಕಿ.ಮೀ ದೂರದಲ್ಲಿದ್ದು, ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡುವಾಗ ಈ ಸ್ಥಳವನ್ನೂ ಪ್ರವಾಸದ ಪಟ್ಟಿಯಲ್ಲಿ ಸೇರಿಸಬಹುದು. ನೀವು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ಸಹ ಈ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಹೊರನಾಡು ಸುಮಾರು 6.5 ಕಿ.ಮೀ ದೂರದಲ್ಲಿದ್ದು, ತಲುಪಲು ಕೇವಲ 15 ನಿಮಿಷಗಳ ಸಮಯ ಸಾಕು.
Image Credit: Anand Ramesh