Karnataka Tourism
GO UP
Image Alt

ಅಂಜನಾದ್ರಿ ಬೆಟ್ಟ

separator
  /  ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟ – ವಾಯುಪುತ್ರ ಹನುಮಂತನ ಜನ್ಮಸ್ಥಳ

ಕೊಪ್ಪಳ ಜಿಲ್ಲೆಯಲ್ಲಿರುವ, ಹಂಪಿಯಿಂದ ತುಂಗಭದ್ರಾ ನದಿಗೆ ಅಡ್ಡಲಾಗಿ ಆನೆಗುಂಡಿಗೆ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟಗಳು ವಾಯುಪುತ್ರ ಹನುಮಂತನ ಜನ್ಮಸ್ಥಳವಾಗಿದೆ. ಅಂಜನಾ ಪುತ್ರ ಹನುಮಂತನನ್ನು ಆಂಜನೇಯ ಎಂದೂ ಕರೆಯಲಾಗುತ್ತಿತ್ತು, ಆದ್ದರಿಂದ ಈ ಬೆಟ್ಟವನ್ನು ಅಂಜನಾದ್ರಿ ಬೆಟ್ಟಗಳು ಎಂದು ಕರೆಯಲಾಗುತ್ತದೆ.
ಅಂಜನಾದ್ರಿ ಬೆಟ್ಟದ ಮೇಲಿನ ದೇವಾಲಯವು ನೋಡಲು ಆಕರ್ಷಕವಾಗಿದ್ದು ಭಕ್ತ ಸಮೂಹವನ್ನು ಸ್ವಾಗತಿಸುತ್ತದೆ. ಈ ದೇವಾಲಯದ ಒಳಗಿರುವ ಅರ್ಚಕರೊಬ್ಬರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸ್ಥಳದ ಮಹಿಮೆಯನ್ನು ಚೆನ್ನಾಗಿ ನಿರೂಪಿಸುತ್ತಾರೆ. ಪುರಾಣದ ಆಸಕ್ತಿದಾಯಕ ಕಥೆಗಳನ್ನು ಕೇಳುವುದು ಯಾವಾಗಲೂ ಒಳ್ಳೆಯದು. ಇದರಿಂದ ನಿಮಗೆ ಈ ಸ್ಥಳದ ಮಹಿಮೆಯ ಕುರಿತು ತಿಳಿಯುತ್ತದೆ. ಈ ದೇವಾಲಯದ ಒಳಗಡೆ ಹನುಮನ ಇಷ್ಟದೇವತೆಗಳಾದ ರಾಮ ಸೀತೆಯರನ್ನು ಪೂಜಿಸಲಾಗುತ್ತದೆ. ಈ ಬೆಟ್ಟವನ್ನು ಹತ್ತಲು ನೀವು 550 ಮೆಟ್ಟಿಲುಗಳನ್ನು ಏರಬೇಕು. ಈ ಮೆಟ್ಟಿಲುಗಳನ್ನು ಏರಲು 45-60 ನಿಮಿಷಗಳು ಸಾಕು.
ಅಂಜನಾದ್ರಿ ಬೆಟ್ಟದ ಮಂತ್ರಮುಗ್ಧಗೊಳಿಸುವ ಭೂದೃಶ್ಯಗಳ ವಿಹಂಗಮ ನೋಟಗಳು, ಬೆರಗುಗೊಳಿಸುವ ಸೂರ್ಯಾಸ್ತದ ನೋಟಗಳು ಮತ್ತು ಪರ್ವತಗಳು ಮತ್ತು ಬಂಡೆಗಳ ನಡುವೆ ಹರಿಯುವ ತುಂಗಭದ್ರಾ ನದಿಯ ರಮಣೀಯ ನೋಟಗಳು ನಿಮ್ಮ ಎಲ್ಲಾ ಒತ್ತಡ ಅಥವಾ ಆಯಾಸವನ್ನು ದೂರ ಮಾಡುತ್ತದೆ. ನೀವು ಇಲ್ಲಿಂದ ಹಂಪಿ ಅವಶೇಷಗಳು ಮತ್ತು ನೆರೆಹೊರೆಯಲ್ಲಿರುವ ಇತರ ಭವ್ಯವಾದ ಬೆಟ್ಟಗಳನ್ನು ಸಹ ವೀಕ್ಷಿಸಬಹುದು.
ಈ ಬೆಟ್ಟವನ್ನು ಏರುವುದೇ ಒಂದು ಆನಂದ. ಭತ್ತದ ಗದ್ದೆಗಳು, ತೆಂಗಿನ ತೋಟಗಳು, ಒಂದು ಬದಿಯಲ್ಲಿ ಕಲ್ಲಿನ ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ತುಂಗಭದ್ರೆ.. ಹೀಗೆ ಬೆಟ್ಟವನ್ನು ಏರುವುದು ನಿಮಗೆ ಒಂದು ಅವರ್ಣನೀಯ ಅನುಭವವನ್ನು ನೀಡುತ್ತದೆ. ಹನುಮಂತನ ಜನ್ಮಸ್ಥಳವು ತನ್ನ ಮಡಿಲಲ್ಲಿ ಪ್ರಶಾಂತತೆ ಮತ್ತು ನೆಮ್ಮದಿಯನ್ನು ಹೊಂದಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇತ್ತೀಚೆಗೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯನ್ನು ಮಾಡುವುದಾಗಿ ಘೋಷಿಸಿದರು. ಅಂಜನಾದ್ರಿಯು ಅಂಜನಿ ಪುತ್ರ ಆಂಜನೇಯನ ಜನ್ಮಸ್ಥಳವಾಗಿದೆ. ಇದಕ್ಕೆ ಯಾವುದೇ ಪುರಾವೆ ಅಗತ್ಯವಿಲ್ಲ. ಆದಾಗ್ಯೂ ಸಾಕಷ್ಟು ಪುರಾವೆಗಳು ನಮ್ಮ ಪುರಾಣಗಳು ಮತ್ತು ಧರ್ಮಗ್ರಂಥಗಳಲ್ಲಿ ಲಭ್ಯವಿದೆ. ಪುರಾಣಗಳ ಪ್ರಕಾರ ಈ ಸ್ಥಳವನ್ನು ಕಿಷ್ಕಿಂದೆ ಎಂದು ಕರೆಯಲಾಗುತ್ತದೆ ಮತ್ತು ಹನುಮಾನ್ ಭಕ್ತರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ತಲುಪುವುದು ಹೇಗೆ?

ಅಂಜನಾದ್ರಿ ಬೆಟ್ಟವನ್ನು ತಲುಪಲು ರಸ್ತೆ ಸಾರಿಗೆ ಮಾರ್ಗವು ಉತ್ತಮವಾಗಿದೆ. ಅಂಜನಾದ್ರಿ ಬೆಟ್ಟಗಳು ಕೊಪ್ಪಳ ಜಿಲ್ಲೆಯಲ್ಲಿದೆ ಮತ್ತು ಇದು ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಹಂಪಿ ಕಡೆಯಿಂದ ಕೊರಕಲ್ ಬೋಟ್ ಮೂಲಕ ತುಂಗಭದ್ರಾ ನದಿಯನ್ನು ದಾಟಿ ಬೆಟ್ಟಗಳನ್ನು ತಲುಪಬಹುದು. ಈ ದೋಣಿಗಳು ಸುಲಭವಾಗಿ ಲಭ್ಯವಿವೆ.

ವಿಮಾನದ ಮೂಲಕ

ವಿಜಯನಗರ ವಿಮಾನ ನಿಲ್ದಾಣವು ಇದಕ್ಕೆ ಸಮೀಪ ಇರುವ ವಿಮಾನ ನಿಲ್ದಾಣವಾಗಿದ್ದು ಸರಿಸುಮಾರು 72.3 ಕಿಮೀ ಇದೆ. ಮತ್ತು ಸುಮಾರು ಒಂದು ಗಂಟೆ ಮೂವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅಂಜನಾದ್ರಿಗೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಬೆಂಗಳೂರು, ಇದು ಸುಮಾರು 347 ಕಿಮೀ ದೂರದಲ್ಲಿದೆ ಮತ್ತು ಇಲ್ಲಿಗೆ ತಲುಪಲು ಸುಮಾರು 5 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣವು 123 ಕಿಮೀ ದೂರದಲ್ಲಿದೆ ಮತ್ತು ಈ ಸ್ಥಳವನ್ನು ತಲುಪಲು ಸುಮಾರು 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹುಬ್ಬಳ್ಳಿ ಮತ್ತು ವಿಜಯನಗರ ವಿಮಾನ ನಿಲ್ದಾಣಗಳು ಬೆಂಗಳೂರು, ಮೈಸೂರು ಮತ್ತು ಹೈದರಾಬಾದ್‌‍ಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ.

ರೇಲ್ವೆ ಮೂಲಕ

ಅಂಜನಾದ್ರಿಗೆ ಹತ್ತಿರ ಇರುವ ರೇಲ್ವೆ ನಿಲ್ದಾಣಗಳು ಎಂದರೆ ಕೊಪ್ಪಳ, ಹೊಸಪೇಟೆ ಮತ್ತು ಮುನಿರಾಬಾದ್. ಎಲ್ಲಾ ಮೂರು ನಿಲ್ದಾಣಗಳು ಅಂಜನಾದ್ರಿ ಬೆಟ್ಟದಿಂದ ಸುಮಾರು 40 ಕಿಮೀ ದೂರದಲ್ಲಿದೆ ಮತ್ತು ರಸ್ತೆಯ ಮೂಲಕ ಬೆಟ್ಟಗಳನ್ನು ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ರೇಲ್ವೆ ನಿಲ್ದಾಣದಿಂದ ಸ್ಥಳೀಯ ಆಟೋ ರಿಕ್ಷಾಗಳು ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಎಲ್ಲಾ ಮೂರು ನಿಲ್ದಾಣಗಳು ಬೆಂಗಳೂರು, ಮೈಸೂರು ಮತ್ತು ಕರ್ನಾಟಕದ ಇತರ ಪ್ರಮುಖ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ.

ರಸ್ತೆ ಸಾರಿಗೆ ಮೂಲಕ

ಅಂಜನಾದ್ರಿಯನ್ನು ತಲುಪಲು ನೀವು ರಸ್ತೆ ಸಾರಿಗೆ ಮಾರ್ಗವನ್ನು ಆಯ್ದುಕೊಳ್ಳುವುದು ಸೂಕ್ತ. ಇಲ್ಲಿಗೆ ತಲುಪಲು ಸಾರ್ವಜನಿಕ ಸಾರಿಗೆಗಳು ಮತ್ತು ಖಾಸಗಿ ಸಾರಿಗೆಗಳನ್ನು ಬಳಸಬಹುದು. ಕೊಪ್ಪಳ ನಗರದಿಂದ ಇಲ್ಲಿಗೆ ತಲುಪಲು ಒಂದು ಗಂಟೆ ಬೇಕಾಗುತ್ತದೆ.

ತ್ವರಿತ ಮಾಹಿತಿ:

1. ಇಲ್ಲಿ ಮಂಗಗಳಿವೆ ಎಚ್ಚರದಿಂದ ಇರಿ. ಅವುಗಳನ್ನು ಚುಡಾಯಿಸಬೇಡಿ.
2. ಸುಮಾರು 550 ಮೆಟ್ಟಿಲುಗಳಿವೆ ಮತ್ತು ಬೆಟ್ಟವನ್ನು ಹತ್ತಲು ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
3. ದೇವಾಲಯವನ್ನು ಪ್ರವೇಶಿಸುವಾಗ ಸೂಕ್ತವಾಗಿ ಉಡುಪನ್ನು ಧರಿಸಿ.
4. ನಿಮ್ಮ ಪಾದರಕ್ಷೆಗಳನ್ನು ದೇವಾಲಯದ ಹೊರಗಡೆಯ ಸೂಕ್ತ ಸ್ಥಳದಲ್ಲಿ ಬಿಡಿ.
5. ದೇವಸ್ಥಾನಕ್ಕೆ ಯಾವುದೇ ಪ್ರವೇಶ ಟಿಕೆಟ್ ಇಲ್ಲ.
6. ನಿಮ್ಮ ನೀರಿನ ಬಾಟಲಿಗಳನ್ನು ಒಯ್ಯಿರಿ ಮತ್ತು ನೀವು ಅವುಗಳನ್ನು ದೇವಸ್ಥಾನದಲ್ಲಿ ಪುನಃ ತುಂಬಿಸಬಹುದು.
7. ಬೆಟ್ಟದ ತುದಿಯಲ್ಲಿ ಸ್ವಲ್ಪ ಸಮಯ ಕಳೆಯಲು ನೀವು ಬಯಸಿದರೆ ನಿಮ್ಮ ತಿಂಡಿಗಳು ಮತ್ತು ಆಹಾರವನ್ನು ತನ್ನಿ.
8. ಕಸ ಹಾಕಬೇಡಿ.


ಚಿತ್ರ ಕೃಪೆ :
ಭರತ್ ಹಿರೇಮಠ