GO UP
Image Alt

ಹಂಪಿ- ಐಹೊಳೆ- ಪಟ್ಟದಕಲ್ಲು- ಬಾದಾಮಿ

separator
  /  ಹಂಪಿ- ಐಹೊಳೆ- ಪಟ್ಟದಕಲ್ಲು- ಬಾದಾಮಿ

ಹಂಪಿ- ಐಹೊಳೆ- ಪಟ್ಟದಕಲ್ಲು- ಬಾದಾಮಿ

ಕರ್ನಾಟಕ ರಾಜ್ಯದ ಪ್ರವಾಸೋದ್ಯಮವು ಎಲ್ಲ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕರ್ನಾಟಕದಲ್ಲಿ ಪ್ರವಾಸಿಗರು ಬಯಸುವ ಎಲ್ಲ ತಾಣಗಳು ಇವೆ. ರಾಜ್ಯದ ಐತಿಹಾಸಿಕ ಸ್ಥಳಗಳ ಪರಂಪರೆ ಮತ್ತು ಇತಿಹಾಸವು ಇತಿಹಾಸ ಪ್ರೇಮಿಗಳು, ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಆ ಕಾಲದ ಭವ್ಯವಾದ ವಾಸ್ತುಶಿಲ್ಪವನ್ನು ಮೆಚ್ಚುವ ಎಲ್ಲರನ್ನು ಆಕರ್ಷಿಸುತ್ತದೆ. ಬಾದಾಮಿ – ಐಹೊಳೆ- ಪಟ್ಟದಕಲ್ಲು – ಹಂಪಿಗಳು ಯುನೆಸ್ಕೊ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಇಲ್ಲಿನ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯು ವಿಶ್ವಪ್ರಸಿದ್ಧವಾಗಿದೆ. ಈಗ ಹಂಪಿಯು ವಿಜಯನಗರ ಜಿಲ್ಲೆಯಲ್ಲಿದೆ. ಅಂದಿನ ಕಾಲದಲ್ಲಿ ದಕ್ಷಿಣ ಭಾರತದಾದ್ಯಂತ ಪ್ರಾಬಲ್ಯ ಹೊಂದಿದ್ದ ವಿಜಯ ನಗರ ಸಾಮ್ರಾಜ್ಯವು ಭಾರತೀಯ ಉಪಖಂಡದಲ್ಲಿ ಪ್ರಬಲ ಸಾಮ್ರಾಜ್ಯವಾಗಿತ್ತು. ವಿಜಯನಗರ ಸಾಮ್ರಾಜ್ಯವನ್ನು ಸಂಸ್ಕೃತಿ ಮತ್ತು ಕಲಿಕೆಯ ಸುವರ್ಣಯುಗವೆಂದು ಪರಿಗಣಿಸಲಾಗಿದೆ.

ಇಲ್ಲಿಗೆ ಬೆಂಗಳೂರಿನಿಂದ ಪ್ರಯಾಣಿಸುವ ದೂರವನ್ನು ಗಮನದಲ್ಲಿಟ್ಟುಕೊಂಡು 4 ದಿನಗಳ ಪ್ರಯಾಣವನ್ನು ಯೋಜಿಸಬಹುದು. ಐಹೊಳೆ-ಪಟ್ಟದಕಲ್ಲು, ಹಂಪಿ, ಬಾದಾಮಿಯನ್ನು ನೋಡಲು ತಲಾ ಒಂದು ದಿನ ಸಾಕಾಗುತ್ತದೆ. ಆದರೆ ನೀವು ಪರಂಪರೆಯ ತಾಣಗಳನ್ನು ಆಳವಾಗಿ ಅಧ್ಯಯನ ಮಾಡಲು ಬಯಸಿದರೆ ನಿಮಗೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ.

ದಿನ 1 – ಹಂಪಿ

Elephant Stables Hampi

ಹಂಪಿ ಆನೆ ಲಾಯ

ವಿಜಯನಗರ ಸಾಮ್ರಾಜ್ಯದ ವೈಭವದ ರಾಜಧಾನಿಯಾಗಿದ್ದ ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ. ಹಂಪಿಯು ತನ್ನ ಐತಿಹಾಸಿಕ ಪ್ರಾಮುಖ್ಯತೆ, ಪರಂಪರೆ, ದೇವಾಲಯಗಳು, ಅವಶೇಷಗಳು ಮತ್ತು ಸೊಗಸಾದ ಕರಕುಶಲತೆಗೆ ಹೆಸರುವಾಸಿಯಾಗಿದೆ. ನೀವು ಐವತ್ತು ರೂಪಾಯಿಯ ನೋಟಿನ ಮೇಲೆ ಕಲ್ಲಿನ ರಥವನ್ನು ನೋಡಿರಬಹುದು. ಅದು ಹಂಪಿಯಲ್ಲಿರುವ ಕಲ್ಲಿನ ರಥದ ಚಿತ್ರವಾಗಿದೆ. ಇದು ಅದ್ಭುತ ಕರಕುಶಲತೆಯನ್ನು ಹೊಂದಿದೆ.
ಇಲ್ಲಿರುವ ವಿರೂಪಾಕ್ಷ ದೇವಾಲಯವು ಪ್ರಸಿದ್ಧವಾಗಿದೆ. ಇದನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿನ ಕಮಲ ಮಹಲ್, ಉಗ್ರ ನರಸಿಂಹ ವಿಗ್ರಹ, ಕಡಲೆಕಾಳು ಗಣೇಶ, ಸಾಸಿವೆ ಗಣೇಶ ,ವಿಜಯ ವಿಠ್ಠಲ ದೇವಾಲಯಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಹಂಪಿಯ ವೈಭವಯುತ ಇತಿಹಾಸವನ್ನು ಸಮಗ್ರವಾಗಿ ಅರಿಯಲು ಹಂಪಿಯಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ.

ದಿನ 2 – ಐಹೊಳೆ

vastu chitra aihole

ವಾಸ್ತುಚಿತ್ರ ಐಹೊಳೆ

ಐಹೊಳೆಯು ಹಂಪಿಯಿಂದ ಕೇವಲ 140 ಕೀಲೊ ಮೀಟರದಲ್ಲಿದೆ. ನೀವು ಇದನ್ನು ರಸ್ತೆ ಸಾರಿಗೆಯ ಮೂಲಕ ಸುಲಭವಾಗಿ ತಲುಪಬಹುದು. ಇದು ಕೇವಲ ಎರಡು ಗಂಟೆಗಳ ಪಯಣವಾಗಿದೆ. ಐಹೊಳೆಯಲ್ಲಿ ನೀವು ಸುಮಾರು ನೂರಕ್ಕಿಂತಲೂ ಹೆಚ್ಚು ದೇವಾಲಯಗಳನ್ನು ನೋಡಬಹುದು. ಐಹೊಳೆ ಉತ್ತರ ಕರ್ನಾಟಕದ ಮಲಪ್ರಭಾ ನದಿ ದಡದ ಮೇಲೆ ಇರುವ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಐಹೊಳೆಯು ಇತಿಹಾಸ, ಪುರಾತತ್ವ, ವಾಸ್ತುಶಿಲ್ಪ, ಪರಂಪರೆ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. ಇಲ್ಲಿ ನೀವು ಜೈನ ಮತ್ತು ಬೌದ್ಧ ದೇವಾಲಯಗಳನ್ನು ಸಹ ನೋಡಬಹುದು. ಇಲ್ಲಿರುವ ದುರ್ಗಾ ದೇವಾಲಯದ ಕಾಂಪ್ಲೆಕ್ಸ್ ಆರ್ಟ್ ಗ್ಯಾಲರಿ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವನ್ನು ಹೊಂದಿದ್ದು ಇಲ್ಲಿ ಉತ್ಖನನ ಮಾಡಲಾದ ಸೊಗಸಾದ ಪ್ರಾಚೀನ ವಸ್ತುಗಳ ಸಂಗ್ರಹವನ್ನು ವೀಕ್ಷಿಸಬಹುದು. ಇಲ್ಲಿನ ಲಾಡ್ ಖಾನ್ ದೇವಾಲಯದಲ್ಲಿ ಹಿಂದೂ ಧರ್ಮದ ಶೈವ, ವೈಷ್ಣವ ಮತ್ತು ಶಕ್ತಿ ಅಥವಾ ದುರ್ಗಾ ಪ್ರತಿಮೆಗಳಿದ್ದು ಪೂಜಿಸಲ್ಪಡುತ್ತವೆ.

‘ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು’ ಎಂದೇ ಪ್ರಸಿದ್ಧವಾಗಿರುವ ಐಹೊಳೆಯು ಉತ್ತರ ಕರ್ನಾಟಕ ಪ್ರದೇಶವನ್ನು ಆಳಿದ ಚಾಲುಕ್ಯರ ಮೊದಲ ರಾಜಧಾನಿಯಾಗಿದೆ. ಈಗ ಇಲ್ಲಿನ ದೇವಾಲಯಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂರಕ್ಷಿಸುತ್ತಿದೆ. 6 ನೇ ಶತಮಾನದ ರಾವಣ ಫಡಿ ಗುಹೆಯು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಗುಹೆಯಲ್ಲಿ ನೀವು ಶಿವ, ಪಾರ್ವತಿ, ಗಣೇಶ ಮತ್ತು ವಿಷ್ಣು ದೇವರಗಳ ಸುಂದರ ಮೂರ್ತಿಯನ್ನು ನೋಡಬಹುದು.
ಗರುಡಗುಡಿ, ಚಕ್ರಗುಡಿ, ಅಂಬಿಗರಗುಡಿ, ರಾಚಿಗುಡಿ, ಕುಂಟಿಗುಡಿ, ಹಳ್ಳಿಬಸಪ್ಪ ಗುಡಿ, ಬಡಿಗರಗುಡಿ, ತ್ರಯಂಬಕೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮತ್ತು ಜ್ಯೋತಿರ್ಲಿಂಗ ದೇವಸ್ಥಾನ ಇಲ್ಲಿರುವ ಇತರ ಪ್ರಸಿದ್ಧ ದೇವಸ್ಥಾನಗಳಾಗಿವೆ.

ದಿನ 3- ಪಟ್ಟದಕಲ್ಲು

pattadakal temple

ಪಟ್ಟದಕಲ್

ಐಹೊಳೆ ಪಟ್ಟದಕಲ್ಲುನಿಂದ ಕೇವಲ 13 ಕಿಮೀ ದೂರದಲ್ಲಿದ್ದು ತಲುಪಲು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿರುವ ದೇವಾಲಯಗಳನ್ನು ಕ್ರಿ.ಶ 7 ನೇ ಮತ್ತು 8 ನೇ ಶತಮಾನಗಳ ನಡುವೆ ನಿರ್ಮಿಸಲಾಗಿದ್ದು ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ. ಇಲ್ಲಿ ನೀವು ಹಿಂದೂ ಮತ್ತು ಜೈನ ದೇವಾಲಯಗಳನ್ನು ನೋಡಬಹುದು. ಚಾಲುಕ್ಯರು ಪಟ್ಟದಕಲ್ಲನ್ನು ಪಟ್ಟಾಭಿಷೇಕ ಸಮಾರಂಭಗಳಿಗೆ ಬಳಸುತ್ತಿದ್ದರು. ವಿರೂಪಾಕ್ಷ ದೇವಾಲಯವು ಪಟ್ಟದಕಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇದನ್ನು ಪಲ್ಲವರ ಮೇಲೆ ತನ್ನ ಪತಿ ಮತ್ತು ರಾಜ ವಿಕ್ರಮಾದಿತ್ಯನ ವಿಜಯವನ್ನು ಆಚರಿಸಲು 8 ನೇ ಶತಮಾನದಲ್ಲಿ ರಾಣಿ ಲೋಕಮಹಾದೇವಿ ನಿರ್ಮಿಸಿದಳು. ವಿರೂಪಾಕ್ಷ ದೇವಾಲಯದಲ್ಲಿ ಅದ್ಭುತ ಕರಕುಶಲತೆಯುಳ್ಳ ಉಗ್ರ ನರಸಿಂಹ ಮತ್ತು ನಟರಾಜನ ಶಿಲ್ಪಗಳನ್ನು ನೀವು ನೋಡಬಹುದು. ಪಾಪನಾಥ ದೇವಾಲಯ, ಗಳಗನಾಥ ದೇವಾಲಯ, ಸಂಗಮೇಶ್ವರ ದೇವಾಲಯ, ಚಂದ್ರಶೇಖರ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಜಂಬು ಲಿಂಗೇಶ್ವರ ದೇವಾಲಯ, ಮತ್ತು ಕಾಡಸಿದ್ದೇಶ್ವರ ದೇವಾಲಯಗಳು ಇಲ್ಲಿ ಇರುವ ಇತರ ಜನಪ್ರಿಯ ದೇವಾಲಯಗಳಾಗಿವೆ.
ಪಟ್ಟದಕಲ್ಲಿನ ಅತ್ಯಂತ ಆಕರ್ಷಕ ಕಾರ್ಯಕ್ರಮವೆಂದರೆ ಪಟ್ಟದಕಲ್ಲು ಉತ್ಸವ. ಪಟ್ಟದಕಲ್ಲು ದೇವಾಲಯಗಳ ಆವರಣದಲ್ಲಿ ಜರುಗುವ ಸಂಗೀತ ಮತ್ತು ನೃತ್ಯದ ಕಾರ್ಯಕ್ರಮಗಳು ವೀಕ್ಷಕರಿಗೆ ರಸದೌತಣವನ್ನು ನೀಡುತ್ತದೆ.

ದಿನ 4- ಬಾದಾಮಿ

Badami Cave Temple

ಬಾದಾಮಿ

ಹಿಂದಿನಕಾಲದಲ್ಲಿ ಚಾಲುಕ್ಯರ ರಾಜಧಾನಿ ಅಗಿದ್ದ ಬಾದಾಮಿಯನ್ನು ವಾತಾಪಿ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಗುಹಾ ದೇವಾಲಯಗಳು ಮತ್ತು ಇತರ ಸ್ಮಾರಕಗಳನ್ನು ಕ್ರಿ.ಶ 6 ಮತ್ತು 8 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಬಾದಾಮಿ ಗುಹೆ ದೇವಾಲಯದ ಸಂಕೀರ್ಣವು ಜೈನ ದೇವಾಲಯ ಮತ್ತು ಮೂರು ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ. ಬಾದಾಮಿಯಲ್ಲಿನ ಗುಹೆಗಳ ಮೇಲೆ ಶಿವ, ಭಗವಾನ್ ವಿಷ್ಣು ಮತ್ತು ಅವನ ತಾಂಡವ ನೃತ್ಯದ ಶಿಲ್ಪಕಲೆಗಳನ್ನು ನೀವು ನೋಡಬಹುದು. ಅಗಸ್ತ್ಯ ಸರೋವರ ಮತ್ತು ಗುಹೆ ದೇವಾಲಯದ ಬೆರಗುಗೊಳಿಸುವ ಭೂದೃಶ್ಯಗಳು ಮತ್ತು ಮೋಡಿಮಾಡುವ ಹಿನ್ನೆಲೆ, ಈ ಸ್ಮಾರಕಗಳು ಮಹತ್ತರವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.

ಇಲ್ಲಿನ ಭೂತನಾಥ ದೇವಾಲಯವು ಪ್ರಸಿದ್ಧವಾಗಿದ್ದು ಇದು ಮುಖ್ಯ ಬಾದಾಮಿ ಗುಹೆ ದೇವಾಲಯಗಳಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ಮರಳುಗಲ್ಲಿನ ದೇವಾಲಯಗಳ ಸಮೂಹಗಳನ್ನು ಕ್ರಿ.ಶ 7 ರಿಂದ 11 ನೇ ಶತಮಾನದ ವರೆಗಿನ ಅವಧಿಯಲ್ಲಿ ನಿರ್ಮಿಸಲಾಗಿದೆ.

ತಲುಪುವುದು ಹೇಗೆ

ಉತ್ತರ ಕರ್ನಾಟಕದ ಪ್ರಸಿದ್ಧ ಸ್ಥಳಗಳಾದ ಬದಾಮಿ, ಐಹೊಳೆ, ಮಹಾಕೂಟ ಮತ್ತು ಪಟ್ಟದಕಲ್ಲುಗಳನ್ನು ನೀವು ರಸ್ತೆ ಸಾರಿಗೆಯ ಮೂಲಕ ಸುರಕ್ಷಿತವಾಗಿ ವೀಕ್ಷಿಸಬಹುದು.

ವಿಮಾನದ ಮೂಲಕ

ಹಂಪಿ ಅಥವಾ ಬಾದಾಮಿಯನ್ನು ಬೆಂಗಳೂರು ಅಥವಾ ಮಂಗಳೂರಿನಿಂದ ವಿಮಾನದ ಮೂಲಕ ತಲುಪಬಹುದು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಂಪಿಯಿಂದ 340 ಕಿಮೀ ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಾದಾಮಿಯಿಂದ 460 ಕಿಮೀ ದೂರದಲ್ಲಿದೆ.

ಟ್ರೇನ್ ಮೂಲಕ

ಹಂಪಿ ಮತ್ತು ಬಾದಾಮಿಯು ಕರ್ನಾಟಕದ ಎಲ್ಲಾ ಪ್ರಮುಖ ಪಟ್ಟಣಗಳಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಿಂದ ಬರುವ ರೈಲುಗಳಿಗೆ ಗುಂತಕಲ್ ಪ್ರಮುಖ ರೈಲು ಜಂಕ್ಷನ್ ಆಗಿದೆ. ಹಂಪಿ ತಲುಪಲು ಹೊಸಪೇಟೆ ಮುಖ್ಯ ನಿಲ್ದಾಣವಾಗಿದೆ.

ಬಸ್ ಮೂಲಕ

ಈ ಯುನೆಸ್ಕೊ ಪಾರಂಪಾರಿಕ ತಾಣಗಳನ್ನು ತಲುಪಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ರಸ್ತೆ ಸಾರಿಗೆ. ಈ ನಗರಗಳಿಗೆ ಕರ್ನಾಟಕದ ಬಹುತೇಕ ಪ್ರಮುಖ ಬಸ್ ನಿಲ್ದಾಣಗಳಿಂದ ಕರ್ನಾಟಕ ರಾಜ್ಯದ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಈ ಹೆಚ್ಚಿನ ಸ್ಥಳಗಳಲ್ಲಿ ಸಿಟಿ ಕ್ಯಾಬ್‌ಗಳು ಸಹ ಲಭ್ಯವಿವೆ. ಹಂಪಿಗೆ ಹತ್ತಿರದ ಬಸ್ ನಿಲ್ದಾಣವೆಂದರೆ ಹೊಸಪೇಟೆ ಅಲ್ಲಿಂದ ಹಂಪಿ ಕೇವಲ 12 ಕಿಮೀ ದೂರದಲ್ಲಿದೆ ಮತ್ತು ಸ್ಥಳೀಯ ಆಟೋ ರಿಕ್ಷಾ ಮೂಲಕ ತಲುಪಬಹುದು.

 

ಪ್ರಯಾಣ ಸಲಹೆಗಳು

1. ಉತ್ತರ ಕರ್ನಾಟಕದ ಹವಾಮಾನವು ಸಾಮಾನ್ಯವಾಗಿ ಬೆಚ್ಚಗೆ ಮತ್ತು ಶುಷ್ಕವಾಗಿರುತ್ತದೆ. ಮತ್ತು ಚಳಿಗಾಲದಲ್ಲಿ ಇದು ತಂಪಾಗಿರುತ್ತದೆ. ನವೆಂಬರ್ ನಿಂದ ಫೆಬ್ರವರಿ ನಡುವಿನ ತಿಂಗಳುಗಳು ಈ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
2. ಚಳಿಗಾಲಕ್ಕೆ ಸೂಕ್ತವಾದ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ.
3. ಸ್ಥಳೀಯ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಸೂಕ್ತವಾದ ಉಡುಗೆಯನ್ನು ಧರಿಸಿ.
4. ಸ್ಥಳೀಯ ವಿಶೇಷ ಪಾಕವಾದ ರೊಟ್ಟಿ ಊಟ ಮತ್ತು ಕಾಳು ಪಲ್ಯವನ್ನು ತಿನ್ನಲು ಮರೆಯದಿರಿ.
5. ನೀವು ಇಲ್ಲಿ ಸಾಕಷ್ಟು ನಡೆಯಬೇಕಾದುದರಿಂದ ಆರಾಯದಾಯಕವಾದ ಬೂಟುಗಳನ್ನು ಧರಿಸಿ.
6. ಮುಂಜಾನೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಸನ್ ಸ್ಕ್ರೀನ್ ಮತ್ತು ಸನ್ ಹ್ಯಾಟ್ ಧರಿಸಿರಿ.
7. ದೇವಾಲಯಗಳು ಮತ್ತು ಇತರ ಸ್ಮಾರಕಗಳಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮುಂಜಾನೆ ಅಥವಾ ಸಂಜೆಯ ಸಮಯ.
8. ಹೊಸಪೇಟೆ ಮತ್ತು ಹಂಪಿಗಳಲ್ಲಿ ನಿಮಗೆ ಉಳಿದುಕೊಳ್ಳಲು ನಿಮಗೆ ಉತ್ತಮ ಗುಣಮಟ್ಟದ ಹೋಟೆಲಗಳು ಲಭ್ಯವಾಗುತ್ತವೆ.
9. ದೇವಾಲಯಗಳು ಸಾಮಾನ್ಯವಾಗಿ ಬೆಳಿಗ್ಗೆ ಏಳುಗಂಟೆಯಿಂದ ಸಂಜೆ ಆರು ಗಂಟೆಯವರಿಗೆ ತೆರೆದಿರುತ್ತದೆ ( ದಯವಿಟ್ಟು ಹೋಗುವ ಮುಂಚೆ ಒಮ್ಮೆ ಪರಿಶೀಲಿಸಿ.

 

ನೀವು ಭೇಟಿ ನೀಡಬಹುದಾದ ಇತರ ಸ್ಥಳಗಳು

ಚಿತ್ರದುರ್ಗ ಕೋಟೆಯು ಪ್ರಸಿದ್ಧ ಕೋಟೆಯಾಗಿದ್ದು ತನ್ನ ವಾಸ್ತುಶಿಲ್ಪ ಮತ್ತು ನಿರ್ಮಾಣ ಶೈಲಿಯಿಂದ ಹೆಸರುವಾಸಿ ಆಗಿದೆ. ಇದನ್ನು ಒನಕೆ ಓಬವ್ವನ ಕೋಟೆಯಂತಲೂ ಕರೆಯುತ್ತಾರೆ.
ವಾಣಿ ವಿಲಾಸ ಸಾಗರ್ ಅಣೆಕಟ್ಟು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಮಹಾಕೂಟವು ಈ ಪ್ರದೇಶದ ಇತರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಸಾಹಸ ಪ್ರಿಯರಿಗೆ ತುಂಬಾ ಆಕರ್ಷಣೀಯ ಸ್ಥಳವಾಗಿದೆ.
ಚಾಲುಕ್ಯ ಉತ್ಸವವನ್ನು ಬಾದಾಮಿ ಮತ್ತು ಐಹೊಳೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಮತ್ತು ಪರಂಪರೆಯ ಉತ್ಸವವನ್ನು ಆಚರಿಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ. ಈ ಸಂಗೀತ ಉತ್ಸವದಲ್ಲಿ ಕ್ರೀಡಾ ಆಟಗಳು ಮತ್ತು ಇತರ ಸ್ಪರ್ಧೆಗಳು, ಕುಸ್ತಿ ಸ್ಪರ್ಧೆಗಳು, ಸಾಹಸ ಪ್ರದರ್ಶನಗಳು ಮತ್ತು ಕಲಾ ಪ್ರದರ್ಶನಗಳು ಇರುತ್ತವೆ.
ಬಾದಾಮಿಯಿಂದ ಕೇವಲ 6 ಕಿಮೀ ದೂರದಲ್ಲಿರುವ ಮಹಾಕೂಟ ದೇವಾಲಯಗಳನ್ನು 6 ಮತ್ತು 8 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಇಲ್ಲಿನ ಭಗವಾನ್ ಶಿವ ದೇವಾಲಯಗಳಾದ ಮಹಾಕೂಟೇಶ್ವರ ದೇವಾಲಯ, ಅರ್ಧನಾರೀಶ್ವರ ಮತ್ತು ಇತರ ದೇವಾಲಯಗಳು ಭೇಟಿ ನೀಡಲು ಯೋಗ್ಯವಾಗಿವೆ.

ಗೂಗಲ್ ನಕ್ಷೆ

ಗ್ಯಾಲರಿ