Karnataka logo

Karnataka Tourism
GO UP

ನಂದಿ ಬೆಟ್ಟ

separator
ಕೆಳಗೆ ಸ್ಕ್ರಾಲ್ ಮಾಡಿ

ನಂದಿ ಬೆಟ್ಟ

ನಂದಿ ದುರ್ಗ ಎಂದೂ ಕರೆಯಲ್ಪಡುವ ನಂದಿ ಬೆಟ್ಟ ಬೆಂಗಳೂರು ನಗರದ ಜನರಿಗೆ ವಾರಾಂತ್ಯದ ಅತ್ಯಂತ ಜನಪ್ರಿಯ ತಾಣವಾಗಿದೆ. ಉತ್ತರ ಪಾಲಾರ್, ದಕ್ಷಿಣ ಪೆನ್ನಾರ್, ಚಿತ್ರಾವತಿ, ಅರ್ಕಾವತಿ ಮತ್ತು ಪಾಪಾಗ್ನಿ ನದಿಗಳು ನಂದಿ ಬೆಟ್ಟಗಳಲ್ಲಿ ಜನಿಸುತ್ತವೆ. ಇದು ಚಿಕ್ಕಬಳ್ಳಾಪುರ ಪಾಳೇಗಾರರು, ಟಿಪ್ಪು ಸುಲ್ತಾನ್, ಮರಾಠರು ಮತ್ತು ಅಂತಿಮವಾಗಿ ಬ್ರಿಟಿಷರ ನಿಯಂತ್ರಣದಲ್ಲಿತ್ತು. ಪ್ರಾಚೀನ ಶಾಸನಗಳಲ್ಲಿ ಇದನ್ನು ‘ನಂದಿಗಿರಿ’ ಎಂದು ಕರೆಯಲಾಗುತ್ತಿತ್ತು. ಸಮುದ್ರ ಮಟ್ಟದಿಂದ 4850 ಅಡಿಗಳಷ್ಟು ಎತ್ತರದಲ್ಲಿರುವ ನಂದಿ ಬೆಟ್ಟ ತಂಪು ಗಾಳಿ ಮತ್ತು ಪ್ರಶಾಂತ ಪರಿಸರವು ಬ್ರಿಟಿಷ್ ಮತ್ತು ಟಿಪ್ಪು ಸುಲ್ತಾನರಿಗೆ ಬೇಸಿಗೆಯ ತಾಣವಾಗಿತ್ತು. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದುದ್ದಕ್ಕೂ ಆಹ್ಲಾದಕರವಾಗಿರುತ್ತದೆ ಮತ್ತು ಅಲ್ಲಿ ನೀವು ಆರಾಮವಾಗಿ ಸುತ್ತಾಡಬಹುದು. ಸಾಹಸ ಕ್ರೀಡಾ ಪ್ರಿಯರು ಪ್ಯಾರಾಸೈಲಿಂಗ್‌ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದು. ಆದರ್ಶ ಚಾರಣ ತಾಣವಾದ ನಂದಿ ಬೆಟ್ಟದಿಂದ ಭೇಟಿ ನೀಡಬಹುದಾದ ಪ್ರಮುಖ ಸ್ಥಳಗಳು ವಾಯುವ್ಯದಲ್ಲಿ -ಚನ್ನಕೇಶವ ಬೆಟ್ಟ (4762 ಅಡಿ), ನೈರುತ್ಯದಲ್ಲಿ ಬ್ರಹ್ಮಗಿರಿ (4657 ಅಡಿ), ಉತ್ತರದಲ್ಲಿ ಸ್ಕಂದಗಿರಿ (4749 ಅಡಿ) ದಕ್ಷಿಣಕ್ಕೆ ಕಡಿದಾದ ಪ್ರಪಾತ ಮತ್ತು “ಶ್ರವಣ ತೀರ್ಥ” ಎಂದು ಕರೆಯಲ್ಪಡುವ ಬಾವಿ.

ನಂದಿ ಬೆಟ್ಟಕ್ಕೆ ಏಕೆ ಭೇಟಿ ನೀಡಬೇಕು:

ಐತಿಹಾಸಿಕ ಮಹತ್ವ: ಇಲ್ಲಿ ಕೋಟೆಯ ಗೋಡೆಗಳನ್ನು ಚಿಕ್ಕಬಳ್ಳಾಪುರದ ಪಾಳೇಗಾರರು ನಿರ್ಮಿಸಿದರು ಮತ್ತು ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಇದನ್ನು ಇನ್ನೂ ಭದ್ರಗೊಳಿಸಿದರು ಎಂದು ನಂಬಲಾಗಿದೆ. ಇದು ಸ್ವಲ್ಪ ಸಮಯದವರೆಗೆ ಮರಾಠರ ನಿಯಂತ್ರಣದಲ್ಲಿತ್ತು.  ನೈರುತ್ಯ ದಿಕ್ಕಿನಲ್ಲಿ ಪ್ರಪಾತಕ್ಕೆ “ಟಿಪ್ಪು ಡ್ರಾಪ್” ಎಂಬ ಹೆಸರು ಇದೆ, ಇಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳನ್ನು ಕೆಳಗಿನ ಕಣಿವೆಯಲ್ಲಿ ತಳ್ಳಲಾಗುತ್ತಿತ್ತು ಎಂದು ನಂಬಲಾಗಿದೆ. ಪ್ರಸ್ಥಭೂಮಿಯ ಮಧ್ಯದಲ್ಲಿ, ಒಂದು ದೊಡ್ಡ ನೀರಿನ ಕೊಳವನ್ನು ಅಗೆದು ನೀರಿನ ಸಂಗ್ರಹಕ್ಕಾಗಿ ಆಯತಾಕಾರದ ಕಲ್ಲಿನ ರಚನೆಯನ್ನು ನಿರ್ಮಿಸಲಾಗಿದೆ. ಈ ಕೊಳಕ್ಕೆ ಅಮೃತ ಸರೋವರ” ಎಂದು ಹೆಸರಿಡಲಾಗಿದೆ.

ನಂದಿ ಬೆಟ್ಟದಲ್ಲಿನ ದೇವಾಲಯಗಳು: ಶಿವನಿಗೆ ಅರ್ಪಿತವಾದ ಎರಡು ಪ್ರಾಚೀನ ದೇವಾಲಯಗಳು ನಂದಿ ಬೆಟ್ಟಗಳಲ್ಲಿವೆ. ನಂದಿ ಬೆಟ್ಟದೆ ಮೇಲಿರುವ ಯೋಗನಂದೀಶ್ವರ ದೇವಸ್ಥಾನವು ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗೃಹ ಪ್ರವೇಶದ್ವಾರದಲ್ಲಿ ಅಲಂಕಾರಿಕ ಹಿತ್ತಾಳೆಯಿಂದ ಆವೃತವಾದ ಬಾಗಿಲುಗಳು ಮತ್ತು ದ್ವಾರಪಾಲಕರ ಮೂರ್ತಿಗಳು ಎರಡೂ ಬದಿಯಲ್ಲಿವೆ. ಈ ದ್ವಾರಪಾಲಕರ ಮೂರ್ತಿಗಳು ವಿಜಯನಗರ ಆಡಳಿತಗಾರ ಕೃಷ್ಣದೇವರಾಯರ ಉಡುಗೊರೆಗಳಾಗಿವೆ ಎಂದು ಹೇಳಲಾಗುತ್ತದೆ. ಭೋಗನಂದೀಶ್ವರ ದೇವಸ್ಥಾನ ನಂದಿ ಬೆಟ್ಟದ ಸಮೀಪವಿರುವ ನಂದಿ ಗ್ರಾಮ ಎಂಬ ಗ್ರಾಮದಲ್ಲಿದೆ. ಮೂಲ ದೇವಾಲಯವು 9 ನೇ ಶತಮಾನಕ್ಕೆ ಮುಂಚಿನ ಅವಧಿಗೆ ಸೇರಿದ್ದು, ಚೋಳ, ಹೊಯ್ಸಳ ಮತ್ತು ವಿಜಯನಗರ ಅವಧಿಯ ನಂತರ ಸೇರ್ಪಡೆಗಳಾಗಿವೆ. ಈ ಭೋಗನಂದೀಶ್ವರ ದೇವಾಲಯ ಸಂಕೀರ್ಣದಲ್ಲಿ, ಒಂದು ಸರಳ ರೇಖೆಯಲ್ಲಿ ಎರಡು ಪ್ರತ್ಯೇಕ ಗರ್ಭಗೃಹಗಳಿವೆ ಹಾಗೂ ಪ್ರತ್ಯೇಕ ನಂದಿಮಂಟಪವಿದೆ. ಈ ನಂದಿ ಮಂಟಪಗಳಲ್ಲಿ ಒಂದರಲ್ಲಿ ಒಂದು ಚಿಕ್ಕ ಗರ್ಭಗ್ರಹ ಕೂಡಾ ಇದೆ. 

ಉತ್ತರದ ದೇವಾಲಯವನ್ನು ಭೋಗನಂದೀಶ್ವರನಿಗೆ ಮತ್ತು ದಕ್ಷಿಣದ ದೇವಾಲಯವನ್ನು ಅರುಣಾಚಲೇಶ್ವರನಿಗೆ ಅರ್ಪಿಸಲಾಗಿದೆ. ಅವುಗಳಲ್ಲಿನ ಸೊಗಸಾದ ಕಲ್ಲಿನ ಅಂಚುಗಳು ಕುಸುರಿ ಕೆಲಸಗಾರಿಕೆ ಮತ್ತು ಕಲಾತ್ಮಕತೆಯನ್ನು ಪ್ರದರ್ಶಿಸುತ್ತವೆ.

ಟಿಪ್ಪುವಿನ ಬೇಸಿಗೆ ನಿವಾಸ: ಮೈಸೂರು ದೊರೆ ಟಿಪ್ಪು ಸುಲ್ತಾನ್ ಬಳಸಿದ ಎರಡು ಅಂತಸ್ತಿನ ಸಣ್ಣ ಕಟ್ಟಡದ ಅವಶೇಷಗಳನ್ನು ನಂದಿ ಬೆಟ್ಟದ ಮೇಲೆ ಕಾಣಬಹುದು. ಒಂದು ಕೊಳ ಮತ್ತು ಉದ್ಯಾನವನವು ಹತ್ತಿರದಲ್ಲಿವೆ.

ಉದ್ಯಾನಗಳು ಮತ್ತು ಆಟದ ಪ್ರದೇಶಗಳು: ಕುಟುಂಬಗಳು ವಿಶ್ರಾಂತಿ ಪಡೆಯಲು ಮತ್ತು ಮಕ್ಕಳು ಆಟವಾಡಲು ನಂದಿ ಬೆಟ್ಟವು ಉದ್ಯಾನ/ಆಟದ ಪ್ರದೇಶವನ್ನು ಹೊಂದಿದೆ.

ಸೂರ್ಯೋದಯ: ನಂದಿ ಬೆಟ್ಟದ ಮೇಲೆ ಸೂರ್ಯೋದಯವು ಆಕರ್ಷಕವಾಗಿದೆ. ವೀಕ್ಷಣೆಯನ್ನು ಆನಂದಿಸಲು ಸೂರ್ಯೋದಯದ ಸಮಯಕ್ಕೆ ಮುಂಚೆ ತಲುಪಲು ಪ್ರಯತ್ನಿಸಿ.

ಆಹಾರ: ನಂದಿ ಬೆಟ್ಟದ ಮೇಲೆ ಸಾಲಾಗಿ ತಿನಿಸುಗಳು ಲಭ್ಯವಿವೆ ಮತ್ತು ನಿಮ್ಮ ರುಚಿಯ ಅಗತ್ಯಗಳನ್ನು ಪೂರೈಸುತ್ತವೆ. ಹಲವಾರು ಅಂಗಡಿಯವರು ಮತ್ತು ಮಾರಾಟಗಾರರು ಸಂದರ್ಶಕರ ಅವಶ್ಯಕತೆಗಳನ್ನು ಸಹ ಪೂರೈಸುತ್ತಾರೆ. ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಹೆಚ್ಚಿನ ಉಪಹಾರ ಗೃಹಗಳನ್ನು ಹೆದ್ದಾರಿಯಲ್ಲಿ ಕಾಣಬಹುದು.

ಗಮನಿಸಬೇಕಾದ ಅಂಶಗಳು: ಕೋತಿಗಳು ಆಹಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುವುದರಿಂದ ಎಚ್ಚರವಹಿಸಿ. ಅಲ್ಲದೆ, ಬಿಡುವಿಲ್ಲದ ವಾರಾಂತ್ಯದಲ್ಲಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಬಹುದು. ಪ್ರವಾಸಿಗರು ಬೆಟ್ಟದ ಬುಡದಲ್ಲಿ ನಿಲುಗಡೆ ಮಾಡಬೇಕಾಗುತ್ತದೆ ಮತ್ತು ನಂದಿ ಬೆಟ್ಟವನ್ನು ತಲುಪಲು ಶಟಲ್ ಬಸ್ಸುಗಳನ್ನು ಪಡೆಯಬಹುದು. ಇಲ್ಲದಿದ್ದರೆ, ನೀವು ವಾಹನ ನಿಲುಗಡೆವರೆಗೆ ವಾಹನ ಚಲಾಯಿಸಿ ಅಲ್ಲಿಂದ ಮೇಲಕ್ಕೆ ಏರಬಹುದು.

ನಂದಿ ಬೆಟ್ಟವನ್ನು ತಲುಪುವುದು ಹೇಗೆ: ನಂದಿ ಬೆಟ್ಟವನ್ನು 60 ಕಿ.ಮೀ ದೂರದಲ್ಲಿರುವ ಬೆಂಗಳೂರಿನಿಂದ ಖಾಸಗಿ ವಾಹನ ಅಥವಾ ಟ್ಯಾಕ್ಸಿಯಲ್ಲಿ ತಲುಪಬಹುದು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಂದಿ ಬೆಟ್ಟದಿಂದ ಕೇವಲ 35 ಕಿ.ಮೀ ದೂರದಲ್ಲಿದೆ.

ನಂದಿ ಬೆಟ್ಟದ ಜೊತೆ ಮುದ್ದೇನಹಳ್ಳಿ (ಸರ್ ಎಂ ವಿಶ್ವವೇಶ್ವರಯ್ಯ ಅವರ ಜನ್ಮಸ್ಥಳ) ನಂದಿ ಬೆಟ್ಟದಿಂದ 20 ಕಿ.ಮೀ, ದೇವನಹಳ್ಳಿ ಕೋಟೆ (25 ಕಿ.ಮೀ), ಘಾಟಿ ಸುಬ್ರಮಣ್ಯ ದೇವಸ್ಥಾನ (30 ಕಿ.ಮೀ) ಮತ್ತು ಭೋಗನಂದೀಶ್ವರ ದೇವಸ್ಥಾನ (15 ಕಿ.ಮೀ) ಗೆ ಭೇಟಿ ನೀಡಬಹುದು.

ನಂದಿ ಬೆಟ್ಟದ ಬಳಿ ಉಳಿಯಲು ಸ್ಥಳಗಳು: ಕೆ ಎಸ್ ಟಿ ಡಿ ಸಿ(KSTDC)- ಮಯೂರ ಪೈನ್ ಟಾಪ್ ನಂದಿ ಬೆಟ್ಟದ ಮೇಲೆ ವಸತಿ ಹೊಂದಿರುವ ಏಕೈಕ ಹೋಟೆಲ್ ಆಗಿದೆ. ರಾತ್ರಿಯ ತಂಗುವಿಕೆಗಾಗಿ ಸಂಜೆ 05:00 ಕ್ಕಿಂತ ಮೊದಲು ತಲುಪಬೇಕು, www.kstdc.co ಸೈಟ್ ಮೂಲಕ ಬುಕಿಂಗ್ ಮಾಡಬಹುದು

Tour Location

Leave a Reply

Accommodation
Meals
Overall
Transport
Value for Money