‘ಒಂದು ರಾಜ್ಯ ಹಲವು ಜಗತ್ತುಗಳು’ ಎಂಬ ಧ್ಯೇಯವಾಕ್ಯಕ್ಕೆ ತಕ್ಕಂತೆ, ಕರ್ನಾಟಕವು ಪ್ರತಿಯೊಬ್ಬ ಪ್ರಯಾಣಿಕನಿಗೂ ಅತ್ಯುತ್ತಮ ತಾಣವಾಗಿದೆ. ರಾಜ್ಯದ ಗಮನಾರ್ಹ ಪರಂಪರೆ ಮತ್ತು ಇತಿಹಾಸವು ಇತಿಹಾಸ ಪ್ರೇಮಿಗಳನ್ನು, ಪ್ರವಾಸಿಗರನ್ನು, ವಿದ್ಯಾರ್ಥಿಗಳನ್ನು ಹಾಗೂ ಆ ಕಾಲದ ಅದ್ಭುತ ವಾಸ್ತುಶಿಲ್ಪವನ್ನು ಮೆಚ್ಚುವ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣಗಳಿರುವುದರಿಂದ ಉತ್ತರ ಕರ್ನಾಟಕ ಭಾಗವು ಪ್ರವಾಸೋದ್ಯಮದ ದೃಷ್ಟಿಯಿಂದ ಸದಾ ವಿಶೇಷವಾಗಿದೆ. ಬಾದಾಮಿ – ಐಹೊಳೆ – ಪಟ್ಟದಕಲ್ಲು – ಹಂಪಿ ಪ್ರವಾಸವು ಕರ್ನಾಟಕಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಖಂಡಿತವಾಗಿಯೂ ವೀಕ್ಷಿಸಲೇಬೇಕಾದ ಪಟ್ಟಿಯಲ್ಲಿದೆ.
ಒಮ್ಮೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ, ಪ್ರಸ್ತುತ ವಿಜಯನಗರ ಜಿಲ್ಲೆಯ ಹೃದಯಭಾಗದಲ್ಲಿ ಹಂಪಿ ಇದೆ. ವಿಜಯನಗರವು ದಖನ್ ಭಾಗವಾಗಿತ್ತು ಮತ್ತು ಇಡೀ ದಕ್ಷಿಣ ಭಾರತವನ್ನು ಆಳಿದ, ಬಹುಶಃ ಭಾರತೀಯ ಉಪಖಂಡದಲ್ಲೇ ಅತ್ಯಂತ ಪ್ರಬಲವಾದ ಸಾಮ್ರಾಜ್ಯವಾಗಿತ್ತು. ವಿಜಯನಗರ ಸಾಮ್ರಾಜ್ಯದ ಅವಧಿಯನ್ನು ಸಂಸ್ಕೃತಿ ಮತ್ತು ಸಾಹಿತ್ಯದ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ.
ಬೆಂಗಳೂರಿನಿಂದ ಕ್ರಮಿಸುವ ದೂರವನ್ನು ಗಮನದಲ್ಲಿಟ್ಟುಕೊಂಡು ೪ ದಿನಗಳ ಪ್ರವಾಸ ಯೋಜನೆಯನ್ನು ಮಾಡಬಹುದು. ಐಹೊಳೆ-ಪಟ್ಟದಕಲ್ಲು, ಹಂಪಿ ಮತ್ತು ಬಾದಾಮಿಗೆ ತಲಾ ಒಂದು ದಿನ ಸಾಕಾಗುತ್ತದೆ. ಆದರೆ ನೀವು ಪಾರಂಪರಿಕ ತಾಣಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಬಯಸಿದರೆ, ಇನ್ನು ಕೆಲವು ದಿನಗಳು ಹೆಚ್ಚುವರಿಯಾಗಿ ಉಳಿದುಕೊಳ್ಳಬಹುದು.
ದಿನ ೧ – ಹಂಪಿ

ಭಾರತೀಯ ನೋಟಿನ ೫೦ ರೂಪಾಯಿ ಮುಖಬೆಲೆಯ ಮೇಲೆ ಕಾಣಸಿಗುವ ಪ್ರಸಿದ್ಧ ಕಲ್ಲಿನ ರಥಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ. ವಿಶಾಲವಾದ ಅವಶೇಷಗಳ ಪ್ರದೇಶ, ಜೀವಂತ ದೇವಾಲಯ, ಕಮಲ ಮಹಲ್ ಮತ್ತು ಆವರಣದಲ್ಲಿರುವ ಇನ್ನೂ ಅನೇಕ ಪಾರಂಪರಿಕ ತಾಣಗಳು ಹಂಪಿಯನ್ನು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸುವ ಸ್ಮಾರಕವನ್ನಾಗಿ ಮಾಡಿವೆ. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ರಾಜಧಾನಿಯಾಗಿದ್ದ ಹಂಪಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ. ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ತಾಣವಾಗಿರುವ ಹಂಪಿ ತನ್ನ ಐತಿಹಾಸಿಕ ಮಹತ್ವ, ಪರಂಪರೆ, ದೇವಾಲಯಗಳು, ಅವಶೇಷಗಳು ಮತ್ತು ಸೊಗಸಾದ ಕಲೆಗೆ ಹೆಸರುವಾಸಿಯಾಗಿದೆ.
ಹಂಪಿಯ ಮುಖ್ಯ ಆಕರ್ಷಣೆಗಳಲ್ಲಿ ವಿರೂಪಾಕ್ಷ ದೇವಾಲಯ, ಉಗ್ರನರಸಿಂಹ ವಿಗ್ರಹ, ಕಮಲ ಮಹಲ್, ಹಂಪಿ ಬಜಾರ್, ವಿಠಲ ದೇವಾಲಯ ಮತ್ತು ಇನ್ನೂ ಹಲವು ಸೇರಿವೆ. ದೈತ್ಯ ಗೋಪುರವನ್ನು ಹೊಂದಿರುವ ಹಾಗೂ ಶಿವನಿಗೆ ಅರ್ಪಿತವಾದ ೭ನೇ ಶತಮಾನದ ವಿರೂಪಾಕ್ಷ ದೇವಾಲಯವು ಹಂಪಿಯ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯದಲ್ಲಿ ಇಂದಿಗೂ ಪೂಜೆ ಪುರಸ್ಕಾರಗಳು ನಡೆಯುತ್ತಿದ್ದು, ಭಕ್ತರು ಪೂಜೆ ಸಲ್ಲಿಸುತ್ತಾರೆ. ಇತರ ಆಕರ್ಷಣೆಗಳಲ್ಲಿ ಸಾಸಿವೆಕಾಳು ಗಣೇಶ, ಕಡಲೆಕಾಳು ಗಣೇಶ, ಆನೆಗುಂದಿ, ವಿಜಯ ವಿಠಲ ದೇವಾಲಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಸೇರಿವೆ. .
ಹಂಪಿಯ ಅವಶೇಷಗಳು ಮತ್ತು ಅದರ ವೈಭವೋಪೇತ ಐತಿಹಾಸಿಕ ಗತಕಾಲವನ್ನು ಅರ್ಥಮಾಡಿಕೊಳ್ಳಲು ಮತ್ತು ಅಧ್ಯಯನ ಮಾಡಲು ಹಂಪಿಯಲ್ಲಿ ಒಂದಿಷ್ಟು ಸಮಯ ಕಳೆಯಿರಿ
ದಿನ ೨ – ಐಹೊಳೆ

ಮುಂದಿನ ಸಮೀಪದ ತಾಣವಾಗಿ ಐಹೊಳೆಯನ್ನು ಯೋಜಿಸಬಹುದು. ಹಂಪಿಯಿಂದ ಕೇವಲ ೧೪೦ ಕಿ.ಮೀ ದೂರದಲ್ಲಿರುವ ಐಹೊಳೆಯನ್ನು ರಸ್ತೆ ಮೂಲಕ ತಲುಪಲು ಸುಮಾರು ಎರಡೂವರೆ ಗಂಟೆಗಳು ಬೇಕಾಗುತ್ತದೆ. ಕ್ರಿ.ಶ ೪ನೇ ಶತಮಾನದ ಸುಮಾರು ೧೨೦ ದೇವಾಲಯಗಳ ಸಮೂಹವನ್ನು ಹೊಂದಿರುವ ಐಹೊಳೆ, ಉತ್ತರ ಕರ್ನಾಟಕದ ಮಲಪ್ರಭಾ ನದಿ ಕಣಿವೆಯ ಉದ್ದಕ್ಕೂ ಇರುವ ಐತಿಹಾಸಿಕ ತಾಣವಾಗಿದೆ. ಇತಿಹಾಸ, ಪುರಾತತ್ವ, ವಾಸ್ತುಶಿಲ್ಪ, ಪರಂಪರೆ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಇರುವವರಿಗೆ ಐಹೊಳೆ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ.
ಐಹೊಳೆಯ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಆಕರ್ಷಣೆ ಎಂದರೆ ದುರ್ಗಾ ದೇವಾಲಯ. ದೇವಾಲಯಗಳ ಈ ಸಮೂಹವು ಮುಖ್ಯವಾಗಿ ಹಿಂದೂ, ಜೈನ ಮತ್ತು ಬೌದ್ಧ ದೇವಾಲಯಗಳನ್ನು ಒಳಗೊಂಡಿದೆ. ದುರ್ಗಾ ದೇವಾಲಯದ ಸಂಕೀರ್ಣದಲ್ಲಿ ಕಲಾ ಗ್ಯಾಲರಿ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವೂ ಇದ್ದು, ಅದನ್ನು ಮರೆಯದೇ ವೀಕ್ಷಿಸಬೇಕು. ಈ ಪ್ರದೇಶದಲ್ಲಿ ಉತ್ಖನನ ಮಾಡಲಾದ ಅಪರೂಪದ ಪುರಾತನ ವಸ್ತುಗಳ ಸಂಗ್ರಹ ಇಲ್ಲಿದೆ. ಹೆಸರಿಗೆ ತದ್ವಿರುದ್ಧವಾಗಿ, ಲಾಡ್ ಖಾನ್ ದೇವಾಲಯವು ಹಿಂದೂ ಧರ್ಮದ ಶೈವ, ವೈಷ್ಣವ ಮತ್ತು ಶಕ್ತಿ ಅಥವಾ ದುರ್ಗಾ ಪರಂಪರೆಯ ಸಾಂಪ್ರದಾಯಿಕ ಸಂಕೇತಗಳನ್ನು ಪ್ರದರ್ಶಿಸುತ್ತದೆ.
‘ಭಾರತೀಯ ಬಂಡೆಗೆತ್ತಿದ ವಾಸ್ತುಶಿಲ್ಪದ ತೊಟ್ಟಿಲು’ ಎಂದೂ ಕರೆಯಲ್ಪಡುವ ಐಹೊಳೆ, ಉತ್ತರ ಕರ್ನಾಟಕ ಪ್ರದೇಶವನ್ನು ಆಳಿದ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು. ಈ ದೇವಾಲಯಗಳನ್ನು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಸಂರಕ್ಷಿಸುತ್ತಿದೆ. ಶಿವ ಮತ್ತು ಪಾರ್ವತಿಯ ಮೂರ್ತಿಗಳನ್ನು ಹೊಂದಿರುವ ೬ನೇ ಶತಮಾನದ ರಾವಣಫಡಿ ಗುಹೆ ಮರೆಯದೇ ವೀಕ್ಷಿಸಬೇಕಾದ ಇನ್ನೊಂದು ಆಕರ್ಷಣೆಯಾಗಿದೆ. ಈ ಗುಹೆಗಳು ಶಿವ, ಪಾರ್ವತಿ, ಗಣೇಶ ಮತ್ತು ವಿಷ್ಣುವಿನ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿವೆ.
ಇತರ ಪ್ರಸಿದ್ಧ ದೇವಾಲಯಗಳೆಂದರೆ ಗರುಡಗುಡಿ, ಚಕ್ರಗುಡಿ, ಅಂಬಿಗರಗುಡಿ, ರಾಚಿಗುಡಿ, ಕುಂತಿಗುಡಿ, ಹಳ್ಳಿಬಸಪ್ಪ ಗುಡಿ, ಬಡಿಗೇರಗುಡಿ, ತ್ರಯಂಬಕೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ ಮತ್ತು ಜ್ಯೋತಿರ್ಲಿಂಗ ದೇವಾಲಯ.
ದಿನ ೩ – ಪಟ್ಟದಕಲ್ಲು

ಐಹೊಳೆಯಿಂದ ಕೇವಲ ೧೩ ಕಿ.ಮೀ ದೂರದಲ್ಲಿರುವ ಪಟ್ಟದಕಲ್ಲು ತಲುಪಲು ಸುಮಾರು ೨೦ ನಿಮಿಷ ಬೇಕಾಗುತ್ತದೆ. ೭ ಮತ್ತು ೮ನೇ ಶತಮಾನದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಇದು ಹಿಂದೂ ಮತ್ತು ಜೈನ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ವಿಶಿಷ್ಟ ಕೆತ್ತನೆಗಳು ಉತ್ತರ ಮತ್ತು ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಗಳೆರಡನ್ನೂ ಬಿಂಬಿಸುತ್ತವೆ. ಚಾಲುಕ್ಯರು ಪಟ್ಟದಕಲ್ಲನ್ನು ಪಟ್ಟಾಭಿಷೇಕ ಸಮಾರಂಭಗಳಿಗೆ ಬಳಸುತ್ತಿದ್ದರು. ಪಟ್ಟದಕಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ವಿರೂಪಾಕ್ಷ ದೇವಾಲಯವೂ ಒಂದು.
ತನ್ನ ಗಂಡ ಮತ್ತು ರಾಜ ವಿಕ್ರಮಾದಿತ್ಯನು ಪಲ್ಲವರ ವಿರುದ್ಧ ಸಾಧಿಸಿದ ವಿಜಯದ ಸವಿನೆನಪಿಗಾಗಿ ರಾಣಿ ಲೋಕಮಹಾದೇವಿಯು ಕ್ರಿ.ಶ ೮ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದಳು. ವಿರೂಪಾಕ್ಷ ದೇವಾಲಯದ ಅಸಮಾನ ಕಲಾತ್ಮಕತೆಯು ಉಗ್ರ ನರಸಿಂಹ ಮತ್ತು ನಟರಾಜನ ಶಿಲ್ಪಗಳನ್ನು ಪ್ರದರ್ಶಿಸುತ್ತದೆ. ಈ ಸಂಕೀರ್ಣದಲ್ಲಿರುವ ಇತರ ಜನಪ್ರಿಯ ದೇವಾಲಯಗಳೆಂದರೆ ಪಾಪನಾಥ ದೇವಾಲಯ, ಗಲಗನಾಥ ದೇವಾಲಯ, ಸಂಗಮೇಶ್ವರ ದೇವಾಲಯ, ಚಂದ್ರಶೇಖರ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಜಂಬುಲಿಂಗೇಶ್ವರ ದೇವಾಲಯ ಮತ್ತು ಕಾಡಸಿದ್ಧೇಶ್ವರ ದೇವಾಲಯ.
ಪಟ್ಟದಕಲ್ಲಿನ ಅತ್ಯಂತ ಆಕರ್ಷಕ ಕಾರ್ಯಕ್ರಮಗಳಲ್ಲಿ ಪಟ್ಟದಕಲ್ಲು ಉತ್ಸವವೂ ಒಂದು. ಪಟ್ಟದಕಲ್ಲು ದೇವಾಲಯಗಳ ಹಿನ್ನೆಲೆಯಲ್ಲಿ ಸಂಗೀತ ಮತ್ತು ನೃತ್ಯದ ಮಂತ್ರಮುಗ್ಧಗೊಳಿಸುವ ಸಮ್ಮಿಲನವು ವೀಕ್ಷಕರಿಗೆ ಕಣ್ಣಿನ ಹಬ್ಬವನ್ನು ನೀಡುತ್ತದೆ.
ದಿನ ೪ – ಬಾದಾಮಿ

ಪೂರ್ವದಲ್ಲಿ ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಮತ್ತು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯನ್ನು ೬ ಮತ್ತು ೮ನೇ ಶತಮಾನದ ನಡುವೆ ನಿರ್ಮಿಸಲಾಯಿತು. ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿರುವ ಬಾದಾಮಿಯು ತನ್ನ ಕೆಂಪು ಮರಳುಕಲ್ಲಿನ ಗುಹಾ ದೇವಾಲಯಗಳು ಮತ್ತು ಕೆತ್ತನೆಗಳಿಗಾಗಿ ಪ್ರವಾಸಿಗರನ್ನು, ಪ್ರಯಾಣಿಕರನ್ನು, ಸಂಶೋಧಕರನ್ನು ಮತ್ತು ಇತಿಹಾಸ ಹಾಗೂ ಪರಂಪರೆಯನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತದೆ. ಬಾದಾಮಿ ಗುಹಾ ದೇವಾಲಯದ ಸಂಕೀರ್ಣವು ಒಂದು ಜೈನ ದೇವಾಲಯ ಮತ್ತು ಮೂರು ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ.
ಬಾದಾಮಿಯ ಗುಹೆಗಳು ಶಿವನ ತಾಂಡವ ನೃತ್ಯ, ವಿಷ್ಣು ಮತ್ತು ಅವನ ಅವತಾರಗಳನ್ನು ಬಿಂಬಿಸುವ ಕಥಾವಸ್ತುಗಳನ್ನು ಆಧರಿಸಿವೆ. ಅಗಸ್ತ್ಯ ಸರೋವರ ಮತ್ತು ಗುಹಾ ದೇವಾಲಯಗಳ ಪ್ರಕೃತಿ ಸೌಂದರ್ಯದ ಹಿನ್ನೆಲೆಯು ಅತ್ಯಂತ ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಛಾಯಾಗ್ರಹಣ ಪ್ರಿಯರನ್ನು ಆಕರ್ಷಿಸುತ್ತದೆ. ಬಾದಾಮಿ ಬಳಿ ಮರೆಯದೇ ವೀಕ್ಷಿಸಬೇಕಾದ ಇನ್ನೊಂದು ಆಕರ್ಷಣೆ ಎಂದರೆ ಭೂತನಾಥ ದೇವಾಲಯ ಸಮೂಹ. ಮುಖ್ಯ ಬಾದಾಮಿ ಗುಹಾ ದೇವಾಲಯಗಳಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಈ ಮರಳುಕಲ್ಲಿನ ದೇವಾಲಯಗಳ ಸಮೂಹವನ್ನು ಕ್ರಿ.ಶ ೭ ರಿಂದ ೧೧ನೇ ಶತಮಾನದ ಅವಧಿಯಲ್ಲಿ ನಿರ್ಮಿಸಲಾಗಿದೆ.
ತಲುಪುವ ಮಾರ್ಗ
ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಬಾದಾಮಿಯನ್ನು ಒಳಗೊಂಡ ಉತ್ತರ ಕರ್ನಾಟಕದ ಪ್ರವಾಸವನ್ನು ರಸ್ತೆ ಮೂಲಕ ಅತ್ಯುತ್ತಮವಾಗಿ ಪೂರ್ಣಗೊಳಿಸಬಹುದು. ಹಂಪಿಯನ್ನು ಕೇಂದ್ರಸ್ಥಾನವಾಗಿ ಇಟ್ಟುಕೊಂಡರೆ, ವೀಕ್ಷಿಸಬೇಕಾದ ಇತರ ಸ್ಥಳಗಳು ೧೫೦ ಕಿ.ಮೀ ವ್ಯಾಪ್ತಿಯಲ್ಲಿವೆ.
ವಿಮಾನದ ಮೂಲಕ
ಹಂಪಿ ಅಥವಾ ಬಾದಾಮಿಯನ್ನು ಬೆಂಗಳೂರು ಅಥವಾ ಮಂಗಳೂರಿನಿಂದ ವಿಮಾನದ ಮೂಲಕ ತಲುಪಬಹುದು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹಂಪಿಯಿಂದ ೩೪೦ ಕಿ.ಮೀ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಾದಾಮಿಯಿಂದ ೪೬೦ ಕಿ.ಮೀ ದೂರದಲ್ಲಿದೆ.
ರೈಲಿನ ಮೂಲಕ
ಹಂಪಿ ಮತ್ತು ಬಾದಾಮಿ ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಂದ ರೈಲು ಸಂಪರ್ಕವನ್ನು ಹೊಂದಿವೆ. ಭಾರತದ ಇತರ ಎಲ್ಲಾ ಪ್ರಮುಖ ನಗರಗಳಿಂದ ಬರುವ ರೈಲುಗಳಿಗೆ, ರೈಲುಗಳನ್ನು ಬದಲಾಯಿಸಲು ಗುಂತಕಲ್ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ಹಂಪಿಯನ್ನು ತಲುಪಲು ಹೊಸಪೇಟೆ ರೈಲು ನಿಲ್ದಾಣವಾಗಿದೆ.
ರಸ್ತೆಯ ಮೂಲಕ
ಈ ಯುನೆಸ್ಕೋ ಪಾರಂಪರಿಕ ತಾಣಗಳನ್ನು ತಲುಪಲು ರಸ್ತೆ ಮಾರ್ಗವೇ ಅತ್ಯುತ್ತಮ ಮತ್ತು ಸುಲಭವಾದ ದಾರಿಯಾಗಿದೆ. ರಾಜ್ಯ ಸಾರಿಗೆ ಬಸ್‌ಗಳು ಕರ್ನಾಟಕದ ಹೆಚ್ಚಿನ ಪ್ರಮುಖ ಬಸ್ ನಿಲ್ದಾಣಗಳಿಂದ ಸಂಚರಿಸುತ್ತವೆ. ಈ ಹೆಚ್ಚಿನ ಸ್ಥಳಗಳಲ್ಲಿ ಲೋಕಲ್ ಟ್ಯಾಕ್ಸಿಗಳು ಸಹ ಲಭ್ಯವಿವೆ. ಹಂಪಿಯಿಂದ ಕೇವಲ ೧೨ ಕಿ.ಮೀ ದೂರದಲ್ಲಿರುವ ಹೊಸಪೇಟೆ ಸಮೀಪದ ಬಸ್ ನಿಲ್ದಾಣವಾಗಿದ್ದು, ಅಲ್ಲಿಂದ ಸ್ಥಳೀಯ ಆಟೋ ರಿಕ್ಷಾ ಮೂಲಕ ಹಂಪಿಯನ್ನು ತಲುಪಬಹುದು.
ಪ್ರವಾಸ ಸಲಹೆಗಳು
- ಉತ್ತರ ಕರ್ನಾಟಕದಲ್ಲಿ ವಾತಾವರಣವು ಸಾಮಾನ್ಯವಾಗಿ ಬಿಸಿಲು ಮತ್ತು ಒಣಹವೆಯಿಂದ ಕೂಡಿರುತ್ತದೆ. ಆದಾಗ್ಯೂ, ಚಳಿಗಾಲದಲ್ಲಿ ತಂಪಾಗಿರುತ್ತದೆ. ಈ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ನವೆಂಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ.
- ಚಳಿಗಾಲದ ಸಂಜೆಗಾಗಿ ಬೆಚ್ಚಗಿನ ಉಡುಪುಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.
- ಸ್ಥಳೀಯ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಗೌರವಿಸಲು ಸೂಕ್ತವಾಗಿ ಉಡುಪು ಧರಿಸಿ.
- ಸ್ಥಳೀಯ ರೆಸ್ಟೋರೆಂಟ್‌ಗಳು ಅಥವಾ ಹೋಮ್‌ಸ್ಟೇಗಳಲ್ಲಿ ಜೋಳದ ರೊಟ್ಟಿ ಊಟದಂತಹ ಉತ್ತರ ಕರ್ನಾಟಕದ ಸ್ಥಳೀಯ ಆಹಾರವನ್ನು ಸವಿಯಿರಿ.
- ಸಾಕಷ್ಟು ನಡೆಯಬೇಕಿರುವುದರಿಂದ ಆರಾಮದಾಯಕ ಶೂಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಿ.
- ಸನ್‌ಸ್ಕ್ರೀನ್ ಮತ್ತು ಹ್ಯಾಟ್ ಧರಿಸಿ. ಹಗಲಿನಲ್ಲಿ ಬಿಸಿಲು ಕೊಂಚ ಹೆಚ್ಚಿರಬಹುದು.
- ದೇವಾಲಯಗಳು ಮತ್ತು ಇತರ ಸ್ಮಾರಕಗಳಿಗೆ ಭೇಟಿ ನೀಡಲು ಮುಂಜಾನೆ ಅಥವಾ ಸಂಜೆಯ ಸಮಯ ಅತ್ಯುತ್ತಮವಾಗಿದೆ.
- ಹೊಸಪೇಟೆ ಅಥವಾ ಹಂಪಿ ದೊಡ್ಡ ನಗರವಾಗಿರುವುದರಿಂದ, ಹೆಚ್ಚಿನ ಸ್ಟಾರ್ ಹೋಟೆಲ್‌ಗಳು ಹಂಪಿ ಮತ್ತು ಸುತ್ತಮುತ್ತ ಲಭ್ಯವಿವೆ.
- ಹೆಚ್ಚಿನ ದೇವಾಲಯಗಳು ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೆ ತೆರೆದಿರುತ್ತವೆ. (ಪ್ರತ್ಯೇಕ ದೇವಾಲಯಗಳಿಗೆ ಭೇಟಿ ನೀಡುವ ಮೊದಲು ದಯವಿಟ್ಟು ಸ್ಥಳೀಯ ಸಮಯವನ್ನು ಪರಿಶೀಲಿಸಿ).
ಇತರ ಪ್ರಮುಖ ಆಕರ್ಷಣೆಗಳು
ಪ್ರಸಿದ್ಧ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವಾಗ, ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಲೇಬೇಕಾದ ಇನ್ನು ಹಲವು ಆಕರ್ಷಣೆಗಳು ಮತ್ತು ಪ್ರಮುಖ ಸ್ಥಳಗಳಿವೆ.
- ಚಿತ್ರದುರ್ಗ ಕೋಟೆ ಆ ಕಾಲದ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್‌ನ ಅದ್ಭುತಗಳಲ್ಲಿ ಒಂದಾಗಿದೆ.
- ವಾಣಿ ವಿಲಾಸ ಸಾಗರ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಇದನ್ನು ಹೆಚ್ಚಾಗಿ ಚಿತ್ರದುರ್ಗ ಕೋಟೆಯೊಂದಿಗೆ ವೀಕ್ಷಿಸಲಾಗುತ್ತದೆ.
- ಮಹಾಕೂಟ ಚಾರಣವು ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ, ವಿಶೇಷವಾಗಿ ಸಾಹಸ ಪ್ರಿಯರಿಗೆ.
- ಚಾಲುಕ್ಯ ಉತ್ಸವ: ಪ್ರತಿವರ್ಷ ಫೆಬ್ರವರಿಯಲ್ಲಿ ಬಾದಾಮಿ ಮತ್ತು ಐಹೊಳೆಯಲ್ಲಿ ಆಚರಿಸಲಾಗುವ ವಾರ್ಷಿಕ ಸಾಂಸ್ಕೃತಿಕ ಮತ್ತು ಪಾರಂಪರಿಕ ಉತ್ಸವವು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಸಂಗೀತ ಉತ್ಸವವು ಕ್ರೀಡಾ ಪಂದ್ಯಗಳು ಮತ್ತು ಸ್ಪರ್ಧೆಗಳು, ಕುಸ್ತಿ ಸ್ಪರ್ಧೆಗಳು, ಸಾಹಸ ಪ್ರದರ್ಶನಗಳು ಮತ್ತು ಕಲಾ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.
- ಮಹಾಕೂಟ ದೇವಾಲಯಗಳು: ಬಾದಾಮಿಯಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಮಹಾಕೂಟ ದೇವಾಲಯಗಳನ್ನು ೬ ಮತ್ತು ೮ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಮಹಾಕೂಟೇಶ್ವರ ದೇವಾಲಯ, ಅರ್ಧನಾರೀಶ್ವರ ಮತ್ತು ಇತರ ಶಿವನ ದೇವಾಲಯಗಳು ಭೇಟಿ ನೀಡಲು ಯೋಗ್ಯವಾಗಿವೆ.
