ಹುಲಿ ವೇಷ ಕರಾವಳಿ ಕರ್ನಾಟಕ ಭಾಗದಲ್ಲಿ ಕಂಡು ಬರುವ ವಿಶಿಷ್ಟ ನೃತ್ಯ. ನವರಾತ್ರಿ ಹಬ್ಬದ ದಿನಗಳಲ್ಲಿ ಸ್ಥಳೀಯ ಯುವಕರು ಹುಲಿ ವೇಷವನ್ನು ಧರಿಸಿ ಕುಣಿದು ಸಾರ್ವಜನಿಕರನ್ನು ರಂಜಿಸುತ್ತಾರೆ.
ಹಿನ್ನೆಲೆ:
ದುರ್ಗಾ ದೇವಿಗೆ ಗೌರವ ಸಲ್ಲಿಸಲು ಹುಲಿ ವೇಷವನ್ನು ಧರಿಸಲಾಗುತ್ತದೆ. ದುರ್ಗೆಯ ಅಧಿಕೃತ ಪ್ರಾಣಿ ಹುಲಿ. ದುರ್ಗಾ ದೇವಿಯು ತನ್ನ ಆಕ್ರಮಣಕಾರಿ ನಿಲುವಿಗೆ ಹೆಸರುವಾಸಿಯಾಗಿದ್ದಾಳೆ ಮತ್ತು ದುಷ್ಟ ಶಕ್ತಿಗಳನ್ನು ತನ್ನ ಭಕ್ತರಿಂದ ದೂರವಿಡುವ ಸಾಮರ್ಥ್ಯ ಹೊಂದಿದ್ದಾಳೆ. ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಸಂಕೇತವಾಗಿ ಹುಲಿವೇಷದ ಆಚರಣೆ ನಡೆಯುತ್ತದೆ.
ಆಚರಣೆಯ ವಿವರ:
ಹುಲಿ ವೇಷ ಧರಿಸುವ ಯುವಕರು ಹುಲಿಯ ಮುಖವಾಡ, ದೇಹದ ಮೇಲೆ ಹುಲಿ ಪಟ್ಟೆಗಳನ್ನು ಹೋಲುವ ಚಿತ್ತಾರಗಳು, ಹಳದಿ ಅಥವಾ ಕಿತ್ತಳೆ ಬಣ್ಣದ ಚಡ್ಡಿ ಮತ್ತಿತರ ವೇಷಭೂಷಣ ಧರಿಸುತ್ತಾರೆ.
ಹತ್ತಾರು ಜನರು ಹುಲಿಯಂತೆ ವೇಷಧರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ನೃತ್ಯ ಮಾಡುತ್ತಾ, ಡೊಳ್ಳು ಮುಂತಾದ ಸಂಗೀತ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾ ಸಾರ್ವಜನಿಕರನ್ನು ರಂಜಿಸುತ್ತಾರೆ. ಸಾರ್ವಜನಿಕರಿಂದ, ಊರಿನ ಸಿರಿವಂತರಿಂದ ದೇಣಿಗೆ ಪಡೆಯುತ್ತಾರೆ.
ಹುಲಿ ವೇಷ ಎಲ್ಲಿ ಮತ್ತು ಯಾವಾಗ ನೋಡಬಹುದು?
ವಿವಿಧ ಕರಾವಳಿ ಕರ್ನಾಟಕ ಪಟ್ಟಣಗಳಾದ ಮಂಗಳೂರು, ಉಡುಪಿ, ಕುಂದಾಪುರ, ಮೂಡುಬಿದರಿ, ಕಾರ್ಕಳ ಮುಂತಾದವುಗಳಲ್ಲಿ ಹುಲಿ ವೇಷ ನೋಡಬಹುದು. ಹುಲಿ ವೇಷ ಪ್ರದರ್ಶನವನ್ನು ನೋಡಲು ಯಾವುದೇ ನಿಗದಿತ ಸಮಯ ಮತ್ತು ಸ್ಥಳವಿಲ್ಲದಿದ್ದರೂ, ನವರಾತ್ರಿ ಹಬ್ಬದ ಸಮಯದಲ್ಲಿ ದೇವಾಲಯಗಳು, ನಗರ ಕೇಂದ್ರಗಳು, ಮುಖ್ಯ ರಸ್ತೆಗಳು ಮತ್ತು ಜನಪ್ರಿಯ ಸಾರ್ವಜನಿಕ ಸ್ಥಳಗಳ ಬಳಿ ಹುಲಿ ವೇಷದ ತಂಡ ಭೇಟಿಕೊಡುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂತಾದ ಇತರ ಜನಪ್ರಿಯ ಹಬ್ಬಗಳಲ್ಲಿಯೂ ಹುಲಿ ವೇಷವನ್ನು ಕೆಲವೆಡೆ ನೋಡಬಹುದು. ದೊಡ್ಡ ನಗರಗಳಲ್ಲಿ ವಿವಿಧ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಹುಲಿವೇಷ ತಂಡ ಭಾಗವಹಿಸುವ ಸಾಧ್ಯತೆ ಇರುತ್ತದೆ. ನೀವು ಉಳಿದುಕೊಂಡಿರುವ ಹೋಟೆಲ್ ಸಿಬ್ಬಂದಿ, ಸ್ಥಳೀಯರು ಈ ಕುರಿತು ಹೆಚ್ಚಿನ ಮಾಹಿತಿ ನೀಡಬಲ್ಲರು.