ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.
ಯಕ್ಷಗಾನದಲ್ಲಿ ಏನೇನಿರುತ್ತದೆ?
ಕಲೆ: ಪ್ರತಿ ಪ್ರದರ್ಶನವನ್ನು (ಪ್ರಸಂಗ ಎಂದು ಕರೆಯಲಾಗುತ್ತದೆ) ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳ ಇರುತ್ತದೆ.
ಸಂಗೀತ: ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಕೊಳಲು ಮತ್ತಿತರ ವಾದ್ಯಗಳನ್ನು ಬಳಸಲಾಗುತ್ತದೆ.
ವೇಷ ಭೂಷಣ: ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ ನಟನೆ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ.
ಯಕ್ಷಗಾನ ಮೇಳಗಳು: ಕರಾವಳಿ ಕರ್ನಾಟಕದಲ್ಲಿ ಹಲವು ಜನಪ್ರಿಯ ತಂಡಗಳು (ಮೇಳಗಳು ಎಂದು ಕರೆಯಲ್ಪಡುತ್ತವೆ) ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದರ್ತಿ ಮೇಳ, ಪೆರಡೂರು ಮೇಳ ಇವು ಯಕ್ಷಗಾನ ಕ್ಷೇತ್ರದ ಕೆಲವು ಪ್ರಮುಖ ಹೆಸರುಗಳು.
ಯಕ್ಷಗಾನವನ್ನು ಎಲ್ಲಿ, ಹೇಗೆ ನೋಡುವುದು?
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ನಿಮ್ಮ ಭೇಟಿಯ ಸಮಯದಲ್ಲಿ ಸಮೀಪದಲ್ಲಿ ನಡೆಯಲಿರುವ ಯಕ್ಷಗಾನ ಕಾರ್ಯಕ್ರಮಗಳನ್ನು ಗುರುತಿಸಲು ಸ್ಥಳೀಯ ಪತ್ರಿಕೆಯನ್ನು ಪರಿಶೀಲಿಸಬಹುದು ಅಥವಾ ನಿಮ್ಮ ಆತಿಥೇಯರ ಸಹಾಯ ಪಡೆಯಬಹುದಾಗಿದೆ.
ಹೆಚ್ಚಿನ ಯಕ್ಷಗಾನ ಪ್ರದರ್ಶನಗಳನ್ನು ಸ್ಥಳೀಯ ದಾನಿಗಳು ಪ್ರಾಯೋಜಿಸುತ್ತಾರೆ; ಕೆಲವನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ನಡೆಸಲಾಗುತ್ತದೆ ಮತ್ತು ಇನ್ನು ಕೆಲವು ಟಿಕೆಟ್ ಪಡೆದು ನೋಡಬಹುದಾದ ಆಟಗಳಾಗಿರುತ್ತವೆ. ಇಷ್ಟಾರ್ಥ ಸಿದ್ಧಿಯಾದರೆ ಯಕ್ಷಗಾನ ಆಟ ಪ್ರಾಯೋಜಿಸುವುದಾಗಿ ದೇವರಲ್ಲಿ ಬೇಡಿಕೊಂಡು ಅದರಂತೆ ನಡೆಸಲಾಗುವ ಯಕ್ಷಗಾನ ಪ್ರದರ್ಶನವನ್ನು ಹರಕೆ ಆಟ ಎನ್ನುತ್ತಾರೆ. ಹೆಚ್ಚಿನ ಯಕ್ಷಗಾನ ಬಯಲಾಟಗಳು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ರಾತ್ರಿಯಿಡೀ ನಡೆಯುತ್ತವೆ.ಕಲಾಭಿಮಾನಿಗಳು ರಾತ್ರಿಯಿಡಿ ಆಟವನ್ನು ಆನಂದಿಸುತ್ತಾರೆ. ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಒಂದಾದ ಯಕ್ಷಗಾನ ಪ್ರದರ್ಶನಕ್ಕೆ ಸಾಕ್ಷಿಯಾಗುವ ಅವಕಾಶವನ್ನು ಕಳೆದುಕೊಳ್ಳಲು ಸಾಮಾನ್ಯವಾಗಿ ಯಾವ ಪ್ರವಾಸಿಗರೂ ಬಯಸುವುದಿಲ್ಲ.