ಬಿಸಿ ಬೇಳೆ ಬಾತ್ (ಸಾಂಬಾರ್ ರೈಸ್) ಕರ್ನಾಟಕದ ಜನಪ್ರಿಯ ಆಹಾರ. ಬಿಸಿ ಬೇಳೆ ಬಾತ್ ರಾಜ್ಯದಾದ್ಯಂತದ ಹೆಚ್ಚಿನ ಉಪಾಹಾರ ಗೃಹಗಳಲ್ಲಿ ಲಭ್ಯವಿದೆ. ಬಿಸಿ ಬೇಳೆ ಬಾತ್ ದಿನದ ಯಾವುದೇ ಸಮಯ (ಉಪಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟ) ಸೇವಿಸಬಹುದು.
ಬಿಸಿ ಬೇಳೆ ಬಾತನ್ನು ಹೇಗೆ ತಯಾರಿಸಲಾಗುತ್ತದೆ?
ಅಕ್ಕಿ ಮತ್ತು ಬೇಳೆಗಳನ್ನು ಪ್ರತ್ಯೇಕವಾಗಿ ಬೇಯಿಸಲಾಗುತ್ತದೆ ಮತ್ತು ಬಿಸಿ ಬೇಳೆ ಬಾತ್ ಪುಡಿಯೊಂದಿಗೆ ಬೆರೆಸಲಾಗುತ್ತದೆ. ಈ ಮಿಶ್ರಣವನ್ನು ಕೆಲ ನಿಮಿಷಗಳ ಕಾಲ ಬೇಯಿಸಿದರೆ ಬಿಸಿ ಬೇಳೆ ಬಾತ್ ಸಿದ್ಧವಾಗುತ್ತದೆ. ಬಿಸಿ ಬೇಳೆ ಬಾತ್ ಮಸಾಲೆಯನ್ನು ಮನೆಯಲ್ಲಿಯೇ ತಯಾರಿಸಬಹುದು ಅಥವಾ ಅಂಗಡಿಗಳಿಂದ ಖರೀದಿಸಬಹುದಾಗಿದೆ. ಮೆಣಸಿನಕಾಯಿ, ಲವಂಗ, ಜೀರಿಗೆ, ಕಡಲೆ ಬೇಳೆ, ದಾಲ್ಚಿನ್ನಿ (ಚಕ್ಕೆ), ತೆಂಗಿನಕಾಯಿ, ಉದ್ದಿನಬೇಳೆ , ಕೊತ್ತಂಬರಿ ಬೀಜಗಳು ಮತ್ತು ಇತರ ಪದಾರ್ಥಗಳನ್ನು ಚೆನ್ನಾಗಿ ರುಬ್ಬುವ ಮೂಲಕ ಬಿಸಿ ಬೇಳೆ ಬಾತ್ ಪುಡಿಯನ್ನು ತಯಾರಿಸಲಾಗುತ್ತದೆ. ಹೆಚ್ಚಿನ ರುಚಿಗೆ ತರಕಾರಿಗಳಾದ ನುಗ್ಗೆ ಕಾಯಿ , ಬೀನ್ಸ್, ದೊಣ್ಣೆ ಮೆಣಸು ಮತ್ತು ಕತ್ತರಿಸಿದ ಕ್ಯಾರೆಟ್‌ಗಳನ್ನು ಸಾಮಾನ್ಯವಾಗಿ ಬಿಸಿ ಬೇಳೆ ಬಾತಿಗೆ ಸೇರಿಸಲಾಗುತ್ತದೆ. ತುಪ್ಪ, ಇಂಗು, ಗೋಡಂಬಿ ತುಂಡು, ಕರಿಬೇವಿನ ಎಲೆಗಳು ಇತ್ಯಾದಿಗಳನ್ನು ಕೊನೆಯ ಹಂತದಲ್ಲಿ ಹೆಚ್ಚುವರಿಯಾಗಿ ಹಾಕಬಹುದಾಗಿದೆ.
ಬಿಸಿ ಬೇಳೆ ಬಾತನ್ನು ಹೆಚ್ಚಾಗಿ ಚಿಪ್ಸ್ ಅಥವಾ ಬೂಂದಿಯಂತಹ ಕರಿದ ವಸ್ತುಗಳೊಂದಿಗೆ ಬಡಿಸಲಾಗುತ್ತದೆ.
ಬಿಸಿ ಬೇಳೆ ಬಾತನ್ನು ಎಲ್ಲಿ ಸವಿಯಬಹುದು?
ಬಿಸಿ ಬೇಳೆ ಬಾತ್ ದಕ್ಷಿಣ ಕರ್ನಾಟಕದ ಹೆಚ್ಚಿನ ದರ್ಶಿನಿಗಳು, ಸಸ್ಯಾಹಾರಿ ಉಪಾಹಾರ ಗೃಹಗಳಲ್ಲಿ ಲಭ್ಯವಿರುತ್ತದೆ.