ಗೊಂಬೆ ಆಟ ಕರ್ನಾಟಕದಲ್ಲಿ ಕಂಡುಬರುವ ಒಂದು ವಿಶಿಷ್ಟ ಜಾನಪದ ಕಲೆಯಾಗಿದೆ. ಗೊಂಬೆಗಳಿಂದ ಮಾಡಿದ ಪಾತ್ರಧಾರಿಗಳನ್ನು ಬಳಸಿಕೊಂಡು ಕಥೆ ಹೇಳುವುದು ಗೊಂಬೆ ಆಟದ ವೈಶಿಷ್ಟ್ಯ. ಗೊಂಬೆ ಆಡಿಸುವ ಆಟಗಾರರು ಪರದೆಯ ಹಿಂದೆ ನಿಂತು ಅದೃಶ್ಯ ದಾರವನ್ನು ಬಳಸಿ ಗೊಂಬೆಗಳನ್ನು ನಿಯಂತ್ರಿಸುತ್ತಾರೆ ಮತ್ತು ಅವುಗಳಿಂದ ನಾಟಕ ನಡೆಸಿಕೊಡುತ್ತಾರೆ.
ತಯಾರಿಕೆ: ಗೊಂಬೆ ಆಟದಲ್ಲಿ ಬಳಸುವ ಗೊಂಬೆಗಳನ್ನು ತಯಾರಿಸಲು ಕರ್ನಾಟಕದ ಚೆನ್ನಪಟ್ಟಣ ಪಟ್ಟಣ ಜನಪ್ರಿಯವಾಗಿದೆ. ಈ ಗೊಂಬೆಗಳನ್ನು ಪಾತ್ರದ ಅಗತ್ಯಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ. ಮರದಿಂದ ಮಾಡಲ್ಪಟ್ಟ ಮತ್ತು ರೇಷ್ಮೆ ಬಟ್ಟೆಗಳಿಂದ ಅಲಂಕರಿಸಲಾಗುವ ಕೈಗೊಂಬೆಗಳು ರಾಜ, ರಾಣಿ, ಸೈನಿಕ, ರಾಕ್ಷಸ ಇತ್ಯಾದಿ ರೂಪದಲ್ಲಿ ಕಾಣಿಸಿಕೊಂಡು ನೋಡುಗರನ್ನು ರಂಜಿಸುತ್ತವೆ. ಇವುಗಳ ಕೈ, ಕಾಲು, ತಲೆ ಇತ್ಯಾದಿಗಳನ್ನು ಅನೇಕ ಪಾರದರ್ಶಕ ತಂತಿಗಳನ್ನು ಬಳಸಿ ಪರದೆಯ ಹಿಂದಿನಿಂದ ಅಥವಾ ವೇದಿಕೆಯ ಮೇಲೆ ಕಟ್ಟಲಾಗುವ ಅಟ್ಟದ ಮೇಲಿನಿಂದ ನಿಯಂತ್ರಿಸಲಾಗುತ್ತದೆ. ಗೊಂಬೆಯನ್ನು ನಿಯಂತ್ರಿಸುವ ಆಟಗಾರರರು ಕಥೆಗೆ ಅನುಗುಣವಾಗಿ ಗೊಂಬೆಗಳ ಓಡಾಟ, ದೇಹ ಚಲನೆ ನಡೆಸಿ ಆಟವನ್ನು ನಡೆಸಿಕೊಡುತ್ತಾರೆ. ದೂರದಿಂದ ನೀಡುವ ಪ್ರೇಕ್ಷಕರಿಗೆ ಗೊಂಬೆಗಳು ತಾವಾಗೇ ಚಲಿಸುವಂತೆ ಕಾಣಿಸುತ್ತದೆ.
ಕಥೆ: ಗೊಂಬೆ ಆಟ ಪ್ರದರ್ಶನವು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ ಅಥವಾ ಇತರ ಪುರಾಣಗಳು / ಪ್ರಾಚೀನ ಕಥೆ ಯಾವುದಾದರೂ ಸನ್ನಿವೇಶ, ಅಥವಾ ಇತರ ಕಾಲ್ಪನಿಕ ಕತೆಗಳನ್ನು ಆಧರಿಸಿ ನಡೆಯುತ್ತದೆ.
ಪ್ರದರ್ಶನ: ಗೊಂಬೆಗಳ ಚಲನೆಯೊಂದಿಗೆ ಸಂಗೀತ ಮತ್ತು ನಿರೂಪಣೆ ಒಳಗೊಂಡಿರುತ್ತವೆ. ಇವು ಪ್ರೇಕ್ಷಕರು ಕತೆಯನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಮತ್ತು ಆಟವನ್ನು ಆನಂದಿಸಲು ಅನುವು ಮಾಡಿಕೊಡುತ್ತವೆ.
ಗೊಂಬೆ ಆಟವನ್ನು ಎಲ್ಲಿ ನೋಡಬಹುದು?
ಗೊಂಬೆ ಆಟ ಸಾಮಾನ್ಯವಾಗಿ ಬೆಂಗಳೂರು ಹಬ್ಬ, ಜಾನಪದ ಲೋಕೋತ್ಸವ, ಮತ್ತು ಮೈಸೂರು ದಸರಾ ಮುಂತಾದ ಉತ್ಸವಗಳ ಭಾಗವಾಗಿರುತ್ತದೆ. ವಿವಿಧ ಮೇಳ, ಜಾತ್ರೆಗಳಲ್ಲೂ ಹಲವೊಮ್ಮೆ ಗೊಂಬೆ ಆಟ ಪ್ರದರ್ಶನ ಇರುತ್ತದೆ.