Karnataka Tourism
GO UP
Kadubu

ಕಡುಬು

separator
  /  ಕಡುಬು

ಕಡುಬು ಕರ್ನಾಟಕದ ಜನಪ್ರಿಯ ಉಪಹಾರ ಭಕ್ಷ್ಯ. ಇಡ್ಲಿ ಹಿಟ್ಟನ್ನು ಹಲಸಿನ ಎಲೆಗಳಿಂದ ಮಾಡಿದ ಲೋಟ ‌(ಹಲಸಿನ ಕೊಟ್ಟೆ)ಗಳಲ್ಲಿ ಬೇಯಿಸಲಾಗುತ್ತದೆ. ಇಡ್ಲಿಯ ರುಚಿಯೊಂದಿಗೆ ಹಲಸಿನ ಎಲೆಯ ಸತ್ವ, ಪರಿಮಳ ಹೀರಿಕೊಂಡು ಕಡುಬು ತಯಾರಾಗುತ್ತದೆ. 

ಕಡುಬನ್ನು ಹೇಗೆ ತಯಾರಿಸಲಾಗುತ್ತದೆ?

ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 1:1/2 ಅನುಪಾತದಲ್ಲಿ ಹಲವಾರು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಲಾಗುತ್ತದೆ. ಅವು ಮೃದುವಾದ ನಂತರ, ಅಕ್ಕಿ ಮತ್ತು ಬೇಳೆಯ ನುಣ್ಣಗಿನ ಹಿಟ್ಟು ರೂಪುಗೊಳ್ಳುವವರೆಗೆ ಮಿಕ್ಸರ್ / ಗ್ರೈಂಡರ್ ನಲ್ಲಿ ಅರೆಯಲಾಗುತ್ತದೆ . ಈ ಹಿಟ್ಟನ್ನು ಹುದುಗಿಸಲು ರಾತ್ರಿಯಿಡೀ ಬಿಡಲಾಗುತ್ತದೆ. ಹುದುಗಿದ ಹಿಟ್ಟು ಸಾಕಷ್ಟು ಗಾಳಿಯ ಗುಳ್ಳೆಗಳೊಂದಿಗೆ ಗಾತ್ರದಲ್ಲಿ ದ್ವಿಗುಣಗೊಳ್ಳುತ್ತದೆ. ಮರುದಿನ ಉಪ್ಪನ್ನು ಸೇರಿಸಲಾಗುತ್ತದೆ. ಹಲಸಿನ  ಎಲೆಗಳನ್ನು ಒಟ್ಟಿಗೆ ಹೊಲಿದು (ಎಲೆಗಳಿಗೆ ಲೋಟದ ಆಕಾರ ನೀಡಲು ತೆಂಗಿನ ಗರಿಯ ಕಡ್ಡಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ) ತಯಾರಿಸಿದ  ಲೋಟಗಳಲ್ಲಿ (ಹಲಸಿನ ಕೊಟ್ಟೆ) ಅಥವಾ ಮುಂಡುಕದ ಓಲೆಯನ್ನು ಸುತ್ತಿ ತಯಾರಿಸಿದ ವೃತ್ತಾಕಾರದ ಕೊಳವೆಯಲ್ಲಿ ಹಿಟ್ಟನ್ನು ಸುರಿಯಲಾಗುತ್ತದೆ. ಎಲೆಗಳು ಲಭ್ಯವಿಲ್ಲದಿದ್ದಲ್ಲಿ ಸ್ಟೀಲ್ ಲೋಟಗಳನ್ನು ಬಳಸಲಾಗುತ್ತದೆ.

ಹೀಗೆ ಸುರಿದ ಹಿಟ್ಟನ್ನು 10-15 ನಿಮಿಷಗಳ ಕಾಲ ಇಡ್ಲಿ ಅಟ್ಟದಲ್ಲಿ ಹದವಾಗಿ ಬೇಯಿಸಿದ ನಂತರ ಕಡುಬು ಸಿದ್ಧವಾಗುತ್ತದೆ. ಸಾಮಾನ್ಯ ಇಡ್ಲಿಯ ಸ್ವರೂಪಕ್ಕೆ ಹೋಲಿಸಿದರೆ ಈ ಎಲೆಗಳ ಸುವಾಸನೆ ಮತ್ತು  ವಿಶಿಷ್ಟ ಆಕಾರವೇ  ಕಡುಬಿಗೆ ವಿಶಿಷ್ಟತೆಯನ್ನು ನೀಡುತ್ತದೆ .  ಒಂದೇ ಒಂದು ಕಡುಬು ಗಾತ್ರದಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ಇಡ್ಲಿಗೆ ಸಮಾನವಾಗಿರುತ್ತದೆ.

ಕಡುಬನ್ನು ಹೆಚ್ಚಾಗಿ ತೆಂಗಿನಕಾಯಿ ಚಟ್ನಿ ಮತ್ತು ಮಸಾಲೆಯುಕ್ತ ಸಾಂಬಾರ್‌ನೊಂದಿಗೆ ಬಡಿಸಲಾಗುತ್ತದೆ. ಬೆಳಗಿನ ತಿಂಡಿಗೆ ಕಡುಬನ್ನು ಆಸ್ವಾದಿಸುವಾಗ ಒಂದು ಲೋಟ ಫಿಲ್ಟರ್ ಕಾಫಿ ಕುಡಿಯುವುದು ಬಹುತೇಕ ಕನ್ನಡಿಗರ ಅಭ್ಯಾಸವಾಗಿದೆ. 

ಕಡುಬು ಎಲ್ಲಿ ಸಿಗುತ್ತದೆ?

ಕಡುಬುವನ್ನು ಸಾಮಾನ್ಯವಾಗಿ ಕರಾವಳಿ ಕರ್ನಾಟಕ ಮತ್ತು ಮಲೆನಾಡು (ಪಶ್ಚಿಮ ಘಟ್ಟ) ಪ್ರದೇಶದ ಉಪಹಾರ ಗೃಹಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೆಂಗಳೂರಿನ ಹಲವಾರು ಉಪಹಾರ ಗೃಹಗಳು ಸಹ ಕಡುಬಿನ ಆಯ್ಕೆ ನೀಡುತ್ತವೆ. ಕಡುಬು ದೊರೆಯುವ ಹತ್ತಿರದ  ಉಪಹಾರ ಗೃಹ ಕಂಡುಹಿಡಿಯಲು ನೀವು ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು (ಸ್ವಿಗ್ಗಿ , ಝೋಮ್ಯಾಟೊ ಇತ್ಯಾದಿ) ಬಳಸಬಹುದಾಗಿದೆ.