Karnataka Tourism
GO UP
Image Alt

ಅಕ್ಕಿ ರೊಟ್ಟಿ

separator
  /  ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ

ಕರ್ನಾಟಕದ ಆಹಾರದ ಶ್ರೇಣಿಯು ನಿಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ. ಕರ್ನಾಟಕದಲ್ಲಿ ಅಕ್ಕಿಯಿಂದ ಮಾಡಿದ ವಿವಿಧ ಬಗೆಯ ತಿಂಡಿಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ.
ಕರ್ನಾಟಕದಲ್ಲಿ ನೀವು ಪಾಕ ಪದ್ಧತಿಯಲ್ಲಿ ಹಲವು ವೈವಿಧ್ಯತೆಗಳನ್ನು ಕಾಣಬಹುದು. ದಕ್ಷಿಣ ಕನ್ನಡ ಅಡುಗೆ ಶೈಲಿ ಒಂದು ವಿಶೇಷವಾದರೆ, ಉತ್ತರ ಕರ್ನಾಟಕದ ಅಡುಗೆ ಶೈಲಿಯೂ ಒಂದು ವಿಶೇಷವಾಗಿದೆ. ಮಲೆನಾಡು ಅಡುಗೆ ಶೈಲಿಯು ಒಂದು ವಿಶೇಷತೆಯನ್ನು ಹೊಂದಿದೆ. ಮೈಸೂರು ವಿಭಾಗದಿಂದ ಕರಾವಳಿ ಕರ್ನಾಟಕದವರೆಗೆ ಅಥವಾ ಉಡುಪಿಯಿಂದ ಕೂರ್ಗಿ ಮತ್ತು ಮಂಗಳೂರಿನವರೆಗೆ, ಕರ್ನಾಟಕದ ವಿವಿಧ ಪಾಕಪದ್ಧತಿಯ ಶ್ರೇಣಿಯು ನಿಮ್ಮನ್ನು ಮೋಡಿಮಾಡುತ್ತದೆ.
ನೀವು ಕರ್ನಾಟಕದಲ್ಲಿ ವಿವಿಧ ಬಗೆಯ ರೊಟ್ಟಿಗಳನ್ನು ಕಾಣಬಹುದು. ಅಕ್ಕಿರೊಟ್ಟಿ, ರಾಗಿರೊಟ್ಟಿ, ಜೋಳದ ರೊಟ್ಟಿ ಹೀಗೆ. ಇವೆಲ್ಲವೂ ತುಂಬಾ ಆರೋಗ್ಯಕರವಾದ ರೊಟ್ಟಿಗಳಾಗಿವೆ ಮತ್ತು ತುಂಬಾ ರುಚಿಯನ್ನು ಸಹ ಹೊಂದಿವೆ. ಇವು ಕರ್ನಾಟಕದ ಪ್ರಮುಖ ಆಹಾರ ಪದಾರ್ಥಗಳಾಗಿವೆ. ನಾವು ಈಗ ಅಕ್ಕಿರೊಟ್ಟಿಯ ಕುರಿತು ತಿಳಿದುಕೊಳ್ಳೋಣ.
ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ, ಅಕ್ಕಿ ರೋಟಿಯನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ, ಕೆಲವು ಸಾಗು (ಕರಿ) ಮತ್ತು ಬೆಣ್ಣೆಯೊಂದಿಗೆ ಬಡಿಸಲಾಗುತ್ತದೆ. ಅಕ್ಕಿ ರೊಟ್ಟಿಯನ್ನು ಅಕ್ಕಿ ಹಿಟ್ಟು ,ತುರಿದ ಗಜ್ಜರಿ, ಈರುಳ್ಳಿ, ಭಾರತೀಯ ಮಸಾಲೆಗಳು ಮತ್ತು ಕೆಲವೊಮ್ಮೆ ಸಬ್ಬಸಿಗೆ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಕ್ಕಿ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಖನಿಜಗಳಾದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಧಿಕವಾಗಿದೆ.

ಅಕ್ಕಿ ರೊಟ್ಟಿಯನ್ನು ಮಾಡುವುದು ಹೇಗೆ?

ಮೊದಲಿಗೆ ಒಳ್ಳೆಯ ಅಕ್ಕಿಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಗಜ್ಜರಿ, ಕರಿಬೇವಿನ ಎಲೆಗಳು, ತುರಿದ ತೆಂಗಿನಕಾಯಿ, ಕೊತ್ತಂಬರಿ ಎಲೆಗಳು, ಜೀರಿಗೆ, ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ,ಸ್ವಲ್ಪ ಎಣ್ಣೆಯನ್ನು ಹಾಕಿ, ನೀರನ್ನು ಹದವಾಗಿ ಬೆರೆಸಿ ಹಿಟ್ಟನ್ನು ಕಲಿಸಿ ಇಟ್ಟುಕೊಳ್ಳಿ. ನಂತರ ಈ ಹಿಟ್ಟಿನ ಸ್ವಲ್ಪ ಉಂಡೆಯನ್ನು ತೆಗೆದುಕೊಂಡು ಬಾಳೆ ಎಲೆಯ ಮೇಲೆ ಹಾಕಿ ಒಂದು ರೊಟ್ಟಿ ತರಹ ವೃತ್ತಾಕಾರವಾಗಿ ತಟ್ಟಿ. ನಂತರ ಬಿಸಿಯಾದ ತವಾದ ಮೇಲೆ ಹಾಕಿ ಬೇಯಿಸಿ. ಕೆಲವು ನಿಮಿಷಗಳವರೆಗೆ ಎರಡು ಕಡೆ ಬೇಯಿಸಿ. ನಂತರ ಅಕ್ಕಿರೊಟ್ಟಿ ಸಿದ್ಧವಾಗುತ್ತದೆ. ಅಕ್ಕಿರೊಟ್ಟಿಯನ್ನು ಬಿಸಿಬಿಸಿಯಾಗಿರುವಾಗಲೇ ಸೇವಿಸುವುದು ಒಳ್ಳೆಯದು. ಅಕ್ಕಿ ರೊಟ್ಟಿ ಮಾಡಲು ಎರಡು ವಿಧಾನಗಳಿವೆ. ಒಂದು ಗರಿಗರಿಯಾದ ಅಕ್ಕಿರೊಟ್ಟಿ ಮತ್ತು ಇನ್ನೊಂದು ವಿಶೇಷವಾಗಿ ಕೊಡಗು ಅಥವಾ ಮಲೆನಾಡು ಪ್ರದೇಶದಲ್ಲಿ ಮಾಡಲಾಗುವ ಗೋಧಿ ರೊಟ್ಟಿಯಂತಹ ಮೃದುವಾದ ಅಕ್ಕಿರೊಟ್ಟಿ. ಈ ಎರಡೂ ಅಕ್ಕಿರೊಟ್ಟಿಗಳು ತಿನ್ನಲು ತುಂಬಾ ರುಚಿಕರವಾಗಿರುತ್ತವೆ.

ಇದರೊಂದಿಗೆ ಬಡಿಸಲಾಗುತ್ತದೆ: ಬಿಸಿ ಅಕ್ಕಿ ರೊಟ್ಟಿಯ ಮೇಲೆ ಸಣ್ಣ ತುಂಡು ಬೆಣ್ಣೆಯನ್ನು ಇರಿಸಲಾಗುತ್ತದೆ. ಅಕ್ಕಿ ರೊಟ್ಟಿ ಬಿಸಿ ಇರುವಾಗಲೇ ಸೇವಿಸುವುದು ಉತ್ತಮವಾಗಿದೆ. ಅಕ್ಕಿ ರೋಟಿಯನ್ನು ಸಾಮಾನ್ಯವಾಗಿ ಮಸಾಲೆಯುಕ್ತ ಚಟ್ನಿಗಳು, ಕರಿ ಅಥವಾ ಉಪ್ಪಿನಕಾಯಿಗಳೊಂದಿಗೆ ಬಡಿಸಲಾಗುತ್ತದೆ.

ಅಕ್ಕಿರೊಟ್ಟಿ ಎಲ್ಲಿ ಸಿಗುತ್ತದೆ?

ಬೆಂಗಳೂರು ನಗರದಲ್ಲಿ ಹಲವಾರು ರೆಸ್ಟೊರೆಂಟ್‌ಗಳು ಹೋಟೆಲುಗಳಲ್ಲಿ ತುಂಬಾ ರುಚಿಯಾಗಿರುವ ಅಕ್ಕಿ ರೊಟ್ಟಿ ಸಿಗುತ್ತದೆ-ಅಕ್ಕಿರೊಟ್ಟಿ ಮತ್ತು ತೆಂಗಿನಕಾಯಿ ಚಟ್ನಿ ಅಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಮುಖ್ಯವಾಗಿ ಹಳ್ಳಿ ಮನೆ-ಮಲ್ಲೇಶ್ವರಂ, ನಳಪಾಕ-ರಾಜಾಜಿನಗರ, ದಕ್ಷಿಣ ತಿಂಡಿ-ಬಸವನಗುಡಿ –ಈ ಹೋಟೆಲುಗಳಲ್ಲಿ ಸಿಗುವ ಅಕ್ಕಿ ರೊಟ್ಟಿ ತುಂಬಾ ಫೇಮಸ್. ನಿಮಗೆ ಅಕ್ಕಿ ರೊಟ್ಟಿ ತಿನ್ನಲು ಇಷ್ಟವಾದರೆ ನಿಮಗೆ ಹತ್ತಿರದ ರೆಸ್ಟೋರೆಂಟ್ ಅನ್ನು ಪತ್ತೆಹಚ್ಚಲು ನೀವು ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಹೋಮ್‌ಸ್ಟೇಯಲ್ಲಿ ಉಳಿದುಕೊಂಡಿದ್ದರೆ, ನಿಮ್ಮ ಹೋಸ್ಟ್ ಗೆ ವಿನಂತಿಸಿ. ಅವರು ಗರಿಗರಿಯಾದ, ರುಚಿರುಚಿಯಾದ ಅಕ್ಕಿ ರೊಟ್ಟಿಯನ್ನು ಮಾಡಿ ನಿಮಗೆ ಬಡಿಸುತ್ತಾರೆ.
ಕರ್ನಾಟಕದಲ್ಲಿರುವಾಗ ಈ ಖಾದ್ಯವನ್ನು ಮಿಸ್ ಮಾಡದೇ ನೋಡಿ.