Karnataka Tourism
GO UP
Gowri Festival

ಗೌರಿ ಹಬ್ಬ

separator
  /  ಗೌರಿ ಹಬ್ಬ

ಗೌರಿ ಹಬ್ಬ

ಕರ್ನಾಟಕದಲ್ಲಿ ಆಚರಿಸುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಗೌರಿ ಹಬ್ಬವು ಒಂದು. ಈ ಗೌರಿ ಹಬ್ಬವನ್ನು ಗಣೇಶ ಚತುರ್ಥಿಗೆ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ, ಅಲ್ಲಿ ಗಣೇಶನ ತಾಯಿ ಮತ್ತು ಶಿವನ ಪತ್ನಿ ಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಗಂಗಾಧರನ ಪತ್ನಿ ಗೌರಿಯನ್ನು ಆದಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಮಾತೆಯು ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ. ಮಹಾಮಾಯೆ ಎಂದು ಕರೆಯಲ್ಪಡುವ ಈ ಶಕ್ತಿ ದೇವತೆಯು ತನ್ನ ಭಕ್ತರಿಗೆ ಧೈರ್ಯ, ಶಕ್ತಿಯನ್ನು ನೀಡುತ್ತಾಳೆ ಮತ್ತು ಸಕಲ ಸುಖ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ಗಾಢ ನಂಬಿಕೆ ಇದೆ. ಗೌರಿ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಭಾರತದ ಅನೇಕ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ.

ಗೌರಿಯ ಅನುಗ್ರಹಕ್ಕಾಗಿ ಸ್ವರ್ಣ ಗೌರಿ ವ್ರತವನ್ನು ಭಾದ್ರಪದ ಮಾಸದ 13 ನೇ ದಿನದಂದು ಆಚರಿಸಲಾಗುತ್ತದೆ. ಗೌರಿಯನ್ನು ಈ ದಿನ ತವರು ಮನೆಗೆ ಆಹ್ವಾನಿಸಿದಂತೆ ಆಹ್ವಾನಿಸಲಾಗುತ್ತದೆ. ಮರುದಿನ ಆಕೆಯ ಮಗ ಗಣೇಶ ಆಕೆಯನ್ನು ಮತ್ತೆ ಕೈಲಾಸಕ್ಕೆ ಕರೆದುಕೊಂಡು ಹೋಗುವಂತೆ ಗಣೇಶನನ್ನು ಮನೆಗೆ ಕರೆ ತರಲಾಗುತ್ತದೆ. ದೇವಿಯನ್ನು ಹೋಲುವ ಸಾಂಕೇತಿಕ ಮೂರ್ತಿಯನ್ನು ಅರಿಶಿನದಿಂದ ಹಿಂದೂ ಮಹಿಳೆಯರು ತಯಾರಿಸುತ್ತಾರೆ. ಈ ವಿಗ್ರಹಗಳನ್ನು ಜಲಗೌರಿ ಅಥವಾ ಅರಿಶಿನದಗೌರಿ ಎಂದು ಕರೆಯಲಾಗುತ್ತದೆ. ನೀವು ಸುಂದರವಾಗಿ ನಿರ್ಮಿಸಿದ ಗೌರಿ ಮತ್ತು ಗಣೇಶನ ವಿಗ್ರಹಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮತ್ತು ಕೆಲವು ಮನೆಗಳಲ್ಲಿ ಕಾಣಬಹುದು. ಕೆಲವು ಮನೆಗಳಲ್ಲಿ ವಿಗ್ರಹಗಳನ್ನು ಸ್ವತಃ ಅವರೇ ತಯಾರಿಸುತ್ತಾರೆ. ಇನ್ನೂ ಕೆಲವು ಮನೆಗಳಲ್ಲಿ ವಿಗ್ರಹಗಳನ್ನು ಅಂಗಡಿಗಳಿಂದ ತರುತ್ತಾರೆ. ಮತ್ತು ಗೌರಿ ಮತ್ತು ಗಣೇಶನನ್ನು ಕೂಡಿಸುವ ಮಂಟಪಗಳನ್ನು ಮಾವಿನ ಎಲೆ ಮತ್ತು ಬಾಳೆ ಕಾಂಡಗಳು ಹಾಗೂ ಇತರ ಅಲಂಕಾರಿಕ ವಸ್ತುಗಳಿಂದ ನಿರ್ಮಿಸಲಾಗುತ್ತದೆ.

ಅಕ್ಕಿ ಮತ್ತು ಗೋಧಿಯನ್ನು ಬಳಸಿ ಈ ಬಾಳೆ ಕಂಬಗಳಿಗೆ ಆಧಾರವನ್ನು ನೀಡಲಾಗುತ್ತದೆ. ಈ ಪೂಜೆಯನ್ನು ಸಮರ್ಪಣೆ, ಗೌರವ ಮತ್ತು ಸ್ವಚ್ಛತೆಯಿಂದ ಮಾಡಬೇಕು. ಗೌರಿಯನ್ನು ರೇಷ್ಮೆ ಸೀರೆ ಮತ್ತು ಹೂಗಳಿಂದ ಅಲಂಕರಿಸಲಾಗುತ್ತದೆ. ವ್ರತದ ಆಚರಣೆಗಳನ್ನು ಅನುಸರಿಸುವ ಮಹಿಳೆಯರು ವ್ರತದ ಭಾಗವಾಗಿ ಹದಿನಾರು ಗಂಟುಗಳಿರುವ 'ಗೌರಿದಾರ' ಹೆಸರಿನ ಪವಿತ್ರ ದಾರವನ್ನು ಹಾಕಿಕೊಳ್ಳುತ್ತಾರೆ. ಇದು ದೇವಿಯ ಆಶೀರ್ವಾದವನ್ನು ಹೊಂದಿರುತ್ತದೆ. ಗೌರಿ ಹಬ್ಬದಂದು ಗೌರಿಗೆ ಬಾಗಿನವನ್ನು ಅರ್ಪಿಸಲಾಗುತ್ತದೆ. ಬಾಗಿನವು 13 ಮಂಗಳ ದ್ರವ್ಯಗಳನ್ನು ಹೊಂದಿರುತ್ತದೆ. ಅರಿಷಿಣ ಕುಂಕುಮ, ಮಂಗಳ ಸೂತ್ರ, ಬಾಚಣಿಗೆ, ಕಪ್ಪು ಹಸಿರು ಬಳೆಗಳು, ಓಲೆಗಳು ಕನ್ನಡಿ, ಕುಪ್ಪಸ, ತೆಂಗಿನ ಕಾಯಿ, ಅಕ್ಕಿ, ಗೋಧಿ, ಬೆಲ್ಲ, ಎಲೆಗಳನ್ನು ಹೊಂದಿರುತ್ತದೆ. ಒಂದು ಬಾಗಿನವನ್ನು ದೇವಾಲಯಕ್ಕೆ ನೀಡಿ ಉಳಿದವುಗಳನ್ನು ವಿವಾಹಿತ ಮಹಿಳೆಯರಿಗೆ ನೀಡಲಾಗುತ್ತದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ, ಕುಟುಂಬಗಳು ಈ ಧಾರ್ಮಿಕ ಸಮಾರಂಭವನ್ನು ಒಟ್ಟಾಗಿ ಆಚರಿಸಲು ಸೇರುತ್ತವೆ. ಮದುವೆಯಾದ ಹೆಂಗಸರಿಗೆ ಅಥವಾ ಅವರ ಹೆಣ್ಣುಮಕ್ಕಳಿಗೆ ಕುಟುಂಬದಿಂದ ಮಂಗಳ-ದ್ರವ್ಯದ ಉಡುಗೊರೆಗಳು ಮತ್ತು ಹಣದ ಕಾಣಿಕೆಯನ್ನು ಈ ಸಮಯದಲ್ಲಿ ನೀಡಲಾಗುತ್ತದೆ. ಈ ಹಬ್ಬದಂದು ಬಾಯಲ್ಲಿ ನೀರೂರಿಸುವ ರುಚಿಯಾದ ಪಾಯಸ, ಒಬ್ಬಟ್ಟು, ಬಜ್ಜಿ, ಹೋಳಿಗೆ, ಕೋಸಂಬರಿ ಇತ್ಯಾದಿಗಳನ್ನು ತಯಾರಿಸಲಾಗುತ್ತದೆ ಮತ್ತು ದೇವರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಮತ್ತು ನಂತರ ಅದನ್ನು ಸ್ನೇಹಿತರು ಮತ್ತು ಕುಟುಂಬದವರ ನಡುವೆ ಪ್ರಸಾದವಾಗಿ ನೀಡಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶನ ಆಗಮನದಿಂದ ಹಿಡಿದು ಮುಂದಿನ ಕೆಲ ದಿನದವರೆಗೂ ಈ ಸಂಭ್ರಮದ ಆಚರಣೆಗಳು ಮುಂದುವರೆಯುತ್ತವೆ.