Karnataka logo

Karnataka Tourism
GO UP
Kempegowda International Airport_Bangalore

ಕರ್ನಾಟಕ ಪ್ರವಾಸಕ್ಕೆ ಉಪಯುಕ್ತ ಮಾಹಿತಿಗಳು 

ಕರ್ನಾಟಕದಲ್ಲಿ ನಿಮ್ಮ ಪ್ರವಾಸದ ತಯಾರಿಗೆ ಅಗತ್ಯವಾದ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ

 

ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳು

ಕರ್ನಾಟಕದಲ್ಲಿ 8 ವಿಮಾನ ನಿಲ್ದಾಣಗಳು ವಾಣಿಜ್ಯ ವಿಮಾನಸೇವೆ ಒದಗಿಸುತ್ತವೆ. ಬೆಂಗಳೂರು ಮತ್ತು ಮಂಗಳೂರು ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾದರೆ ಹುಬ್ಬಳ್ಳಿ, ಬೆಳಗಾವಿ, ಬೀದರ, ಕಲಬುರಗಿ, ವಿದ್ಯಾನಗರ (ಹಂಪಿ), ಮತ್ತು ಮೈಸೂರು ಇತರ ನಿಲ್ದಾಣಗಳಾಗಿವೆ. 

 

ಸ್ಥಳೀಯ ಸಾರಿಗೆ ಆಯ್ಕೆಗಳು

ಬಸ್ಸುಗಳು:

 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ತಲುಪಲು ತನ್ನ ವ್ಯಾಪಕ ಜಾಲದೊಂದಿಂಗೆ ಸಂಪರ್ಕ ಸೇತುವಾಗಿದೆ. ವಿವರಗಳಿಗಾಗಿ ksrtc.in ಅನ್ನು ನೋಡಿ.
 • ಬೆಂಗಳೂರು ನಗರದೊಳಗೆ,  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಎಲ್ಲಾ ಭಾಗಗಳನ್ನು ತಲುಪಲು ಹವಾನಿಯಂತ್ರಿತ ಹಾಗು ಸಾಮಾನ್ಯ ಬಸ್‌ಗಳ ವ್ಯಾಪಕ ಜಾಲವನ್ನು ನಿರ್ವಹಿಸುತ್ತದೆ.
 • ಕರ್ನಾಟಕವು ಖಾಸಗಿ ಬಸ್ ಸಂಸ್ಥೆಗಳ ದೊಡ್ಡ ಜಾಲವನ್ನು ಸಹ ಹೊಂದಿದೆ. ಈ ಬಸ್‌ಗಳನ್ನು ನಿಮ್ಮ ಹತ್ತಿರದ ಟ್ರಾವೆಲ್ ಏಜೆಂಟ್ ಮೂಲಕ, ಆಯಾ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಅಥವಾ ರೆಡ್‌ಬಸ್.ಇನ್, ಅಭಿಬಸ್.ಇನ್ ಮುಂತಾದ ಬಸ್ ಟಿಕೆಟ್ ಕೊಡಿಸುವ ಜಾಲತಾಣಗಳ ಮೂಲಕ ಕಾದಿರಿಸಬಹುದಾಗಿದೆ. 
 • ಹಲವು ನಗರಗಳು / ಜಿಲ್ಲೆಗಳು ತಮ್ಮದೇ ಆದ ಸ್ಥಳೀಯ ಬಸ್ ಸೇವೆಗಳ ಜಾಲವನ್ನು ಹೊಂದಿವೆ.

 

ಟ್ಯಾಕ್ಸಿ:

ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳು, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳು  ಹಾಗೂ ಸೆಲ್ಫ್ ಡ್ರೈವ್ (ಚಾಲಕ ರಹಿತ ಟ್ಯಾಕ್ಸಿ-ಬಾಡಿಗೆಗೆ ಪಡೆದು ನಾವೇ ಓಡಿಸುವ ವ್ಯವಸ್ಥೆ) ಕಾರು ಮತ್ತು ಬೈಕ್ ಕಂಪನಿಗಳಿವೆ. ಬಾಡಿಗೆ ಕಾರುಗಳನ್ನು ಆನ್‌ಲೈನ್ ಮೂಲಕ, ಅಪ್ಲಿಕೇಶನ್ ಮೂಲಕ, ಹೋಟೆಲ್ / ಹತ್ತಿರದ ಟ್ರಾವೆಲ್ ಏಜೆಂಟ್ ಮೂಲಕ ಅಥವಾ ವಿಮಾನ ನಿಲ್ದಾಣಗಳು / ರೈಲ್ವೆ ನಿಲ್ದಾಣಗಳಲ್ಲಿ ಗೊತ್ತುಪಡಿಸಿದ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಪಡೆಯಬಹುದಾಗಿದೆ. 

ಇತರ ಆಯ್ಕೆಗಳು: ಆಟೋರಿಕ್ಷಾಗಳು ಕಡಿಮೆ ಅಂತರದ ಪ್ರಯಾಣದ ಜನಪ್ರಿಯ ವಿಧಾನಗಳಾಗಿವೆ. ಅಪ್ಲಿಕೇಶನ್ ಆಧಾರಿತ ಸ್ಕೂಟರ್ ಬಾಡಿಗೆಗಳು (ಉದಾಹರಣೆಗೆ ಬೌನ್ಸ್), ಸೈಕಲ್ ಬಾಡಿಗೆಗಳು (ಮೈಸೂರಿನಲ್ಲಿ ಟ್ರಿನ್ ಟ್ರಿನ್), ಮೈಸೂರಿನಲ್ಲಿ ಟಾಂಗಾ, ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಇತರ ಜನಪ್ರಿಯ ಆಯ್ಕೆಗಳು.

 

ಹಣಕಾಸು ಸಲಹೆಗಳು

ವಿದೇಶೀ ವಿನಿಮಯ

 • ಕರ್ನಾಟಕಕ್ಕೆ ಬರುವಾಗ ಯಾವುದೇ ನಗದು ಮೊತ್ತದ ಮಿತಿ ಇರುವುದಿಲ್ಲವಾದರೂ, ಭಾರತೀಯ ಕಸ್ಟಮ್ ನಿಯಮಗಳ ಅನುಸಾರ 10000 ಡಾಲರ್‌ಗಿಂತ ಹೆಚ್ಚಿನ ಮೊತ್ತವಿದ್ದರೆ ನಿಗದಿತ ಸ್ವಯಂ ಘೋಷಣೆ ಅಗತ್ಯವಾಗಬಹುದು.
 • ಎಲ್ಲಾ ಪ್ರಮುಖ ನಗರಗಳಲ್ಲಿ ವಿದೇಶಿ ವಿನಿಮಯ ಅಂಗಡಿಗಳಿವೆ ಮತ್ತು ವಿಮಾನ ನಿಲ್ದಾಣಗಳು ನಿಮ್ಮ ಹಣವನ್ನು ಸ್ಥಳೀಯ ರೂಪಾಯಿಯಾಗಿ ಪರಿವರ್ತಿಸಲು ವಿದೇಶೀ ವಿನಿಮಯ ಕೌಂಟರ್‌ಗಳನ್ನು ಹೊಂದಿವೆ. ಬುಕ್‌ಮಿಫಾರೆಕ್ಸ್‌ನಂತಹ ಆನ್‌ಲೈನ್ ಸೇವೆಗಳು ಸಹ ಲಭ್ಯವಿದೆ. 
 • ಐಷಾರಾಮಿ ಹೋಟೆಲ್‌ಗಳು ಹೆಚ್ಚಾಗಿ ಪ್ರಮುಖ ವಿದೇಶಿ ಕರೆನ್ಸಿಗಳಲ್ಲಿ ಪಾವತಿಯನ್ನು ಸ್ವೀಕರಿಸುತ್ತವೆ.

 

ಸ್ಥಳೀಯ ಹಣಕಾಸು:

 • ಕರ್ನಾಟಕವು ಬ್ಯಾಂಕುಗಳು ಮತ್ತು ಎಟಿಎಂಗಳ ಬಲವಾದ ಜಾಲವನ್ನು ಹೊಂದಿದೆ. ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳು ಮತ್ತು ಪ್ರಮುಖ ಊರುಗಳಲ್ಲಿ ಒಂದಿಲ್ಲೊಂದು ಬ್ಯಾಂಕ್ ಅಥವಾ ಎಟಿಎಂ ಇದ್ದೇ ಇರುತ್ತದೆ. ನಿಮ್ಮ ಅಂತರರಾಷ್ಟ್ರೀಯ ವೀಸಾ / ಮಾಸ್ಟರ್‌ಕಾರ್ಡ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಎಟಿಎಂನಿಂದ ಹಣವನ್ನು ತೆಗೆದುಕೊಳ್ಳಬಹುದಾಗಿದೆ (ಶುಲ್ಕಗಳು ಅನ್ವಯವಾಗಬಹುದು). ಬ್ಯಾಂಕ್ ಶಾಖೆಗಳು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತವೆ. ಕೆಲಸದ ಸಮಯ ಮತ್ತು ವಾರದ ರಜಾದಿನಗಳು ಬ್ಯಾಂಕಿನಿಂದ ಬ್ಯಾಂಕಿಗೆ ಸ್ವಲ್ಪ ಬದಲಾಗಬಹುದು.
 • ಹೆಚ್ಚಿನ ಮಾರಾಟಗಾರರು ಗೂಗಲ್ ಪೇ, ಪೇಟಿಎಂ ಅಥವಾ ಕ್ರೆಡಿಟ್ / ಡೆಬಿಟ್ ಕಾರ್ಡ್ ಪಾವತಿಗಳಂತಹ ಎಲೆಕ್ಟ್ರಾನಿಕ್ / ನಗದು ರಹಿತ ಪಾವತಿಗಳನ್ನು ಸ್ವೀಕರಿಸುತ್ತಾರೆ. ಆದಾಗ್ಯೂ ಸಣ್ಣ ಮೊತ್ತದ ನಗದನ್ನು ಜೊತೆಗಿರಿಸಿಕೊಳ್ಳುವುದು ಜಾಣತನದ ಆಯ್ಕೆಯಾಗಿರಲಿದೆ.

 

ಸಮಯ ವಲಯ: ಭಾರತದಲ್ಲಿ ಕೇವಲ ಒಂದು ಸಮಯ ವಲಯ ಇದೆ (ಐಎಸ್‌ಟಿ):  ಜಿಎಂಟಿ + 5.30 ಗಂಟೆಗಳು.

 

ತುರ್ತು ಸಂಪರ್ಕ ಸಂಖ್ಯೆಗಳು

1 ಪೊಲೀಸ್: 100

2 ಆಂಬ್ಯುಲೆನ್ಸ್ 102, 108, 1066

3 ಅಗ್ನಿಶಾಮಕ ದಳ : 101

4 ರಾಜ್ಯ ಅರಣ್ಯ ಇಲಾಖೆ ವಾಟ್ಸಾಪ್ +91 6363308040,  https://aranya.gov.in/

5 ಪ್ರವಾಸೋದ್ಯಮ ಪೊಲೀಸ್ 9448588866

6 ಪಿಂಕ್ ಟ್ಯಾಕ್ಸಿ (ಮಹಿಳಾ ಚಾಲಕರೊಂದಿಗೆ ಮಹಿಳೆಯರಿಗೆ ಟ್ಯಾಕ್ಸಿ) http://www.gopinkcabs.com/

(+91) 9880847487/080 23121234

7 ಮಕ್ಕಳ ಸಹಾಯವಾಣಿ 1098

8 ಭಾರತೀಯ ರೈಲ್ವೆ ಸಹಾಯವಾಣಿ 139

9 ಹೆದ್ದಾರಿ ಪಹರೆ:  100

 

ನಿಷೇಧಗಳು

 • ಎಲ್ಲಾ ರೀತಿಯ ಮಾದಕ ವಸ್ತುಗಳ ಬಳಕೆ, ಮಾರಾಟ, ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಮುಂತಾದ ಚಟುವಟಿಕೆಗಳು ಕರ್ನಾಟಕದಲ್ಲಿ ಕಾನೂನುಬಾಹಿರವಾಗಿದ್ದು, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ನಿರ್ಬಂಧಿತ ಪ್ರದೇಶಗಳನ್ನು ಅತಿಕ್ರಮಿಸುವುದು,  ಕೇಂದ್ರ ಸರಕಾರದ ಮಾನದಂಡಕ್ಕೆ ಅನುಸಾರವಾಗಿ ಅನುಮತಿಯಿಲ್ಲದೆ ಡ್ರೋನ್‌ಗಳನ್ನು ಉಡಾಯಿಸುವುದು ಮತ್ತು ಯಾವುದೇ ಸ್ಥಳೀಯ ನಿಯಮ, ನಿರ್ಬಂಧಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. 
 • ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ವಿಮಾನ ನಿಲ್ದಾಣಗಳಂತಹ ಕೆಲವು ಸೌಲಭ್ಯಗಳು ಧೂಮಪಾನಕ್ಕಾಗಿ ಗೊತ್ತುಪಡಿಸಿದ ಪ್ರದೇಶಗಳನ್ನು ಒದಗಿಸಬಹುದಾಗಿದೆ. 
 • ಯಾವುದೇ ಕಡಲತೀರಗಳು, ಜಲಪಾತಗಳು, ಕೊಳಗಳು ಅಥವಾ ಇತರ ಸಾರ್ವಜನಿಕ / ಪ್ರವಾಸಿ ಪ್ರದೇಶಗಳಲ್ಲಿ ನಗ್ನತೆಯನ್ನು ಅನುಮತಿಸಲಾಗುವುದಿಲ್ಲ. 

 

ಆಹಾರ:

ಎಲ್ಲಾ ರೀತಿಯ ಭಾರತೀಯ, ಪಾಶ್ಚಿಮಾತ್ಯ ಮತ್ತು ಚೀನೀ ಆಹಾರಗಳು ಕರ್ನಾಟಕದ ಮಹಾನಗರಗಳಲ್ಲಿ ಲಭ್ಯವಿದೆ. ಗ್ರಾಮೀಣ ಸ್ಥಳಗಳಲ್ಲಿ ಸೀಮಿತ ಉಪಾಹಾರ ಗೃಹಗಳಿದ್ದು ಸ್ಥಳೀಯ ಆಹಾರದ ಸೊಗಡನ್ನು ಸವಿಯಬಹುದಾಗಿದೆ. ನಲ್ಲಿಯ ನೀರನ್ನು ಸಂಸ್ಕರಿಸಿ ಕುಡಿಯುವುದು ಒಳ್ಳೆಯದು. 

 

ಹವಾಮಾನ:

ಕರ್ನಾಟಕವು ವಿವಿಧ ಋತುಗಳು ಮತ್ತು ಭೌಗೋಳಿಕವಾಗಿ ವಿಭಿನ್ನ ಹವಾಮಾನವನ್ನು ಹೊಂದಿದೆ. ನಿಮ್ಮ ಭೇಟಿ ಸಮಯ ಮತ್ತು ಪ್ರದೇಶವನ್ನು ಅವಲಂಬಿಸಿ ಸೂಕ್ತ ತಯಾರಿ ಮಾಡಿಕೊಳ್ಳಬಹುದು.

 • ಮಳೆಗಾಲ: ಕರಾವಳಿ ಕರ್ನಾಟಕ, ಮಲೆನಾಡು (ಪಶ್ಚಿಮ ಘಟ್ಟಗಳು) ಪ್ರದೇಶದಲ್ಲಿ ಪ್ರತಿವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಭಾರಿ ಮಳೆಯಾಗುತ್ತದೆ. ದಕ್ಷಿಣ ಕರ್ನಾಟಕದ ಉಳಿದ ಭಾಗದಲ್ಲಿ ಕೂಡ ಈ ಅವಧಿಯಲ್ಲಿ ಸಾಕಷ್ಟು ಮಳೆಯಾಗುತ್ತದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಿರುತ್ತದೆ. 
 • ಚಳಿಗಾಲದ: ಅಕ್ಟೋಬರ್‌ನಿಂದ ಫೆಬ್ರವರಿ ಬಹುಶಃ ಕರ್ನಾಟಕವನ್ನು ಅನ್ವೇಷಿಸಲು ಅತ್ಯಂತ ಹೆಚ್ಚು ಆಹ್ಲಾದಕರ ಸಮಯವಾಗಿದೆ. ಕಡಿಮೆ ಮಳೆ, ಕಡಿಮೆ ಬಿಸಿಲು, ಮುಂಗಾರು ನಂತರದ ಹಚ್ಚ ಹಸಿರು ಮತ್ತು ತಂಪಾದ ವಾತಾವರಣ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುತ್ತದೆ. 
 • ಬೇಸಿಗೆ: ಮಾರ್ಚ್ ನಿಂದ ಮೇ ವರೆಗೆ ಕರ್ನಾಟಕದಲ್ಲಿ ಬೇಸಿಗೆ ಕಾಲವಾಗಿದೆ. ಈ ಋತುವಿನಲ್ಲಿ ಗಿರಿಧಾಮಗಳು ತಂಪಾದ ಮತ್ತು ಆಕರ್ಷಕ ತಾಣವಾಗಿ ಉಳಿದಿದ್ದರೆ, ಮಧ್ಯ ಮತ್ತು ಉತ್ತರ ಕರ್ನಾಟಕ ಪ್ರದೇಶವು ಹೆಚ್ಚಿನ ತಾಪಮಾನಕ್ಕೆ ಸಾಕ್ಷಿಯಾಗಲಿವೆ.

 

ನೀತಿ ಸಂಹಿತೆ/ಶಿಷ್ಟಾಚಾರಗಳು :

 • ಭಾರತದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಪಾದರಕ್ಷೆಗಳನ್ನು ಹೊರಗೆ ಬಿಡುವುದು ಪದ್ಧತಿ.
 • ದೇವಾಲಯಗಳಿಗೆ ಭೇಟಿ ನೀಡುವಾಗ ಗೌರವಾನ್ವಿತ ಉಡುಗೆ ಅಗತ್ಯವಾಗಿದೆ. ನೀವು ಭೇಟಿ ನೀಡಲು ಯೋಜಿಸುತ್ತಿರುವ ಧಾರ್ಮಿಕ ಸ್ಥಳಗಳಲ್ಲಿ, ಪ್ರವಾಸಿ ಕೇಂದ್ರಗಳಲ್ಲಿ ಸೂಚಿಸಿದ ಯಾವುದೇ ನಿಯಮಗಳನ್ನು ದಯವಿಟ್ಟು ಗಮನಿಸಿ ಮತ್ತು ಅನುಸರಿಸಿ.

 

ಏನು ಪ್ಯಾಕ್ ಮಾಡುವುದು?

 • ಋತುವಿನ ಪ್ರಕಾರ ಉಡುಗೆ ವಸ್ತುಗಳು ಮತ್ತು ಸಲಕರಣೆಗಳು (ಕೊಡೆ, ಜಾಕೆಟ್, ಚಾರ್ಜರ್ ಇತ್ಯಾದಿ)
 • ಅಗತ್ಯಕ್ಕೆ ತಕ್ಕಂತೆ ಬೇಕಾದ ಔಷಧಿಗಳು 

 

ಕರ್ನಾಟಕದ ಅತ್ಯಂತ ಉಪಯುಕ್ತ ಅಪ್ಲಿಕೇಶನ್‌ಗಳು

1 ಸಾರಿಗೆ: ಓಲಾ, ಉಬರ್, ರೆಡ್‌ಬಸ್, ಜೂಮ್‌ಕಾರ್, ಕೆಎಸ್‌ಆರ್‌ಟಿಸಿ, ಬೌನ್ಸ್, ಮೈಬಿಎಂಟಿಸಿ, ಟ್ರಿನ್‌ಟ್ರಿನ್

2 ಆಹಾರ ವಿತರಣೆ : ಜೊಮಾಟೊ, ಸ್ವಿಗ್ಗಿ

3 ಮೊಬೈಲ್ ವಾಲೆಟ್‌ಗಳು: ಗೂಗಲ್ ಪೇ, ಪೇಟಿಎಂ

4 ಪ್ರಯಾಣ ಯೋಜನೆ: ಮೇಕ್‌ಮೈಟ್ರಿಪ್, ಯಾತ್ರಾ, ಕ್ಲಿಯರ್‌ಟ್ರಿಪ್, ಐಆರ್‌ಸಿಟಿಸಿ