ಮಂಜೂಷಾ ವಸ್ತುಸಂಗ್ರಹಾಲಯ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯ ಪಟ್ಟಣವಾದ ಧರ್ಮಸ್ಥಳದಲ್ಲಿ ಇರುವ ವಿಶಿಷ್ಟ ವಸ್ತುಸಂಗ್ರಹಾಲಯವಾಗಿದ್ದು, ಪುರಾತನ (ವಿಂಟೇಜ್) ಕಾರುಗಳು, ದೇವಾಲಯದ ರಥಗಳು ಮತ್ತು ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.
ಮಂಜೂಷಾ ವಸ್ತುಸಂಗ್ರಹಾಲಯ ಖಾಸಗಿ ಒಡೆತನದಲ್ಲಿದೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲ್ವಿಚಾರಣೆಯಲ್ಲಿದೆ. 35 ವರ್ಷಗಳ ಕಾಲ ವಿಶೇಷ ಮುತುವರ್ಜಿ ವಹಿಸಿ ಸಂಗ್ರಹಿಸಿದ ಆಭರಣಗಳು, ವರ್ಣಚಿತ್ರಗಳು, ಶಿಲ್ಪಗಳು, ಕಾರುಗಳು, ಅಮೂಲ್ಯ ಕಲ್ಲುಗಳು ಮತ್ತು ಇತರ ಕಲಾಕೃತಿಗಳ ಅಪಾರ ಸಂಗ್ರಹ ಇಲ್ಲಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ಛಾಯಾಗ್ರಹಣದ ಉತ್ಸಾಹವು ಕ್ಯಾಮೆರಾ ಸಂಗ್ರಹದ ಪ್ರದರ್ಶನದಿಂದ ಕಂಡುಬರುತ್ತದೆ.
ಮೌರ್ಯರ ಕಾಲದ (ಕ್ರಿ.ಪೂ 1 ನೇ ಶತಮಾನ) ಟೆರಾಕೋಟಾ ನಾಣ್ಯಗಳು, 300 ವರ್ಷಗಳಷ್ಟು ಹಳೆಯದಾದ ವೀಣೆ (ಸಂಗೀತ ವಾದ್ಯ) ಮತ್ತು ವಿಲಕ್ಷಣ ವಿಂಟೇಜ್ ಕಾರುಗಳ ದೊಡ್ಡ ಪಡೆ ಮಂಜೂಷಾ ವಸ್ತುಸಂಗ್ರಹಾಲಯದ ಪ್ರಮುಖ ಮುಖ್ಯಾಂಶಗಳಾಗಿವೆ.
ಸಮಯ: ಮಂಜೂಷಾ ವಸ್ತುಸಂಗ್ರಹಾಲಯವು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ. ಮಂಜೂಷಾ ಮ್ಯೂಸಿಯಂ ಒಳಗೆ ಛಾಯಾಗ್ರಹಣಕ್ಕೆ ಅನುಮತಿ ಇಲ್ಲ. ಫೋಟೋ ಮತ್ತು ಪ್ರದರ್ಶನಗಳ ವಿವರಗಳನ್ನು ಪ್ರದರ್ಶಿಸುವ ಕಿರುಪುಸ್ತಕವನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಹತ್ತಿರದಲ್ಲಿ ಇನ್ನೇನಿದೆ? ಧರ್ಮಸ್ಥಳ ಜೊತೆಗೆ ಕುಕ್ಕೆ ಸುಬ್ರಮಣ್ಯ (55 ಕಿ.ಮೀ), ಮೂಡುಬಿದಿರಿ (51 ಕಿ.ಮೀ) ಮತ್ತು ಮಂಗಳೂರು (75 ಕಿ.ಮೀ) ಪಟ್ಟಣಗಳಿಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ?
ಧರ್ಮಸ್ಥಳ ಬೆಂಗಳೂರಿನಿಂದ 311 ಕಿ.ಮೀ ಮತ್ತು ಮಂಗಳೂರಿನಿಂದ 75 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪುತ್ತೂರು ರೈಲ್ವೆ ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ (49 ಕಿ.ಮೀ). ಧರ್ಮಸ್ಥಳವು ಮಂಗಳೂರು ನಗರದಿಂದ ಉತ್ತಮ ಬಸ್ ಸೇವೆಯನ್ನು ಹೊಂದಿದೆ.
ವಸತಿ: ಧರ್ಮಸ್ಥಳ ದೇವಾಲಯ ನಿರ್ವಹಣೆಯು ಅತಿಥಿ ಗೃಹವನ್ನು ನಡೆಸುತ್ತಿದ್ದು, ಅದನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ದೇವಾಲಯದ ಬಳಿ ಖಾಸಗಿ ವಸತಿಗೃಹಗಳು ಮತ್ತು ಹೋಟೆಲ್‌ಗಳು ಲಭ್ಯವಿದೆ.