ಕ್ರಿ.ಶ 6 ಮತ್ತು 8 ನೇ ಶತಮಾನದ ನಡುವೆ, ಬಾದಾಮಿಯನ್ನು ಹಿಂದೆ ವಾತಾಪಿ ಎಂದು ಕರೆಯಲಾಗುತ್ತಿತ್ತು ಮತ್ತು ಬಾದಾಮಿ ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿ ತನ್ನ ಮರಳುಗಲ್ಲಿನ ಗುಹಾಂತರ ದೇವಾಲಯಗಳು ಮತ್ತು ಕೆತ್ತನೆಗಳಿಂದಾಗಿ ಪ್ರವಾಸಿಗರನ್ನು ಆಹ್ವಾನಿಸುತ್ತದೆ.
ಬಾದಾಮಿಯ ಆಕರ್ಷಣೆಗಳು:
ಬಾದಾಮಿ ಗುಹಾಂತರ ದೇವಾಲಯ ಸಂಕೀರ್ಣದಲ್ಲಿ ಮೂರು ಹಿಂದೂ ದೇವಾಲಯಗಳು ಮತ್ತು ಒಂದು ಜೈನ ದೇವಾಲಯವಿದೆ. ಪ್ರತಿಯೊಂದು ಗುಹೆಗಳು ಬೇರೆ ಬೇರೆ ಪರಿಕಲ್ಪನೆ ಆಧಾರಿತ ಕೆತ್ತನೆಗಳನ್ನು ಹೊಂದಿದೆ.
ಮೊದಲ ಗುಹೆಯಲ್ಲಿ ಶಿವತಾಂಡವ ನೃತ್ಯದ ಚಿತ್ರಣವಿದೆ. ಎರಡನೆಯ ಮತ್ತು ಮೂರನೆಯ ಗುಹೆಗಳು ಭಗವಾನ್ ವಿಷ್ಣುವನ್ನು ಮತ್ತು ವಿಷ್ಣುವಿನ ಅವತಾರಗಳನ್ನು ಚಿತ್ರಿಸುತ್ತವೆ. ಡೆಕ್ಕನ್ ಪ್ರದೇಶದ (ಮಧ್ಯ ಭಾರತ) ಮೊದಲಿನ ಹಿಂದೂ ದೇವಾಲಯಗಳಲ್ಲಿಬಾದಾಮಿ ಒಂದಾಗಿದೆ. ಅವರ ಐತಿಹಾಸಿಕ ಪ್ರಾಮುಖ್ಯತೆಯಲ್ಲದೆ, ಅಗಸ್ತ್ಯ ಸರೋವರದ ಹಿನ್ನಲೆಯಲ್ಲಿ ಕಾಣುವ ಗುಹಾಂತರ ದೇವಾಲಯಗಳು ಮತ್ತು ಕೋಟೆ ತನ್ನ ದೃಶ್ಯ ವೈಭವದಿಂದಲೂ ಹೆಸರುವಾಸಿಯಾಗಿದೆ. ವಿಶಿಷ್ಟ ಭೂದೃಶ್ಯಗಳಿಂದಾಗಿ ಬಾದಾಮಿ ಛಾಯಾಗ್ರಹಣ ಪ್ರಿಯರನ್ನು ಆಕರ್ಷಿಸುತ್ತದೆ.
ಬಾದಾಮಿ ಗುಹೆ ದೇವಾಲಯದಿಂದ ಒಂದು ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿರುವ ಭೂತನಾಥ ದೇವಾಲಯ ಸಂಕೀರ್ಣವು ಮರಳುಗಲ್ಲಿನ ದೇವಾಲಯಗಳ ಸಮೂಹವಾಗಿದೆ. ಕ್ರಿ.ಶ 7 ರಿಂದ 11 ನೇ ಶತಮಾನದವರೆಗಿನ ಅವಧಿಯಲ್ಲಿ ಭೂತನಾಥ ದೇವಾಲಯಗಳ ಘಟಕಗಳನ್ನು ನಿರ್ಮಿಸಲಾಗಿದೆ.
ಬಾದಾಮಿ ಗುಹೆಗಳ ಆವರಣದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಣಜಗಳನ್ನು ನೋಡಬಹುದಾಗಿದೆ.
ಹತ್ತಿರ: ಪಟ್ಟದಕಲ್ಲು (ಬಾದಾಮಿಯಿಂದ 20 ಕಿ.ಮೀ) ಮತ್ತು ಐಹೊಳೆ (ಬಾದಾಮಿಯಿಂದ 35 ಕಿ.ಮೀ) ಬಾದಾಮಿಯ ಜೊತೆಗೆ ಭೇಟಿ ಕೊಡಬಹುದಾದ ಐತಿಹಾಸಿಕ ತಾಣಗಳಾಗಿವೆ.
ತಲುಪುವುದು ಹೇಗೆ: ಬಾದಾಮಿ ಬೆಂಗಳೂರಿನಿಂದ 450 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಬಾದಾಮಿಯಿಂದ 105 ಕಿ.ಮೀ). ಬಾದಾಮಿಯಲ್ಲಿ ರೈಲು ನಿಲ್ದಾಣವಿದೆ ಮತ್ತು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಬಸ್ ಸೇವೆ ಮತ್ತು ರಸ್ತೆ ಸಂಪರ್ಕವಿದೆ.
ವಸತಿ: ಕೆಎಸ್ಟಿಡಿಸಿ ನಡೆಸುವ ಹೋಟೆಲ್ ಮಯೂರ ಮತ್ತು ಹಲವಾರು ಖಾಸಗಿ ಹೋಟೆಲ್ಗಳು ಬಾದಾಮಿ ಪಟ್ಟಣದಲ್ಲಿ ಲಭ್ಯವಿದೆ.