ಯಂತ್ರೋದ್ಧಾರಕ ಹನುಮಾನ ದೇವಸ್ಥಾನ
ಯಂತ್ರೋದ್ಧಾರಕ ಹನುಮಾನ ದೇವಸ್ಥಾನ: ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದಿಂದ 2 ಕಿ.ಮೀ. ದೂರವಿರುವ ಶ್ರೀ ಯಂತ್ರೋದ್ಧಾರಕ ಹನುಮಾನ್ ಮಂದಿರ. ಸುಮಾರು 500 ವರ್ಷಗಳ ಹಿಂದೆ ದ್ವೈತ ಚಿಂತಕ ಮತ್ತು ವಿಜಯನಗರ ಸಾಮ್ರಾಜ್ಯದ ರಾಜಗುರು ಶ್ರೀ ವ್ಯಾಸರಾಜರು ಈ ವಿಗ್ರಹ ನಿರ್ಮಿಸಿದ್ದಾರೆ. ಹಂಪಿಯ ಈ ಕ್ಷೇತ್ರದಲ್ಲಿ ಹನುಮಂತ ದೇವರ ಆರಾಧಿಸುವ ಎರಡನೇ ಪ್ರಮುಖ ಸ್ಥಳವಾಗಿದೆ.
ದಾಖಲೆಗಳ ಪ್ರಕಾರ ಶ್ರೀ ವ್ಯಾಸರಾಜರು ಪ್ರತಿದಿನ ತಮ್ಮ ನಿತ್ಯ ಪೂಜೆ ಮಾಡುವ ಮೊದಲು ಬಂಡೆಯ ಮೇಲೆ ಕಲ್ಲಿದ್ದಿಲಿನಿಂದ ಭಗವಾನ್ ಹನುಮಂತನ ಚಿತ್ರವನ್ನು ಬಿಡಿಸುತ್ತಿದ್ದರಂತೆ. ಅವರ ಪೂಜೆಯ ನಂತರ ಶ್ರೀ ಹನುಮಂತನ ಚಿತ್ರವೂ ಮಾಯವಾಗುತ್ತಿತ್ತಂತೆ. ರಾಮಾಯಣದ ಕಾಲದಲ್ಲಿ ಶ್ರೀ ರಾಮನು ಹನುಮಂತನನ್ನು ಮೊದಲು ಇಲ್ಲೇ ಭೇಟಿಯಾಗಿದ್ದನು ಎಂದೂ ನಂಬಲಾಗಿದೆ. ಶ್ರೀ ವ್ಯಾಸರಾಜ ಸ್ವಾಮಿಯವರು ಪ್ರತಿಷ್ಟಾಪಿಸಿದ 732 ಶ್ರೀ ಹನುಮಂತನ ವಿಗ್ರಹಗಳಲ್ಲಿ ಇದು ಮೊದಲನೆಯದ್ದು ಎಂದು ಪೌರಾಣಿಕ ದಾಖಲೆಗಳು ಹೇಳುತ್ತವೆ. ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಆಂಜನೇಯಸ್ವಾಮಿ ಪವಿತ್ರ ಭೂಮಿಯು ತುಂಗಭದ್ರಾ ನದಿ ದಡದಲ್ಲಿದೆ ಹಾಗೂ ಈ ದೇವಸ್ಥಾನದ ಮುಂದೆ ಹರಿಯುವ ನದಿ ನೀರನ್ನು ಚಕ್ರತೀರ್ಥ ಎಂದು ಕರೆಯುತ್ತಾರೆ.
ಪ್ರಸಿದ್ಧ ಯಂತ್ರೋದ್ಧಾರಕ ಹನುಮಾನ್ ಸ್ತೋತ್ರವನ್ನು ಈ ದೇವಸ್ಥಾನದಲ್ಲಿ ರಚಿಸಲಾಗಿದೆ ಮತ್ತು ಇಲ್ಲಿಗೆ ಭೇಟಿ ನೀಡುವ ಭಕ್ತರು ಈ ಶ್ಲೋಕವನ್ನು ದಿನಕ್ಕೆ ಮೂರು ಬಾರಿ ಆರು ತಿಂಗಳು ಪಠಿಸಿದರೆ ತಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. ಧ್ಯಾನದ ಭಂಗಿಯಲ್ಲಿರುವ ಶ್ರೀ ಹನುಮಾನ್ ವಿಗ್ರಹವಿದೆ ಮತ್ತು ಅದು ಷಟ್ಕೋನ ತಾಯತದ ಜೊತೆ ಸುತ್ತುತ್ತದೆ. ಈ ವಿಗ್ರಹವು 12 ದಿನಗಳ ಪ್ರಾರ್ಥನೆಯನ್ನು ವಿವರಿಸುವ 12 ಕಪಿಗಳ ವಿಗ್ರಹಗಳಿಂದ ಆವೃತವಾಗಿದೆ. ಮಹಾ ತಪಸ್ವಿ ಒಮ್ಮೆ ಪ್ರಾರ್ಥಿಸಿದ ಬೀಜದ ಉಚ್ಚಾರಾಂಶಗಳನ್ನು ತಾಯತದ ಒಳಭಾಗದಲ್ಲಿ ಅಳವಡಿಸಲ್ಪಟ್ಟಿದೆ. ಈ ಎಲ್ಲಾ ವಿನ್ಯಾಸವನ್ನು 8 ಅಡಿ ಎತ್ತರದ ಒಂದೇ ಕಲ್ಲಿನ ಬಂಡೆಯಮೇಲೆ ಮಾಡಲಾಗಿದೆ.
ಇಲ್ಲಿಂದ ಐದು ನಿಮಿಷದ ದೂರದಲ್ಲಿ ಭಗವಾನ್ ಶ್ರೀನಿವಾಸನ (ಭಗವಾನ್ ವಿಷ್ಣು ಒಡಮೂಡಿದ್ದು) ಮಂದಿರವಿದೆ. ಇದನ್ನೂ ರಾಜಗುರು ಶ್ರೀ ವ್ಯಾಸರಾಜರೇ ನಿರ್ಮಿಸಿದ್ದಾರೆ ಎಂದು ಹೇಳುತ್ತಾರೆ.
ವಿವರಗಳು:
ಭೇಟಿ ಮಾಡಲು ಉತ್ತಮ ಸಮಯ: ಅಕ್ಟೋಬರ್ – ಮಾರ್ಚ್
ಪ್ರವೇಶ ಶುಲ್ಕ ಮತ್ತು ಕ್ಯಾಮೆರಾ ಶುಲ್ಕ: ಅನ್ವಯವಾಗುವುದಿಲ್ಲ
ಉಳಿದು ಕೊಳ್ಳಲು ಸ್ಥಳ : ಹಂಪಿ ಮತ್ತು ಹೊಸಪೇಟೆಯಲ್ಲಿ ಅನೇಕ ಸ್ಥಳಗಳಿವೆ.
ಹೇಗೆ ತಲುಪುವುದು
ವಿಮಾನ: ಹತ್ತಿರದ ವಿಮಾನ ನಿಲ್ದಾಣ , ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (338 ಕಿ.ಮೀ)
ರೈಲು : ಹೊಸಪೇಟೆ ರೈಲು ನಿಲ್ದಾಣ (10 ಕಿ.ಮೀ.)
ಕಾರು: ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿ ಬೆಂಗಳೂರಿನಿಂದ ಯಂತ್ರೋದ್ಧಾರಕ ಹನುಮಾನ್ ದೇವಸ್ಥಾನಕ್ಕೆ ಹೋಗಬಹುದು 341 ಕಿ.ಮೀ ದೂರವಿದೆ.
 
 