Karnataka Tourism
GO UP
Image Alt

ಧಾರವಾಡ

separator
  /  ಧಾರವಾಡ

ಧಾರವಾಡ ಕರ್ನಾಟಕದ ಉತ್ತರ ಭಾಗದಲ್ಲಿದೆ. ಭೌಗೋಳಿಕವಾಗಿ, ಧಾರವಾಡವನ್ನು ಪೂರ್ವದಲ್ಲಿ ಗದಗ, ಉತ್ತರದಲ್ಲಿ ಬೆಳಗಾವಿ , ನೈರುತ್ಯದಲ್ಲಿ ಉತ್ತರ ಕನ್ನಡ, ದಕ್ಷಿಣದಲ್ಲಿ ಹಾವೇರಿ ಸುತ್ತುವರಿದಿದೆ. ಧಾರವಾಡ  ಚಾಲುಕ್ಯರು, ಬಹಮನಿ ಸುಲ್ತಾನ, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿ, ಮೊಘಲರು, ಶಿವಾಜಿ ಮಹಾರಾಜ್, ಪೇಶ್ವಾ ಬಾಲಾಜಿ ಬಾಜಿ ರಾವ್, ಹೈದರ್ ಅಲಿ, ಟಿಪ್ಪು ಸುಲ್ತಾನ್  ಮತ್ತು ಅಂತಿಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸೇರಿದಂತೆ ಅನೇಕ ರಾಜವಂಶಗಳು ಮತ್ತು ರಾಜರುಗಳು  ಧಾರವಾಡ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಜೋಡಿ ನಗರಗಳನ್ನಾಗಿ ಮಾಡಲು  ಇದನ್ನು ಹುಬ್ಬಳ್ಳಿಯೊಂದಿಗೆ ಒಂದುಗೂಡಿಸಲಾಯಿತು (ಇದು ಸುಮಾರು 20 ಕಿ.ಮೀ ಅಂತರದಲ್ಲಿದೆ). ಕರ್ನಾಟಕ ಸರ್ಕಾರವು ಧಾರವಾಡ (ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ) ಮತ್ತು ಹುಬ್ಬಳ್ಳಿ (ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ) ಎಂಬ ಅವಳಿ ನಗರಗಳನ್ನು ಒಟ್ಟುಗೂಡಿಸಿ ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ (HDMC) ಅನ್ನು ರಚಿಸಿತು, ಇದು ಬೆಂಗಳೂರಿನ ನಂತರ ಕರ್ನಾಟಕದಲ್ಲಿ 2ನೇ ದೊಡ್ಡ ಮಹಾನಗರ. ಧಾರವಾಡವು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಇತರ ಹಲವಾರು ಕಾಲೇಜುಗಳಿಗೆ ನೆಲೆಯಾಗಿದೆ.

ಜಿಲ್ಲೆಯು ಅದರ ವಿಶಿಷ್ಟ ಸಂಸ್ಕೃತಿ, ಪಾಕಪದ್ಧತಿ ಮತ್ತು ಕಲೆ ಮತ್ತು ಸೃಜನಶೀಲತೆಗೆ ಹೆಸರುವಾಸಿಯಾಗಿದೆ.  ಸಂಗೀತ, ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರಮುಖರ ಹೆಸರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಡಾ.ಡಿ.ಆರ್. ಭೀಮಸೇನ್ ಜೋಶಿ, ಬಸವರಾಜ್ ರಾಜಗುರು ಮತ್ತು ಸಂಗೀತ ಕಟ್ಟಿ ಕೂಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ . ಖ್ಯಾತ ಕಲಾವಿದ ಹಾಲಭಾವಿ ಕೂಡ ಧಾರವಾಡದವರು. ಕರ್ನಾಟಕ ಏಕೀಕರಣದ ನೇತೃತ್ವ ವಹಿಸಿದ್ದ ಆಲೂರು ವೆಂಕಟರಾವ್ , ಪಂಪ ಮಹಾಕವಿ, ಸಾಹಿತಿ ಪಾಟೀಲ ಪುಟ್ಟಪ್ಪ ಇವರೆಲ್ಲರೂ ಧಾರವಾಡದವರು. ಪಾಕಪದ್ಧತಿಯ ವಿಷಯಕ್ಕೆ ಬಂದರೆ, ಧಾರವಾಡ ಪೇಡ ಕೇಕ್ ಧಾರವಾಡದ ಅತ್ಯಂತ ಪ್ರಸಿದ್ಧ ಪಾಕಶಾಲೆಯ ವಸ್ತುವಾಗಿದ್ದು, ಇದು ಭೌಗೋಳಿಕ ಸೂಚನೆಗಳು (GI) ಟ್ಯಾಗ್ ಅನ್ನು ಸಹ ಪಡೆದುಕೊಂಡಿದೆ. ಜೋಳದ ರೊಟ್ಟಿಯ ಸರಳ ಊಟದಿಂದ ಹಿಡಿದು, ಹೋಳಿಗೆ, ಮೆಂತೆ ಚಟ್ನಿಗಳವರೆಗೆ ಸಾಂಪ್ರದಾಯಿಕ ಆಹಾರ ಬಡಿಸಲಾಗುತ್ತದೆ. ಧಾರವಾಡವು ಮಾವು ಮತ್ತು ಪೇರಲ ತೋಟಗಳಿಗೆ ಹೆಸರುವಾಸಿಯಾಗಿದೆ. ಇತರರು ಇಲ್ಲಿಂದ ನೆನಪಿಗಾಗಿ GI ಟ್ಯಾಗ್ ಮಾಡಲಾದ ನವಲ್ಗುಂದ್  ಧುರ್ರಿ (ಒಂದು ರೀತಿಯ ನೆಲದ ಕಾರ್ಪೆಟ್) ಮತ್ತು  ಕಸೂತಿ ಎಂಬ್ರಾಯ್ಡರಿ ಸೀರೆಗಳನ್ನು ತೆಗೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ

ಪಾರಂಪರಿಕ ತಾಣಗಳು
  • ಚಂದ್ರಮೌಳೇಶ್ವರ ದೇವಾಲಯ, ಹುಬ್ಬಳ್ಳಿ: ಉಣಕಲ್ ನಲ್ಲಿರುವ ಚಂದ್ರಮೌಳೇಶ್ವರ ದೇವಾಲಯವು ಚಾಲುಕ್ಯದ ವಾಸ್ತುಶಿಲ್ಪದ ಸ್ಮಾರಕವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಒಂದು ವಿಶಿಷ್ಟ ಲಕ್ಷಣವೆಂದರೆ ಎರಡು ಶಿವಲಿಂಗಗಳ ಉಪಸ್ಥಿತಿ. ಮತ್ತೊಂದು ವಿಶಿಷ್ಟ ಅಂಶವೆಂದರೆ ಇಲ್ಲಿರುವ ಚತುರ್ಲಿಂಗವಾದ ಶಿವಲಿಂಗ(ನಾಲ್ಕು ಮುಖಗಳನ್ನು ಕೆತ್ತಲಾದ ಲಿಂಗ), ಮತ್ತು ಎರಡು ನಂದಿ ವಿಗ್ರಹಗಳು.
  • ಅಮೃತೇಶ್ವರ ದೇವಾಲಯ, ಅಣ್ಣಿಗೇರಿ: ಅಣ್ಣಿಗೇರಿಯ ಅಮೃತೇಶ್ವರ ದೇವಾಲಯವು 11 ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದ್ದಾಗಿದ್ದು, ವಾಸ್ತುಶಿಲ್ಪಕ್ಕೆ (76 ಸ್ತಂಭಗಳು ಮತ್ತು ಪೌರಾಣಿಕ ಕೆತ್ತನೆಗಳೊಂದಿಗೆ) ಹೆಸರುವಾಸಿಯಾಗಿದೆ.
  • ಬನಶಂಕರಿ ದೇವಾಲಯ, ಅಮರಗೋಳ: ಅಮರಗೋಳದಲ್ಲಿರುವ ಬನಶಂಕರಿ ದೇವಾಲಯವು ಚಾಲುಕ್ಯರು 12ನೇ ಶತಮಾನದಲ್ಲಿ ನಿರ್ಮಿಸಿದ ಒಂದು ಉತ್ತಮ ವಾಸ್ತುಶಿಲ್ಪವಾಗಿದ್ದು, ಬನಶಂಕರಿ ದೇವಿ ಮತ್ತು ಶಂಕರಲಿಂಗ ದೇವರಿಗೆ ಸಮರ್ಪಿತವಾಗಿದೆ.
  • ಧಾರವಾಡ ಕೋಟೆ: ಒಂದು ಕಾಲದ ದೊಡ್ಡ ಕೋಟೆಯ ಅವಶೇಷಗಳು ಮಾತ್ರ (ಕೇವಲ ಎರಡು ಮುಖ್ಯ ದ್ವಾರಗಳು) ಈಗ ಧಾರವಾಡದ ಮಧ್ಯವಾಗದಲ್ಲಿವೆ. ಇದನ್ನು ಕ್ರಿ.ಶ 1403 ರಲ್ಲಿ ಧಾರರಾವ್ ನಿರ್ಮಿಸಿದ್ದರು.
  • ಭವಾನಿ ಶಂಕರ ದೇವಾಲಯ, ಹುಬ್ಬಳ್ಳಿ: ಭವಾನಿ ಶಂಕರ ದೇವಾಲಯವು ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದ್ದು, ಹಳೇ ಹುಬ್ಬಳ್ಳಿ ಪ್ರದೇಶದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದವು ಶಿವ ಪಾರ್ವತಿ ಮತ್ತು ಶ್ರೀ ನಾರಾಯಣ ದೇವರುಗಳನ್ನು ಹೊಂದಿದೆ.
  • ಶಂಬುಲಿಂಗೇಶ್ವರ ದೇವಾಲಯ, ಕುಂದಗೋಳ: ಚಾಲುಕ್ಯ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾದ ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯವು, ಸುಂದರವಾಗಿ ನಯಗೊಳಿಸಿದ ಅಲಂಕೃತ ಸ್ತಂಭಗಳಿಂದಾಗಿ ಆಕರ್ಷಿಸುತ್ತದೆ.
  • ಕಲ್ಮೇಶ್ವರ ದೇವಾಲಯ, ಕಾಮಧೇನು: ಕಲಘಟಗಿ ಪಟ್ಟಣಕ್ಕೆ ಸಮೀಪದ ಕಾಮಧೇನು ಗ್ರಾಮದಲ್ಲಿರುವ ಕಲ್ಮೇಶ್ವರ ದೇವಾಲಯವು ಒಂದು ಪ್ರಾಚೀನ ಸ್ಮಾರಕವಾಗಿದೆ.
  • ಬಸವಣ್ಣ ದೇವಾಲಯ, ತಂಬೂರು: ಕಲಘಟಗಿ ಪಟ್ಟಣಕ್ಕೆ ಸಮೀಪದ ತಂಬೂರು ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ಬಸವಣ್ಣ ದೇವಸ್ಥಾನವು ಸುಂದರವಾಗಿ ಕೆತ್ತಲ್ಪಟ್ಟಿರುವ ಬಸವಣ್ಣನನ್ನು ಹೊಂದಿದೆ.
ಕಲೆ ಮತ್ತು ಹಬ್ಬಗಳು
  •  ಚಬ್ಬಿ ಗಣೇಶೋತ್ಸವ: ಚಬ್ಬಿಯ ಕುಲಕರ್ಣಿ ಕುಟುಂಬದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕೆಂಪು ಬಣ್ಣದ ಗಣಪತಿಯ ವಿಗ್ರಹವು ಗಣೇಶ ಚತುರ್ಥಿ ಸಂಧರ್ಭದಲ್ಲಿ ಜಿಲ್ಲೆಯಾದ್ಯಂತದ ಜನರನ್ನು ಆಕರ್ಷಿಸುತ್ತದೆ. ಕ್ರಿ.ಶ 1827ರಿಂದ ಈ ಹಬ್ಬ ನಡೆಯುತ್ತಿದ್ದು, ಜನರು ಭಗವಾನ್ ಗಣಪತಿಯ ಆಶೀರ್ವಾದವನ್ನು ಪಡೆದು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಚಬ್ಬಿಗೆ ಭೇಟಿ ನೀಡುತ್ತಾರೆ.
  • ರಾಮಲಿಂಗೇಶ್ವರ ಕಾಮಣ್ಣ, ನವಲಗುಂದ: ರಾಮಲಿಂಗೇಶ್ವರ ಕಾಮಣ್ಣ ಹೋಲಿ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಈ ಸಂಧರ್ಭದಲ್ಲಿ ಎಲ್ಲ ಧರ್ಮೀಯರೂ ಭೇಟಿ ನೀಡಿ, ತಮ್ಮ ಅಭಿಲಾಶೆಗಳನ್ನು ಈಡೇರಿಸಿಕೊಳ್ಳಲು ಬೆಳ್ಳಿಯ ವಸ್ತುಗಳನ್ನು ಸಮರ್ಪಿಸುತ್ತಾರೆ.
  • ಕೃಷಿ ಮೇಳ, ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳವು ರೈತ ಸಮುದಾಯಕ್ಕೆ ಬೃಹತ್ ಕಾರ್ಯಕ್ರಮವಾಗಿದ್ದು, ವಿಶ್ವವಿದ್ಯಾಲಯ ಮತ್ತು ಖಾಸಗಿ ಉದ್ಯಮಗಳ ಕೃಷಿ ಮತ್ತು ಸಂಬಂಧಿತ ತಂತ್ರಜ್ಞಾನಗಳ ಪ್ರದರ್ಶನ ಮತ್ತು ಶಿಕ್ಷಣ ನೀಡುವ ವೇದಿಕೆಯಾಗಿದೆ. ಪ್ರತಿ ವರ್ಷವೂ ನಿರ್ದಿಷ್ಟ ವಿಷಯವನ್ನು ಆಧರಿಸಿ ಕೃಷಿ ಮೇಳವನ್ನು ನಡೆಸಲಾಗುತ್ತದೆ.
ವಸ್ತುಸಂಗ್ರಹಾಲಯ
  • ರೈಲ್ವೆ ವಸ್ತುಸಂಗ್ರಹಾಲಯ, ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ವಸ್ತುಸಂಗ್ರಹಾಲಯವು ಹಲವು ಪ್ರದರ್ಶನಗಳು ಮತ್ತು ಕಲಾತ್ಮಕ ವಸ್ತುಗಳ ಜೊತೆಗೆ ಹಲವು ದಶಕಗಳಿಂದ ಭಾರತೀಯ ರೈಲ್ವೆಯ ಪರಂಪರೆಯನ್ನು ಪ್ರದರ್ಶಿಸುತ್ತಾ ಬಂದಿದೆ.
  • ಕರ್ನಾಟಕ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯವು ಕರ್ನಾಟಕದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅದರ ಆವರಣದಲ್ಲಿರುವ ಪ್ರಾಣಿ ಮತ್ತು ಸಸ್ಯಗಳ ವಸ್ತುಸಂಗ್ರಹಾಲಯ, ಭೂವಿಜ್ಞಾನ ವಸ್ತುಸಂಗ್ರಹಾಲಯ ಮತ್ತು ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯಗಳು ವಿವಿಧ ಸಂಶೋಧಕರಿಗೆ ಅನುಕೂಲ ಮಾಡಿಕೊಟ್ಟಿವೆ.
  • ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ: ಕರ್ನಾಟಕ ಕಲಾ ಕಾಲೇಜಿನಲ್ಲಿರುವ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯವು 1947ರಲ್ಲಿ ಸ್ಥಾಪನೆಯಾಗಿದ್ದು, ರಾಜ್ಯದಲ್ಲಿರುವ ಪ್ರಾಣಿಗಳ ಕುರಿತಾದ ಅತಿ ದೊಡ್ಡ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಅತೀ ವಿರಳ ಪ್ರಾಣಿ ಪಕ್ಷಿಗಳ ತಳಿಗಳನ್ನು ಈ ವಸ್ತು ಸಂಗ್ರಹಾಲವು ಹೊಂದಿದೆ.
  • ಇಂಟ್ಯಾಕ್ ಹೆರಿಟೇಜ್ ಮ್ಯೂಸಿಯಂ, ಧಾರವಾಡ: ಧಾರವಾಡದ ಇಂಟ್ಯಾಕ್ ಹೆರಿಟೇಜ್ ಮ್ಯೂಸಿಯಂ ಅಪರೂಪದ ಅಂಚೆಚೀಟಿಗಳು, ನಾಣ್ಯಗಳು, ಮೂಲ ಪ್ರಮಾಣಪತ್ರಗಳು ಮತ್ತು ಹೆಸರಾಂತ ಲೇಖಕರ ಕೃತಿಗಳ ಮೂಲ ಪ್ರತಿಗಳ ಸಂಗ್ರಹವನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯವು ಸಾಹಿತ್ಯ, ಸಂಗೀತ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಪ್ರಮುಖ ವ್ಯಕ್ತಿಗಳ ಸಾಧನೆಗಳ ಛಾಯಾಚಿತ್ರಗಳು ಒಳಗೊಂಡಿದ್ದು, ಮಾಹಿತಿಯ ನಿಧಿಯಾಗಿದೆ.
  • ದ.ರಾ.ಬೇಂದ್ರೆ ಭವನ, ಧಾರವಾಡ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದ.ರಾ.ಬೇಂದ್ರೆ ಅವರ ಸ್ಮರಣಾರ್ಥ ಧಾರವಾಡದ ಅವರ ಮನೆ “ಶ್ರೀ ಮಠ”ದ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಸ್ಮಾರಕವೇ ಬೇಂದ್ರೆ ಭವನ. ಈ ಭವನವು ದ.ರಾ.ಬೇಂದ್ರೆಯ ಅಪರೂಪದ ಛಾಯಾಚಿತ್ರಗಳು, ವರ್ಣಚಿತ್ರಗಳು, ಉಲ್ಲೇಖಗಳು ಮತ್ತು ಅವರ ಕವಿತೆಗಳಿಂದ ಆಯ್ದ ಭಾಗಗಳನ್ನು ಹೊಂದಿದೆ. ಇದರೊಟ್ಟಿಗೆ, ಸಂಬಾಗಣವನ್ನೂ ಹಾಗೂ ಅವರ ಪರಂಪರೆಯನ್ನು ಜೀವಂತವಾಗಿರಿಸುವ ಗ್ರಂಥಾಲಯವನ್ನು ಹೊಂದಿದೆ.
  • ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ, ಧಾರವಾಡ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಡಾ.ಮಲ್ಲಿಕಾರ್ಜುನ ಮನ್ಸೂರ್ ಅವರ ಧಾರವಾಡದ ನಿವಾಸದಲ್ಲಿ ಅವರ ಗೌರವಾರ್ಥವಾಗಿ ಮ್ಯೂಸಿಯಂ ಸ್ಥಾಪಿಸಲಾಗಿದೆ.
ಶೈಕ್ಷಣಿಕ ಪ್ರವಾಸೋದ್ಯಮ
  • ಪ್ರಾದೇಶಿಕ ವಿಜ್ಞಾನ ಕೇಂದ್ರ, ಧಾರವಾಡ: ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವು ನೈಸರ್ಗಿಕ ಹಸಿರು ಹೊದಿಕೆಯಿಂದ ಸುತ್ತುವರೆದಿದ್ದು, ಐತಿಹಾಸಿಕವಾದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿದೆ. ವಿಜ್ಞಾನ ಕೇಂದ್ರದ ರಚನಾತ್ಮಕ ಚಟುವಟಿಕೆಗಳಲ್ಲಿ ಯುವಜನರು ಮತ್ತು ವೃದ್ಧರನ್ನು ತೊಡಗಿಸಿಕೊಳ್ಳಲು ಹಾಗೂ ಸಂದರ್ಶಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತಲು ಈ ಕೇಂದ್ರವು ಸೂಕ್ತ ಸ್ಥಳವಾಗಿದೆ. ಈ ಸ್ಥಳವು ಸಂದರ್ಶಕರಿಗೆ ವಿನೋದಭರಿತವಾಗಿ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಸುತ್ತದೆ.
ಮನರಂಜನಾ ಪ್ರವಾಸೋದ್ಯಮ
  • ನೃಪತುಂಗ ಬೆಟ್ಟ, ಹುಬ್ಬಳ್ಳಿ: ನೃಪತುಂಗ ಬೆಟ್ಟವು ಮರಗಳು ಮತ್ತು ವರ್ಣರಂಜಿತ ಹೂವುಗಳಿಂದ ಆವೃತವಾಗಿದ್ದು, ನಗರದ ಜನಸಂದಣಿ ಮತ್ತು ಮಾಲಿನ್ಯದಿಂದ ದೂರವಿರುವ ಪ್ರಸಿದ್ಧ ಪಿಕ್ನಿಕ್ ತಾಣವಾಗಿದೆ. ಬೆಟ್ಟದ ಗಡಿಯಾರ ಗೋಪುರಗಳು ಇಡೀ ನಗರದ ವಿಹಂಗಮ ನೋಟವನ್ನು ಒದಗಿಸುತ್ತವೆ.
  • ಉಣಕಲ್ ಕೆರೆ, ಹುಬ್ಬಳ್ಳಿ: ಉಣಕಲ್ ಕೆರೆಯನ್ನು ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಮಕ್ಕಳಿಗಾಗಿ ಉದ್ಯಾನ ಮತ್ತು ಮನರಂಜನಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೆರೆಯ ಬಳಿ ಸಂಜೆಯ ಸೂರ್ಯಾಸ್ತದ ಬೆರಗುಗೊಳಿಸುವ ದೃಶ್ಯಗಳನ್ನು ನೋಡಬಹುದು. ಸಂದರ್ಶಕರು ದೋಣಿ ವಿಹಾರಕ್ಕೆ ಹೋಗಬಹುದು ಮತ್ತು ಸರೋವರದ ಮಧ್ಯದಲ್ಲಿ ಇರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದು.
  • ಸಾಧನಕೇರಿ ಕೆರೆ, ಧಾರವಾಡ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದ.ರಾ.ಬೇಂದ್ರೆ ಅವರನ್ನು ಪ್ರೇರೇಪಿಸಿ, ಹತ್ತಿರದಲ್ಲೇ ವಾಸಿಸುವಂತೆ ಮಾಡಿದ ಸಾಧನಕೇರಿ ಕೆರೆ ಮತ್ತು ಉದ್ಯಾನವನವು ಸೊಂಪಾದ ಹಸಿರು ಮತ್ತು ಪ್ರಶಾಂತ ವಾತಾವರಣದಿಂದ ಸುತ್ತುವರೆದಿರುವ ಸುಂದರ ಸ್ಥಳವಾಗಿದೆ.
  • ಸಂಜೀವಿನಿ ಟ್ರೀ ಪಾರ್ಕ್, ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಇರುವ ಸಂಜೀವಿನಿ ಟ್ರೀ ಪಾರ್ಕ್ ಅತ್ಯಂತ ಆಕರ್ಷಕವಾದ ಉದ್ಯಾನವನ. ದಟ್ಟ ಅರಣ್ಯದಿಂದ ಸುತ್ತುವರೆದಿದ್ದು, ಸಂದರ್ಶಕರಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ.
  • ನೇಚರ್ ಫಸ್ಟ್ ಇಕೋ ವಿಲೇಜ್, ಹಳ್ಳಿಕೇರಿ: ದಾಂಡೇಲಿ ರಸ್ತೆಯಲ್ಲಿರುವ ಹಳ್ಳಿಕೇರಿ ಬಳಿಯ ನೇಚರ್ ಫಸ್ಟ್ ಇಕೋ ವಿಲೇಜ್, ಪ್ರವಾಸಿಗರಿಗೆ ಬೋಟಿಂಗ್, ರೈನ್‌ ಡ್ಯಾನ್ಸ್, ಈಜು, ಹಗ್ಗದ ಆಟಗಳು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಮನರಂಜನಾ ಚಟುವಟಿಕೆಗಳು ಮತ್ತು ಪಾರಂಪಕರಿಕ ಆಹಾರವನ್ನು ಒದಗಿಸುವುದರ ಜೊತೆಗೆ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಅರಿವು ಮೂಡಿಸುತ್ತದೆ.
  • ತೋಳಂಕೆರೆ, ಹುಬ್ಬಳ್ಳಿ: ತೋಳಂಕೆರೆಯು ಕೃತಕ ದ್ವೀಪಗಳನ್ನು ಹೊಂದಿರುವ ಸುಂದರವಾದ ಲೇಕ್ ಪಾರ್ಕ್ ಆಗಿದೆ. ಮಕ್ಕಳಿಗಾಗಿ ಮನರಂಜನಾ ಸೌಲಭ್ಯಗಳು, ಸುಂದರವಾದ ಉದ್ಯಾನಗಳು ಜೊತೆಗೆ ಈ ಸ್ಥಳದಲ್ಲಿನ ಇತರ ಅನೇಕ ವಿಷಯಗಳು ಸಂದರ್ಶಕರನ್ನು ಆಕರ್ಷಿಸುತ್ತವೆ. ವಿಶೇಷವಾಗಿ ಪ್ರಕೃತಿ ಪ್ರೇಮಿಗಳಿಂದ ಪ್ರಶಂಸೆಗೆ ಪಾತ್ರವಾಗುತ್ತವೆ.
  • ಇಂದಿರಾ ಗಾಜಿನ ಮನೆ, ಹುಬ್ಬಳ್ಳಿ: ಹುಬ್ಬಳ್ಳಿಯ ಮಧ್ಯಭಾಗದಲ್ಲಿರುವ ಇಂದಿರಾ ಗ್ಲಾಸ್‌ ಹೌಸ್ ಉದ್ಯಾನದಾದ್ಯಂತ ಹರಡಿರುವ ಸುಂದರವಾದ ಶಿಲ್ಪಗಳು, ಆಟಿಕೆ ರೈಲು ಮತ್ತು ಮಕ್ಕಳಿಗಾಗಿ ಇರುವ ಮನರಂಜನಾ ಸೌಲಭ್ಯಗಳಿಂದಾಗಿ ಜನರನ್ನು ಆಕರ್ಷಿಸುತ್ತದೆ. ಈ ಉದ್ಯಾನವನದ ಪ್ರಮುಖ ಸ್ಥಳ ಗಾಜಿನ ಮನೆಯಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ.
  • ಕೆಲಗೇರಿ ಕೆರೆ, ಧಾರವಾಡ: ಕೆಲಗೇರಿ ಕೆರೆ ಧಾರವಾಡದ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಭೂದೃಶ್ಯವನ್ನು ಅನುಭವಿಸಲು ಹಾಗೂ ವಿಶ್ರಾಂತಿಯನ್ನು ಪಡೆಯಲು ಅತ್ಯುತ್ತಮವಾಗಿ ಸ್ಥಳವಾಗಿದ್ದು, ಸೂರ್ಯೋದಯ ಅಥವಾ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
  • ಕಿತ್ತೂರು ಚೆನ್ನಮ್ಮ ಉದ್ಯಾನವನ, ಧಾರವಾಡ: ಕೆ.ಸಿ.ಪಾರ್ಕ್ ಎಂದು ಜನಪ್ರಿಯವಾಗಿರುವ ಕಿತ್ತೂರು ಚೆನ್ನಮ್ಮ ಉದ್ಯಾನವನವು ಮಕ್ಕಳಿಗೆ ಮನರಂಜನಾ ಸೌಲಭ್ಯಗಳು, ತೆಂಗಿನ ತೋಟಗಳು, ನೀರಿನ ಕಾರಂಜಿಗಳು, ಪ್ರಾಣಿಗಳ ಪ್ರತಿಮೆಗಳನ್ನು ಹೊಂದಿದೆ. ಕಿತ್ತೂರು ರಾಣಿ ಚೆನ್ನಮ್ಮನ ಸೇನೆ ಮತ್ತು ಬ್ರಿಟಿಷ್ ಪಡೆಗಳ ನಡುವೆ ನಡೆದ ಯುದ್ಧದಲ್ಲಿ ಮಡಿದ ಬ್ರಿಟಿಷ್ ಕಲೆಕ್ಟರ್ ಠಾಕ್ರೆಯ ಸ್ಮರಣಾರ್ಥ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ.
  • ನೀರಸಾಗರ, ಧುಮ್ಮವಾಡ: ಧಾರವಾಡ ಜಿಲ್ಲೆಯ ಅತಿ ದೊಡ್ಡ ಕೆರೆ ನೀರಾಸಾಗರ. ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಈ ಸರೋವರವನ್ನು ನಿರ್ಮಿಸಲಾಗಿದೆ. ಇದು ಪ್ರಕೃತಿ ಪ್ರಿಯರಿಗೆ ಆಹ್ಲಾದಕರವಾದ ಸುಂದರವಾದ ಪಿಕ್ನಿಕ್ ತಾಣವಾಗಿದೆ.
  • ದೋರಿ ಕೆರೆ: ಅರವಟಗಿ ಸಮೀಪದಲ್ಲಿರುವ ದೋರಿಕೆರೆ, ಪ್ರಕೃತಿ ಪ್ರಿಯರಿಗೆ ಅತ್ಯುತ್ತಮ ಪ್ರೇಕ್ಷಣೀಯ ಪಿಕ್ನಿಕ್ ತಾಣವಾಗಿದೆ.
  • ನೀಲಮ್ಮನ ಕೆರೆ, ನವಲಗುಂದ: ನವಲಗುಂದ ಪಟ್ಟಣದ ಮಧ್ಯಭಾಗದಲ್ಲಿರುವ ನೀಲಮ್ಮನಕೆರೆ ತನ್ನ ಅಸ್ತಿತ್ವದ ಹಿಂದೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಂದರ್ಶಕರ ಅನುಕೂಲಕ್ಕಾಗಿ ಸರೋವರದ ಸುತ್ತ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಧಾರವಾಡ ಅಡ್ವೆಂಚರ್ ಬೇಸ್: ಅಳ್ನಾವರ ರಸ್ತೆಯಲ್ಲಿರುವ ಧಾರವಾಡ ಅಡ್ವೆಂಚರ್ ಬೇಸ್ ರೋಮಾಂಚಕ ಹೊರಾಂಗಣ ಚಟುವಟಿಕೆಗಳು ಮತ್ತು ಒಳಾಂಗಣ ಆಟಗಳಿಂದ ತುಂಬಿರುವ ಮನರಂಜನಾ ಕೇಂದ್ರವಾಗಿದೆ. ಸಾಂಪ್ರದಾಯಿಕ ಆಟಗಳು, ಹಗ್ಗದ ಸಾಹಸಗಳು, ನೀರಿನ ಆಟಗಳು, ಸವಾರಿ ಮಾಡುವುದು, ಮತ್ತಿತರ ಹಲವಾರು ಆಟಗಳೊಂದಿಗೆ ಇಡೀ ದಿನವನ್ನು ಆನಂದಿಸಲು ಸೂಕ್ತವಾದ ಸ್ಥಳವಾಗಿದೆ.
  • ಕಟ್ರಿ ಕ್ಲಬ್ ವಾಟರ್ ವರ್ಲ್ಡ್, ಅಂಚಟಗೇರಿ: ಕಲಘಟಗಿ ರಸ್ತೆಯ ಅಂಚಟಗೇರಿಯಲ್ಲಿರುವ ಕಂಟ್ರಿ ಕ್ಲಬ್ ವಾಟರ್ ವರ್ಲ್ಡ್ ವಾಟರ್ ಪಾರ್ಕ್ ಒಂದು ನೀರಿನ ಆಧಾರಿತ ಥೀಮ್ ಪಾರ್ಕ್ ಆಗಿದ್ದು, ಮನರಂಜನಾ ಚಟುವಟಿಕೆಗಳಿಗೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.
ಧಾರ್ಮಿಕ ಸ್ಥಳಗಳು
  • ಚಂದ್ರಮೌಳೇಶ್ವರ ದೇವಾಲಯ, ಉಣಕಲ್: ಉಣಕಲ್ ನಲ್ಲಿರುವ ಚಂದ್ರಮೌಳೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶಿಲ್ಪದ ಸ್ಮಾರಕವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಇದು ನೃಪತುಂಗ ಬೆಟ್ಟದ ಎದುರು ಮತ್ತು ಉಣಕಲ್ ಸರೋವರದ ಬಳಿಯಿದೆ. ದೇವಾಲಯದ ಹಿಂಭಾಗವು ಸುಂದರವಾಗಿ ಕಾಣುತ್ತದೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಎರಡು ಶಿವಲಿಂಗಗಳು ಮತ್ತು ಎರಡು ನಂದಿ ವಿಗ್ರಹಗಳ ಉಪಸ್ಥಿತಿ. ಮತ್ತೊಂದು ವಿಶಿಷ್ಟ ಅಂಶವೆಂದರೆ ಇಲ್ಲಿನ ಒಂದು ಶಿವಲಿಂಗವು ಚತುರ್ಲಿಂಗವಾಗಿದೆ (ನಾಲ್ಕು ಮುಖಗಳನ್ನು ಕೆತ್ತಲಾದ ಲಿಂಗ). ಈ ದೇವಾಲಯವನ್ನು ಅತ್ಯಂತ ಸಮ್ಮಿತೀಯ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ ಮತ್ತು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳನ್ನು ಹೊಂದಿದ್ದು, ಒಟ್ಟು ಹನ್ನೆರಡು ಬಾಗಿಲುಗಳನ್ನು ಹೊಂದಿದೆ.
  • ಮುರುಘಾ ಮಠ: ಮುರುಘಾ ಮಠವು ಲಿಂಗಾಯತರ ಅತ್ಯಂತ ಪೂಜ್ಯನೀಯ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದನ್ನು ಶ್ರೀ ಮೃತ್ಯುಂಜಯ ಸ್ವಾಮೀಜಿಗಳು ತಮ್ಮ ಗುರುಗಳಾದ ಶ್ರೀ ಅಥಣಿ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ 1917ರಲ್ಲಿ ಈ ಮಠವನ್ನು ಸ್ಥಾಪಿಸಿದರು. ಆಧ್ಯಾತ್ಮಿಕ ಶಿಕ್ಷಣದ ಹೊರತಾಗಿ, ಈ ಮಠವು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಮಠದ ಆವರಣದೊಳಗೆ ನಾಲ್ಕು ದೇವಾಲಯಗಳಿವೆ. ಮಠಕ್ಕೆ ಭೇಟಿ ನೀಡುವ ಎಲ್ಲರಿಗೂ ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಮಠವು ಪ್ರಾರಂಭದಿಂದಲೂ ಧಾರವಾಡದ ಹೆಚ್ಚಿನ ಸಂಖ್ಯೆಯ ವಿಧ್ಯಾರ್ಥಿಗಳಿಗೆ ಕಾಲೇಜು / ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಿಕೊಂಡು ಬಂದಿದೆ.
  • ಭವಾನಿಶಂಕರ ದೇವಾಲಯ: ಧಾರವಾಡದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಭವಾನಿಶಂಕರ ದೇವಾಲಯವು ಹಳೇ ಹುಬ್ಬಳ್ಳಿ ಪ್ರದೇಶದಲ್ಲಿದೆ. ಭಗವಾನ್ ಶಿವ ಮತ್ತು ಅವನ ಪತ್ನಿ ಪಾರ್ವತಿ ದೇವಿಗೆ ಈ ದೇವಾಲಯವು ಸಮರ್ಪಿತವಾಗಿದೆ.
  • ಆಲ್ ಸೇಂಟ್ಸ್ ಚರ್ಚ್ ಮತ್ತು ಬಾಸೆಲ್ ಮಿಷನ್ ಚರ್ಚ್: ಧಾರವಾಡ ನಗರದ ಎರಡು ಪ್ರಮುಖ ಚರ್ಚ್‌ಗಳಿವು.
  • ಅಣ್ಣಿಗೇರಿ: ಅಣ್ಣಿಗೇರಿಯು ದೇವಾಲಯಗಳ ಮನೆಯಾಗಿದ್ದು, ಅಮೃತೇಶ್ವರ ದೇವಾಲಯ (ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾದ 76 ಸ್ತಂಭಗಳು ಮತ್ತು ಆಸಕ್ತಿದಾಯಕ ಪೌರಾಣಿಕ ಕೆತ್ತನೆಗಳನ್ನು ಹೊಂದಿರುವ ದೇವಾಲಯ), ವೀರಭದ್ರ ದೇವಾಲಯ, ಭಾಗಶಃ ಹಾಳಾದ ಬನಶಂಕರಿ ದೇವಾಲಯ, ಹಿರೇ ಹನುಮಾನ್ ದೇವಾಲಯ, ಮೈಲಾರ ಮತ್ತು ಉಮಾ-ಪಾರ್ವತಿ ದೇವಾಲಯ ಮತ್ತು ಜೈನ ಬಸದಿಯನ್ನು ಒಳಗೊಂಡಿದೆ. ಅಣ್ಣಿಗೇರಿಯಲ್ಲಿ ಹಲವಾರು ಹಳೆಯ ಬಾವಿಗಳು ಮತ್ತು ಚಾಲುಕ್ಯರ ಕಾಲದ ಶಾಸನಗಳು ಸಹ ಕಂಡುಬರುತ್ತವೆ.
  • ಭವಾನಿ ಶಂಕರ ದೇವಾಲಯ: ಹುಬ್ಬಳ್ಳಿಯ ಅತ್ಯಂತ ಹಳೆಯ ದೇವಾಲಯ.
  • ಜುಮ್ಮಾ ಮಸೀದಿ: ಹುಬ್ಬಳ್ಳಿಯ ಅತ್ಯಂತ ಹಳೆಯ ಮಸೀದಿ.
  • ಮಸ್ತಾನ್ ಸೋಫಾ ಮಸೀದಿ: ಹುಬ್ಬಳ್ಳಿಯ ಇತ್ತೀಚಿನ (1980ರಲ್ಲಿ ನಿರ್ಮಿಸಲಾದ) ಮಸೀದಿಯಾಗಿದ್ದು, ಕೆತ್ತನೆಗಳು ಮತ್ತು ಕಲಾತ್ಮಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
  • ಅನಂತನಾಥ ಮತ್ತು ಪಾರ್ಶ್ವನಾಥ ಬಸದಿಗಳು: ಹುಬ್ಬಳ್ಳಿ ನಗರದ ಪ್ರಾಚೀನ ಮತ್ತು ಐತಿಹಾಸಿಕ ಬಸದಿಗಳು.
  • ವೂರೂರು: ಹುಬ್ಬಳ್ಳಿ ನಗರದಿಂದ ದಕ್ಷಿಣಕ್ಕೆ 19 ಕಿ.ಮೀ ದೂರದಲ್ಲಿರುವ ವೂರೂರು (ವರೂರು) ಗ್ರಾಮವು ಭಗವಾನ್ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ದೇವಾಲಯಕ್ಕೆ ಜನಪ್ರಿಯವಾಗಿದೆ.
  • ನವಲಗುಂದ: ನವಲಗುಂದವು ಧಾರವಾಡದಿಂದ 47 ಕಿ.ಮೀ ದೂರದಲ್ಲಿರುವ ಒಂದು ಪಟ್ಟಣವಾಗಿದ್ದು, ಗಣಪತಿ, ವೆಂಕಟೇಶ, ನವಿಲೇಶ್ವರ, ಗೋವಿಂದರಾಜ, ವೀರಭದ್ರ ಮತ್ತು ನಗರೇಶ್ವರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
  • ಮುಕ್ತಿ ಮಂದಿರ: ಮಾನವ ಧರ್ಮವನ್ನು (ಮಾನವೀಯತೆ) ಉತ್ತೇಜಿಸುವ ಒಂದು ಯಾತ್ರಾ ಕೇಂದ್ರ.
  • ಕುಂದಗೋಳ: ಶಂಭುಲಿಂಗೇಶ್ವರನನ್ನು ಹೊಂದಿರುವ ಪ್ರಾಚೀನ ಸ್ಥಳ. ಹನ್ನೊಂದನೇ ಶತಮಾನಕ್ಕೆ ಸೇರಿದ ನೃತ್ಯ ಮಾಡುತ್ತಿರುವ ಶಿವನ ವಿಗ್ರಹವು ಅತ್ಯಾಕರ್ಷಕವಾಗಿದೆ.
  • ಗುಡಗೇರಿ: ಮಹಾವೀರ ಬಸದಿಯಿರುವ ಜೈನ ಕೇಂದ್ರವಾಗಿದ್ದು, ಅನೇಕ ಆಧುನಿಕ ದೇವಾಲಯಗಳಿಗೆ ನೆಲೆಯಾಗಿದೆ.
  • ನುಗ್ಗೆಕೇರಿ ಹನುಮಂತನ ದೇವಾಲಯ, ಧಾರವಾಡ: ನುಗ್ಗೆಕೇರಿ ಹನುಮಂತನ ದೇವಾಲಯವು ಧಾರವಾಡ ನಗರದ ಹೊರವಲಯದಲ್ಲಿರುವ ಕೆರೆಗೆ ಅಡ್ಡಲಾಗಿ ನೆಲೆಗೊಂಡಿದೆ. ಶ್ರೀ ನುಗ್ಗೆಕೇರಿ ಹನುಮಂತನ ಪ್ರತಿಮೆಯನ್ನು ಅರ್ಜುನನ ಮೊಮ್ಮಗನಾದ ರಾಜ ಜನಮೇಜಯನು ಪ್ರತಿಷ್ಠಾಪಿಸಿ, ಪೂಜಿಸಿದನು ಎಂಬ ನಂಬಿಕೆಯಿದೆ. ನಂತರ 16ನೇ ಶತಮಾನದಲ್ಲಿ ಶ್ರೀ ವ್ಯಾಸರಾಜ ತೀರ್ಥರು ಈ ಮೂರ್ತಿಯನ್ನು ಪುನರ್-ಪ್ರತಿಷ್ಠಾಪನ ಮಾಡಿದರು. ಇಲ್ಲಿರುವ ಶ್ರೀ ಹನುಮಂತನು ಸೌಗಂಧಿಕ ಪುಷ್ಪವನ್ನು ಹಿಡಿದಿದ್ದಾನೆ, ತಲೆಯ ಮೇಲೆ ಶಿಖೆ ಹೊಂದಿದ್ದಾನೆ, ಯಜ್ಞೋಪವೀತವನ್ನು ಧರಿಸಿದ್ದಾನೆ.
  • ಸಿದ್ಧಾರೂಢ ಮಠ, ಹುಬ್ಬಳ್ಳಿ: 1929ರಲ್ಲಿ ನಿರ್ಮಾಣಗೊಂಡ ಸಿದ್ಧಾರೂಢ ಮಠವು ಹುಬ್ಬಳ್ಳಿಯ ಅತ್ಯಂತ ಜನಪ್ರಿಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಳವಾಗಿದೆ. ಶ್ರೀ ಸಿದ್ಧಾರೂಢ ಸ್ವಾಮಿಜಿಯವರು ಇಲ್ಲಿ ತತ್ವಶಾಸ್ತ್ರವನ್ನು ಬೋಧಿಸಿ, ಇಲ್ಲಿಯೇ ಸಮಾಧಿಯಾದರು. ಮಹಾ ಶಿವರಾತ್ರಿಯ ಸಮಯದಲ್ಲಿ ನಡೆಯುವ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಿ ಆಗಮಿಸಿ, ಸಿದ್ಧಾರೂಢರ ಆರ್ಶೀರ್ವಾದವನ್ನು ಪಡೆಯುತ್ತಾರೆ.
  • ಸೋಮೇಶ್ವರ ದೇವಾಲಯ ಮತ್ತು ಶಾಲ್ಮಲಾ ನದಿ ಜನ್ಮಸ್ಥಳ, ಧಾರವಾಡ: ಧಾರವಾಡ ಪಟ್ಟಣದಲ್ಲಿ ಶಿವನಿಗೆ ಸಮರ್ಪಿತವಾದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ. ದೇವಾಲಯಕ್ಕೆ ಸಮೀಪದಲ್ಲಿರುವ ಕಲ್ಯಾಣಿಯು ಶ್ಯಾಮಲಾ ನದಿಯ ಮೂಲವಾಗಿದೆ. ಇಲ್ಲಿ ಹುಟ್ಟುವ ನದಿಯು ಭೂಗತವಾಗಿ ಪಶ್ಚಿಮ ದಿಕ್ಕಿಗೆ ಹರಿದು, ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂಬ ನಂಬಿಕೆಯಿದೆ.
  • ಚಾಂಗ್ ದೇವ್ ಉರ್ಫ್ ರಾಜಾ ಬಾಗಸ್ವರ್ ದೇವಾಲಯ, ಯಮನೂರು: ಶ್ರೀ ಚಾಂಗ್ದೇವ್ ಉರ್ಫ್ ರಾಜಾ ಬಾಗಸ್ವರ ದೇವಾಲಯವು ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನರನ್ನು ಆಕರ್ಷಿಸುತ್ತದೆ. ಹಿಂದೂಗಳು ಚಾಂಗ್ ಮಹಾರಾಜ್ ದೇವರನ್ನು ಪೂಜಿಸಿದರೆ, ಮುಸ್ಲಿಮರಿಗೆ ರಾಜಾ ಬಾಗಸ್ವರ ದೇವರಾಗಿದ್ದಾರೆ. ಈ ದೇವಾಲಯದ ಬಳಿ ಬೆಣ್ಣೆ ಹಳ್ಳವಿದ್ದು, 1 ಕಿ.ಮೀ ಉದ್ದದ ನೀರು ಲವಣಾಂಶವನ್ನು ಹೊಂದಿದೆ ಎಂದು ನಂಬಲಾಗಿದೆ. ಹೋಳಿ ಹಬ್ಬದ ನಂತರ ನಡೆಯುವ ಜಾತ್ರಾ ಸಮಯದಲ್ಲಿ ಭಕ್ತರು ಈ ಹೊಳೆಯಲ್ಲಿ ಮಿಂದು, ಚಾಂಗ್ದೇವ್ ಉರ್ಫ್ ರಾಜಾ ಬಾಗಸ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
  • ನವಲಗುಂದದ ಅಜಾತ ನಾಗಲಿಂಗಸ್ವಾಮಿ ಮಠ: ಸಂತ ಶ್ರೀ ನಾಗಲಿಂಗಸ್ವಾಮೀಜಿಯವರು ತಮ್ಮ ಸಮಕಾಲೀನರಾದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ, ಗರಗದ ಮಡಿವಾಳ ಸ್ವಾಮೀಜಿ ಮತ್ತು ಶಿಶುನಾಳ ಶರೀಫರ ಕಾಲದಲ್ಲಿ ಜೀವಿಸಿದ್ದ ದಾರ್ಶನಿಕರು, ಪವಾಡ ಪುರುಷರಾಗಿದ್ದರು. ಇವರು ನವಲಗುಂದದಲ್ಲಿ ಸಮಾಧಿಯಾದರು. ಶ್ರೀ ಅಜಾತ ನಾಗಲಿಂಗಸ್ವಾಮಿ ಮಠವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಸ್ವಾಮೀಜಿಯ ಪವಾಡಗಳಿಗೆ ಸಾಕ್ಷಿಯಾಗಿರುವ ಮುಸ್ಲೀಮರ ಪಂಜ ಮತ್ತು ಕ್ರಿಶ್ಚಿಯನ್ನರ ಬೈಬಲ್‌ಗಳನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ.
  • ನವಗ್ರಹ ತೀರ್ಥ ಕ್ಷೇತ್ರ ಜೈನ ದೇವಾಲಯ, ವರೂರು: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಶ್ರೀ 1008 ಭಗವಾನ್ ಪಾರ್ಶ್ವನಾಥರ 61 ಅಡಿ ಎತ್ತರದ ಏಕಶಿಲಾ ವಿಗ್ರಹ ಮತ್ತು ಇತರ ಎಂಟು ತೀರ್ಥಂಕರರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
  • ಮುರುಸಾವಿರ ಮಠ, ಹುಬ್ಬಳ್ಳಿ: ಮುರುಸಾವಿರ ಮಠವು ಈ ಪ್ರದೇಶದ ಅತ್ಯಂತ ಹಳೆಯ ಐತಿಹಾಸಿಕ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಮಠದ ಸ್ಥಾಪಕರಾದ ಶ್ರೀಜಗದ್ಗುರು ಗುರುಸಿದ್ದೇಶ್ವರ ಸ್ವಾಮೀಜಿಯವರ ಸಮಾಧಿ ಈ ಸ್ಥಳದಲ್ಲಿದೆ. ಶ್ರಾವಣ ಮಾಸದಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರು ಸೇರಿ, ಉತ್ಸವವನ್ನು ಆಚರಿಸಿ ಆಶೀರ್ವಾದ ಪಡೆಯುತ್ತಾರೆ.
  • ಮಡಿವಾಳೇಶ್ವರ ಮಠ, ಗರಗ: ಗರಗದಲ್ಲಿರುವ ಶ್ರೀ ಜಗದ್ಗುರು ಮಡಿವಾಳೇಶ್ವರ ಸ್ವಾಮೀಜಿಯವರ ಸಮಾಧಿಯು ಜಿಲ್ಲೆಯ ಜನಪ್ರಿಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಜಾತ್ರಾ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಆಶೀರ್ವಾದವನ್ನು ಪಡೆಯುತ್ತಾರೆ.
  • ಮುರುಘಾ ಮಠ, ಧಾರವಾಡ: ಮುರುಘಾ ಮಠವನ್ನು 1917ರಲ್ಲಿ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ತಮ್ಮ ಗುರುಗಳಾದ ಶ್ರೀ ಅಥಣಿ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಧಾರವಾಡದಲ್ಲಿ ಸ್ಥಾಪಿಸಿದರು. ಇದು ಧಾರವಾಡದ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕಲಿಕಾ ಕೇಂದ್ರಗಳಲ್ಲಿ ಒಂದಾಗಿದೆ.
  • ಹಜರತ್ ಸೈಯದ್ ಫತೇ ಶಹವಾಲಿ ದರ್ಗಾ, ಹುಬ್ಬಳ್ಳಿ: ಹುಬ್ಬಳ್ಳಿಯ ಹಜರತ್ ಸೈಯದ್ ಫತೇ ಶಹವಾಲಿ ದರ್ಗಾ ಮುಸ್ಲಿಂ ಸಮುದಾಯದ ಐತಿಹಾಸಿಕ ಮತ್ತು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಟಿಪ್ಪು ಸುಲ್ತಾನ್ ಈ ದೇವಾಲಯಕ್ಕೆ ಗೌರವ ಸಲ್ಲಿಸಲು ಹಾಗೂ ಆಶೀರ್ವಾದವನ್ನು ಪಡೆಯಲು ಬಂದಿದ್ದನು ಎಂದು ಹೇಳಲಾಗುತ್ತದೆ.
  • ಹಜರತ್ ಸಯ್ಯದ್ ಸಾತೋ ಶಹೀದ್ ದರ್ಗಾ: ಕಲಘಟಗಿ ಪಟ್ಟಣದಿಂದ 13.5 ಕಿ.ಮೀ ದೂರದಲ್ಲಿ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳಲ್ಲಿರುವ ಹಜರತ್ ಸಯ್ಯದ್ ಸಾತೋ ಶಹೀದ್ ದರ್ಗಾವು ಮುಸ್ಲಿಂ ಸಮುದಾಯ ಐತಿಹಾಸಿಕ ತಾಣವಾಗಿದ್ದು, ಭೇಟಿ ನೀಡುವ ಧಾರ್ಮಿಕ ಸ್ಥಳವಾಗಿದೆ.
  • ಹೆಬಿಚ್ ಮೆಮೋರಿಯಲ್ ಚರ್ಚ್, ಧಾರವಾಡ: ಧಾರವಾಡದ ಬಾಸೆಲ್ ಮಿಷನ್ ಹೆಬಿಚ್ ಮೆಮೋರಿಯಲ್ ಚರ್ಚ್ ಕ್ರಿಶ್ಚಿಯನ್ ಸಮುದಾಯದ ಹೆಮ್ಮೆಯಾಗಿದ್ದು, ಉತ್ತರ ಕರ್ನಾಟಕದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ.
  • ಆಲ್ ಸೇಂಟ್ಸ್ ಚರ್ಚ್, ಧಾರವಾಡ: ಧಾರವಾಡದ ಆಲ್ ಸೇಂಟ್ಸ್ ಚರ್ಚ್‌ ಯುರೋಪಿಯನ್ ವಾಸ್ತುಶಿಲ್ಪದ ಕರಕುಶಲತೆ ಮತ್ತು ಇಟ್ಟಿಗೆ ಕೆಲಸಗಳಿಗೆ ಹೆಸರುವಾಸಿಯಾಗಿದೆ.
  • ಸೇಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚ್, ಹುಬ್ಬಳ್ಳಿ: 1890ರಲ್ಲಿ ಸ್ಥಾಪಿತವಾದ ಸೇಂಟ್ ಜೋಸೆಫ್ಸ್ ಕ್ಯಾಥೋಲಿಕ್ ಚರ್ಚ್ ಹುಬ್ಬಳ್ಳಿಯ ಅತಿ ದೊಡ್ಡ ಚರ್ಚುಗಳಲ್ಲಿ ಒಂದಾಗಿದ್ದು, ಕ್ರಿಸ್‌ ಮಸ್‌ ಆಚರಣೆಗೆ ಜನಪ್ರಿಯವಾಗಿದೆ.
  • ಹೋಲಿ ನೇಮ್ ಕ್ಯಾಥೆಡ್ರಲ್ ಚರ್ಚ್, ಹುಬ್ಬಳ್ಳಿ: ಹೋಲಿ ನೇಮ್ ಕ್ಯಾಥೆಡ್ರಲ್ ಚರ್ಚ್ ಹುಬ್ಬಳ್ಳಿಯ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ ಮತ್ತು ಉತ್ತರ ಕರ್ನಾಟಕ ಭಾಗದ ಕ್ಯಾಥೆಡ್ರಲ್ ಆಗಿರುವುದರಿಂದ ಹೆಚ್ಚಿನ ಪ್ರೊಟೆಸ್ಟೆಂಟ್‌ ಮತದ ಅನುಯಾಯಿಗಳು ಈ ಚರ್ಚ್‌ನ ಭಕ್ತರಾಗಿದ್ದಾರೆ.
  • ಬಸವೇಶ್ವರ ದೇವಾಲಯ, ಬೂದನಗುಡ್ಡ: ಬೂದನಗುಡ್ಡವು ಹುಬ್ಬಳ್ಳಿ-ಕಲಘಟಗಿ ಹೆದ್ದಾರಿಯಲ್ಲಿರುವ ಒಂದು ಬೆಟ್ಟವಾಗಿದ್ದು, ಶಿಖರದ ಮೇಲೆ ಬಸವೇಶ್ವರ ದೇವಾಲಯವಿದೆ. ಇದು ಹಿಂದೂ ಸಮುದಾಯದ ದೇವರಾಗಿದ್ದು, ಈ ಸ್ಥಳವು ವಿಹಂಗಮ ನೋಟವನ್ನು ನೀಡುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಸವಿಯಲು ಇಲ್ಲಿಗೆ ಬರಬಹುದು.
  • ತಪೋವನ, ಧಾರವಾಡ: ಈ ತಪೋವನವು 1965ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಮಹಾತಪಸ್ವಿ ಶ್ರೀ ಕುಮಾರ ಸ್ವಾಮೀಜಿಯವರು ಧಾರವಾಡದ ಹೊರವಲಯದಲ್ಲಿ ಸ್ಥಾಪಿಸಿದ ಧ್ಯಾನ ಮತ್ತು ಯೋಗ ಕೇಂದ್ರವಾಗಿದೆ.
  • ರುದ್ರಭೂಮಿ ಗುಹಾಂತರ ದೇವಾಲಯ, ಅಮ್ಮಿನಭಾವಿ: ಸುಮಾರು 45 ವರ್ಷಗಳ ಹಿಂದೆ ಆವದೂತ ಶ್ರೀ ಅಯ್ಯನಜ್ಜ ಒಬ್ಬರಿಂದಲೇ ಕೆತ್ತಲ್ಪಟ್ಟ ರುದ್ರಭೂಮಿ ಗುಹಾಂತರ ದೇವಾಲಯವು ಅಮ್ಮಿನಭಾವಿಯಲ್ಲಿದ್ದು, ಜಿಲ್ಲೆಯ ದೇವಾಲಯಗಳಲ್ಲಿ ವಿಶಿಷ್ಟವಾಗಿ ಕಾಣಿಸುತ್ತದೆ.
  • ಜೈನ ಬಸದಿ, ಅಮ್ಮಿನಭಾವಿ: ಅಮ್ಮಿನಭಾವಿಯ ಜೈನ ಬಸದಿಯಲ್ಲಿ ನೇಮಿನಾಥ ತೀರ್ಥಂಕರರ ಪ್ರಾಚೀನ ವಿಗ್ರಹವಿದೆ. ಈ ಬಸದಿಯ ಸ್ತಂಭಗಳನ್ನು ಸುಂದರವಾಗಿ ಕೆತ್ತಲಾಗಿದ್ದು, ಹೊಳಪುಗೊಳಿಸಲಾಗಿದೆ. ಛಾವಣಿಯು ಹೂವಿನ ವಿನ್ಯಾಸಗಳಿಂದ ಅಲಂಕೃತಗೊಂಡಿದೆ.
  • ಸಿದ್ದಪ್ಪಜ್ಜನ ಮಠ, ಹುಬ್ಬಳ್ಳಿ: ಶ್ರೀ ಸಿದ್ದಾರೂಢಸ್ವಾಮೀಜಿಯವರ ಕಾಲದಲ್ಲಿ ಶ್ರೀ ಸಿದ್ಧಪ್ಪಜ್ಜನವರು ಸಹ ಜೀವಿಸಿದ್ದರು. ಇವರು ಮಾಡಿರುವ ಪವಾಡಗಳು ನಂಬಲಸಾಧ್ಯವಾಗಿವೆ. ಇವರ ಸಮಾಧಿಯು ಉಣಕಲ್ ನಲ್ಲಿದೆ.
  • ಭಗವದ್ಗೀತಾ ಜ್ಞಾನ ಲೋಕ ಆರ್ಟ್ ಗ್ಯಾಲರಿ, ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಬ್ರಹ್ಮಕುಮಾರಿಯರ ʼಭಗವದ್ಗೀತಾ ಜ್ಞಾನಲೋಕʼ ಅತಿ ದೊಡ್ಡ ಆಧ್ಯಾತ್ಮಿಕ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಕಲಾತ್ಮಕ ಶಿಲ್ಪಗಳು ಮತ್ತು ಶ್ಲೋಕಗಳೊಂದಿಗೆ ತತ್ವಶಾಸ್ತ್ರ ಹಾಗೂ ಜೀವನ ವಿಧಾನಗಳನ್ನು ಪ್ರದರ್ಶಿಸಲಾಗುತ್ತದೆ.
  • ಇಸ್ಕಾನ್, ಹುಬ್ಬಳ್ಳಿ-ಧಾರವಾಡ: ಇಸ್ಕಾನ್‌ನ ವಿಶಿಷ್ಟ ಆಧ್ಯಾತ್ಮ ಪಾಲನಾ ವಿಧಾನದಿಂದ ಹರೇಕೃಷ್ಣರು ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ರಾಯಪುರದ ಕೃಷ್ಣ ಬಲರಾಮ ದೇವಾಲಯವು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ನೆಲೆಗೊಂಡಿದೆ. ಈ ಸ್ಥಳವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.
  • ಧಾರವಾಡದ ಇತರ ಐತಿಹಾಸಿಕ ದೇವಾಲಯಗಳೆಂದರೆ ದುರ್ಗಾದೇವಿ ದೇವಾಲಯ, ಮೈಲಾರ ಲಿಂಗೇಶ್ವರ ದೇವಾಲಯ, ಉಳವಿ ಚೆನ್ನಬಸವೇಶ್ವರ ದೇವಾಲಯ ಮತ್ತು ದತ್ತಾತ್ರೇಯ ದೇವಾಲಯ.
ಇತರೆ:
  • ಕಸೂತಿ ಎಂಬ್ರಾಯಿಡರಿ: ಧಾರವಾಡ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಕಸೂತಿ ಕಲೆಯು ಸಂಕೀರ್ಣ ಮತ್ತು ಬೆರಗುಗೊಳಿಸುವಂತಹ ಕೌಶಲ್ಯದಿಂದಾಗಿ ಹೆಸರುವಾಸಿಯಾಗಿದ್ದು, ಜಿಯಾಗ್ರಾಫಿಕಲ್‌ ಇಂಡಿಕೇಷನ್‌ (ಜಿಐ) ಟ್ಯಾಗ್ ಅನ್ನು ಹೊಂದಿದೆ. ಕಸೂತಿಯಲ್ಲಿ ಸಾಮಾನ್ಯವಾಗಿ ನಾಲ್ಕು ರೀತಿಯ ಹೊಲಿಗೆಗಳನ್ನು ಬಳಸಲಾಗುತ್ತಿದ್ದು, ಅನೇಕ ಸಂಕೀರ್ಣ ವಿನ್ಯಾಸಗಳನ್ನು ಮಾಡಲಾಗುತ್ತದೆ. ಇವು ದೇವಾಲಯಗಳ ವಾಸ್ತುಶಿಲ್ಪದ ನಮೂನೆಗಳನ್ನು ಒಳಗೊಂಡಿದ್ದು, ದೇವಾಲಯದ ಸುತ್ತಲಿನ ಜನರ ಆಚರಣೆ ಮತ್ತು ಜೀವನದ ಪ್ರತಿಬಿಂಬವಾಗಿರುತ್ತವೆ.
  • ನವಲಗುಂದದ ಜಮುಖಾನಗಳು: ಜಿಯಾಗ್ರಾಫಿಕಲ್‌ ಇಂಡಿಕೇಷನ್ಸ್‌ (ಜಿಐ) ಟ್ಯಾಗ್ ಅಡಿಯಲ್ಲಿ ಇಂದು ರಕ್ಷಿಸಲ್ಪಡುತ್ತಿರುವ ಈ ಕರಕುಶಲ ಜಮುಖಾನದ ತಯಾರಿಕೆಯು 16ನೇ ಶತಮಾನದಷ್ಟು ಹಿಂದಿನದು. ಇದು ಪ್ರಕಾಶಮಾನವಾದ ಹಳದಿ, ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಅಸಾಮಾನ್ಯ ಮಾದರಿಗಳನ್ನು ನೂಲುತ್ತಿದ್ದ ಮುಸ್ಲಿಂ ಶೇಖ್ ಸಮುದಾಯಕ್ಕೆ ಸೇರಿದ ಮಹಿಳೆಯರ ಕರಕುಶಲ ಕಲೆಯಾಗಿದೆ. ನವಲಗುಂದವು ಧಾರವಾಡದ ಒಂದು ಸ್ಥಳವಾಗಿದ್ದು, ರಾಷ್ಟ್ರೀಯ ಪಕ್ಷಿಯಾದ ನವಿಲಿಗೆ ಹೆಸರುವಾಸಿಯಾಗಿದೆ. ನವಿಲಿನ ಬಣ್ಣಗಳು ಮತ್ತು ವರ್ಣರಂಜಿತ ವಿನ್ಯಾಸಗಳನ್ನು ಈ ಹೆಸರುವಾಸಿ ಜಮಖಾನದ ವಿನ್ಯಾಸದಲ್ಲಿ ಬಳಸಿಕೊಳ್ಳಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಜಮುಖಾನ, ಎಂದರೆ ನೆಲದ ಚಾಪೆಗಳು ಎಂದು ಕರೆಯಲಾಗುವ ಇವುಗಳನ್ನು ಅಲಂಕಾರಕ್ಕಾಗಿ ನೆಲದ ಹೊದಿಕೆಗಳಾಗಿ ಬಳಸಲಾಗುತ್ತದೆ. ತಿರುಚಿದ ಹತ್ತಿ ನೂಲಿನಿಂದ ಮಾಡುವ ಕಾರ್ಪೆಟ್ ಇದಾಗಿದ್ದು, ಸ್ಥಳೀಯವಾಗಿ ಇವುಗಳನ್ನು ಡ್ಯೂರಿ ಎಂದು ಕರೆಯಲಾಗುತ್ತದೆ. ಮದುವೆಗಳು, ಧಾರ್ಮಿಕ ಸಭೆಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ನೆಲದ ಮೇಲೆ ಹಾಸಲಾಗುತ್ತದೆ. ಪ್ರಸಿದ್ಧ ಡೈಸ್ ಗೇಮ್ ಬೋರ್ಡ್ ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಈ ಜಮುಖಾನಗಳು ಒಳಗೊಂಡಿವೆ.
  • ಕಲಘಟಗಿ ತೊಟ್ಟಿಲುಗಳು: ಒಂದು ಕಾಲದಲ್ಲಿ ಕಲಘಟಗಿಯ ಚಿತ್ರಗಾರ ಓಣಿಯು ವರ್ಣರಂಜಿತ ಮರದ ತೊಟ್ಟಿಲುಗಳನ್ನು ತಯಾರಿಸುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದ ಕಲಾವಿದರಿಂದ ತುಂಬಿತ್ತು. ಈಗಲೂ ಸಹ ಅಸ್ತಿತ್ವದಲ್ಲಿರುವ ಈ ಜೀವನೋಪಾಯ ಕಲೆಯು, 400 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕಿದೆ. ಈ ಕಲೆಯು ಇಂದಿಗೂ ಈ ಕರಕುಶಲತೆಯನ್ನು ಬಿಡದೆ, ಇದಕ್ಕಾಗಿಯೇ ಜೀವನವನ್ನು ಸಮರ್ಪಿಸುತ್ತಿರುವ ಕೆಲವು ಕುಶಲಕರ್ಮಿಗಳಿಂದಾಗಿ ಇನ್ನೂ ಜೀವಂತವಾಗಿದೆ.
  • ಖಾದಿ ಗ್ರಾಮೋದ್ಯೋಗ ಕೇಂದ್ರ, ಗರಗ: ಗರಗದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರವು ಕೈಯಿಂದ ನೇಯ್ದ ಖಾದಿ ವಸ್ತುಗಳು ಮತ್ತು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ವಿಶೇಷವಾಗಿ ಭಾರತದ ತ್ರಿವರ್ಣ ಧ್ವಜದ ತಯಾರಿಕೆಗೆ ದೇಶಾದ್ಯಂತ ಹೆಸರುವಾಸಿಯಾಗಿದೆ.
  • ಖಾದಿ ಗ್ರಾಮೋದ್ಯೋಗ ಕೇಂದ್ರ, ಹುಬ್ಬಳ್ಳಿ: ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರವು ಭಾರತೀಯ ರಾಷ್ಟ್ರಧ್ವಜಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.
  • ಕುಮಾರ ವ್ಯಾಸ ಜನ್ಮಸ್ಥಳ, ಕೋಳಿವಾಡ: ಕುಮಾರ ವ್ಯಾಸರು 14ನೇ ಶತಮಾನದಲ್ಲಿ ಕೋಳಿವಾಡದಲ್ಲಿ ನಾರಾಯಣಪ್ಪನಾಗಿ ಜನಿಸಿದರು. ವ್ಯಾಸರ ಮಹಾಕಾವ್ಯ ಮಹಾಭಾರತದ ಆವೃತ್ತಿಯಾದ ಅವರ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯು ರಾಜ್ಯದಾದ್ಯಂತ ಪ್ರಸಿದ್ಧವಾಗಿದೆ. ಕುಮಾರವ್ಯಾಸರ 15ನೇ ತಲೆಮಾರಿನ ವಂಶಜರು, ಕುಮಾರ ವ್ಯಾಸರು ವಾಸಿಸುತ್ತಿದ್ದ ಮನೆಯಲ್ಲಿ ಇಂದಿಗೂ ಅವರ ತಾಳೆಗರಿಯ ಲಿಪಿಗಳನ್ನು ಸಂರಕ್ಷಿಸಿದ್ದಾರೆ.
  • ದೇಶಪಾಂಡೆ ವಾಡೆ - ಆದಿಕವಿ ಪಂಪ ಜನ್ಮಸ್ಥಳ, ಅಣ್ಣಿಗೇರಿ: ಅಣ್ಣಿಗೇರಿಯ ದೇಶಪಾಂಡೆ ವಾಡೆಯು ಪ್ರಸಿದ್ಧ ಕವಿ, ಆದಿಕವಿ ಪಂಪನ ಜನ್ಮಸ್ಥಳವಾಗಿದೆ.
  • ದೊಡ್ಡ ಬಾವಿ, ಅಮ್ಮಿನಭಾವಿ: ಈ ದೊಡ್ಡ ಬಾವಿಯನ್ನು ಒಂದು ಕಾಲದಲ್ಲಿ ಅಮ್ಮಿನಭಾವಿ ಗ್ರಾಮಕ್ಕೆ ನೀರು ಪೂರೈಸಲು ಬಳಸಲಾಗುತ್ತಿತ್ತು.
  • ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ: ಬಹುಶಃ ಧಾರವಾಡದಲ್ಲೇ ಅತಿದೊಡ್ಡದಾಗಿರುವ ಈ ಉದ್ಯಾನವನವನ್ನು ಸಾಮಾನ್ಯವಾಗಿ ಕೆಸಿ ಪಾರ್ಕ್ ಎಂದು ಕರೆಯಲಾಗುತ್ತದೆ. ಉದ್ಯಾನದೊಳಗೆ ಕಿತ್ತೂರು ರಾಣಿ ಚೆನ್ನಮ್ಮನ ಸೈನ್ಯ ಮತ್ತು ಬ್ರಿಟಿಷ್ ಪಡೆಗಳ ನಡುವೆ ನಡೆದ ಯುದ್ಧದಲ್ಲಿ ಹತನಾದ ಬ್ರಿಟಿಷ್ ಕಲೆಕ್ಟರ್ ಜಾನ್ ಥಾಕ್ರೆ ಅವರ ಸ್ಮಾರಕವಿದೆ.
  • ಸಾಧನಕೆರೆ ಕೆರೆ ಮತ್ತು ಉದ್ಯಾನವನ: ಧಾರವಾಡದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಸಾಧನಕೆರೆ ಸರೋವರ ಮತ್ತು ಉದ್ಯಾನವನವೂ ಒಂದು. ಈ ಸ್ಥಳವು ಸೊಂಪಾದ ಹಸಿರು ಮತ್ತು ಸುಂದರವಾದ ಸರೋವರದಿಂದ ಸುತ್ತುವರೆದಿದ್ದು, ಪ್ರಕೃತಿಯ ಸೌಂದರ್ಯವನ್ನು ಸವಿಯಲು ಉತ್ತಮವಾದ ಸ್ಥಳವಾಗಿದೆ. ಪೆಡಲ್ ಮತ್ತು ಬ್ಯಾಟರಿ ಬೋಟಿಂಗ್ ನಂತಹ ಸೌಲಭ್ಯಗಳು ಕೂಡ ಇಲ್ಲಿ ಲಭ್ಯವಿದ್ದು, ಮಕ್ಕಳಿಗೆ ದೊಡ್ಡ ಆಕರ್ಷಣೆಯಾಗಿದೆ. ಈ ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ ಶನಿವಾರ ಮತ್ತು ಭಾನುವಾರಗಳಂದು ನುಡಿಸಲಾಗುವ ಸಂಗೀತ ಕಾರಂಜಿ. ಮಹಾಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಅವರು ಸಾದನಕೆರೆಯ ಹಸಿರು ಪರಿಸರ ಮತ್ತು ಪ್ರಶಾಂತ ವಾತಾವರಣದಿಂದ ಪ್ರೇರಿತರಾಗಿದ್ದರು ಎಂದು ಹೇಳಲಾಗುತ್ತದೆ. ದ.ರಾ. ಬೇಂದ್ರೆಯವರ ಮನೆ ಮತ್ತು ಬೇಂದ್ರೆ ಭವನಗಳು ಸಾಕಷ್ಟು ಹತ್ತಿರದಲ್ಲಿದ್ದು, ಇಲ್ಲಿಗೂ ಭೇಟಿ ನೀಡಬಹುದು.
  • ಬೇಂದ್ರೆ ಭವನ: ಬೇಂದ್ರೆ ಭವನವು ಕನ್ನಡದ ಮಹಾನ್ ಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಸ್ಮಾರಕ. ಬೇಂದ್ರೆ ಭವನದಲ್ಲಿ ಕವಿಯ ಅಪರೂಪದ ಛಾಯಾಚಿತ್ರಗಳು, ವರ್ಣಚಿತ್ರಗಳು, ಅವರ ಕವನಗಳ ಉಲ್ಲೇಖಗಳು ಮತ್ತು ಅದರ ಸಾರಗಳು ಇತ್ಯಾದಿಗಳನ್ನು ನೋಡಬಹುದು. ಈ ಭವನವು ಆಡಿಟೋರಿಯಂ, ಫೋಟೋ ಗ್ಯಾಲರಿ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನು ಸಹ ಹೊಂದಿದೆ. ಬೇಂದ್ರೆ ಭವನದ ಪಕ್ಕದಲ್ಲಿ ಡಾ. ಬೇಂದ್ರೆಯವರ ಮನೆ 'ಶ್ರೀ ಮಠ'ವಿದ್ದು, ಮಹಾನ್ ಕವಿಯ ಸ್ಮರಣೆಯ ಸ್ಥಳವಾಗಿದೆ. ಇಲ್ಲಿ ದ.ರಾ.ಬೇಂದ್ರೆಗೆ ಸಂಬಂಧಿಸಿದ ಉಡುಗೆ ತೊಡುಗೆಗಳು, ಸ್ಮರಣಿಕೆಗಳು ಮತ್ತು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪ್ರಮಾಣಪತ್ರದಂತಹ ವಿವಿಧ ಸ್ಮರಣಿಕೆಗಳನ್ನು ಕಾಣಬಹುದು.
  • ಇಂದಿರಾ ಗಾಂಧಿ ಮೆಮೋರಿಯಲ್‌ ಗ್ಲಾಸ್‌ಹೌಸ್‌: ಇಂದಿರಾ ಗಾಂಧಿ ಮೆಮೋರಿಯಲ್‌ ಗ್ಲಾಸ್‌ಹೌಸ್‌ಗೆ ಭಾರತದ ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗಿದೆ. ಇಲ್ಲಿನ ಮುಖ್ಯ ಕಟ್ಟಡವನ್ನು ಗಾಜಿನ ಮನೆಯಂತೆ ನಿರ್ಮಿಸಲಾಗಿದ್ದು, ಇದರೊಳಗೆ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಈ ಕಟ್ಟಡದ ಸುತ್ತಲೂ ಸುಂದರವಾಗಿ ನಿರ್ಮಿಸಲಾದ ಉದ್ಯಾನಗಳಿವೆ. ಸಂಗೀತ ಕಾರಂಜಿ ಪ್ರದರ್ಶನ, ಆಟಿಕೆ ರೈಲು ಮತ್ತು ಉದ್ಯಾನದಾದ್ಯಂತ ಚದುರಿದ ಶಿಲ್ಪಗಳು ಈ ಸ್ಥಳದ ಇತರ ಕೆಲವು ಆಕರ್ಷಣೆಗಳು.
  • ನೃಪತುಂಗ ಬೆಟ್ಟ: ಉಣಕಲ್ ಬೆಟ್ಟದ ಬಳಿಯಿರುವ ನೃಪತುಂಗ ಬೆಟ್ಟವು ಇಡೀ ಹುಬ್ಬಳ್ಳಿ ಇಡೀ ನಗರದ ಮನಮೋಹಕ ದೃಷ್ಯವನ್ನು ನೀಡುತ್ತದೆ. ಹಸಿರು ಮತ್ತು ಪ್ರಶಾಂತ ವಾತಾವರಣದ ನಡುವೆ ಇಡೀ ನಗರದ ವಿಹಂಗಮ ನೋಟವನ್ನು ಒದಗಿಸುತ್ತದೆ. ನೃಪತುಂಗ ಬೆಟ್ಟದ ಮೇಲೆ ದೇವಿ ದೇವಾಲಯವೂ ಇದೆ.
  • ಉಣಕಲ್ ಕೆರೆ: ಉಣಕಲ್ ಕೆರೆಯು ನಗರದ ಜನಪ್ರಿಯ ಪಿಕ್ನಿಕ್ ತಾಣ. ಸುಮಾರು 200 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆಯು, 100 ವರ್ಷಗಳಷ್ಟು ಹಳೆಯದಾದದ್ದು ಎಂದು ಹೇಳಲಾಗುತ್ತದೆ. ಸರೋವರದ ಸುತ್ತಲಿನ ಪ್ರದೇಶವು ಮಕ್ಕಳಿಗೆ ಮನರಂಜನಾ ಸೌಲಭ್ಯಗಳನ್ನು ಹೊಂದಿರುವ ಸುಂದರವಾದ ಉದ್ಯಾನವನ್ನು ಹೊಂದಿದೆ. ಇಲ್ಲಿ ದೋಣಿ ವಿಹಾರವೂ ಇದೆ, ದೋಣಿಗಳಲ್ಲಿ ಹೋಗಿ ಕೆರೆಯ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನೋಡಬಹುದು.
  • ಸನ್ ರೇ ಸೋಲಾರ್ ಮ್ಯೂಸಿಯಂ: 2006ರಲ್ಲಿ ಸ್ಥಾಪನೆಯಾದ ಈ ವಸ್ತುಸಂಗ್ರಹಾಲಯ ಬಹುಶಃ ದೇಶದ ಮೊದಲ ಸೌರ ವಸ್ತುಸಂಗ್ರಹಾಲಯವಾಗಿದೆ. ಹೆಸರೇ ಸೂಚಿಸುವಂತೆ, ವಸ್ತುಸಂಗ್ರಹಾಲಯವು ನವೀಕರಿಸಬಹುದಾದ ಇಂಧನ / ಸೌರ ಶಕ್ತಿ ಬಳಕೆಯ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಉತ್ತೇಜಿಸುವ ಮತ್ತು ಜಾಗೃತಿ ಮೂಡಿಸುವ ಮುಖ್ಯ ಉದ್ದೇಶದೊಂದಿಗೆ ಈ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲ್ಪಟ್ಟಿದೆ. ಈ ವಸ್ತುಸಂಗ್ರಹಾಲಯವು ಸೌರ ಕುಕ್ಕರ್‌ಗಳು, ಸೋಲಾರ್ ವಾಟರ್ ಹೀಟರ್‌ಗಳು, ಪಂಪ್‌ಗಳು, ಲಾಟೀನುಗಳು, ಟಾರ್ಚ್ಗಳು, ಮೊಬೈಲ್ ಚಾರ್ಜರ್‌ಗಳು, ಸೋಲಾರ್ ಡ್ರೈಯರ್‌ಗಳು, ಸೋಲಾರ್ ಫೆನ್ಸಿಂಗ್ ಸಿಸ್ಟಮ್ ಇತ್ಯಾದಿ ಎಲ್ಲಾ ಸೌರ ಶಕ್ತಿ ವ್ಯವಸ್ಥೆಗಳ ಸಂಗ್ರಹವನ್ನು ಹೊಂದಿದೆ. ಇಲ್ಲಿ ನೇರ ಪ್ರಾತ್ಯಕ್ಷಿಕೆಗಳು, ಸೆಮಿನಾರ್‌ಗಳು ಮತ್ತು ತರಬೇತಿ ಕೋರ್ಸ್‌ಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ.
  • ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ: ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿದ್ದು, ನೈಸರ್ಗಿಕ ಹಸಿರು ಹೊದಿಕೆಯಿಂದ ಸುತ್ತುವರೆದಿದೆ. ಈ ಕೇಂದ್ರವು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂಸ್ ಹಾಗೂ ರಾಜ್ಯ ಸರ್ಕಾರದ ಸಕ್ರಿಯ ಬೆಂಬಲದೊಂದಿಗೆ ಸ್ಥಾಪನೆಯಾಗಿದೆ. ಯುವಜನರು ಮತ್ತು ವೃದ್ಧರನ್ನು ಸೃಜನಶೀಲ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಸುವ ಮತ್ತು ಸಂದರ್ಶಕರಲ್ಲಿ ವೈಜ್ಞಾನಿಕ ಜ್ಞಾನವನ್ನು ಹರಡುವ ಸ್ಥಳವಾಗಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತದೆ. ಸುಮಾರು 4000 ಚದರ ಮೀಟರ್ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, ರೆಸೆಪ್ಷನ್‌ ಏರಿಯಾ ಮತ್ತು 3 ಪ್ರದರ್ಶನ ಗ್ಯಾಲರಿಗಳನ್ನು ಹೊಂದಿದೆ. ಸಂದರ್ಶಕರಿಗೆ ಇದು ವಿನೋದಭರಿತವಾಗಿ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬಹುದಾದ ಅನುಭವವನ್ನು ನೀಡುತ್ತದೆ.
  • ಧಾರವಾಡ ಅಡ್ವೆಂಚರ್ ಬೇಸ್: 14 ಎಕರೆ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ಮಾವಿನ ತೋಪುಗಳ ನಡುವೆ ಇರುವ ಧಾರವಾಡ ಅಡ್ವೆಂಚರ್ ಬೇಸ್, ರೋಮಾಂಚಕ ಹೊರಾಂಗಣ ಚಟುವಟಿಕೆಗಳು/ಒಳಾಂಗಣ ಆಟಗಳಿಂದ ತುಂಬಿದ ತಾಣ. ಇದು ವಿಶೇಷವಾಗಿ ಕುಟುಂಬಗಳು / ಕಾರ್ಪೊರೇಟ್ ತಂಡಗಳಿಗೆ ಸೂಕ್ತವಾದ ಸ್ಥಳವಾಗಿದೆ. ವಿಶೇಷ ದಿನಗಳನ್ನು ಕಳೆಯಲು ಸೂಕ್ತವಾದ ಜಾಗವಾಗಿದ್ದು, ಭೇಟಿಗಳು, ಶಾಲಾ ಪಿಕ್ನಿಕ್‌ಗಳು ಅಥವಾ ಕಾರ್ಪೊರೇಟ್ ಕಂಪನಿಗಳ ವಿಹಾರಗಳಿಗೆ ಹೇಳಿಮಾಡಿಸಿದ ಜಾಗವಾಗಿದೆ. ನೀರಿನ ಆಟಗಳು, ಹಗ್ಗದ ಆಟಗಳು, ಒಳಾಂಗಣ ಆಟಗಳು, ಸವಾರಿ, ಜೋರ್ಬ್‌ ಸೇರಿದಂತೆ ಇಡೀ ದಿನವನ್ನು ಕಳೆಯಬಹುದಾದಷ್ಟು ಚಟುವಟಿಕೆಗಳ ಪಟ್ಟಿಯನ್ನು ಧಾರವಾಡ ಅಡ್ವೆಂಚರ್‌ ಬೇಸ್‌ ಹೊಂದಿದೆ.
  • ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಐಎನ್‌ಟಿಎಸಿಎಚ್‌) ಮ್ಯೂಸಿಯಂ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (ಎಚ್‌ಡಿಎಂಸಿ) ಆವರಣದಲ್ಲಿರುವ ಈ ವಸ್ತುಸಂಗ್ರಹಾಲಯವು ಅಂಚೆ ಚೀಟಿಗಳು, ನಾಣ್ಯಗಳು, ಹಸ್ತಪ್ರತಿಗಳು, ಅನೇಕ ಲೇಖಕರ ಮೂಲ ಪ್ರಮಾಣಪತ್ರಗಳು, ವರ್ಣಚಿತ್ರಗಳು ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳ ಸಂಗ್ರಹವನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯವು ಸಾಹಿತ್ಯ, ಸಂಗೀತ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಪ್ರಮುಖ ವ್ಯಕ್ತಿಗಳ ಸಾಧನೆಗಳ ಛಾಯಾಚಿತ್ರಗಳು ಮತ್ತು ಮಾಹಿತಿಯ ನಿಧಿಯಾಗಿದ್ದು, ಆ ವ್ಯಕ್ತಿಗಳ ಪ್ರಶಸ್ತಿಗಳು ಮತ್ತು ಉಲ್ಲೇಖಗಳನ್ನು ಸಹ ಹೊಂದಿದೆ.
  • ಮಾರುತಿ ವಾಟರ್ಪಾರ್ಕ್: ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಥೀಮ್ ಪಾರ್ಕ್.
  • ಧಾರವಾಡ ಕೋಟೆ: 1043ರಲ್ಲಿ 76 ಎಕರೆಗಳಷ್ಟು ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಮೂಲ ಕೋಟೆಯ ಎರಡು ಮುಖ್ಯ ದ್ವಾರಗಳು ಮಾತ್ರ ಹಾಗೆಯೇ ಉಳಿದುಕೊಂಡಿವೆ.
  • ಹಿರೇಮಠದಲ್ಲಿನ ಭಿತ್ತಿಚಿತ್ರಗಳು: ಧಾರವಾಡದಿಂದ ಈಶಾನ್ಯಕ್ಕೆ 9 ಕಿ.ಮೀ ದೂರದಲ್ಲಿರುವ ಅಮ್ಮಿನಭಾವಿಯ ಪಂಚಗೃಹ ಹಿರೇಮಠವು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. ಅಮ್ಮಿನಭಾವಿಯಲ್ಲಿ ಚಾಲುಕ್ಯರು ನಿರ್ಮಿಸಿದ ಪಾರ್ಶ್ವನಾಥ ಬಸದಿಯೂ ಇದೆ.
  • ಐತಿಹಾಸಿಕ ಪ್ರಾಚೀನ ವಸ್ತುಗಳ ಸಂಗ್ರಹಾಲಯ: ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿದೆ.

Tour Location

ಧಾರವಾಡವು ಕರ್ನಾಟಕದಾದ್ಯಂತ ಉತ್ತಮ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರವಾಡ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಾಯುವ್ಯಕ್ಕೆ 429 ಕಿಮೀ ದೂರದಲ್ಲಿದೆ.

ಹುಬ್ಬಳ್ಳಿಯು ಧಾರವಾಡದಿಂದ 20 ಕಿಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.
ಧಾರವಾಡ ಉತ್ತಮ ರೈಲು ನಿಲ್ದಾಣ ಹೊಂದಿದ್ದು, ಎಲ್ಲ ಕಡೆಗಳಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.
ಧಾರವಾಡವು ಕರ್ನಾಟಕದ ಪ್ರಮುಖ ನಗರಗಳಿಂದ ಅತ್ಯುತ್ತಮವಾದ ಬಸ್ ಸಂಪರ್ಕಗಳನ್ನು ಹೊಂದಿದೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಗಳು ಲಭ್ಯವಿದೆ.
ಸ್ಥಇಲ್ಲಿನ ಪ್ರಾದೇಶಿಕ ಆಕರ್ಷಣೆಗಳನ್ನು ನೋಡಲು ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಳ್ನಾವರ, ಕಲಘಟಗಿ ಅಥವಾ ಕುಂದಗೋಳದಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು. ಸ್ಥಳೀಯ ಪ್ರಯಾಣಕ್ಕೆ ಆಟೋಗಳು ಉತ್ತಮ ಆಯ್ಕೆಗಳಾಗಿವೆ.
ಐಷಾರಾಮಿ ವಸತಿಗಳು: ಡೆನಿಸ್ಸನ್ಸ್ ಹೋಟೆಲ್ ಜೆನ್ X ಧಾರವಾಡ ಕೈರಾಡ್ ಪ್ರೆಸ್ಟೀಜ್ ಹುಬ್ಬಳ್ಳಿ ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು: ಕ್ಲಾರ್ಕ್ಸ್ ಇನ್ ಹುಬ್ಬಳ್ಳಿ ಸ್ವರ್ಣ ಪ್ಯಾರಡೈಸ್ ಸಾಯಿ ರೆಸಿಡೆನ್ಸಿ ಶೃಂಗಾರ್ ಪ್ಯಾಲೇಸ್ ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು: ಚಾಲುಕ್ಯ ರೆಸಿಡೆನ್ಸಿ