ಕರಾವಳಿ ಪ್ರವಾಸೋದ್ಯಮಕ್ಕಾಗಿ ಕರ್ನಾಟಕ ಸರ್ಕಾರ ₹1,260 ಕೋಟಿ ಮೊತ್ತದ ಬೃಹತ್ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ. ‘ಬ್ರ್ಯಾಂಡ್ ಕರಾವಳಿ’, ಹೊಸ ಸಿಆರ್ಝಡ್ (CRZ) ಸುಧಾರಣೆಗಳು ಹಾಗೂ ನವೀಕರಿಸಲಾದ ಪ್ರವಾಸೋದ್ಯಮ ವೆಬ್ಸೈಟ್ ಕುರಿತು ಇಲ್ಲಿ ತಿಳಿಯಿರಿ
ಕರ್ನಾಟಕ ಸರ್ಕಾರವು ರಾಜ್ಯದ ಕರಾವಳಿ ಆರ್ಥಿಕತೆಗೆ ನಿರ್ಣಾಯಕ ತಿರುವು ನೀಡುವ ನಿಟ್ಟಿನಲ್ಲಿ, ಈ ಪ್ರದೇಶವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಸಮಗ್ರ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ. 2026ರ ಜನವರಿ 10 ರಂದು ಮಂಗಳೂರಿನ ಹೋಟೆಲ್ ಅವತಾರ್ ಅಂಡ್ ಕನ್ವೆನ್ಷನ್ನಲ್ಲಿ ನಡೆದ “ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ” (Coastal Karnataka Tourism Conclave) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ರಾಜ್ಯದ ಉನ್ನತ ನಾಯಕತ್ವದ ಅಭೂತಪೂರ್ವ ಸಮಾಗಮಕ್ಕೆ ಸಾಕ್ಷಿಯಾಯಿತು

ಆರ್ಥಿಕತೆಯ ಹೊಸ ಅಲೆ: ಆರ್ಥಿಕ ಪರಿವರ್ತನೆಗಾಗಿ ಒಗ್ಗಟ್ಟು
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗ, ಪ್ರವಾಸೋದ್ಯಮ ಸಚಿವ ಶ್ರೀ ಎಚ್.ಕೆ. ಪಾಟೀಲ್ ಮತ್ತು ವಿಧಾನಸಭಾ ಸ್ಪೀಕರ್ ಶ್ರೀ ಯು.ಟಿ. ಖಾದರ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಕರಾವಳಿ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಇವರೊಂದಿಗೆ ಕೈಜೋಡಿಸಿದರು.

320 ಕಿಲೋಮೀಟರ್ಗಳಷ್ಟು ವಿಸ್ತಾರವಾದ ಕರಾವಳಿಯನ್ನು ಆರ್ಥಿಕ ಅಭಿವೃದ್ಧಿಯ ಚಾಲಕ ಶಕ್ತಿಯನ್ನಾಗಿ ಪರಿವರ್ತಿಸುವುದು ಸರ್ಕಾರದ ಮುಖ್ಯ ಸಂಕಲ್ಪ ಹಾಗೂ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಮೂರು ಕರಾವಳಿ ಜಿಲ್ಲೆಗಳಲ್ಲಿ ಬರೋಬ್ಬರಿ 1,260 ಕೋಟಿ ರೂ. ಹೂಡಿಕೆಯ 31 ಪ್ರವಾಸೋದ್ಯಮ ಯೋಜನೆಗಳಿಗೆ ಒಪ್ಪಂದಗಳನ್ನು (MoU) ಮಾಡಿಕೊಳ್ಳಲಾಯಿತು. ಅಷ್ಟೇ ಅಲ್ಲದೆ, ಜೂನ್ 2023 ರಿಂದ ಈಚೆಗೆ 45 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಈಗಾಗಲೇ 1,500 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಕೊಠಡಿಗಳು ಸೇರ್ಪಡೆಯಾಗಿವೆ ಎಂದು ಇಲಾಖೆ ಮಾಹಿತಿ ನೀಡಿತು.
ಈ ಅಭಿವೃದ್ಧಿಯ ಹಿಂದಿನ ಕಳಕಳಿಯನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಇದು ಕೇವಲ ಒಪ್ಪಂದಗಳಿಗೆ ಸಹಿ ಹಾಕುವ ಸಮಾರಂಭವಲ್ಲ, ಇದು ಜೀವನೋಪಾಯವನ್ನು ಸೃಷ್ಟಿಸುವ ವಿಚಾರವಾಗಿದೆ”. ಇಂದು ವಾಗ್ದಾನ ಮಾಡಲಾದ ಹೂಡಿಕೆಗಳು ನಮ್ಮ ಸ್ಥಳೀಯ ಯುವಕರಿಗೆ ಸಾವಿರಾರು ಉದ್ಯೋಗಗಳಾಗಿ ಪರಿವರ್ತನೆಗೊಳ್ಳಲಿವೆ. ಮೀನುಗಾರರು, ಹೋಂ ಸ್ಟೇ ಮಾಲೀಕರು ಮತ್ತು ಆಟೋ ಚಾಲಕರು ಪ್ರಗತಿಯ ಪಾಲುದಾರರಾಗುವ ಅಭಿವೃದ್ಧಿ ಮಾದರಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಅಡೆತಡೆಗಳ ನಿವಾರಣೆ: ಸಿಆರ್ಝಡ್ (CRZ) ಮತ್ತು ಮೂಲಸೌಕರ್ಯ
ಚರ್ಚೆಯ ಪ್ರಮುಖ ವಿಷಯವೆಂದರೆ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳು. ಸರ್ಕಾರವು ಸಿಆರ್ಝಡ್ ಅನುಮೋದನೆ ಪ್ರಕ್ರಿಯೆಗೆ ಸರಳೀಕೃತ ಮತ್ತು ಪಾರದರ್ಶಕ ವಿಧಾನದ ಭರವಸೆ ನೀಡಿತು. ಜನಸಂಖ್ಯೆ ಮತ್ತು ಪರಿಸರ ಬದಲಾವಣೆಗಳ ಆಧಾರದ ಮೇಲೆ ಪ್ರದೇಶಗಳ ಮರುಮೌಲ್ಯಮಾಪನ ಮಾಡಿ, ತಿದ್ದುಪಡಿಗಳನ್ನು ಕೋರಲು ಸಾಕಷ್ಟು ಅವಕಾಶವಿದೆ ಎಂದು ಚರ್ಚೆಯ ವೇಳೆ ಗಮನಿಸಲಾಯಿತು.
ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, “ಅಲೆದಾಡುವ ದಿನಗಳು ಮುಗಿದಿವೆ. ಪ್ರವಾಸೋದ್ಯಮ ಯೋಜನೆಗಳಿಗೆ ಕಾಲಮಿತಿಯೊಳಗೆ ಅನುಮೋದನೆ ನೀಡಲು ನಾವು ತ್ವರಿತ ಮಂಜೂರಾತಿ ವ್ಯವಸ್ಥೆಯನ್ನು (single-window mechanisms) ಸ್ಥಾಪಿಸುತ್ತಿದ್ದೇವೆ. ಹೂಡಿಕೆದಾರರಿಗೆ ಅಭಿವೃದ್ಧಿಪಡಿಸಲು ಸಿದ್ಧವಿರುವ ಜಮೀನುಗಳನ್ನು ನೀಡಲು ನಾವು ‘ಪ್ರವಾಸೋದ್ಯಮ ಲ್ಯಾಂಡ್ ಬ್ಯಾಂಕ್’ ಅನ್ನು ಸಹ ರಚಿಸುತ್ತಿದ್ದೇವೆ” ಎಂದು ಹೇಳಿದರು.

ಈ ಪರಿವರ್ತನೆಗೆ ಸಂಪರ್ಕ ವ್ಯವಸ್ಥೆಯೇ ಬೆನ್ನೆಲುಬು ಎಂದು ಗುರುತಿಸಲಾಯಿತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉನ್ನತೀಕರಣದ ಮೂಲಕ ಹೆಚ್ಚು ನೇರ ಅಂತರಾಷ್ಟ್ರೀಯ ವಿಮಾನಗಳನ್ನು ಆಕರ್ಷಿಸುವುದು ಮತ್ತು ಕಡಲತೀರದ ರಮಣೀಯ ದೃಶ್ಯಗಳನ್ನು ಒಳಗೊಂಡ ಪ್ರತ್ಯೇಕ ಕರಾವಳಿ ರಸ್ತೆ ಕಾರಿಡಾರ್ ಅಭಿವೃದ್ಧಿಯ ಬಗ್ಗೆ ನಾಯಕರು ಚರ್ಚಿಸಿದರು.
ನಮ್ಮದೇ ಮಾದರಿ: ಇದು “ಬ್ರ್ಯಾಂಡ್ ಕರಾವಳಿ”
ಸಮಾವೇಶವು ಬೇರೆ ರಾಜ್ಯಗಳ ಮಾದರಿಯನ್ನು ಯಥಾವತ್ತಾಗಿ ಅನುಕರಿಸದೆ, ಬದಲಿಗೆ ಪ್ರಾದೇಶಿಕ ನಿರ್ದಿಷ್ಟ ವಿಧಾನಕ್ಕೆ ಒತ್ತು ನೀಡಿತು. ಆರೋಗ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು, “ನಾವು ಗೋವಾ ಅಥವಾ ಕೇರಳದ ಮಾದರಿಯನ್ನು ಅನುಸರಿಸಬೇಕಿಲ್ಲ. ನಾವು ನಮ್ಮದೇ ಆದ ಮಾದರಿಯನ್ನು ರಚಿಸಬಹುದು” ಎಂದು ಪ್ರತಿಪಾದಿಸಿದರು. ಅವ್ಯವಸ್ಥಿತ ನಿರ್ಮಾಣವನ್ನು ತಡೆಗಟ್ಟಲು ಪ್ರಮುಖ ಘಟಕಗಳ ನೇತೃತ್ವದಲ್ಲಿ ‘ವಿಶೇಷ ಪ್ರವಾಸೋದ್ಯಮ ವಲಯ’ಗಳನ್ನು (Special Tourism Zones) ರಚಿಸುವ ತಂತ್ರಕ್ಕೆ ಒತ್ತು ನೀಡಲಾಯಿತು.

ಸರ್ಫಿಂಗ್, ಸ್ಕೂಬಾ ಡೈವಿಂಗ್ ಮತ್ತು ಕ್ರೂಸ್ ಸೇರಿದಂತೆ ಸಾಹಸಮಯ ಪ್ರವಾಸೋದ್ಯಮದ ಮೇಲೂ ಬೆಳಕು ಚೆಲ್ಲಲಾಯಿತು. ಸಸಿಹಿತ್ಲು, ನೇತ್ರಾಣಿ ಮತ್ತು ದಾಂಡೇಲಿಯಂತಹ ತಾಣಗಳನ್ನು ಎತ್ತಿ ತೋರಿಸಲಾಯಿತು. ಪ್ರವಾಸೋದ್ಯಮ ಸಚಿವ ಶ್ರೀ ಎಚ್.ಕೆ. ಪಾಟೀಲ್, “ನಮ್ಮಲ್ಲಿ ಉತ್ಪನ್ನವಿದೆ, ಈಗ ನಮಗೆ ಪ್ಯಾಕೇಜಿಂಗ್ ಅಗತ್ಯವಿದೆ,” ಎಂದು ಹೇಳುತ್ತಾ, “ಬ್ರ್ಯಾಂಡ್ ಕರಾವಳಿ”ಯನ್ನು ವ್ಯಾಖ್ಯಾನಿಸಲು ಆಯಕಟ್ಟಿನ ಮಾರುಕಟ್ಟೆ ತಂತ್ರದ (strategic marketing) ಅಗತ್ಯವನ್ನು ಒತ್ತಿ ಹೇಳಿದರು.
ಡಿಜಿಟಲ್ ಕ್ರಾಂತಿ: ನವೀಕರಿಸಿದ ವೆಬ್ಸೈಟ್ ಬಿಡುಗಡೆ

ಕಾರ್ಯಕ್ರಮದ ವೇಳೆ, ಇಲಾಖೆ ಮತ್ತು ಮಾನ್ಯ ಸಚಿವರು ನವೀಕರಿಸಿದ ಕರ್ನಾಟಕ ಪ್ರವಾಸೋದ್ಯಮ ವೆಬ್ಸೈಟ್ಗೆ (Karnatakatourism.org) ಅಧಿಕೃತವಾಗಿ ಚಾಲನೆ ನೀಡಿದರು. ಅತ್ಯಾಧುನಿಕ ವಿನ್ಯಾಸ ಮತ್ತು ಸುಲಭವಾದ ನ್ಯಾವಿಗೇಷನ್ ಹೊಂದಿರುವ ಈ ವೆಬ್ಸೈಟ್, ರಾಜ್ಯದ ಪ್ರವಾಸೋದ್ಯಮದ ವ್ಯಾಪ್ತಿಯನ್ನು ಆಧುನೀಕರಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರಿಗೆ “ಬ್ರ್ಯಾಂಡ್ ಕರಾವಳಿ” ಹಾಗೂ ಕರ್ನಾಟಕದ ವೈವಿಧ್ಯಮಯ ಕೊಡುಗೆಗಳನ್ನು ಪ್ರದರ್ಶಿಸುವಲ್ಲಿ ಈ ಡಿಜಿಟಲ್ ಉಪಕ್ರಮವು ಮಹತ್ವದ ಹೆಜ್ಜೆಯಾಗಿದೆ.ಹಾಗೂ ರಾಜ್ಯದ ವೈವಿಧ್ಯತೆಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರಾವಳಿ ಪ್ರವಾಸೋದ್ಯಮ ಸಮಾವೇಶ 2026 ಕರ್ನಾಟಕದಲ್ಲಿ ಸರ್ಕಾರ ಮತ್ತು ಉದ್ಯಮದ ನಡುವಿನ ಸಹಯೋಗಕ್ಕೆ ಹೊಸ ಮೈಲಿಗಲ್ಲಾಗಿದೆ. ಉನ್ನತ ಮಟ್ಟದ ರಾಜಕೀಯ ಇಚ್ಛಾಶಕ್ತಿ, ಗಣನೀಯ ಆರ್ಥಿಕ ಬದ್ಧತೆಗಳು ಮತ್ತು ನಿಯಂತ್ರಣ ಸುಧಾರಣೆಗಳ ಮೇಲಿನ ಗಮನದೊಂದಿಗೆ, ರಾಜ್ಯವು ತನ್ನ ಕರಾವಳಿಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಜ್ಜಾಗಿದೆ. ಈ ಪ್ರದೇಶದ ವಿಶಿಷ್ಟ ಸಂಸ್ಕೃತಿ ಮತ್ತು ನಿಸರ್ಗವನ್ನು ಅನುಭವಿಸಲು ಸರ್ಕಾರವು ಜಗತ್ತನ್ನು ಆಹ್ವಾನಿಸುತ್ತಿದ್ದು, ಹೂಡಿಕೆ ಮಾಡುವ ಇಚ್ಛಾಶಕ್ತಿ ಹೊಂದಿರುವವರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಸಿದ್ಧವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
