Karnataka Tourism
GO UP
mysuru Dasara

ಮೈಸೂರು ದಸರಾ

separator
  /  ಮೈಸೂರು ದಸರಾ

ಮೈಸೂರು ದಸರಾ ಕರ್ನಾಟಕದ ರಾಜ್ಯ ಉತ್ಸವ ಮತ್ತು ಜನರು ಎದುರು ನೋಡುತ್ತಿರುವ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪ್ರತಿವರ್ಷ ದಸರಾವನ್ನು ಆಚರಿಸಲಾಗುತ್ತದೆ. ದಸರಾ  ಹಬ್ಬ ನವರಾತ್ರಿ ಅವಧಿಯಲ್ಲಿ (ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ) ಬರುತ್ತದೆ.  10 ದಿನಗಳ ಕಾಲ ದಸರಾ ಆಚರಣೆಗಳು ನಡೆಯುತ್ತವೆ. ಮೈಸೂರು ದಸರಾ ಆಚರಣೆಗಳಿಗೆ ಸಾಕ್ಷಿಯಾಗಲು ಪ್ರತಿವರ್ಷ ಲಕ್ಷಗಟ್ಟಲೆ ಪ್ರವಾಸಿಗರು ದೇಶ ವಿದೇಶಗಳಿಂದ  ಆಗಮಿಸುತ್ತಾರೆ.

ದಸರಾ ಹಬ್ಬದಲ್ಲಿ ದುಷ್ಟಶಕ್ತಿಯ ಮೇಲೆ ಒಳ್ಳೆಯತನದ ಜಯಿಸುವಿಕೆಯನ್ನು ಆಚರಿಸಲಾಗುತ್ತದೆ. 

ಚಾಮುಂಡೇಶ್ವರಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿ ಶಾಂತಿ ಪಾಲನೆಗೆ ಕಾರಣವಾದದ್ದು ದಸರಾ ಹಬ್ಬಕ್ಕೆ ಸ್ಪೂರ್ತಿಯಾಗಿದೆ. 15 ನೇ ಶತಮಾನದಲ್ಲಿ ವಿಜಯನಗರ ಆಳ್ವಿಕೆಯಲ್ಲಿ ದಸರಾ ಉತ್ಸವ ಪ್ರಾರಂಭವಾಯಿತು ಮತ್ತು ಇದುವರೆಗೆ 400+ ಆವೃತ್ತಿಗಳನ್ನು ನೋಡಿದೆ ಎಂದು ಹೇಳಲಾಗುತ್ತದೆ. ಮೈಸೂರು ದಸರಾ ಸಮಯದಲ್ಲಿ ಸಂಪೂರ್ಣ ಮೈಸೂರು ನಗರವು ಅತ್ಯುತ್ತಮವಾಗಿ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ. ದಸರಾ ಆಚರಣೆಗಳು ಮತ್ತು ಜಂಬೂ ಸವಾರಿ ಭೇಟಿ ಕರ್ನಾಟಕಕ್ಕೆ ಭೇಟಿ ನೀಡುವ ಯಾರಾದರೂ ಮಾಡಲೇಬೇಕಾದ ಕಾರ್ಯಕ್ರಮವಾಗಿದೆ. 

ದಸರಾ ಹಬ್ಬದ ಆಕರ್ಷಣೆಗಳು

  • ಜಂಬೂ ಸವಾರಿ (ಆನೆ ಮೆರವಣಿಗೆ): ದಸರಾದ ಕೊನೆಯ ದಿನದಂದು ನಡೆವ ಜಂಬೂ ಸವಾರಿಯ ಸಂದರ್ಭದಲ್ಲಿ ವಿಶೇಷ ತರಬೇತಿ ಪಡೆದ ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು (750 ಕಿ.ಗ್ರಾಂ ಚಿನ್ನದಿಂದ ಮಾಡಲ್ಪಟ್ಟಿದೆ) ಭವ್ಯ ಮೆರವಣಿಗೆಯಲ್ಲಿ ಸಾಗಿಸುತ್ತವೆ. ಇದು ಮೈಸೂರು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದ  ಬಳಿ ಮುಕ್ತಾಯಗೊಳ್ಳುತ್ತದೆ.  ಮೆರವಣಿಗೆಯಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳೂ ಇರಲಿವೆ.
  • ಪ್ರದರ್ಶನಗಳು: ಕಲಾಕೃತಿಗಳು, ಕೈಮಗ್ಗ ಮತ್ತು ಇತರ ಸ್ಥಳೀಯ ಸಾಂಪ್ರದಾಯಿಕ ಕರಕುಶಲತೆಯನ್ನು ಪ್ರದರ್ಶಿಸುವ ಹಲವಾರು ಪ್ರದರ್ಶನಗಳನ್ನು ದಸರಾ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಸಂದರ್ಶಕರು ಕರಕುಶಲತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಅವುಗಳನ್ನು ಸಾಮಾನ್ಯ ಬೆಲೆಗಳಿಗಿಂತ ಅಗ್ಗವಾಗಿ ಖರೀದಿಸಬಹುದು.
  • ಮೈಸೂರು ಅರಮನೆ ದೀಪಾಲಂಕಾರ: ದಸರಾ ಸಮಯದಲ್ಲಿ ಮೈಸೂರು ಅರಮನೆಯನ್ನು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಬಳಸಿ ಅಲಂಕರಿಸಲಾಗುವುದು ಮತ್ತು ರಾತ್ರಿಯಲ್ಲಿ ಜಗಮಗಿಸುವ ಮೈಸೂರು ಅರಮನೆಯನ್ನು ದೂರದಿಂದ ನೋಡುವುದಕ್ಕೆ ಎರಡು ಕಣ್ಣು ಸಾಲವು. 
  • ಇತರ ಕಾರ್ಯಕ್ರಮಗಳು: ದಸರಾ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆ, ಮರಳು ಶಿಲ್ಪಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಾಗುತ್ತದೆ
  • ಬೃಂದಾವನ್ ಗಾರ್ಡನ್ಸ್: ಬೃಂದಾವನ್ ಗಾರ್ಡನ್‌ಗೆ ಭೇಟಿ ನೀಡಿ ಮತ್ತು ಸಂಗೀತ ಕಾರಂಜಿ ಪ್ರದರ್ಶನವನ್ನು ಆನಂದಿಸಬಹುದಾಗಿದೆ. 
  • ಆಹಾರ, ವಿನೋದ ಮತ್ತು ಹಬ್ಬಗಳು: ಮೋಜಿನ ಆಟಗಳು ಮತ್ತು ಆಹಾರ ಮಳಿಗೆಗಳು ದಸರಾ ಸಮಯದಲ್ಲಿ ಸಂದರ್ಶಕರನ್ನು ರೋಮಾಂಚನಗೊಳಿಸುತ್ತವೆ.
  • ಮಾರಾಟ: ಹೆಚ್ಚಿನ ಅಂಗಡಿಯವರು ದಸರಾ ಸಮಯದಲ್ಲಿ ವಿಶೇಷ ರಿಯಾಯಿತಿಯನ್ನು ನೀಡುತ್ತಾರೆ. ಇದು ಶಾಪಿಂಗ್ ಮಾಡಲು ಮತ್ತು ಉಳಿಸಲು ಸೂಕ್ತ ಅವಕಾಶವಾಗಿದೆ.

ಯಾವಾಗ? ಮೈಸೂರು ದಸರಾ 2020 ಅನ್ನು ಅಕ್ಟೋಬರ್ 17 ರಿಂದ 27 ರವರೆಗೆ ಯೋಜಿಸಲಾಗಿದೆ. ಪ್ರತಿ ವರ್ಷವೂ ನಿಖರವಾದ ದಿನಾಂಕಗಳು ಬದಲಾಗಬಹುದು. ದಸರಾ ದಿನಾಂಕಗಳು ಹತ್ತಿರವಾಗುತ್ತಿದ್ದಂತೆ ಹೋಟೆಲ್ ಕೋಣೆಗಳ ಲಭ್ಯತೆ ಕಡಿಮೆಯಾಗಿ  ದರಗಳು ಹೆಚ್ಚಾಗುವುದರಿಂದ ಮೈಸೂರಿಗೆ ನಿಮ್ಮ ಪ್ರವಾಸವನ್ನು ಮೊದಲೇ ಕಾದಿರಿಸುವುದು ಉತ್ತಮ. 

ಮೈಸೂರು ತಲುಪುವುದು ಹೇಗೆ? ಮೈಸೂರು ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ ಮತ್ತು ವಾಯು, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಮೈಸೂರು ವಿಮಾನ ನಿಲ್ದಾಣವು ಬೆಂಗಳೂರು, ಚೆನ್ನೈ, ಕೊಚ್ಚಿ, ಬೆಳಗಾವಿ, ಗೋವಾ ಮುಂತಾದ ನಗರಗಳಿಂದ ವಿಮಾನ ಸೇವೆಯನ್ನು ಹೊಂದಿದೆ. ಮೈಸೂರಿಗೆ ಅತ್ಯುತ್ತಮ ರೈಲು ಮತ್ತು ರಸ್ತೆ ಸಂಪರ್ಕವಿದೆ. 

ವಸತಿ: ಮೈಸೂರು ನಗರವು ಎಲ್ಲಾ ಬಜೆಟ್ನಲ್ಲಿ  ಹಲವು ವಸತಿ ಗೃಹಗಳನ್ನು ಹೊಂದಿದೆ.