ಪಾಯಸ ಎಂಬುದು ದ್ರವರೂಪದ/ಅರೆ ಘನರೂಪದ ಸಿಹಿಭಕ್ಷ್ಯವಾಗಿದೆ. ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಪಾಯಸ ಭೋಜನದ ಅವಿಭಾಜ್ಯ ಅಂಗ. ಹೊಟ್ಟೆ ತುಂಬಾ ಊಟ ಮಾಡಿದ್ದರೂ ಒಂದು ಕಪ್ ರುಚಿಯಾದ ಪಾಯಸವನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ.
ಪಾಯಸದ ವಿಧಗಳು
ಕರ್ನಾಟಕದಲ್ಲಿ ಅನೇಕ ರೀತಿಯ ಪಾಯಸಗಳು ಜನಪ್ರಿಯವಾಗಿವೆ. ಪಾಯಸಕ್ಕೆ ಬಳಸುವ ಮುಖ್ಯ ವಸ್ತುವನ್ನು ಆದರಿಸಿ ಹೆಸರು ನೀಡಲಾಗುತ್ತದೆ. ಸಾಬ್ಬಕ್ಕಿ, ಶಾವಿಗೆ, ಅಕ್ಕಿ, ಬಾದಾಮ್, ಬೇಳೆಗಳಾದ ಹೆಸರು ಬೇಳೆ, ಕಡಲೆ ಬೇಳೆ, ತರಕಾರಿಗಳಲ್ಲಿ ಕ್ಯಾರೆಟ್, ಸೋರೆಕಾಯಿ, ಪಡುವಲಕಾಯಿ ,ಕಿತ್ತಳೆ, ಕುಂಬಳಕಾಯಿ, ಹಣ್ಣುಗಳಾದ ಮಾವು, ಬಾಳೆಹಣ್ಣು, ಹಲಸು ಇತ್ಯಾದಿಗಳನ್ನು ಬಳಸಿ ಪಾಯಸವನ್ನು ಮಾಡಬಹುದು.
ಪಾಯಸವನ್ನು ಹೇಗೆ ತಯಾರಿಸಲಾಗುತ್ತದೆ?
ಪಾಯಸಕ್ಕೆ ಬಳಸುವ ಮುಖ್ಯ ವಸ್ತು ( ಸಾಬಕ್ಕಿ /ಶಾವಿಗೆ ಇತ್ಯಾದಿ) ಅಲ್ಲದೆ ಹಾಲು, ತೆಂಗಿನ ಕಾಯಿ ಮತ್ತು ಸಿಹಿಗಾಗಿ ಸಕ್ಕರೆ / ಬೆಲ್ಲ ಪಾಯಸದ ಮುಖ್ಯ ಪದಾರ್ಥಗಳು. ಸಾಬ್ಬಕ್ಕಿ, ಶಾವಿಗೆ (ವರ್ಮಿಸೆಲ್ಲಿ) ಇತ್ಯಾದಿಯನ್ನು ಕೆಲವು ನಿಮಿಷಗಳ ಕಾಲ ತುಪ್ಪದಲ್ಲಿ ಹುರಿದ ನಂತರ ಬಿಸಿ ಹಾಲಿನಲ್ಲಿ ಬೇಯಿಸಲಾಗುತ್ತದೆ. ನಂತರ ಸಕ್ಕರೆ/ಬೆಲ್ಲವನ್ನು ಸೇರಿಸಲಾಗುತ್ತದೆ. ಪಾಯಸಕ್ಕೆ ಬಳಸಿದ ಮುಖ್ಯ ಪದಾರ್ಥವನ್ನು ಅವಲಂಬಿಸಿ ತಯಾರಿಸುವ ವಿಧಾನದಲ್ಲಿ ಸ್ವಲ್ಪ ವೆತ್ಯಾಸವಿರುತ್ತದೆ. ರುಚಿ ವರ್ಧಕಗಳಾದ ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ ಇತ್ಯಾದಿಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಪಾಯಸಕ್ಕೆ ಸೇರಿಸಬಹುದು.
ಪಾಯಸ ಎಲ್ಲಿ ಸಿಗುತ್ತದೆ??
ಹೆಚ್ಚಿನ ಉಪಹಾರ ಗೃಹಗಳಲ್ಲಿ ನೀಡಲಾಗುವ ತಟ್ಟೆ ಊಟದಲ್ಲಿ ಅಥವಾ ಬಫೆ ಊಟದಲ್ಲಿ ಸಾಮಾನ್ಯವಾಗಿ ಪಾಯಸ ಅವಿಭಾಜ್ಯ ಅಂಗವಾಗಿರುತ್ತದೆ. ಹೆಚ್ಚಿನ ಉಪಹಾರ ಗೃಹಗಳು ಪಾಯಸವನ್ನು ಪ್ರತ್ಯೇಕವಾಗಿ ಖರೀದಿಸಲೂ ಅವಕಾಶ ಮಾಡಿಕೊಡುತ್ತವೆ. ಪಾಯಸವನ್ನು ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದು.