Karnataka logo

Karnataka Tourism
GO UP
Dollu Kunitha

ಡೊಳ್ಳು ಕುಣಿತ

separator
  /  ಡೊಳ್ಳು ಕುಣಿತ

ಡೊಳ್ಳು ಕುಣಿತ ಕರ್ನಾಟಕದ ಸಾಂಪ್ರದಾಯಿಕ ನೃತ್ಯ ಪ್ರಕಾರವಾಗಿದೆ. ರಾಜ್ಯದಾದ್ಯಂತ ನಡೆಯುವ ಪ್ರಮುಖ ಹಬ್ಬಗಳು ಮತ್ತು ಆಚರಣೆಗಳಲ್ಲಿ ಡೊಳ್ಳು ಪ್ರದರ್ಶನ ಅವಿಭಾಜ್ಯ ಅಂಗವಾಗಿರುತ್ತದೆ.

ಇತಿಹಾಸ: ಪ್ರಮುಖ ದೇವರುಗಳಲ್ಲಿ ಒಬ್ಬನಾದ ಶಿವನ ಪ್ರಮುಖ ಪರಿಕರಗಳಲ್ಲಿ ಡೊಳ್ಳು ಒಂದಾಗಿದೆ. ಅಸಮಾಧಾನಗೊಂಡಾಗ ಅಥವಾ ಸಿಟ್ಟು ಬಂದಾಗ ಶಿವ ತನ್ನ ಉಗ್ರ ನೃತ್ಯಕ್ಕೆ (ಶಿವ ತಾಂಡವ) ಹೆಸರುವಾಸಿ. ಶಿವನು ತಾನು ಕೊಂದ ರಾಕ್ಷಸರ ಚರ್ಮದಿಂದ ಡೊಳ್ಳು ತಯಾರಿಸಿದ್ದಾನೆಂದು ನಂಬಲಾಗಿದೆ. ಕುರುಬ ಸಮುದಾಯದ ಜನರು ಶಿವದೇವರನ್ನು ಪ್ರಮುಖವಾಗಿ ಆರಾಧಿಸುತ್ತಾರೆ. ಶಿವನ ಮುಖ್ಯ ಭಕ್ತರು ಡೊಳ್ಳು‌ಗಳನ್ನು ಹೊಡೆದು ರಾಕ್ಷಸರ ಹತ್ಯೆಯನ್ನು ಸಂಭ್ರಮಿಸುತ್ತಾರೆ.

ತಂಡ: ಡೊಳ್ಳು ಕುಣಿತವನ್ನು 10-12 ಕುಣಿತಗಾರರ  ಗುಂಪಿನಲ್ಲಿ ನಡೆಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಡೊಳ್ಳು ಕುಣಿತ ತಂಡದಲ್ಲಿ ಸೇರಬಹುದು. ಸಾಂಪ್ರದಾಯಿಕ ಡೊಳ್ಳುಗಳು ಸಾಕಷ್ಟು ಭಾರವಾಗಿದ್ದು ಅವುಗಳನ್ನು ಹೊತ್ತು ದೀರ್ಘ ಸಮಯ ಕುಣಿಯಲು ಸಾಕಷ್ಟು ದೈಹಿಕ ಶಕ್ತಿ ಬೇಕಾಗುತ್ತದೆ. ಈ ಕಾರಣಕ್ಕಾಗಿ ಸಧೃಡ ಪುರುಷರಷ್ಟೇ ಸಾಮಾನ್ಯವಾಗಿ ಡೊಳ್ಳು ಕುಣಿತ ನಡೆಸುತ್ತಿದ್ದರು. ಇತ್ತೀಚಿಗೆ ಹಗುರವಾದ, ಸಣ್ಣ ಗಾತ್ರದ ಡೊಳ್ಳುಗಳೂ ಲಭ್ಯವಿದ್ದು ಎಲ್ಲರೂ ಬಳಸಬಹುದಾಗಿದೆ.

ಕುಣಿತ: ಸಾಕಷ್ಟು ಶಬ್ದ ಮಾಡುವ ಡೊಳ್ಳು ಕುಣಿತವು ಸುತ್ತ ಮುತ್ತ ಇರುವವರ ಗಮನಕ್ಕೆ ಬರದೇ ಇರುವುದು ಸಾಧ್ಯವೇ ಇಲ್ಲ. ಕುಣಿತಗಾರರು ವೃತ್ತಾಕಾರವಾಗಿ ಅಥವಾ ಅರೆ ವೃತ್ತಾಕಾರವಾಗಿ ಸೇರಿ ಡೊಳ್ಳು ಕುಣಿತವನ್ನು ನಡೆಸಿಕೊಡುತ್ತಾರೆ.  ಡೊಳ್ಳು ಬಾರಿಸುವುದರ ಜೊತೆಗೆ ಇತರ ವಾದ್ಯಗಳು, ಸಂಗೀತ/ಹಾಡು ಜೊತೆಗಿರುತ್ತದೆ. ಹಲವೊಮ್ಮೆ ಕುಣಿತಗಾರರೊಂದಿಗೆ ಸಾರ್ವಜನಿಕರೂ ಸೇರಿಕೊಳ್ಳುತ್ತಾರೆ.

ಡೊಳ್ಳು ಕುಣಿತವನ್ನುಎಲ್ಲಿ ನೋಡಬಹುದು?

ಡೊಳ್ಳು ಕುಣಿತ ಕರ್ನಾಟಕದ ವಿವಿಧ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಕರಗಾ ಹಬ್ಬದ ಮೆರವಣಿಗೆ, ಮೈಸೂರು ದಸರಾ ಜಂಬು ಸವಾರಿ, ಬೆಂಗಳೂರು ಹಬ್ಬ, ವಿವಿಧ ದೇವಾಲಯದ ರಥ ಉತ್ಸವಗಳಲ್ಲಿ ಹೆಚ್ಚಾಗಿ ಡೊಳ್ಳು ಕುಣಿತ ಪ್ರದರ್ಶನವನ್ನು ನೋಡಬಹುದಾಗಿದೆ.