ಆಗಸ್ಟ್ 2025

ಸ್ಕಂದಗಿರಿ ಚಾರಣ

ಸ್ಕಂದಗಿರಿ ಬೆಟ್ಟಗಳು

‘ಕಲಾವರ ದುರ್ಗ’ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಟ್ಟಗಳು, ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಹೆಸರುವಾಸಿಯಾಗಿವೆ. ಬೆಟ್ಟದ ತುದಿಯಲ್ಲಿ 18ನೇ ಶತಮಾನದ ಟಿಪ್ಪು ಸುಲ್ತಾನ್ ಕಾಲದ ಕೋಟೆಯ ಅವಶೇಷಗಳನ್ನು ಕಾಣಬಹುದು, ಇದು ಈ ತಾಣದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ತೇಲುವ ಮೋಗಳ ನಡುವೆ ಮೂಡಿಬರುವ ಸೂರ್ಯನನ್ನು ಕಣ್ತುಂಬಿಕೊಳ್ಳಲು ಅಥವಾ ಸಂಜೆಯ ಸೂರ್ಯಾಸ್ತದ ಸೊಬಗನ್ನು ಸವಿಯಲು ಬೆಟ್ಟವನ್ನೇರುವುದು ಅವಿಸ್ಮರಣೀಯ ಅನುಭವ.

ಮಧ್ಯಮದಿಂದ ಕಠಿಣ ಹಂತದವರೆಗಿನ ಈ ಚಾರಣವು ಹವ್ಯಾಸಿ ಹಾಗೂ ನುರಿತ ಚಾರಣಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಿಶೇಷವಾಗಿ ಇಲ್ಲಿನ ‘ರಾತ್ರಿ ಚಾರಣ’ (Night Trek) ಸಾಹಸ ಪ್ರಿಯರಿಗೆ ರೋಮಾಂಚಕ ಅನುಭವ ನೀಡುತ್ತದೆ. ಕಡಿದಾದ ಹಾದಿಗಳು, ಏರುಪೇರುಗಳು ಮತ್ತು ಬಂಡೆಗಳನ್ನು ದಾಟಿಕೊಂಡು ಹೋಗುವುದು ನಿಜಕ್ಕೂ ಒಂದು ಸಾಹಸಮಯ ಯಾನ.

Skandagiri Hills

ಚಾರಣದ ಅನುಭವ

ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಚಾರಣ ತಾಣಗಳಲ್ಲಿ ಸ್ಕಂದಗಿರಿ ಒಂದಾಗಿದೆ. ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ಮೋಡಗಳ ದೃಶ್ಯ ಇಲ್ಲಿನ ವಿಶೇಷ. ರಾತ್ರಿ ಚಾರಣವು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಹಕರಿಗೆ (Photographers) ಸ್ವರ್ಗವಿದ್ದಂತೆ. ದಟ್ಟವಾದ ಕಾಡು ಮತ್ತು ಹಚ್ಚ ಹಸಿರಿನ ಹಾದಿಯ ಮೂಲಕ ಸಾಗುತ್ತಾ ಬೆಟ್ಟದ ತುದಿ ತಲುಪಬೇಕು. ಸ್ಕಂದಗಿರಿಯು ಸಮುದ್ರ ಮಟ್ಟದಿಂದ ಸುಮಾರು 1350 ಮೀಟರ್ ಎತ್ತರದಲ್ಲಿದ್ದು, ಇಲ್ಲಿಂದ ನಂದಿ ಬೆಟ್ಟ ಮತ್ತು ಮುದ್ದೇನಹಳ್ಳಿಯ ಸುಂದರ ದೃಶ್ಯವನ್ನು ವೀಕ್ಷಿಸಬಹುದು.

ಸುಮಾರು 8 ಕಿ.ಮೀ ದೂರದ ಈ ಚಾರಣವನ್ನು ಪೂರ್ಣಗೊಳಿಸಲು 6 ರಿಂದ 8 ಗಂಟೆಗಳ ಸಮಯ ಬೇಕಾಗುತ್ತದೆ. ಬೆಟ್ಟದ ಮೇಲಿರುವ ಕೋಟೆಯ ಅವಶೇಷಗಳು ಮತ್ತು ಶಿವನ ದೇವಾಲಯವು ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ. ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಸ್ಕಂದಗಿರಿಯು ತನ್ನ ಸೂರ್ಯೋದಯದ ದೃಶ್ಯಕ್ಕೆ ಬಹಳ ಪ್ರಸಿದ್ಧವಾಗಿದೆ. ಕಠಿಣವಾದ ಚಾರಣದ ನಂತರ ಕಾಣಸಿಗುವ ಆ ಸುಂದರ ಸೂರ್ಯೋದಯವು ನಿಮ್ಮೆಲ್ಲಾ ಆಯಾಸವನ್ನು ಮರೆಸುತ್ತದೆ.

Kalavara Durga

ಇತಿಹಾಸದ ಪುಟಗಳಲ್ಲಿ ಸ್ಕಂದಗಿರಿ

ಐತಿಹಾಸಿಕವಾಗಿ ಈ ಸ್ಕಂದಗಿರಿಯ ಕೋಟೆಯನ್ನು ‘ಕಲ್ವಾರ್ ಬೆಟ್ಟ’ ಅಥವಾ ‘ಕಲಾವರ ದುರ್ಗ’ ಎಂದು ಕರೆಯಲಾಗುತ್ತದೆ. ಟಿಪ್ಪು ಸುಲ್ತಾನ್ ಇದನ್ನು ನಿರ್ಮಿಸಿದನು. 1791ರ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಈ ಕೋಟೆಯು ಪಾಳುಬಿದ್ದಿತು. ಆದರೂ, ಕಾಲ ಸರಿದಂತೆ ಈ ತಾಣದ ಸೌಂದರ್ಯ ಮತ್ತು ಆಕರ್ಷಣೆ ಹೆಚ್ಚಾಗಿದೆಯೇ ವಿನಹ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಇದು ಬೆಂಗಳೂರಿನ ಸಮೀಪವಿರುವ ಅತ್ಯಂತ ಜನಪ್ರಿಯ ‘ಸನ್‌ರೈಸ್ ಟ್ರೆಕ್’ (Sunrise Trek) ತಾಣವಾಗಿ ಮಾರ್ಪಟ್ಟಿದೆ.

ಭೇಟಿ ನೀಡಲು ಉತ್ತಮ ಸಮಯ

Skandagiri Trek

ಸ್ಕಂದಗಿರಿಯು ಸೂರ್ಯೋದಯ ಚಾರಣಕ್ಕೆ ಪ್ರಸಿದ್ಧವಾಗಿದ್ದು, ವರ್ಷವಿಡೀ ಇಲ್ಲಿಗೆ ಭೇಟಿ ನೀಡಬಹುದು.

ಮಳೆಗಾಲ: ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಹೆಚ್ಚಾಗಿದ್ದರೂ, ಬಂಡೆಗಳು ಜಾರುವುದರಿಂದ ಚಾರಣ ಮಾಡುವುದು ಅಪಾಯಕಾರಿ ಮತ್ತು ಸವಾಲಿನದ್ದಾಗಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಎಚ್ಚರ ವಹಿಸುವುದು ಅಥವಾ ಭೇಟಿ ತಪ್ಪಿಸುವುದು ಒಳ್ಳೆಯದು.

ಚಳಿಗಾಲ: ನೀವು ರಾತ್ರಿ ಚಾರಣ ಮಾಡಲು ಇಚ್ಛಿಸದಿದ್ದರೆ, ಹಗಲಿನಲ್ಲಿ ಚಾರಣ ಮಾಡಲು ಚಳಿಗಾಲ ಅತ್ಯುತ್ತಮ ಸಮಯ.

ಬೇಸಿಗೆ: ಬೇಸಿಗೆಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಹಗಲಿನ ಚಾರಣ ಕಷ್ಟವಾಗಬಹುದು.

ತಲುಪುವುದು ಹೇಗೆ?

Trekking point

ಸ್ಕಂದಗಿರಿಯು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಸ್ವಂತ ವಾಹನದಲ್ಲಿ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ತಲುಪಬಹುದು. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭವಾಗುವ ಸ್ಥಳವಾದ ‘ಕಲಾವರ ಹಳ್ಳಿ’ಗೆ ತಲುಪಬೇಕು. ಬೆಂಗಳೂರು ನಗರವು ವಿಮಾನ, ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ತ್ವರಿತ ಮಾಹಿತಿ :

ಸ್ವಚ್ಛತೆ: ದಯವಿಟ್ಟು ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಪರಿಸರವನ್ನು ಕಾಪಾಡಿ.

ಚಾರಣದ ಕಠಿಣತೆ: ಮಧ್ಯಮ.

ಪಾದರಕ್ಷೆ: ಸೂಕ್ತವಾದ ಟ್ರೆಕ್ಕಿಂಗ್ ಶೂಗಳನ್ನೇ ಧರಿಸಿ.

ಚಾರಣದ ದೂರ: ಸುಮಾರು 8 ಕಿ.ಮೀ.

ಆಹಾರ/ನೀರು: ಚಾರಣದ ಸಮಯದಲ್ಲಿ ಸಾಕಷ್ಟು ನೀರು ಮತ್ತು ಸ್ನ್ಯಾಕ್ಸ್/ಲಘು ಉಪಹಾರ ಜೊತೆಯಲ್ಲಿರಲಿ.

ಬೆಳಕು: ರಾತ್ರಿ ಚಾರಣಕ್ಕೆ ಹೆಡ್‌ಲ್ಯಾಂಪ್ ಅಥವಾ ಟಾರ್ಚ್ ಕಡ್ಡಾಯ.

Skandagiri Trek | Kalavara Durga | Karnataka Tourism