ರಾಷ್ಟ್ರೀಯ ಪೊಲೀಸ್ ಸ್ಮಾರಕ
ರಾಷ್ಟ್ರೀಯ ಪೊಲೀಸ್ ಸ್ಮಾರಕವು ಭಾರತದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದೆ. ಕರ್ತವ್ಯ ನಿರ್ವಹಣೆಯ ವೇಳೆ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀರ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲು ಇದನ್ನು ನಿರ್ಮಿಸಲಾಗಿದೆ. ಈ ಸ್ಮಾರಕವು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರು ತೋರುವ ಶೌರ್ಯ, ಸಮರ್ಪಣೆ ಮತ್ತು ಬದ್ಧತೆಯ ಮೂಕ ಸಾಕ್ಷಿಯಾಗಿದೆ.
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಈ ಸ್ಮಾರಕವನ್ನು, 2018ರ ಅಕ್ಟೋಬರ್ 21ರಂದು ‘ಪೊಲೀಸ್ ಹುತಾತ್ಮರ ದಿನ’ದ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತದ ನಾಗರಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಮತ್ತು ಗೌರವ ಸೂಚಿಸುವ ಸಂಕೇತವಾಗಿ ಇದು ತಲೆ ಎತ್ತಿ ನಿಂತಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಈ ಸ್ಮಾರಕದ ವಿನ್ಯಾಸವು ಅತ್ಯಂತ ಆಕರ್ಷಕ ಮತ್ತು ಭಾವನಾತ್ಮಕವಾಗಿದೆ. ಇದು 30 ಅಡಿ ಎತ್ತರದ ಕಪ್ಪು ಗ್ರಾನೈಟ್ ಶಿಲೆಯನ್ನು ಹೊಂದಿದ್ದು, ಪೊಲೀಸ್ ಪಡೆಯ ಶಕ್ತಿ, ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಈ ಶಿಲೆಯು ಧೈರ್ಯದ ಸಂಕೇತವಾದ ಲಾಂಛನವನ್ನು ಹೊಂದಿದ್ದು, ಶಾಶ್ವತತೆ ಮತ್ತು ನಿರಂತರತೆಯನ್ನು ಸೂಚಿಸುವ ವೃತ್ತಾಕಾರದ ರಚನೆಯಿಂದ ಆವೃತವಾಗಿದೆ.
ಕರ್ತವ್ಯದ ಹಾದಿಯಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿಯ ಹೆಸರುಗಳನ್ನು ಈ ವೃತ್ತಾಕಾರದ ರಚನೆಯಲ್ಲಿರುವ ಗ್ರಾನೈಟ್ ಫಲಕಗಳ ಮೇಲೆ (Wall of Valour) ಕೆತ್ತಲಾಗಿದೆ. ಇಲ್ಲಿರುವ ವಸ್ತುಸಂಗ್ರಹಾಲಯವು (Museum) ಭಾರತೀಯ ಪೊಲೀಸ್ ಪಡೆಯ ಇತಿಹಾಸ, ಸಾಧನೆಗಳು ಮತ್ತು ತ್ಯಾಗದ ಕಥೆಗಳನ್ನು ಪ್ರದರ್ಶಿಸುತ್ತದೆ.
ಗೌರವ ಮತ್ತು ಸ್ಮರಣೆ
ರಾಷ್ಟ್ರೀಯ ಪೊಲೀಸ್ ಸ್ಮಾರಕವು ಹುತಾತ್ಮರ ಕುಟುಂಬಗಳಿಗೆ ಮತ್ತು ಸಾರ್ವಜನಿಕರಿಗೆ ಒಂದು ಪವಿತ್ರ ಸ್ಥಳವಾಗಿದೆ. ಇದು ಧೀರ ಪೊಲೀಸರ ತ್ಯಾಗ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಎದುರಿಸುವ ಸವಾಲುಗಳನ್ನು ನೆನಪಿಸುತ್ತದೆ. ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಗುರುತಿಸುವ ಮತ್ತು ಗೌರವಿಸುವ ಮಹತ್ವವನ್ನು ಈ ಸ್ಮಾರಕ ಸಾರುತ್ತದೆ. ನ್ಯಾಯ ಮತ್ತು ರಕ್ಷಣೆಗಾಗಿ ಬದುಕು ಸವೆಸುವವರಿಗೆ ಇದು ಕೃತಜ್ಞತೆಯ ಸಂಕೇತವಾಗಿದೆ.
ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ: ನಿಮ್ಮ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ 36,000ಕ್ಕೂ ಹೆಚ್ಚು ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ – https://nationalpolicememorial.gov.in/npm/