
ಕಬ್ಬನ್ ಪಾರ್ಕ್ ಫ್ಲವರ್ ಶೋ – ಬಣ್ಣಗಳ ಲೋಕಕ್ಕೆ ಇಂದೇ ಭೇಟಿ ನೀಡಿ!
ನವೆಂಬರ್ ೨೭ ರಿಂದ ಕಣ್ಮನ ಸೆಳೆಯುತ್ತಿರುವ ಈ ಪುಷ್ಪ ಪ್ರದರ್ಶನ ಡಿಸೆಂಬರ್ ೭ ರಂದು ಮುಕ್ತಾಯವಾಗಲಿದೆ. ಹೂವಿನ ಲೋಕದ ಟಿಕೆಟ್ ದರ ಮತ್ತು ಪ್ರಮುಖ ಆಕರ್ಷಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬನ್ನಿ, ಹೂವಿನ ಲೋಕದ ಮಾಯಾಜಾಲಕ್ಕೆ ಹೆಜ್ಜೆ ಇಡಿ!
ಕಬ್ಬನ್ ಪಾರ್ಕ್‌ನ ವರ್ಣರಂಜಿತ ಪ್ರಪಂಚಕ್ಕೆ ಸುಸ್ವಾಗತ
ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನ ಈಗ ವೈಭವದಿಂದ ನಡೆಯುತ್ತಿದೆ. ನವೆಂಬರ್ ೨೭ ರಂದು ಆರಂಭವಾದ ಈ ಹೂವಿನ ಹಬ್ಬ, ಡಿಸೆಂಬರ್ ೭ ರಂದು ಮುಕ್ತಾಯವಾಗಲಿದೆ.

ಲಾಲ್ಬಾಗ್ನ ಜನದಟ್ಟಣೆಗೆ ಪರ್ಯಾಯವಾಗಿ, ತೋಟಗಾರಿಕೆ ಇಲಾಖೆಯು ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಬ್ಬನ್ ಪಾರ್ಕ್‌ನಲ್ಲಿ ಇಷ್ಟೊಂದು ಬೃಹತ್ ಮಟ್ಟದ ಪ್ರದರ್ಶನವನ್ನು ಆಯೋಜಿಸಿದೆ.
ಕಣ್ಮನ ಸೆಳೆಯುವ ಪ್ರಮುಖ ಆಕರ್ಷಣೆಗಳು
ಈ ಪ್ರದರ್ಶನವು ಬ್ಯಾಂಡ್ ಸ್ಟ್ಯಾಂಡ್‌ನಿಂದ ಬಾಲ ಭವನದ ದ್ವಾರದವರೆಗೆ ವ್ಯಾಪಿಸಿದೆ. ಲಾಲ್ಬಾಗ್ನಂತೆ ಗಾಜಿನ ಮನೆಯಲ್ಲಿರದೆ, ಮರಗಳ ತಂಪಾದ ನೆರಳಿನಲ್ಲಿ, ತೆರೆದ ಪರಿಸರದಲ್ಲಿ ಈ ಹೂವಿನ ವಿನ್ಯಾಸಗಳನ್ನು ರೂಪಿಸಿರುವುದು ಇಲ್ಲಿನ ವಿಶೇಷ.

ಮಕ್ಕಳ ದಿನಾಚರಣೆ ಮತ್ತು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ, ಆಯೋಜಕರು ಬರೋಬ್ಬರಿ ೩೫,೦೦೦ ಕ್ಕೂ ಹೆಚ್ಚು ಹೂವಿನ ಮಡಿಕೆಗಳನ್ನು ಬಳಸಿ ಅಲಂಕಾರ ಮಾಡಿದ್ದಾರೆ. ಇಲ್ಲಿ ನೀವು ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳೆಂದರೆ:
- ತರಕಾರಿ ಕಲಾಕೃತಿಗಳು: ಬಗೆಬಗೆಯ ತರಕಾರಿಗಳಿಂದ ನಿರ್ಮಿಸಲಾದ ಬೃಹತ್ ಆನೆಯ ಪ್ರತಿಮೆ ಇಲ್ಲಿನ ಹೈಲೈಟ್.
- ಹೂವಿನ ರಥ: ಸಾವಿರಾರು ಸೇವಂತಿಗೆ ಮತ್ತು ಗುಲಾಬಿ ಹೂಗಳನ್ನು ಬಳಸಿ, ಹಂಪಿಯ ಕಲ್ಲಿನ ರಥದ ಮಾದರಿಯನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಇದು ನೋಡುಗರಿಗೆ ದೃಶ್ಯಕಾವ್ಯದಂತಿದೆ.
- ಚಿತ್ರಕಲಾ ಪ್ರದರ್ಶನ: “ಪ್ರಕೃತಿಯ ಸೌಂದರ್ಯದ ಜೊತೆಗೆ ಚಿತ್ರಕಲೆಯನ್ನೂ ಮೇಳೈಸುವ ಕಲಾ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗಿದೆ.


ಭೇಟಿ ನೀಡುವ ಸಮಯ ಮತ್ತು ಟಿಕೆಟ್ ವಿವರಗಳು:
ಈ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು, ಪ್ರವೇಶಕ್ಕೆ ಟಿಕೆಟ್ ಕಡ್ಡಾಯವಾಗಿದ್ದರೂ, ದರಗಳು ಎಲ್ಲರಿಗೂ ಅನುಕೂಲವಾಗುವಂತೆ ಮಿತವಾಗಿವೆ.
ಟಿಕೆಟ್‌ಗಳು ಪ್ರವೇಶ ದ್ವಾರಗಳಲ್ಲಿ ಲಭ್ಯವಿರುತ್ತವೆ. ಯುಪಿಐ ಮತ್ತು ನಗದು ಪಾವತಿ ಸೌಲಭ್ಯವಿದ್ದರೂ, ನೆಟ್‌ವರ್ಕ್ ಸಮಸ್ಯೆಯನ್ನು ತಪ್ಪಿಸಲು ಕೈಯಲ್ಲಿ ನಗದು ಇಟ್ಟುಕೊಳ್ಳುವುದು ಉತ್ತಮ.

- ದಿನಾಂಕ: ನವೆಂಬರ್ ೨೭ ರಿಂದ ಡಿಸೆಂಬರ್ ೭,೨೦೨೫ ರವರೆಗೆ.
- ವೀಕ್ಷಣೆ ಸಮಯ: ಬೆಳಿಗ್ಗೆ ೬ ರಿಂದ ಸಂಜೆ ೭ ಗಂಟೆಯವರೆಗೆ.
- ಟಿಕೆಟ್ ದರ: ಹಿರಿಯರಿಗೆ ₹೩೦ ಹಾಗೂ ಮಕ್ಕಳಿಗೆ ₹೧೦ ಮಾತ್ರ.
ಕಬ್ಬನ್ ಪಾರ್ಕ್‌ಗೆ ಹೋಗುವುದು ಹೇಗೆ?
- ನಮ್ಮ ಮೆಟ್ರೋ (ಅತ್ಯುತ್ತಮ ಆಯ್ಕೆ): ಅತ್ಯಂತ ಸುಲಭವಾದ ದಾರಿ ಎಂದರೆ ‘ನಮ್ಮ ಮೆಟ್ರೋ’. ನೇರಳೆ ಮಾರ್ಗವನ್ನು (ಪರ್ಪಲ್ ಲೈನ್) ಮೂಲಕ ಬಂದು ಕಬ್ಬನ್ ಪಾರ್ಕ್ ಸ್ಟೇಷನ್ ನಲ್ಲಿ ಇಳಿದುಕೊಳ್ಳಿ. ಮೆಟ್ರೋ ನಿಲ್ದಾಣದಿಂದ ಹೊರಬಂದರೆ ಸಾಕು, ಹೂವಿನ ಪ್ರದರ್ಶನಕ್ಕೆ ಕೆಲವೇ ಹೆಜ್ಜೆಗಳ ಅಂತರ.
- ಪಾರ್ಕಿಂಗ್ ವ್ಯವಸ್ಥೆ: ಕಬ್ಬನ್ ಪಾರ್ಕ್ ಒಳಗೆ ವಾಹನಗಳಿಗೆ ಪ್ರವೇಶವಿಲ್ಲ. ನೀವು ಸ್ವಂತ ವಾಹನದಲ್ಲಿ ಬರುವುದಾದರೆ, ಕಂಠೀರವ ಸ್ಟೇಡಿಯಂನಲ್ಲಿ ವಾಹನ ನಿಲ್ಲಿಸಿ, ಅಲ್ಲಿಂದ ಬಾಲ ಭವನ ಗೇಟ್‌ಗೆ ಸುಮಾರು ೧೦ ನಿಮಿಷಗಳ ಕಾಲ ನಡೆದು ಬರಬೇಕಾಗುತ್ತದೆ.
- ಪ್ರವೇಶ ದ್ವಾರಗಳು: ಹೂವಿನ ಪ್ರದರ್ಶನವನ್ನು ನೇರವಾಗಿ ತಲುಪಲು ‘ಬಾಲ ಭವನ ಗೇಟ್’ ಅಥವಾ ‘ಹೈಕೋರ್ಟ್ ಗೇಟ್’ ಮೂಲಕ ಬರುವುದು ಉತ್ತಮ
ಗಮನಿಸಿ: ವಾರಾಂತ್ಯದ ಕಾರಣ ಆಗಿರುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಿರಲಿದೆ. ಹಾಗಾಗಿ ಈ ಕೆಳಗಿನ ಮಾರ್ಗಗಳನ್ನು ಬಳಸುವುದು ಸೂಕ್ತ.
ಭೇಟಿ ನೀಡುವುದು ಸೂಕ್ತವೇ?
- ನಿಮಗೆ ಛಾಯಾಗ್ರಹಣ (ಫೋಟೋಗ್ರಫಿ) ಅಥವಾ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ, ಖಂಡಿತ ಭೇಟಿ ನೀಡಿ. ಕಬ್ಬನ್ ಪಾರ್ಕ್ ಅನ್ನು ಈ ರೀತಿಯ ವಿಶೇಷ ಅಲಂಕಾರದಲ್ಲಿ ನೋಡುವುದು ಒಂದು ಅಪರೂಪದ ಅವಕಾಶ.
- ಲಾಲ್ಬಾಗ್ ಪ್ರದರ್ಶನಕ್ಕೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇಲ್ಲಿ ಮರಗಳ ದಟ್ಟಣೆ ಹೆಚ್ಚಿರುವುದರಿಂದ ಬಿಸಿಲಿನ ತಾಪ ತಟ್ಟುವುದಿಲ್ಲ. ಮಧ್ಯಾಹ್ನದ ಹೊತ್ತಿನಲ್ಲೂ ಇಲ್ಲಿ ಹಿತವಾದ ನಡಿಗೆಯನ್ನು ಆನಂದಿಸಬಹುದು.
- ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಬೆಳಿಗ್ಗೆ ೬ ಗಂಟೆ. ಗೇಟ್ ತೆರೆದ ತಕ್ಷಣ ಹೋದರೆ ಜನಜಂಗುಳಿ ಕಡಿಮೆ ಇರುತ್ತದೆ ಮತ್ತು ಫೋಟೋಗಳನ್ನು ತೆಗೆಯಲು ಅದ್ಭುತವಾದ ಸಮಯ.
ಸುಗಮ ಭೇಟಿಗಾಗಿ ಕೆಲವು ತ್ವರಿತ ಸಲಹೆಗಳು:
- ಕಲಾಕೃತಿಗಳನ್ನು ಮುಟ್ಟಬೇಡಿ : ತರಕಾರಿ ಮತ್ತು ಹೂವಿನ ಶಿಲ್ಪಗಳು ಬಹಳ ನಾಜೂಕಾಗಿರುತ್ತವೆ. ಭದ್ರತೆ ಕಟ್ಟುನಿಟ್ಟಾಗಿದ್ದು, ಹೂವು ಕೀಳಲು ಅಥವಾ ಬ್ಯಾರಿಕೇಡ್ ದಾಟಲು ಹೋದರೆ ದಂಡ ವಿಧಿಸಲಾಗುತ್ತದೆ.
- ಜನದಟ್ಟಣೆ ತಪ್ಪಿಸಿ: ಬೆಳಿಗ್ಗೆ ೧೦ ಗಂಟೆಯ ನಂತರ ಜನಸಂದಣಿ ಹೆಚ್ಚಾಗುತ್ತದೆ. ಶಾಂತಿಯುತವಾಗಿ ಪ್ರದರ್ಶನ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಬೆಳಿಗ್ಗೆ ೬ ರಿಂದ ೮ ರೊಳಗೆ ಬರುವುದು ಉತ್ತಮ.
- ನಗದು ಕೈಯಲ್ಲಿರಲಿ: ಜನಜಂಗುಳಿಯಿಂದಾಗಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಬಹುದು ಮತ್ತು ಯುಪಿಐ ಕೆಲಸ ಮಾಡದೆ ಇರಬಹುದು. ಹಾಗಾಗಿ ಟಿಕೆಟ್‌ಗಾಗಿ ₹೩೦/₹೧೦ ಹಣವನ್ನು ಇಟ್ಟುಕೊಳ್ಳಿ.
- ಪ್ಲಾಸ್ಟಿಕ್ ನಿಷೇಧವಿದೆ: ಕಬ್ಬನ್ ಪಾರ್ಕ್ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಲಯ.
- ಮಕ್ಕಳ ಬಗ್ಗೆ ಎಚ್ಚರವಿರಲಿ: ಜನಸಾಗರವೇ ಇರುವುದರಿಂದ ಮಕ್ಕಳನ್ನು ಯಾವಾಗಲೂ ನಿಮ್ಮ ಕಣ್ಣಳತೆಯಲ್ಲೇ ಇಟ್ಟುಕೊಳ್ಳಿ. ಸುರಕ್ಷತೆಯ ದೃಷ್ಟಿಯಿಂದ, ನಿಮ್ಮ ಫೋನ್ ನಂಬರ್ ಬರೆದ ಚೀಟಿಯನ್ನು ಮಕ್ಕಳ ಜೇಬಿನಲ್ಲಿಡಿ.
ಬೆಂಗಳೂರಿಗೆ ಸ್ವಾಗತ! ನಮ್ಮ ಉದ್ಯಾನನಗರಿ ಈಗ ಹೂವಿನ ಸ್ವರ್ಗವಾಗಿ ಬದಲಾಗಿದ್ದು, ನಿಮಗಾಗಿ ಕಾಯುತ್ತಿದೆ.

