ಇಂಗ್ಲೆಂಡ್ನ ವಿಂಡ್ಸರ್ ಕ್ಯಾಸಲ್ (Windsor Castle) ಮಾದರಿಯಲ್ಲಿ ನಿರ್ಮಿಸಲಾದ ಬೆಂಗಳೂರು ಅರಮನೆಯು ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಕೋಟೆಯಂತಹ ಗೋಪುರಗಳು, ಕಮಾನುಗಳು ಮತ್ತು ಸುಂದರವಾದ ಕೆತ್ತನೆಗಳು ಈ ಕಟ್ಟಡದ ರಾಜಗಾಂಭೀರ್ಯವನ್ನು ಹೆಚ್ಚಿಸಿವೆ. ಮೈಸೂರು ಮಹಾರಾಜರ ವೈಭವವನ್ನು ನೆನಪಿಸುವ ಈ ಅರಮನೆಯ ಒಳಾಂಗಣದಲ್ಲಿ ಹಿಂದಿನ ಕಾಲದ ವೈಸರಾಯ್ಗಳು, ಮಹಾರಾಜರು ಮತ್ತು ಗಣ್ಯರ ಅಪರೂಪದ ಛಾಯಾಚಿತ್ರಗಳು ಹಾಗೂ ವರ್ಣಚಿತ್ರಗಳನ್ನು ಕಾಣಬಹುದು.
ಅರಮನೆಯ ಆವರಣದಲ್ಲಿರುವ ವಿಶಾಲವಾದ ತೆರೆದ ಅಂಗಳವು ಸಂಗೀತ ಕಚೇರಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಜೊತೆಗೆ, ಇಲ್ಲಿರುವ ‘ಫನ್ ವರ್ಲ್ಡ್’ (Fun World) ಮನರಂಜನಾ ಪಾರ್ಕ್ ಮಕ್ಕಳ ಮೆಚ್ಚಿನ ತಾಣವಾಗಿದೆ.
ಬೆಂಗಳೂರು ಅರಮನೆಯ ಮುಖ್ಯಾಂಶಗಳು
- ವಿಶಾಲ ಆವರಣ: ಒಟ್ಟು 454 ಎಕರೆ ಪ್ರದೇಶದಲ್ಲಿ ಅರಮನೆಯ ಆವರಣವಿದ್ದು, ಮುಖ್ಯ ಕಟ್ಟಡವು ಸುಮಾರು 1 ಎಕರೆ (45,000 ಚದರ ಅಡಿ) ವಿಸ್ತೀರ್ಣದಲ್ಲಿದೆ.
- ಒಳಾಂಗಣ ವಿನ್ಯಾಸ: ಅರಮನೆಯ ಒಳಗೆ 34 ಮಲಗುವ ಕೋಣೆಗಳು ಮತ್ತು ಒಂದು ಸುಂದರವಾದ ಈಜುಕೊಳವಿದೆ.
- ಕಲಾಶ್ರೀಮಂತಿಕೆ: ಮರದ ಸೂಕ್ಷ್ಮ ಕೆತ್ತನೆಗಳು, ಸುಂದರವಾದ ಪೇಂಟಿಂಗ್ಗಳು ಮತ್ತು ವಿದೇಶದಿಂದ ತರಿಸಲಾದ ಪುರಾತನ ಕಲಾಕೃತಿಗಳು ಇಲ್ಲಿನ ವಿಶೇಷ.
- ಹಸಿರು ಸೌಂದರ್ಯ: ಅರಮನೆಯ ಹೊರಗೋಡೆಗಳ ಮೇಲೆ ಹಬ್ಬಿರುವ ಹಸಿರು ಬಳ್ಳಿಗಳು ಕಟ್ಟಡದ ಅಂದವನ್ನು ಇಮ್ಮಡಿಗೊಳಿಸಿವೆ.
ಪ್ರವಾಸಿಗರಿಗೆ ಮಾಹಿತಿ;
ಭೇಟಿ ನೀಡುವ ಸಮಯ:
ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ.
ಗಮನಿಸಿ: ಅರಮನೆಯಲ್ಲಿ ಖಾಸಗಿ ಸಮಾರಂಭಗಳು ಅಥವಾ ಮದುವೆಗಳು ನಡೆಯುವ ದಿನಗಳಂದು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.
ಹತ್ತಿರದ ಪ್ರವಾಸಿ ತಾಣಗಳು:
ಅರಮನೆಗೆ ಭೇಟಿ ನೀಡಿದ ನಂತರ, ನೀವು ಹತ್ತಿರದಲ್ಲಿರುವ ಕಬ್ಬನ್ ಪಾರ್ಕ್ (4.5 ಕಿ.ಮೀ) ಮತ್ತು ಸ್ಯಾಂಕಿ ಟ್ಯಾಂಕ್ (3.8 ಕಿ.ಮೀ) ಕೆರೆಗೂ ಭೇಟಿ ನೀಡಬಹುದು.
ತಲುಪುವುದು ಹೇಗೆ?
ಬೆಂಗಳೂರು ಅರಮನೆಯು ನಗರದ ಎಲ್ಲಾ ಭಾಗಗಳಿಂದ ಉತ್ತಮ ಸಂಪರ್ಕ ಹೊಂದಿದೆ
ಮೆಜೆಸ್ಟಿಕ್ನಿಂದ (City Centre): ಕೇವಲ 5.3 ಕಿ.ಮೀ ದೂರದಲ್ಲಿದೆ.
ವಿಮಾನ ನಿಲ್ದಾಣದಿಂದ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 33 ಕಿ.ಮೀ.
ರೈಲು ನಿಲ್ದಾಣ: ಹತ್ತಿರದ ನಿಲ್ದಾಣ ‘ಬೆಂಗಳೂರು ಕಂಟೋನ್ಮೆಂಟ್’ (3 ಕಿ.ಮೀ).
ಮೆಟ್ರೋ: ಹತ್ತಿರದ ಮೆಟ್ರೋ ನಿಲ್ದಾಣ ‘ಮಂತ್ರಿ ಮಾಲ್, ಮಲ್ಲೇಶ್ವರಂ’ (4 ಕಿ.ಮೀ).
ನಗರದ ಯಾವುದೇ ಭಾಗದಿಂದ ಬಸ್, ಟ್ಯಾಕ್ಸಿ ಅಥವಾ ಆಟೋ ಮೂಲಕ ಸುಲಭವಾಗಿ ಇಲ್ಲಿಗೆ ತಲುಪಬಹುದು.
ವಸತಿ ಸೌಲಭ್ಯಗಳು:
ಅರಮನೆಯ ಹತ್ತಿರ ತಂಗಲು ಬಯಸುವವರಿಗೆ ವಿಂಡ್ಸರ್ ಮ್ಯಾನರ್ (2.2 ಕಿ.ಮೀ) ಮತ್ತು ದಿ ಲಲಿತ್ ಅಶೋಕ್ (2.5 ಕಿ.ಮೀ) ನಂತಹ ಐಷಾರಾಮಿ ಹೋಟೆಲ್ಗಳು ಲಭ್ಯವಿವೆ. ಇದಲ್ಲದೆ ನಗರದಲ್ಲಿ ನಿಮ್ಮ ಬಜೆಟ್ಗೆ ತಕ್ಕಂತೆ ಅನೇಕ ಹೋಟೆಲ್ ಆಯ್ಕೆಗಳಿವೆ.
