Karnataka logo

Karnataka Tourism
GO UP
Image Alt

ಬೆಂಗಳೂರಿನಿಂದ ದೀರ್ಘ ವಾರಾಂತ್ಯದ ವಿಹಾರಗಳು – 2022

separator
  /  ಬ್ಲಾಗ್   /  ಬೆಂಗಳೂರಿನಿಂದ ದೀರ್ಘ ವಾರಾಂತ್ಯದ ವಿಹಾರಗಳು – 2022

ಬೆಂಗಳೂರಿನಿಂದ ದೀರ್ಘ ವಾರಾಂತ್ಯದ ವಿಹಾರಗಳು – 2022

ಆಗಸ್ಟ್ ನಂತರದ ಅವಧಿಯು ವರ್ಷದ ಅತ್ಯುತ್ತಮ ಸಮಯವಾಗಿದ್ದು ಈ ತಿಂಗಳಿನಿಂದ ಹಬ್ಬಗಳ ಸರಣೆ ಆರಂಭವಾಗಲಿದೆ. ಬರಲಿವೆ. ಈ ಹಬ್ಬಗಳ ರಜೆಯಲ್ಲಿ ಪ್ರವಾಸಿಗರು ವಾರಾಂತ್ಯದ ಪ್ರವಾಸಗಳನ್ನು ಆನಂದಿಸಬಹುದು. ಕರ್ನಾಟಕ ರಾಜ್ಯವು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು, ವಾರಾಂತ್ಯದಲ್ಲಿ ಯೋಜಿಸಬಹುದಾಗಿದೆ. ಬೆಂಗಳೂರು ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದ ಎಲ್ಲಾ ಪ್ರಯಾಣಗಳಿಗೆ ಅತ್ಯಂತ ಉತ್ತಮ ಸಂಪರ್ಕವಿರುವ ತಾಣವಾಗಿದೆ.ನಿಮಗಾಗಿ ಬೆಂಗಳೂರಿನಿಂದ 300 ಕಿ.ಮೀ ವ್ಯಾಪ್ತಿಯಲ್ಲಿ ಹಲವಾರು ತಾಣಗಳಿವೆ, ಇವುಗಳನ್ನು ದೀರ್ಘ ವಾರಾಂತ್ಯದ ವಿಹಾರಕ್ಕೆ ಪರಿಗಣಿಸಬಹುದು. ಅವುಗಳ ಪಟ್ಟಿಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ಭೀಮೆಶ್ವರಿ

ಭೀಮೇಶ್ವರಿಯಲ್ಲಿ ಕಯಾಕಿಂಗ್

ಭೀಮೇಶ್ವರಿಯು ಎಲ್ಲಾ ಪ್ರಕೃತಿ ಪ್ರಿಯರಿಗೆ, ವನ್ಯಜೀವಿ ಉತ್ಸಾಹಿಗಳಿಗೆ ಮತ್ತು ಸಾಹಸ ಅನ್ವೇಷಕರಿಗೆ ಸೂಕ್ತವಾದ ವಾರಾಂತ್ಯದ ವಿಹಾರ ತಾಣವಾಗಿದೆ. ಇಲ್ಲಿ ನೀವು ಹಕ್ಕಿಗಳ ಚಿಲಿಪಿಲಿ ಅಥವಾ ಕೋಗಿಲೆಯ ಕೂಗನ್ನು ಆಲಿಸಬಹುದು, ಹರಿಯುವ ಕಾವೇರಿ ನದಿಯ ಮಧುರತೆಯನ್ನು ಅನುಭವಿಸಬಹುದು, ಸುತ್ತಲಿನ ಕಾಡುಗಳ ಮೌನದಲ್ಲಿ ಮುಳುಗಬಹುದು. ಭೀಮೇಶ್ವರಿ ಹಲವಾರು ಸಾಹಸ ಚಟುವಟಿಕೆಗಳನ್ನು ಹೊಂದಿರುವ ಸ್ಥಳವಾಗಿದ್ದು ಇಲ್ಲಿನ ಅತ್ಯುತ್ತಮ ವಾಸ್ತವ್ಯದ ಆಯ್ಕೆ ಎಂದರೆ ಅದು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು. ಇಲ್ಲಿ ಯಾವಾಗಲೂ ಬೇಡಿಕೆ ಇರುವುದರಿಂದ ನಿಮ್ಮ ವಾಸ್ತವ್ಯವನ್ನು ಮುಂಚಿತವಾಗಿಯೇ ಕಾಯ್ದಿರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಈ ಸಾಹಸ ಮತ್ತು ಪ್ರಕೃತಿ ಶಿಬಿರವು ಹೆಸರೇ ಹೇಳುವಂತೆ ಕಯಾಕಿಂಗ್, ಕೊರಾಕಲ್ ಬೋಟ್ ರೈಡ್, ಜಿಪ್ ಲೈನಿಂಗ್, ನೇಚರ್ ವಾಕ್, ಟ್ರೆಕ್ಕಿಂಗ್ ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಹೊಂದಿದೆ. ಆನೆಗಳು, ಜಿಂಕೆಗಳು, ಮೊಸಳೆಗಳು, ಆಮೆಗಳು ಮತ್ತು ಹಾವುಗಳಂತಹ ಕೆಲವು ಕಾಡು ಪ್ರಾಣಿಗಳನ್ನು ಸಹ ನೀವು ಇಲ್ಲಿ ಉತ್ತಮವಾಗಿ ವೀಕ್ಷಿಸಬಹುದು. ಇಲ್ಲಿ ಸುಮಾರು 200 ಜಾತಿಯ ಪಕ್ಷಿಗಳಿವೆ. ಭೀಮೇಶ್ವರಿಯಲ್ಲಿರುವ ಪಕ್ಷಿಗಳು, ಪ್ರಾಣಿಗಳು ಮತ್ತು ಸಸ್ಯಗಳು ನಿಮ್ಮನ್ನು ವಿಸ್ಮಯಗೊಳಿಸುತ್ತವೆ.

ಭೀಮೇಶ್ವರಿಯಲ್ಲಿ ಕೊರಾಕಲ್ ದೋಣಿ ವಿಹಾರ

ಭೇಟಿ ನೀಡಲು ಉತ್ತಮ ಸಮಯ: ಮಳೆಗಾಲದ ನಂತರ ಕಾವೇರಿ ನದಿಯು ಪೂರ್ಣ ಸ್ವಿಂಗ್ ನಲ್ಲಿದ್ದು ಭೋರ್ಗರೆಯುತ್ತದೆ. ಇದು ಭೇಟಿ ನೀಡಲು ಉತ್ತಮ ಸಮಯವಾಗಿದೆ. ಎಲ್ಲ ದಿಕ್ಕುಗಳಲ್ಲಿಯೂ ಕಂಡು ಬರುವ ಹಚ್ಚ ಹಸಿರು ಮತ್ತು ಇಲ್ಲಿನ ಜಲ ಸಾಹಸ ಚಟುವಟಿಕೆಗಳು ನಿಮ್ಮ ಪ್ರವಾಸದ ಅನುಭವವನ್ನು ಸ್ಮರಣೀಯವಾಗಿಸುತ್ತದೆ.
ತಲುಪುವುದು ಹೇಗೆ: ಭೀಮೇಶ್ವರಿ ಅಡ್ವೆಂಚರ್ ಕ್ಯಾಂಪ್ ಎಂದೂ ಕರೆಯಲ್ಪಡುವ ಭೀಮೇಶ್ವರಿ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ಬೆಂಗಳೂರಿನಿಂದ ಕೇವಲ 100 ಕಿಮೀ ದೂರದಲ್ಲಿದೆ ಮತ್ತು ರಸ್ತೆ ಸಾರಿಗೆಯ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ರೆಸಾರ್ಟ್‌ಗಳನ್ನು ತಲುಪಲು ಸುಮಾರು ಎರಡೂವರೆ ಗಂಟೆ ತೆಗೆದುಕೊಳ್ಳುತ್ತದೆ. ಬೆಂಗಳೂರು ಇದಕ್ಕೆ ಹತ್ತಿರ ಇರುವ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವಾಗಿದೆ.

ಹಾಸನ

ಹಾಸನದ ಸೆಟ್ಟಿಹಳ್ಳಿ ಚರ್ಚ್

ಬೆಂಗಳೂರಿನಿಂದ ಕೇವಲ 200 ಕಿಮೀ ದೂರದಲ್ಲಿರುವ ಹಾಸನವು ಹಲವಾರು ಇತರ ಭವ್ಯವಾದ ಪ್ರವಾಸಿ ತಾಣಗಳನ್ನು ಹೊಂದಿರುವ ಪಾರಂಪರಿಕ ಪಟ್ಟಣವಾಗಿದೆ. ಇಲ್ಲಿನ ಅದ್ಭುತವಾದ ಪ್ರಾಚೀನ ದೇವಾಲಯಗಳು, ಕೋಟೆಗಳು, ಗಿರಿಧಾಮಗಳು ಸೇರಿದಂತೆ ಹಲವು ಪ್ರವಾಸಿ ಆಕರ್ಷಕ ವಿಷಯಗಳನ್ನು ಹಾಸನ ಹೊಂದಿದೆ. ಪ್ರವಾಸಿಗರು ಹಾಸನವನ್ನು ಬೇಸ್ ಸ್ಟೇಷನ್ ಆಗಿಟ್ಟುಕೊಂಡು, ಸಕಲೇಶಪುರ, ಚಿಕ್ಕಮಗಳೂರು, ಬಿಸ್ಲೆ ಘಾಟ್, ಮಂಜೀರಾಬಾದ್ ಕೋಟೆ, ಬೇಲೂರು, ಹಳೀಬೀಡು, ಗೊರೂರು ಅಣೆಕಟ್ಟು, ಶ್ರವಣಬೆಳಗೊಳ ಮುಂತಾದವುಗಳಿಗೆ ಭೇಟಿ ನೀಡಬಹುದು.

ಭೇಟಿ ನೀಡಲು ಉತ್ತಮ ಸಮಯ: ಬೇಸಿಗೆಯಲ್ಲಿ ಹಾಸನವು ವರ್ಷದ ಉಳಿದ ಭಾಗಗಳಿಗಿಂತ ತುಲನಾತ್ಮಕವಾಗಿ ಬೆಚ್ಚಗಿರುತ್ತದೆ. ಹಾಸನ ಮತ್ತು ಹತ್ತಿರದ ಪ್ರದೇಶಗಳಲ್ಲಿ ನೀವು ಅತ್ಯುತ್ತಮವಾದದ್ದನ್ನು ಆನಂದಿಸಲು, ಮಾರ್ಚ್ ವರೆಗೆ ಅಂದರೆ ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಮಾನ್ಸೂನ್ ನಂತರದ ಅವಧಿಯು ಅತ್ಯುತ್ತಮವಾದ ಋತುವಾಗಿದೆ. ಈ ಅವಧಿಯಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು ಜಲಪಾತಗಳು ಧುಮ್ಮಿಕ್ಕುತ್ತಿರುತ್ತವೆ ಮತ್ತು ಬೆಟ್ಟಗಳು ಮಂಜಿನಿಂದ ಕೂಡಿರುತ್ತವೆ.
ತಲುಪುವುದು ಹೇಗೆ: ಹಾಸನ ಜಿಲ್ಲೆಯು ಕರ್ನಾಟಕದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು, ಇದು ಹಾಸನದಿಂದ 140 ಕಿಮೀ ದೂರದಲ್ಲಿದೆ. ಬೆಂಗಳೂರು 200 ಕಿಮೀ ದೂರದಲ್ಲಿದೆ. ಹಾಸನವು ರಾಜ್ಯದಾದ್ಯಂತ ಉತ್ತಮ ರೈಲು ಮತ್ತು ರಸ್ತೆ ಸಾರಿಗೆ ಸಂಪರ್ಕವನ್ನು ಹೊಂದಿದೆ.

ಮಂಗಳೂರು

ಕಾಪು ದೀಪಸ್ತಂಭ – ಮಂಗಳೂರು

ಕರ್ನಾಟಕದ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳು ಅದರ ಟ್ಯಾಗ್ ಲೈನ್ ‘ಒಂದು ರಾಜ್ಯ ಹಲವು ಪ್ರಪಂಚಗಳು’ ಎಂಬ ಮಾತನ್ನು ಸಮರ್ಥಿಸುತ್ತದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಎಂಬ ಮೂರು ಜಿಲ್ಲೆಗಳನ್ನು ಆವರಿಸಿರುವ ಸರಿಸುಮಾರು 320 ಕಿಮೀ ಕರಾವಳಿಯು ಪ್ರಶಾಂತ ಕಡಲತೀರಗಳು ಪ್ರವಾಸಿಗರಿಗೆ ಸೂಕ್ತವಾದ ವಾರಾಂತ್ಯದ ವಿಹಾರ ತಾಣವಾಗಿದೆ. ಮಂಗಳೂರು ಕಡಲತೀರಳು, ದೇವಾಲಯಗಳು, ಕಲೆ ಮತ್ತು ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿದ್ದು ಮಂಗಳೂರನ್ನು ಪರಿಪೂರ್ಣ ಪ್ರವಾಸಿ ಸ್ಥಳವನ್ನಾಗಿ ಮಾಡುತ್ತದೆ. ಮಂಗಳೂರು ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರವಾಗಿದ್ದು ಇಲ್ಲಿಗೆ ವರ್ಷವಿಡೀ ಭೇಟಿ ನೀಡಬಹುದು. ಇಲ್ಲಿ ಪ್ರಶಾಂತ ಕಡಲತೀರಗಳ ಹೊರತಾಗಿಯೂ , ಕಲೆ ಮತ್ತು ಕರಕುಶಲತೆ, ಗುತ್ತು ಮನೆ ಎಂಬ ಪರಂಪರೆಯ ಮನೆಗಳು, ಮಹತ್ವದ ಐತಿಹಾಸಿಕ ದೇವಾಲಯಗಳು, ಜಲಕ್ರೀಡೆ ಸಾಹಸ, ಚರ್ಚ್‌ಗಳು, ಕೋಟೆಗಳು ಮತ್ತು ಕರಾವಳಿ ಪಾಕಪದ್ಧತಿಗಳಂತಹ ಮುಂತಾದ ಆಕರ್ಷಣೆಗಳು ಇಲ್ಲಿವೆ. ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಆಹಾರಪ್ರೇಮಿಗಳ ಪ್ರಮುಖ ಆಕರ್ಷಣೆ ಎಂದರೆ ಕರಾವಳಿಯ ಆಹಾರ ಪದ್ಧತಿ. ಕನಿಷ್ಠ ಪದಾರ್ಥಗಳೊಂದಿಗೆ ಸಾಂಪ್ರದಾಯಿಕ ಪಾಕವಿಧಾನಗಳೊಂದಿಗೆ ಆಹಾರವನ್ನು ತಯಾರಿಸಲಾಗುತ್ತದೆ. ಕರಾವಳಿ ಕರ್ನಾಟಕದ ಪಾಕಪದ್ಧತಿಯು ವಿಶ್ವದ ಅಗ್ರ ಪಾಕಪದ್ಧತಿಗಳಲ್ಲಿ ಒಂದಾಗಿದೆ. ಸ್ಥಳೀಯವಾಗಿ ಸಂಗ್ರಹಿಸಿದ ಮೀನು ಮತ್ತು ಇತರ ಸಮುದ್ರಾಹಾರಗಳು ಕರಾವಳಿ ಕರ್ನಾಟಕದ ಭಕ್ಷ್ಯಗಳ ಮುಖ್ಯಾಂಶಗಳಾಗಿದ್ದು ರುಚಿಕರವಾಗಿರುತ್ತವೆ. ಮಂಗಳೂರಿನಿಂದ ಒಂದು ಗಂಟೆ ದೂರದಲ್ಲಿರುವ ಉಡುಪಿಗೆ ಭೇಟಿ ನೀಡಲು ನೀವು ಯೋಜಿಸಬಹುದು. ಮಂಗಳೂರಿನಿಂದ ಬೆಂಗಳೂರಿಗೆ ವಿಸ್ಟಾಡೋಮ್ ರೈಲು ಪ್ರಯಾಣವು ದೇಶದ ಅತ್ಯಂತ ರಮಣೀಯ ಪ್ರಯಾಣಗಳಲ್ಲಿ ಒಂದಾಗಿದ್ದು ಪ್ರವಾಸಿಗರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಮಂಗಳೂರಿನ ಹವಾಮಾನವು ಸಾಮಾನ್ಯವಾಗಿ ಬೆಚ್ಚಗಿದ್ದು ಆರ್ದ್ರವಾಗಿರುತ್ತದೆ. ಸಾಧ್ಯವಾದರೆ ಬೇಸಿಗೆಯಲ್ಲಿ ಇಲ್ಲಿಗೆ ಪ್ರಯಾಣಿಸಬೇಡಿ. ಒಂದು ವೇಳೆ ಪ್ರಯಾಣಿಸುವುದಾದರೆ ನಿಮ್ಮೊಂದಿಗೆ ಇಲ್ಲದಿದ್ದರೆ ಸನ್‌ಸ್ಕ್ರೀನ್ ಲೋಷನ್‌ಗಳು, ಛತ್ರಿ ಇತ್ಯಾದಿಗಳಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಿ. ಅಕ್ಟೋಬರ್‌ನಿಂದ ಮತ್ತು ಫೆಬ್ರವರಿಯ ತಿಂಗಳುಗಳು ಮಂಗಳೂರಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ತಲುಪುವುದು ಹೇಗೆ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ ಮತ್ತು ಗಲ್ಫ್ ದೇಶಗಳು ಮತ್ತು ಭಾರತದ ಪ್ರಮುಖ ನಗರಗಳಿಂದ ವಿಮಾನಗಳು ಇಲ್ಲಿಗೆ ಬರುತ್ತವೆ. ಇಲ್ಲಿನ ರೈಲ್ವೆ ಮತ್ತು ರಸ್ತೆ ಸಾರಿಗೆ ವ್ಯವಸ್ಥೆಯು ಭಾರತದ ಬಹುತೇಕ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಶಿವಮೊಗ್ಗ

ಇಕ್ಕೇರಿ ದೇವಸ್ಥಾನ -ಶಿವಮೊಗ್ಗ

ಪ್ರಕೃತಿ ಸೌಂದರ್ಯದಿಂದ ಕೂಡಿದ ಶಿವಮೊಗ್ಗ ಜಿಲ್ಲೆಯು ಪಶ್ಚಿಮ ಘಟ್ಟಗಳ ಹೆಬ್ಬಾಗಿಲು, ಇದು ಮಲೆನಾಡು ಪ್ರದೇಶದ ಒಂದು ಭಾಗವಾಗಿದೆ. ಸೊಂಪಾದ ಹಸಿರು, ಹೊಳೆಯುವ ಮತ್ತು ಚಿಮ್ಮುವ ಜಲಪಾತಗಳು, ಭವ್ಯವಾದ ಜಲಾಶಯಗಳು ಮತ್ತು ನದಿಗಳು ಈ ಜಿಲ್ಲೆಯನ್ನು ಪ್ರಾಕೃತಿಕವಾಗಿ ಶ್ರೀಮಂತಗೊಳಿಸುತ್ತವೆ. ಶಿವಮೊಗ್ಗವು ಭಾರತದ ಅತಿದೊಡ್ಡ ಜಲಪಾತಗಳಲ್ಲಿ ಒಂದಾದ ಜೋಗ್ ಫಾಲ್ಸ್‌ಗೆ ಪ್ರಸಿದ್ಧಿಯಾಗಿದೆ. ಸಾಮಾನ್ಯವಾಗಿ ಭಾರತದ ನಯಾಗರಾ ಎಂದು ಕರೆಯಲ್ಪಡುವ ಜೋಗ್ ಜಲಪಾತವು ನಾಲ್ಕು ಜಲಪಾತಗಳ ಭವ್ಯವಾದ ವೀಕ್ಷಣೆಗಳನ್ನು ಹೊಂದಿದೆ ಅವುಗಳೆಂದರೆ ರಾಜ, ರಾಣಿ, ರಾಕೆಟ್ ಮತ್ತು ರೋರರ್. ವಿಶೇಷವಾಗಿ ಮಳೆಗಾಲದ ನಂತರ ಜೋಗ್ ಜಲಪಾತವನ್ನು ವೀಕ್ಷಿಸುವುದು ಎಂದರೇ ಕಣ್ಣಿಗೆ ಹಬ್ಬ. ಈ ಭವ್ಯವಾದ ಜಲಪಾತಗಳ ರಮ್ಯ ನೋಟಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇಲ್ಲಿನ ಇತರ ಪ್ರೇಕ್ಷಣೀಯ ಸ್ಥಳಗಳೆಂದರೆ ಪ್ರಾಚೀನ ಅವಳಿ ದೇವಾಲಯಗಳಾದ ಇಕ್ಕೇರಿ-ಕೆಳದಿ, ಅರಸಲು ರೈಲು ನಿಲ್ದಾಣ ಅಕಾ ಮಾಲ್ಗುಡಿ ಡೇಸ್ ಮ್ಯೂಸಿಯಂ, ಸಕ್ರೆಬೈಲ್ ಆನೆ ಶಿಬಿರ, ಕೊಡಚಾದ್ರಿ ಬೆಟ್ಟ ಇತ್ಯಾದಿ. ಶಿವಮೊಗ್ಗ ಎಲ್ಲಾ ಪ್ರಯಾಣಿಕರಿಗೆ ಒನ್-ಸ್ಟಾಪ್ ತಾಣವಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ವಮೊಗ್ಗದ ಹವಾಮಾನವು ಸಾಮಾನ್ಯವಾಗಿ ಉಷ್ಣ, ಆರ್ದ್ರ, ಬೆಚ್ಚಗಿನ ಮತ್ತು ಶುಷ್ಕವಾಗಿರುತ್ತದೆ. ಮಾನ್ಸೂನ್ ನಂತರದ ಚಳಿಗಾಲದ ಸಮಯವು ಅತ್ಯುತ್ತಮವಾಗಿದ್ದು ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಿ ಜಗತ್ಪ್ರಸಿದ್ಧ ಭವ್ಯವಾದ ಜೋಗ್ ಜಲಪಾತವು ತಮ್ಮ ಸಂಪೂರ್ಣ ವೈಭವದಿಂದ ಮೆರೆಯುತ್ತಿರುತ್ತದೆ.
ತಲುಪುವುದು ಹೇಗೆ: ಶಿವಮೊಗ್ಗದಿಂದ ಸುಮಾರು 200 ಕಿಮೀ ದೂರದಲ್ಲಿರುವ ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ಸುಮಾರು 300 ಕಿಮೀ ದೂರದಲ್ಲಿದೆ ಮತ್ತು ಇದು ರಸ್ತೆ ಸಾರಿಗೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಮಂಗಳೂರಿನಿಂದ ಶಿವಮೊಗ್ಗ ತಲುಪಲು ರಸ್ತೆ ಮಾರ್ಗವಾಗಿ ಸುಮಾರು 4 ಗಂಟೆಗಳು ಬೇಕಾಗುತ್ತದೆ.

ಚಾಮರಾಜನಗರ

ಜೊಗ್ಚೆನ್ ಮಠ ಚಾಮರಾಜನಗರ

ಉತ್ತರದಲ್ಲಿ ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಂದ ಸುತ್ತುವರೆದಿರುವ ತಮಿಳುನಾಡು ಮತ್ತು ಕೇರಳದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಚಾಮರಾಜನಗರವು ವೈವಿಧ್ಯಮಯ ವನ್ಯಜೀವಿಗಳು ಮತ್ತು ಆಕರ್ಷಕ ಬೆಟ್ಟಗಳಿಂದ ಆಶೀರ್ವದಿಸಲ್ಪಟ್ಟಿದೆ. ಬಿ ಆರ್ ಹಿಲ್ಸ್, ಬಿ ಆರ್ ಟಿ ವನ್ಯಜೀವಿ ಅಭಯಾರಣ್ಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಭರಚುಕ್ಕಿ ಜಲಪಾತ, ಮಲೆ ಮಹದೇಶ್ವರ ಬೆಟ್ಟಗಳು ಮತ್ತು ಜೊಗ್ಚೆನ್ ಮಠಗಳು ಇಲ್ಲಿನ ಆಕರ್ಷಣೆ ಕೇಂದ್ರಬಿಂದುಗಳಾಗಿವೆ. ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತಿದೊಡ್ಡ ಅರಣ್ಯ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಇಲ್ಲಿನ ಹಚ್ಚ ಹಸಿರಿನ ದಟ್ಟವಾದ ಕಾಡುಗಳು ಚಾಮರಾಜನಗರವನ್ನು ವರ್ಷಪೂರ್ತಿ ಪ್ರವಾಸಿ ತಾಣವನ್ನಾಗಿ ಮಾಡುತ್ತದೆ. ಆದಾಗ್ಯೂ, ಮಾನ್ಸೂನ್ ನಂತರದ ಸಮಯವು ಅದರ ವೈಭವದ ಜಲಪಾತಗಳು, ತಂಪಾದ ಮತ್ತು ಮಂಜುಗಡ್ಡೆಯ ಬೆಟ್ಟಗಳಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ ಮತ್ತು ಇಲ್ಲಿನ ದೇವಾಲಯಗಳಲ್ಲಿ ನಡೆಯುವ ಸಂಭ್ರಮದ ಉತ್ಸವಗಳು ಪ್ರವಾಸಿಗರ ಆಕರ್ಷಣೆಯ ವಿಷಯಗಳಾಗಿವೆ.
ತಲುಪುವುದು ಹೇಗೆ: ಚಾಮರಾಜನಗರವು ಬೆಂಗಳೂರು ಮತ್ತು ಮೈಸೂರು ನಗರಗಳಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಚಾಮರಾಜನಗರದಿಂದ 212 ಕಿಮೀ ದೂರದಲ್ಲಿದ್ದರೆ, ಮೈಸೂರು ಕೇವಲ 62 ಕಿಮೀ ದೂರದಲ್ಲಿದೆ. ಎರಡೂ ವಿಮಾನ ನಿಲ್ದಾಣಗಳಿಂದ ಚಾಮರಾಜನಗರ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಪ್ರಯಾಣಿಕರಿಗೆ ಅನುಕೂಲಕರವಾಗಿದೆ.